ರಾಜಸ್ಥಾನ: ಜೈಪುರದಲ್ಲಿ ಪ್ಯಾರಾ ಮೆಡಿಕಲ್ ಕೌನ್ಸಿಲ್ (RPMC) ಪರೀಕ್ಷೆಯಲ್ಲಿ ಭಾರಿ ಅಕ್ರಮ ಎಸಗಲು ಯತ್ನಿಸಿದ ಜಾಲವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಮೊದಲ ವರ್ಷದ 45 ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ನಕಲು ಮಾಡಲು ಸಹಾಯ ಮಾಡುವ ಭರವಸೆ ನೀಡಿ, ಅವರಿಂದ ತಲಾ 5.5 ಲಕ್ಷ ರೂಪಾಯಿ ಹಣ ವಸೂಲಿ ಮಾಡುತ್ತಿದ್ದ ಕಾಲೇಜು ಅಧಿಕಾರಿಗಳು ಸೇರಿದಂತೆ ನಾಲ್ವರನ್ನು (Paper Leak) ಜೈಪುರ ಪೊಲೀಸರು ಬಂಧಿಸಿದ್ದಾರೆ. ಜೂನ್ 29 ರಿಂದ ಆರಂಭವಾಗಬೇಕಿದ್ದ ಪರೀಕ್ಷೆಗೂ ಮುನ್ನವೇ ಜೂನ್ 27 ರಂದು ಲಭ್ಯವಾದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಈ ಜಾಲವನ್ನು ಭೇದಿಸಿದ್ದಾರೆ. ಬಂಧಿತರಿಂದ ವಶಪಡಿಸಿಕೊಳ್ಳಲಾದ ಡೈರಿಗಳು, ವಾಟ್ಸಾಪ್ ಚಾಟ್ಗಳು ಮತ್ತು ಪ್ರವೇಶ ಪತ್ರಗಳ ಪಿಡಿಎಫ್ಗಳನ್ನು ಪರಿಶೀಲಿಸಿದಾಗ ಈ ಭಾರಿ ವಂಚನೆಯ ಸಂಚು ಬಯಲಾಗಿದೆ. ಈ ದಂಧೆಯಲ್ಲಿ ಭಾಗಿಯಾಗಿರುವ ಇತರ ಆರೋಪಿಗಳ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಕೆಲ ಕಾಲ ಗೊಂದಲದ ವಾತಾವರಣ ನಿರ್ಮಾಣ
ಇದೇ ವೇಳೆ ಜೈಪುರದ ಪ್ರಭಾ ದೇವಿ ಮೆಮೋರಿಯಲ್ ಪರೀಕ್ಷಾ ಕೇಂದ್ರದಲ್ಲಿ ಭಾರಿ ಗದ್ದಲ ಮತ್ತು ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಪರೀಕ್ಷಾ ಕೇಂದ್ರದ ನೆಲಮಹಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸಲಾಗಿದ್ದರೆ, ಎರಡು ಮತ್ತು ಮೂರನೇ ಮಹಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ತಡವಾಗಿ ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎಂದು ಅಭ್ಯರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಸಿಬ್ಬಂದಿಯನ್ನು ಪದೇ ಪದೇ ವಿನಂತಿಸಿದರೂ ಸ್ಪಂದಿಸದ ಕಾರಣ ಆಕ್ರೋಶಗೊಂಡ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದ ಒಳಗೇ ಭಾರಿ ಪ್ರತಿಭಟನೆ ನಡೆಸಿದ್ದಾರೆ. ಈ ಗೊಂದಲದ ಬೆನ್ನಲ್ಲೇ ಪರೀಕ್ಷಾ ಪೇಪರ್ ಸೋರಿಕೆಯಾಗಿರಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ಶಂಕೆ ವ್ಯಕ್ತಪಡಿಸಿದ್ದಾರಾದರೂ, ಈ ಬಗ್ಗೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಸ್ಪಷ್ಟನೆ ಸಿಕ್ಕಿಲ್ಲ.
