ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿರುವ ‘ಸ್ಟಿಂಗ್ ಆಪರೇಷನ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಈ ಇಡೀ ಪ್ರಹಸನದ ಹಿಂದೆ ಸ್ವತಃ ಮುಖ್ಯಮಂತ್ರಿಗಳೇ ಇದ್ದು, ಅವರೇ ಇದರ ಸೂತ್ರಧಾರ ಮತ್ತು ಮಹಾನಾಯಕನಾಗಿದ್ದಾರೆ. ಈ ಕಾರಣಕ್ಕಾಗಿಯೇ ಸರ್ಕಾರವು ಪ್ರಕರಣವನ್ನು ತನಿಖೆಗೆ ಒಪ್ಪಿಸದೆ ಮುಚ್ಚಿಹಾಕಲು ಯತ್ನಿಸುತ್ತಿದೆ ಎಂದು ಹೆಚ್‌ಡಿಕೆ ಗಂಭೀರವಾಗಿ ಆರೋಪಿಸಿದ್ದಾರೆ.
‘ಕಾಲವೇ ಉತ್ತರ ನೀಡಲಿದೆ’ ಎನ್ನುವ ಹೇಳಿಕೆಗೆ ತೀವ್ರ ತರಾಟೆ
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕುಮಾರಸ್ವಾಮಿ ಅವರು, ಈ ಪ್ರಕರಣದ ಬಗ್ಗೆ ‘ಕಾಲವೇ ಉತ್ತರ ಕೊಡಲಿದೆ’ ಎಂಬ ಮುಖ್ಯಮಂತ್ರಿಗಳ ಸಮಜಾಯಿಷಿಯನ್ನು ತೀವ್ರವಾಗಿ ಖಂಡಿಸಿದರು. ತನಿಖೆ ನಡೆಸಲು ಸಮಯ ಯಾವಾಗ ಬರುತ್ತದೆ? ಆಕಾಶದಿಂದ ಉದುರುತ್ತದೆಯೇ? ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ ಅವರು, ಅತ್ಯಂತ ಸಣ್ಣಪುಟ್ಟ ಮತ್ತು ಸಾರಹೀನ ವಿಷಯಗಳಿಗೂ ತನಿಖಾ ಕಮಿಷನ್ ರಚಿಸುವ ಈ ಸರ್ಕಾರ, ಇಷ್ಟೊಂದು ಪ್ರಭಾವಿ ಹಾಗೂ ಬೃಹತ್ ಹಗರಣದ ತನಿಖೆಗೆ ಮಂಜೂರಾತಿ ನೀಡದಿರುವುದು ಏಕೆ ಎಂದು ತರಾಟೆಗೆ ತೆಗೆದುಕೊಂಡರು.
ಉತ್ತರ ಭಾರತದ ಏಜೆನ್ಸಿಗಳು ಬಂದು ಸ್ಟಿಂಗ್ ನಡೆಸಿದ್ದಾರೆ, ಇದರಲ್ಲಿ ಕೇಂದ್ರ ಸಚಿವರು ಹಾಗೂ ಬಿಜೆಪಿ ನಾಯಕರ ಕೈವಾಡವಿದೆ ಎಂದೆಲ್ಲಾ ತಾವೇ ಮಾಧ್ಯಮಗಳಿಗೆ ಸುದ್ದಿ ಸೋರಿಕೆ ಮಾಡಿ ಪ್ರಚಾರ ಗಿಟ್ಟಿಸಿಕೊಂಡಿದ್ದರು. ಆದರೆ ಈಗ ಸರ್ಕಾರ ಸಂಪೂರ್ಣ ಮೌನ ವಹಿಸಿರುವುದು ಅವರ ತಪ್ಪನ್ನು ಎತ್ತಿ ತೋರಿಸುತ್ತಿದೆ ಎಂದು ಆಕ್ರೋಶ ಹೊರಹಾಕಿದರು.
“ನನ್ನದು ಒರಿಜಿನಲ್ ಪೆನ್ ಡ್ರೈವ್, ಇವರದ್ದು ನಕಲಿ ಪ್ರಹಸನ”
ತಮ್ಮ ಹಿಂದಿನ ಪೆನ್ ಡ್ರೈವ್ ಬಾಂಬ್ ವಿಚಾರವನ್ನು ನೆನಪಿಸಿಕೊಂಡ ಕುಮಾರಸ್ವಾಮಿ, “ನಾನು ಬಿಡುಗಡೆ ಮಾಡಲು ಇಟ್ಟುಕೊಂಡಿದ್ದ ಪೆನ್ ಡ್ರೈವ್ ಸಂಪೂರ್ಣವಾಗಿ ಅಸಲಿಯಾಗಿತ್ತು (Original). ಆದರೆ ಕಾಂಗ್ರೆಸ್‌ನವರು ಬರೀ ನಕಲಿ ದಾಖಲೆಗಳನ್ನು ಸೃಷ್ಟಿಸುವಲ್ಲಿ ಎತ್ತಿದ ಕೈ” ಎಂದು ಲೇವಡಿ ಮಾಡಿದರು. ತಮ್ಮ ಬಳಿ ಇರುವ ಸಾಕ್ಷ್ಯಗಳು ಹಾಗೂ ಸ್ಟಿಂಗ್ ಆಪರೇಷನ್ ವಿಷಯ ಎತ್ತುತ್ತಿದ್ದಂತೆಯೇ ಸರ್ಕಾರದಲ್ಲಿದ್ದವರಿಗೆ ನಡುಕ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.
