ನ್ಯೂಯಾರ್ಕ್: ಪ್ರಪಂಚದಾದ್ಯಂತ ತಮ್ಮ ಸಾಹಸಗಳಿಂದಲೇ ಭಾರಿ ಸುದ್ದಿ ಮಾಡಿರುವ ರಷ್ಯಾದ ಖ್ಯಾತ ‘ಡೇರ್‌ಡೆವಿಲ್’ ಜೋಡಿಯೊಂದು ಅಮೆರಿಕಾದ ನ್ಯೂಯಾರ್ಕ್ ನಗರದ ಐತಿಹಾಸಿಕ ‘ಎಂಪೈರ್ ಸ್ಟೇಟ್ ಬಿಲ್ಡಿಂಗ್’ ಕಟ್ಟಡದ ಅತ್ಯಂತ ಅಪಾಯಕಾರಿ ತುದಿಯನ್ನೇರಿ (Viral Video) ಸಾಹಸ ಮೆರೆದಿದ್ದಾರೆ. ಜುಲೈ 1ರ ಬುಧವಾರದಂದು ಕಟ್ಟಡದ ಕೊನೆಯ ಭಾಗದಲ್ಲಿರುವ 1,454 ಅಡಿ ಎತ್ತರದ ಆಂಟೆನಾ ಗೋಪುರವನ್ನು ಹತ್ತಿದ ಈ ಜೋಡಿ, ಜಾಗತಿಕ ಶಾಂತಿಯ ಸಂದೇಶ ಸಾರುವ ದೊಡ್ಡ ಬ್ಯಾನರ್ ಒಂದನ್ನು ಪ್ರದರ್ಶಿಸಿದ್ದಾರೆ. ರೋಮಾಂಚನಕಾರಿ ಸಾಹಸದ ನಡುವೆಯೇ ಇವರಿಬ್ಬರ ಮದುವೆ ಪ್ರಸ್ತಾಪವೂ (ಮ್ಯಾರೇಜ್ ಪ್ರಪೋಸಲ್) ನಡೆದಿದ್ದು, ಕೊನೆಗೆ ಪೊಲೀಸರಿಂದ ಬಂಧನಕ್ಕೊಳಗಾಗುವ ಮೂಲಕ ಈ ಹೈಡ್ರಾಮಾ ಅಂತ್ಯಗೊಂಡಿದೆ.
ಏನಿದು ಘಟನೆ?
ಬ್ಲ್ಯಾಕ್ ಕಟ್‌ಸ್ಲೀವ್ಸ್ ಉಡುಪು ಧರಿಸಿ ತಮ್ಮ ಈ ರೋಮಾಂಚಕ ಜರ್ನಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ಮಾಡುತ್ತಿದ್ದ ಎಂಜೆಲಾ ನಿಕೋಲಾವ್ ಮತ್ತು ವ್ಯಾನ್ಯಾ ಬೀರ್ಕಸ್, ಮ್ಯಾನ್‌ಹ್ಯಾಟನ್ ನಗರದ ರಸ್ತೆಗಿಂತ 443 ಮೀಟರ್ ಎತ್ತರದಲ್ಲಿದ್ದ ಕೆಂಪು ದೀಪದ ಆಂಟೆನಾವನ್ನು ಹಿಡಿದು ನಿಂತಿದ್ದರು. ಗಾಳಿಯಲ್ಲಿ ತೇಲುತ್ತಿದ್ದ ಅವರ ಬ್ಯಾನರ್‌ನ ಮೇಲೆ, “ಯಾವಾಗ ಪ್ರೀತಿಯ ಶಕ್ತಿಯು, ಅಧಿಕಾರದ ಮೇಲಿನ ಪ್ರೀತಿಯನ್ನು ಸೋಲಿಸುತ್ತದೆಯೋ, ಆಗ ಜಗತ್ತಿನಲ್ಲಿ ಶಾಂತಿ ನೆಲೆಸುತ್ತದೆ” ಎಂಬ ಪ್ರೇಮ ಮತ್ತು ಶಾಂತಿಯ ಸಂದೇಶವಿತ್ತು. ಮಧ್ಯಾಹ್ನ 12.30 ರ ಸುಮಾರಿಗೆ ಆಂಟೆನಾದಿಂದ ಸ್ವಲ್ಪ ಕೆಳಗಿನ ಪ್ಲಾಟ್‌ಫಾರ್ಮ್‌ಗೆ ಇಳಿದ ವ್ಯಾನ್ಯಾ ಬೀರ್ಕಸ್, ಪ್ರೇಯಸಿ ಎಂಜೆಲಾ ಮುಂದೆ ಮೊಣಕಾಲುದ್ದ ಕುಳಿತು ಉಂಗುರ ತೊಡಿಸಿ ಪ್ರೇಮ ನಿವೇದನೆ ಮಾಡಿದರು. ಈ ಜೋಡಿಯ ಸಾಹಸಮಯ ಪ್ರೇಮಕಥೆಯ ಆಧಾರದ ಮೇಲೆ 2024ರಲ್ಲಿ ‘ಸ್ಕೈವಾಕರ್ಸ್: ಎ ಲವ್ ಸ್ಟೋರಿ’ ಎಂಬ ಪ್ರಸಿದ್ಧ ಸಾಕ್ಷ್ಯಚಿತ್ರವೂ (ಡಾಕ್ಯುಮೆಂಟರಿ) ಬಿಡುಗಡೆಯಾಗಿತ್ತು.