Paper distributed to 4th floor after hours of distribution at the ground floor, students were forced to take exams under tents.
— POL (@CptoneP) June 30, 2026
Hundreds of irregularities in RPMC paper caused chaos at Prabha Devi Memorial exam centre. https://t.co/QJlbESObpm pic.twitter.com/Wdrn6ZmLFg
ಪೀಠೋಪಕರಣ ಧ್ವಂಸ ಮಾಡಿದ ವಿದ್ಯಾರ್ಥಿಗಳು
ಪರೀಕ್ಷಾ ಕೇಂದ್ರದಲ್ಲಿ ಉಂಟಾದ ಉದ್ವಿಗ್ನತೆಯಿಂದಾಗಿ ಪರಿಸ್ಥಿತಿ ಕೈಮೀರಿ ಹೋಗಿದ್ದು, ಆಕ್ರೋಶಗೊಂಡ ಅಭ್ಯರ್ಥಿಗಳು ಪೀಠೋಪಕರಣಗಳನ್ನು ಜಖಂಗೊಳಿಸಿದ್ದಾರೆ. ವೈರಲ್ ಆಗಿರುವ ವಿಡಿಯೋಗಳಲ್ಲಿ ಪರೀಕ್ಷಾ ಸಾಮಗ್ರಿಗಳು ಕಾಂಪಸ್ನಾದ್ಯಂತ ಹರಡಿಕೊಂಡಿರುವುದು, ಪ್ರಶ್ನೆ ಪತ್ರಿಕೆಗಳು ಕಟ್ಟಡದ ಮೇಲ್ಛಾವಣಿ ಹಾಗೂ ತಾರ್ಪಲ್ ಶೀಟ್ಗಳ ಮೇಲೆ ಬಿದ್ದಿರುವುದು ಕಂಡುಬಂದಿದೆ. ಪ್ಲಾಸ್ಟಿಕ್ ಕುರ್ಚಿಗಳನ್ನು ಉರುಳಿಸಲಾಗಿದ್ದು, ನೂರಾರು ವಿದ್ಯಾರ್ಥಿಗಳು ಕಾರಿಡಾರ್ ಹಾಗೂ ಮೆಟ್ಟಿಲುಗಳ ಮೇಲೆ ಜಮಾಯಿಸಿ ಅಧಿಕಾರಿಗಳೊಂದಿಗೆ ತೀವ್ರ ವಾಗ್ವಾದಕ್ಕಿಳಿದಿದ್ದಾರೆ. ಕೆಲವು ಅಭ್ಯರ್ಥಿಗಳಿಗೆ ತಾತ್ಕಾಲಿಕ ಟೆಂಟ್ಗಳ ಅಡಿಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿತ್ತು ಎಂದು ಆರೋಪಿಸಲಾಗಿದ್ದು, ಪರೀಕ್ಷಾ ಪ್ರಕ್ರಿಯೆಯಲ್ಲಿ ಸಾಲು ಸಾಲು ಅಕ್ರಮಗಳು ನಡೆದಿವೆ ಎಂದು ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಪೊಲೀಸರು ಡಿಜಿಟಲ್ ಪುರಾವೆಗಳನ್ನು ಆಧರಿಸಿ ತನಿಖೆ ಮುಂದುವರಿಸಿದ್ದು, ಪರೀಕ್ಷಾ ಮಂಡಳಿಯು ಈ ಗೊಂದಲ ಹಾಗೂ ವಂಚನೆಯ ಜಾಲದ ಕುರಿತು ಇನ್ನೂ ಯಾವುದೇ ವಿಸ್ತೃತ ಹೇಳಿಕೆ ನೀಡಿಲ್ಲ.
ಇದನ್ನೂ ಓದಿ: ರಾಮಮಂದಿರ ದೇಣಿಗೆ ಹಗರಣ ತೀವ್ರ: ಎಂಟೂ ಆರೋಪಿಗಳು 14 ದಿನ ನ್ಯಾಯಾಂಗ ಬಂಧನಕ್ಕೆ!
