TOP NEWS

Shocking: ಚಿಕಿತ್ಸೆ ನೆಪದಲ್ಲಿ 7 ಲಕ್ಷ ವಸೂಲಿ, ಖಾಸಗಿ ಆಸ್ಪತ್ರೆ ವಿರುದ್ಧ ಪೋಷಕರ ಗಂಭೀರ ಆರೋಪ

Shocking allegation on Mysuru private drm hospital

ಮೈಸೂರು: ಚೆಲುವಾಂಬ ಆಸ್ಪತ್ರೆಯ ಪ್ರಕರಣದ ಬೆನ್ನಲ್ಲೇ, ಇದೀಗ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಯಲ್ಲಿ (Shocking) ವೈದ್ಯಕೀಯ ನಿರ್ಲಕ್ಷ್ಯ ಮತ್ತು ಹಣದ ಲೂಟಿ ನಡೆದಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಗೋಕುಲಂ ಪ್ರದೇಶದಲ್ಲಿರುವ ಡಿಆರ್‌ಎಂ (DRM) ಆಸ್ಪತ್ರೆಯಲ್ಲಿ 45 ದಿನಗಳ ಕಾಲ ಚಿಕಿತ್ಸೆಯ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಪಡೆದು, ಕೊನೆಗೆ ಮಗು ಮೃತಪಟ್ಟಿದೆ ಎಂದು ತಿಳಿಸಿರುವ ಆಸ್ಪತ್ರೆಯ ನಡೆ ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣದ ಹಿನ್ನೆಲೆ: ಕೆಆರ್‌ಎಸ್ ಮೂಲದ ದಯಾನಂದ ಮತ್ತು ದಿವ್ಯಾ ದಂಪತಿಗಳ ಮಗು 7 ತಿಂಗಳಿಗೆ ಜನಿಸಿತ್ತು. ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಮಾರ್ಚ್ 9ರಂದು ದಂಪತಿಗಳು ಮೈಸೂರಿನ ಡಿಆರ್‌ಎಂ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯ ವೈದ್ಯರು ಮಗು ಚೇತರಿಸಿಕೊಳ್ಳುತ್ತದೆ ಎಂದು ಭರವಸೆ ನೀಡಿ, ಸುಮಾರು 45 ದಿನಗಳ ಕಾಲ ಮಗುವನ್ನು ಆಸ್ಪತ್ರೆಯಲ್ಲೇ ಇರಿಸಿಕೊಂಡಿದ್ದರು. ಈ ಅವಧಿಯಲ್ಲಿ ದಂಪತಿಗಳು ಮಗುವಿನ ಚಿಕಿತ್ಸೆಗಾಗಿ ಒಟ್ಟು 7 ಲಕ್ಷ ರೂಪಾಯಿಗಳನ್ನು ಪಾವತಿಸಿದ್ದರು. ತಮ್ಮ ಮಗುವನ್ನು ಬದುಕಿಸಿಕೊಳ್ಳಲು ಬಡತನವಿದ್ದರೂ ಸಾಲಸೋಲ ಮಾಡಿ ಹಣ ಹೊಂದಿಸಿ ಕಟ್ಟಿದ್ದರು ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಪೋಷಕರ ಆರೋಪವೇನು? ಆಸ್ಪತ್ರೆಯ ಸಿಬ್ಬಂದಿ ಮಗುವಿನ ಆರೈಕೆಯಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿದ್ದಾರೆ. ಮಗುವಿಗೆ ಸರಿಯಾಗಿ ಹಾಲೂಡಿಸುತ್ತಿರಲಿಲ್ಲ ಮತ್ತು ಈ ಬಗ್ಗೆ ಪ್ರಶ್ನಿಸಿದರೆ ಸಿಬ್ಬಂದಿ ಉದ್ಧಟತನದಿಂದ ವರ್ತಿಸುತ್ತಿದ್ದರು ಎಂದು ಪೋಷಕರು ಆರೋಪಿಸಿದ್ದಾರೆ. ಆಸ್ಪತ್ರೆಗೆ ನಾವು ಇನ್ನು ಹಣ ಪಾವತಿಸಲು ಸಾಧ್ಯವಿಲ್ಲ ಎಂಬ ಸ್ಥಿತಿ ಬಂದಾಗ, ದಿಢೀರನೆ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ. ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯ ಹಾಗೂ ದುರಾಸೆಯಿಂದಲೇ ನಾವು ಕಂದನನ್ನು ಕಳೆದುಕೊಂಡಿದ್ದೇವೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

ಈ ಘಟನೆಯಿಂದ ಕಂಗಾಲಾಗಿರುವ ಪೋಷಕರು, ನಮಗೆ ನ್ಯಾಯ ಬೇಕು ಎಂದು ಆಗ್ರಹಿಸಿದ್ದಾರೆ. ಚಿಕಿತ್ಸೆಯ ಹೆಸರಿನಲ್ಲಿ ಲಕ್ಷ ಲಕ್ಷ ಹಣ ಪಡೆದು, ಕೊನೆಗೆ ಮಗುವಿನ ಸಾವಿಗೆ ಕಾರಣರಾದ ಆಸ್ಪತ್ರೆ ಆಡಳಿತ ಮಂಡಳಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: ಹೋಟೆಲ್ ಲಿಫ್ಟ್ ಅಪಘಾತ, ಪ್ರವಾಸಕ್ಕೆ ತೆರಳಿದ್ದ ಬೆಂಗಳೂರಿನ ಆರು ಪ್ರವಾಸಿಗರಿಗೆ ಗಾಯ

Leave a Reply

Your email address will not be published. Required fields are marked *