Proposal atop the Empire State Building? pic.twitter.com/ngV2b5eaZr
— CSPAN (@cspan) July 1, 2026
ಇಬ್ಬರನ್ನೂ ವಶಕ್ಕೆ ಪಡೆದ ಪೊಲೀಸರು
ಈ ದೃಶ್ಯ ಲೈವ್ ಆಗುತ್ತಿದ್ದಂತೆಯೇ ಎಚ್ಚೆತ್ತ ನ್ಯೂಯಾರ್ಕ್ ಪೊಲೀಸರು ಕಟ್ಟಡದ ಸುತ್ತಮುತ್ತಲಿನ ರಸ್ತೆಗಳನ್ನು ಬಂದ್ ಮಾಡಿ, ನಂತರ ಇಬ್ಬರನ್ನೂ ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ. 2001ರ ವಿಶ್ವ ವ್ಯಾಪಾರ ಸಂಸ್ಥೆಯ ಮೇಲಿನ ದಾಳಿಯ ನಂತರ ಎಂಪೈರ್ ಸ್ಟೇಟ್ ಸೇರಿದಂತೆ ನ್ಯೂಯಾರ್ಕ್‌ನ ಪ್ರಮುಖ ಕಟ್ಟಡಗಳಲ್ಲಿ ಭಾರಿ ಭದ್ರತೆ ಇರಲಾಗಿತ್ತು. ಆದರೂ ಇವರು ಅಷ್ಟು ಎತ್ತರಕ್ಕೆ ಹೇಗೆ ಹತ್ತಿದರು ಎಂಬುದು ಇನ್ನು ನಿಗೂಢವಾಗಿದೆ. ಪ್ರಸ್ತುತ ನ್ಯೂಯಾರ್ಕ್ ನಗರವು ಗಾಯಕಿ ಟೇಲರ್ ಸ್ವಿಫ್ಟ್ ಹಾಗೂ ಫುಟ್‌ಬಾಲ್ ತಾರೆ ಟ್ರಾವಿಸ್ ಕೆಲ್ಸೆ ಅವರ ಮದುವೆಯ ಸಂಭ್ರಮದಲ್ಲಿದ್ದು, ಅಮೆರಿಕಾದ 250ನೇ ಸ್ವಾತಂತ್ರ್ಯೋತ್ಸವದ ಆಚರಣೆಯ ನಡುವೆಯೇ ಈ ಘಟನೆ ನಡೆದಿದೆ.
ದಶಕಗಳ ಕಾಲ ವಿಶ್ವದ ಅತ್ಯಂತ ಎತ್ತರದ ಕಟ್ಟಡವಾಗಿದ್ದ ಎಂಪೈರ್ ಸ್ಟೇಟ್ ಬಿಲ್ಡಿಂಗ್‌ನ 102ನೇ ಮಹಡಿಯ ವೀಕ್ಷಣಾ ಗ್ಯಾಲರಿಗೆ ಪ್ರವಾಸಿಗರಿಗೆ ಟಿಕೆಟ್ ನೀಡಲಾಗುತ್ತದೆ. ಆದರೆ ಅದಕ್ಕಿಂತ ಮೇಲಿರುವ 200 ಅಡಿ ಎತ್ತರದ ಆಂಟೆನಾ ಗೋಪುರ ಹತ್ತುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಕಟ್ಟಡದ ವಕ್ತಾರರು, ಇದೊಂದು ಅನಧಿಕೃತ ಘಟನೆಯಾಗಿದ್ದು, ಪ್ರೇಮ ನಿವೇದನೆ ಮಾಡಿಕೊಳ್ಳಲು ಬಯಸುವವರು ಕಟ್ಟಡದ ಅಧಿಕೃತ 1,000 ಡಾಲರ್ ಪ್ಯಾಕೇಜ್ ಪಡೆದು ವೀಕ್ಷಣಾ ಗ್ಯಾಲರಿಯನ್ನು ಬಾಡಿಗೆಗೆ ಪಡೆಯಬಹುದಿತ್ತು ಎಂದಿದ್ದಾರೆ. ಇನ್ನು ಬಂಧಿತ ಯುವತಿ ಎಂಜೆಲಾ ತಂದೆ, ರಷ್ಯಾದ ಸರ್ಕಸ್ ಕಲಾವಿದ ಡಿಮಿಟ್ರಿ ನಿಕೋಲಾವ್ ಈ ಬಗ್ಗೆ ಮಾತನಾಡುತ್ತಾ, ಯಾವುದೇ ದೇಶದ ಸಂವಿಧಾನದ ಪ್ರಕಾರ ಕಟ್ಟಡದ ಮೇಲೆ ಹತ್ತುವುದು ಸಾಮಾನ್ಯ ವಿಷಯ, ನಾನೂ ಕೂಡ ಇಂತಹ ಸಾಹಸಗಳನ್ನು ಮಾಡುತ್ತೇನೆ, ಹಾಗಾಗಿ ಮಗಳ ಬಂಧನದ ಬಗ್ಗೆ ನನಗೇನು ಆತಂಕವಿಲ್ಲ ಎಂದು ಕೂಲ್ ಆಗಿ ಉತ್ತರಿಸಿದ್ದಾರೆ. ಸದ್ಯ ಪೊಲೀಸರು ಈ ಸಾಹಸಿ ಜೋಡಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮ ಮಂದಿರದ ಕಾಣಿಕೆ ಕಳವು ಪ್ರಕರಣ: ಚಂಪತ್ ರಾಯ್ ಚಾಲಕನೇ ಹಗರಣದ ಕಿಂಗ್‌ಪಿನ್
