TOP NEWS

Shivarajkumar: ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಂದು ಧಮಾಕಾ: ವಿಜಯ್ ರಾಘವೇಂದ್ರ ನಟನೆಯ ‘ಮಹಾನ್‌’ಗೆ ಶಿವಣ್ಣ ಸಾಥ್!

sandalwood actor shivarajkumar new role in mahan film

ಬೆಂಗಳೂರು: ಸ್ಯಾಂಡಲ್‌ವುಡ್‌ನ ಬಿಜಿಯೆಸ್ಟ್ ನಟರಲ್ಲಿ ಒಬ್ಬರಾದ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ (Shivarajkumar) ಸದ್ಯ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕೇವಲ ಸೋಲೋ ಹೀರೋ ಆಗಿ ಅಷ್ಟೇ ಅಲ್ಲದೆ, ಪ್ರಮುಖ ಕಥೆಗಳಿಗೆ ಶಕ್ತಿ ತುಂಬುವಂತಹ ವಿಶೇಷ ಪಾತ್ರಗಳ ಮೂಲಕವೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಈಗ ಅವರ ಲಿಸ್ಟ್‌ಗೆ ಹೊಸ ಸೇರ್ಪಡೆ ‘ಮಹಾನ್’ ಸಿನಿಮಾ. ವಿಜಯ್ ರಾಘವೇಂದ್ರ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರದಲ್ಲಿ ಶಿವಣ್ಣ ಲಾಯರ್ ಅವತಾರವೆತ್ತಿದ್ದಾರೆ.

ಹಲವು ವರ್ಷಗಳ ಬಳಿಕ ಒಂದಾದ ‘ಚಿನ್ನಾರಿ ಮುತ್ತ’ – ‘ಹ್ಯಾಟ್ರಿಕ್ ಹೀರೋ’

ಇತ್ತೀಚೆಗಷ್ಟೇ ತೆರೆಕಂಡಿದ್ದ ‘ಭೈರತಿ ರಣಗಲ್’ ಚಿತ್ರದಲ್ಲಿ ನ್ಯಾಯವಾದಿಯಾಗಿ ಅಬ್ಬರಿಸಿದ್ದ ಶಿವರಾಜ್‌ಕುಮಾರ್, ‘ಮಹಾನ್’ ಚಿತ್ರದಲ್ಲೂ ಮತ್ತೊಮ್ಮೆ ಕಪ್ಪು ಕೋಟು ಧರಿಸಿ ಕೋರ್ಟ್ ಕಟಗಟೆಯಲ್ಲಿ ನಿಲ್ಲಲಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಈ ಚಿತ್ರದ ಮೂಲಕ ಸುದೀರ್ಘ ಬಿಡುವಿನ ನಂತರ ವಿಜಯ್ ರಾಘವೇಂದ್ರ ಮತ್ತು ಶಿವಣ್ಣ ಒಟ್ಟಿಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಗಾಂಧಿನಗರದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

ಇದು ಸಮಾಜವನ್ನು ತಿದ್ದುವ ‘ಮಹಾನ್’ ಕಥೆ!

ನಿರ್ದೇಶಕ ಪಿ.ಸಿ. ಶೇಖರ್ ಅವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ ಸಂಪೂರ್ಣವಾಗಿ ರೈತರ ಬದುಕಿನ ಹಿನ್ನೆಲೆಯನ್ನು ಒಳಗೊಂಡಿದೆ. ಚಿತ್ರದ ಕುರಿತು ವಿಶೇಷ ಮಾಹಿತಿ ಹಂಚಿಕೊಂಡಿರುವ ನಿರ್ದೇಶಕರು:

“ಮನೆಯ ಹಾದಿ ತಪ್ಪಿದಾಗ ಬುದ್ಧಿ ಹೇಳಲು ಹೆತ್ತವರು ಇರುತ್ತಾರೆ. ಆದರೆ ಇಡೀ ಸಮಾಜವೇ ತೊಂದರೆಗೆ ಸಿಲುಕಿದಾಗ, ಅದನ್ನು ಸರಿದಾರಿಗೆ ತರಲು ಒಬ್ಬ ಧೀಮಂತ ವ್ಯಕ್ತಿಯ ಅಗತ್ಯವಿರುತ್ತದೆ. ಅಂತಹ ಸಮಾಜವನ್ನು ತಿದ್ದುವ ಪ್ರಭಾವಿ ಪಾತ್ರವನ್ನೇ ಶಿವಣ್ಣ ನಿರ್ವಹಿಸಿದ್ದಾರೆ,” ಎಂದು ಚಿತ್ರದ ಒನ್‌ಲೈನ್ ಸ್ಟೋರಿ ಬಿಟ್ಟುಕೊಟ್ಟಿದ್ದಾರೆ.

ಖುಷಿಯಲ್ಲಿ ಚಿತ್ರತಂಡ

ಹ್ಯಾಟ್ರಿಕ್ ಹೀರೋಗಾಗಿ ಆ್ಯಕ್ಷನ್ ಕಟ್ ಹೇಳಬೇಕು ಎನ್ನುವ ಪಿ.ಸಿ. ಶೇಖರ್ ಅವರ ಬಹುಕಾಲದ ಕನಸು ಈ ಚಿತ್ರದ ಮೂಲಕ ನನಸಾಗಿದೆ. ಶಿವಣ್ಣ ಅವರ ಎಂಟ್ರಿಯಿಂದ ಚಿತ್ರದ ತೂಕ ದುಪ್ಪಟ್ಟಾಗಿದ್ದು, ಇಡೀ ಚಿತ್ರತಂಡ ಮತ್ತು ನಿರ್ಮಾಪಕರಾದ ಪ್ರಕಾಶ್ ಬುದ್ದೂರು ಅವರು ನಾಯಕನಿಗೆ ಧನ್ಯವಾದ ತಿಳಿಸಿದ್ದಾರೆ. ‘ಆಕಾಶ್ ಪಿಕ್ಚರ್ಸ್’ ಸಂಸ್ಥೆ ನಿರ್ಮಿಸುತ್ತಿರುವ ಈ ಚಿತ್ರ ಸದ್ಯದಲ್ಲೇ ಪ್ರೇಕ್ಷಕರ ಮುಂದೆ ಬರಲಿದ್ದು, ಸ್ಯಾಂಡಲ್‌ವುಡ್‌ನಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಪತಿಯ ಹಳೆಯ ನೆನಪು ಹಂಚಿಕೊಂಡ ವಿಜಯಲಕ್ಷ್ಮಿ; ಇತ್ತ ಜಾಮೀನಿಗಾಗಿ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್

Leave a Reply

Your email address will not be published. Required fields are marked *