Supreme Court: ಪ್ರತಿಭಟನೆಯಲ್ಲಿ ಜವಾಬ್ದಾರಿ ನಿಗದಿಪಡಿಸದಿದ್ದರೆ ತನಿಖೆಗೆ ಬೆಲೆಯಿಲ್ಲ: ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಎಚ್ಚರಿಕೆ

Supreme court about CJP protest and responsibilities

ನವದೆಹಲಿ: ದೇಶಾದ್ಯಂತ ಸದ್ದು ಮಾಡಿದ್ದ ಪರೀಕ್ಷಾ ಅಕ್ರಮ ಮತ್ತು ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಕಾಕ್‌ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ನಡೆದ ವಿದ್ಯಾರ್ಥಿ ಪ್ರತಿಭಟನೆ ವೇಳೆ ಪೊಲೀಸರ ಅತಿಯಾದ ಬಲಪ್ರಯೋಗ ಮತ್ತು ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ (Supreme Court) ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಕಟ್ಟುನಿಟ್ಟಿನ ಕ್ರಮವಾಗಬೇಕು ಎಂದ ಸುಪ್ರೀಂ

“ಪ್ರತಿಭಟನೆಯಲ್ಲಿ ಯಾರೇ ಅತಿಯಾಗಿ ನಡೆದುಕೊಂಡಿದ್ದರೂ, ಕಾನೂನು ಕೈಗೆತ್ತಿಕೊಂಡಿದ್ದರೂ ಅವರ ಮೇಲೆ ಕಟ್ಟುನಿಟ್ಟಿನ ಕ್ರಮವಾಗಬೇಕು. ತಪ್ಪಿತಸ್ಥರ ಜವಾಬ್ದಾರಿಯನ್ನು ನಿಗದಿಪಡಿಸದಿದ್ದರೆ ಅಂತಹ ತನಿಖೆಗೆ ಯಾವುದೇ ಅರ್ಥವಿರುವುದಿಲ್ಲ” ಎಂದು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ಅವರನ್ನೊಳಗೊಂಡ ಪೀಠ ಹೇಳಿದೆ.

ಜುಲೈ 20 ರಂದು ನವದೆಹಲಿಯ ಜಂತರ್ ಮಂತರ್‌ನಿಂದ ಸಂಸತ್ತಿಗೆ ಮಾರ್ಚ್ ನಡೆಸಲು ಪ್ರತಿಭಟನಾಕಾರರು ಯತ್ನಿಸಿದಾಗ ಪರಿಸ್ಥಿತಿ ಹಿಂಸಾಚಾರಕ್ಕೆ ತಿರುಗಿತ್ತು. ಪೊಲೀಸರು ಅಶ್ರುವಾಯು ಮತ್ತು ಲಠಿ ಪ್ರಹಾರ ನಡೆಸಿದ್ದು, ಹಲವರನ್ನು ವಶಕ್ಕೆ ಪಡೆದಿದ್ದರು. ಈ ಘಟನೆಯನ್ನು ಪ್ರಸ್ತಾಪಿಸಿದ ಸುಪ್ರೀಂ ಕೋರ್ಟ್, ಪ್ರತಿಭಟನೆಗಳ ಸಮಯದಲ್ಲಿ ಪೊಲೀಸರಿಗೆ ಹೊಸ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್ ಅಗತ್ಯವಿದೆ ಎಂದು ಪ್ರತಿಪಾದಿಸಿದೆ.ಇದೇ ವೇಳೆ, ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆಯಲ್ಲಿ ಸಮಾಜಘಾತುಕ ಶಕ್ತಿಗಳು ನುಸುಳಿರುವ ಸಾಧ್ಯತೆಯನ್ನು ಕೋರ್ಟ್ ಮುಕ್ತವಾಗಿರಿಸಿದೆ. ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ನಡೆಯುವ ಶಾಂತಿಯುತ ಚಳವಳಿಗಳಲ್ಲಿ ಆಗಾಗ್ಗೆ ಕರೆಯದ ಅತಿಥಿಗಳು ಬಂದು ಆಯೋಜಕರಾಗುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿಗಳು ವ್ಯಾಖ್ಯಾನಿಸಿದರು. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಭಾಗವಾಗಿದ್ದು, ಇಂತಹ ಸಂದರ್ಭಗಳಲ್ಲಿ ಅಶ್ರುವಾಯುವಿನಂತಹ ಕ್ರಮಗಳನ್ನು ಬಳಸಲು ಅನುಮತಿ ನೀಡಬೇಕೇ ಅಥವಾ ಬೇಡವೇ ಎಂಬುದರ ಕುರಿತು ಚರ್ಚೆಯಾಗಬೇಕಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು

ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗವಾಗಿದ್ದರೆ ಸರ್ಕಾರ ಅದನ್ನು ಲಘುವಾಗಿ ಪರಿಗಣಿಸುವುದಿಲ್ಲ ಎಂದಿದ್ದಾರೆ. ಘಟನೆಯಲ್ಲಿ 250 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದು, ಪೊಲೀಸರ ಮನೋಬಲ ಕುಸಿಯದಂತೆ ನಿಷ್ಪಕ್ಷಪಾತ ತನಿಖೆ ನಡೆಸಲಾಗುವುದು ಎಂದು ತಿಳಿಸಿದರು. ಅಲ್ಲದೆ, ವಿದ್ಯಾರ್ಥಿಗಳು ಹಿಂಸಾಚಾರ ನಡೆಸಿಲ್ಲ, ಕೊಲೆ, ಅತ್ಯಾಚಾರ ಮತ್ತು ಎನ್‌ಡಿಪಿಎಸ್ (NDPS) ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಪರಾಧಿಗಳು ಹಾಗೂ ಸಮಾಜಘಾತುಕ ಶಕ್ತಿಗಳು ಪ್ರತಿಭಟನೆಯೊಳಗೆ ನುಗ್ಗಿದ್ದರು ಎಂದು ಅವರು ಕೋರ್ಟ್‌ಗೆ ವಿವರಿಸಿದರು.

ವಿದ್ಯಾರ್ಥಿಗಳ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ದಿವನ್, ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸರ ಹಿಂಸಾಚಾರ, ಪೆಲೆಟ್ ಗನ್‌ಗಳ ಬಳಕೆ ಸೇರಿದಂತೆ ಅನೇಕ ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ಸಲ್ಲಿಸಿದರು. ಪ್ರತಿಭಟನೆ ನಡೆಯುತ್ತಿದೆ ಎಂಬ ಒಂದೇ ಕಾರಣಕ್ಕೆ ಪೊಲೀಸರ ಅತಿಯಾದ ಲಠಿ ಪ್ರಹಾರ ಮತ್ತು ದೌರ್ಜನ್ಯವನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಧರಣಿ ವಾಪಸ್: ದೆಹಲಿ ಮೆಟ್ರೋ ಸೇವೆ ಸಂಪೂರ್ಣ ಯಥಾಸ್ಥಿತಿ

Leave a Reply

Your email address will not be published. Required fields are marked *