ಸಚಿವರನ್ನು ಕಂಟ್ರೋಲ್ ಮಾಡಲು ‘ಸ್ಟಿಂಗ್’ ಅಸ್ತ್ರ!
ಕಾಂಗ್ರೆಸ್ ಸರ್ಕಾರದ ಆಂತರಿಕ ಗೊಂದಲ ಹಾಗೂ ಸಚಿವರ ಮೇಲಿನ ಹಿಡಿತದ ಕುರಿತು ಮಾತನಾಡಿದ ಹೆಚ್‌ಡಿಕೆ, ತಮ್ಮದೇ ಸಂಪುಟದ ಸಚಿವರನ್ನು ಹತೋಟಿಯಲ್ಲಿಡಲು ಹಾಗೂ ಹೆದರಿಸಲು ಈ ಸ್ಟಿಂಗ್ ಅಸ್ತ್ರವನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು. ಮುಖ್ಯಮಂತ್ರಿಗಳೇ ಖುದ್ದು ಕ್ಯಾಬಿನೆಟ್ ಸಭೆಗೆ ಈ ಸ್ಟಿಂಗ್ ಆಪರೇಷನ್‌ಗೆ ಸಂಬಂಧಿಸಿದ ಫೈಲ್‌ಗಳು ಮತ್ತು ರಹಸ್ಯ ಮಾಹಿತಿಯನ್ನು ತೆಗೆದುಕೊಂಡು ಹೋಗಿ ಚರ್ಚಿಸಿದ್ದಾರೆ. ಸಚಿವರನ್ನು ತಮ್ಮ ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದೇ ಇದರ ಹಿಂದಿನ ಅಸಲಿ ಉದ್ದೇಶ. ಈ ಪ್ರಕರಣದ ಸತ್ಯಾಸತ್ಯತೆ ಬಹಿರಂಗವಾಗಲೇಬೇಕು, ಇದನ್ನು ನಾವು ಸುಲಭವಾಗಿ ಬಿಡುವುದಿಲ್ಲ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಮೈಸೂರು ಅರಮನೆ ಫೋಟೋ ಶೂಟ್‌ಗೆ ಕಟು ಟೀಕೆ
ಇದೇ ವೇಳೆ ಮುಖ್ಯಮಂತ್ರಿಗಳ ಮೈಸೂರು ಅರಮನೆ ಭೇಟಿ ಹಾಗೂ ಫೋಟೋ ಶೂಟ್ ಕುರಿತು ಕಟುವಾಗಿ ಟೀಕಿಸಿದ ಅವರು, ರಾಜ್ಯದಲ್ಲಿ ರೈತರು ಮತ್ತು ಸಾರ್ವಜನಿಕರು ಸಾಲು ಸಾಲು ಸಮಸ್ಯೆಗಳಿಂದ ಬೆಂದು ಹೋಗುತ್ತಿರುವಾಗ, ಸಿಎಂ ಅರಮನೆಯಲ್ಲಿ ಫೋಟೋ ಶೂಟ್ ಮಾಡಿಸಿಕೊಳ್ಳುತ್ತಾ ಸಮಯ ಕಳೆಯುತ್ತಿದ್ದಾರೆ. ಅರಮನೆಯಲ್ಲಿ ಇನ್ನೂ ಸ್ವಲ್ಪ ಹಿಂದೆ ಹೋಗಿ ರಾಜ ಸಿಂಹಾಸನದ ಮೇಲೆ ಕುಳಿತಿದ್ದರೆ ಅವರಿಗೆ ಸರಿಹೊಂದುತ್ತಿತ್ತು ಎಂದು ಲೇವಡಿ ಮಾಡಿದರು. ‘ಅತಿ ವಿನಯಂ ಧೂರ್ತ ಲಕ್ಷಣಂ’ ಎನ್ನುವಂತೆ ಸಿಎಂ ಹೊಸ ನಾಟಕೀಯ ಸಂಸ್ಕೃತಿಯನ್ನು ಹುಟ್ಟುಹಾಕಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಗೃಹಜ್ಯೋತಿ ಗ್ರಾಹಕರಿಗೆ ಬಿಗ್ ರಿಲೀಫ್: ದಾಖಲೆ ಪರಿಶೀಲನೆಗೆ ಗಡುವು ವಿಸ್ತರಣೆ!
