TOP NEWS

Ram Mandir: ರಾಮಮಂದಿರ ದೇಣಿಗೆ ಹಗರಣ ತೀವ್ರ: ಎಂಟೂ ಆರೋಪಿಗಳು 14 ದಿನ ನ್ಯಾಯಾಂಗ ಬಂಧನಕ್ಕೆ!

Ram mandir donation row accused sent to judicial custody

ಅಯೋಧ್ಯೆ: ಅಯೋಧ್ಯೆಯ ಶ್ರೀರಾಮ ಮಂದಿರದ (Ram Mandir) ದೇಣಿಗೆ ಹಾಗೂ ಕಾಣಿಕೆ ದುರುಪಯೋಗ ಹಗರಣದ ತನಿಖೆ ತೀವ್ರಗೊಂಡಿದ್ದು, ಬಂಧಿತರಾಗಿರುವ ಎಲ್ಲಾ ಎಂಟು ಮಂದಿ ಆರೋಪಿಗಳನ್ನು ಸ್ಥಳೀಯ ನ್ಯಾಯಾಲಯವು ಜುಲೈ 13ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಮೂರು ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಇಂದು ಆರೋಪಿಗಳನ್ನು ಕೋರ್ಟ್ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ತನಿಖೆಯ ಹಿತದೃಷ್ಟಿಯಿಂದ ಆರೋಪಿಗಳನ್ನು ಕಸ್ಟಡಿಯಲ್ಲೇ ಇರಿಸಬೇಕು ಎಂಬ ಪೊಲೀಸರ ವಾದವನ್ನು ಪುರಸ್ಕರಿಸಿ ನ್ಯಾಯಾಧೀಶರು ಈ ಆದೇಶ ನೀಡಿದ್ದಾರೆ.

ಒತ್ತಡಕ್ಕೆ ಮಣಿದು ಚಂಪತ್ ರಾಯ್, ಅನಿಲ್ ಮಿಶ್ರಾ ರಾಜೀನಾಮೆ

ರಾಮಮಂದಿರಕ್ಕೆ ಭಕ್ತರು ಸಮರ್ಪಿಸಿದ್ದ ಕೋಟ್ಯಂತರ ರೂಪಾಯಿ ನಗದು, ಚಿನ್ನ ಹಾಗೂ ಬೆಳ್ಳಿಯ ವಸ್ತುಗಳು ಲೂಟಿಯಾಗಿರುವ ಸುದ್ದಿ ದೇಶಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಈ ಬೆನ್ನಲ್ಲೇ ತೀವ್ರ ರಾಜಕೀಯ ಹಾಗೂ ಸಾಮಾಜಿಕ ಒತ್ತಡಕ್ಕೆ ಮಣಿದಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಅವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಹಗರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಟ್ರಸ್ಟ್ ಶನಿವಾರವಷ್ಟೇ ಹೇಳಿಕೆ ನೀಡಿತ್ತು.

ಆರೋಪಿಗಳ ಪರ ವಾದಿಸಿದರೆ ವಕೀಲರಿಗೆ 5 ಲಕ್ಷ ರೂ. ದಂಡ!

ವಿಶೇಷವೆಂದರೆ, ಈ ಹಗರಣದ ಆರೋಪಿಗಳ ಪರವಾಗಿ ಕಾನೂನು ಹೋರಾಟ ನಡೆಸಲು ಅಯೋಧ್ಯೆಯ ಯಾವುದೇ ವಕೀಲರು ಸಿದ್ಧರಿಲ್ಲ. ಫೈಜಾಬಾದ್ ಬಾರ್ ಅಸೋಸಿಯೇಷನ್ ಇಂದು ಮಹತ್ವದ ತೀರ್ಮಾನ ಕೈಗೊಂಡಿದ್ದು, ತಮ್ಮ ಸಂಘದ ಯಾವುದೇ ವಕೀಲರು ರಾಮ ಮಂದಿರದ ಹಣ ಕಳ್ಳತನ ಮಾಡಿದ ಆರೋಪಿಗಳ ಪರ ಕೋರ್ಟ್‌ನಲ್ಲಿ ವಕಾಲತ್ತು ವಹಿಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಈ ನಿಯಮ ಮೀರಿ ಯಾರಾದರೂ ಆರೋಪಿಗಳ ಬೆಂಬಲಕ್ಕೆ ನಿಂತರೆ ಅವರಿಗೆ 5 ಲಕ್ಷ ರೂಪಾಯಿ ದಂಡ ವಿಧಿಸುವುದಾಗಿ ಸಂಘ ಎಚ್ಚರಿಕೆ ನೀಡಿದೆ.

ಕಳೆದ ಗುರುವಾರ ನಡೆದಿತ್ತು ಸೀಕ್ರೆಟ್ ಆಪರೇಷನ್

ಟ್ರಸ್ಟ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಮಾಜಿ ಚಾಲಕ ಸೇರಿದಂತೆ ಒಟ್ಟು ಎಂಟು ಮಂದಿ ಆರೋಪಿಗಳನ್ನು ಕಳೆದ ಗುರುವಾರ ರಾತ್ರಿ ಪೊಲೀಸರು ರಹಸ್ಯ ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಸದ್ಯ ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಇವರ ಮನೆಗಳ ಮೇಲೂ ದಾಳಿ ನಡೆಸಿ ಶೋಧ ಕಾರ್ಯ ನಡೆಸಲಾಗಿದೆ.

ಟ್ರಸ್ಟ್ ಮನವಿಯ ಮೇರೆಗೆ ಉತ್ತರ ಪ್ರದೇಶ ಸರ್ಕಾರವು ಜೂನ್ 13ರಂದೇ ಈ ಹಗರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು. ಲಕ್ನೋ ವಿಭಾಗೀಯ ಕಮಿಷನರ್ ವಿಜಯ್ ವಿಶ್ವಾಸ್ ಪಂತ್, ಐಜಿಪಿ ಕಿರಣ್ ಎಸ್ ಹಾಗೂ ಹಣಕಾಸು ಇಲಾಖೆಯ ವಿಶೇಷ ಕಾರ್ಯದರ್ಶಿ ನೀಲ್ ರತನ್ ಅವರನ್ನೊಳಗೊಂಡ ಎಸ್‌ಐಟಿ ಸದ್ಯ ತನಿಖೆಯನ್ನು ಚುರುಕುಗೊಳಿಸಿದೆ. ಇತ್ತ ಈ ಹಗರಣದ ತುರ್ತು ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, “ಆಕಾಶವೇನೂ ಉರುಳಿ ಬೀಳುವುದಿಲ್ಲ, ಬೇಸಿಗೆ ರಜೆಯ ನಂತರವೇ ಇದರ ವಿಚಾರಣೆ ನಡೆಸಲಾಗುವುದು” ಎಂದು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ದೇಣಿಗೆ ಅಕ್ರಮ: ಸಿಬಿಐ ತನಿಖೆ ಕೋರಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಣೆ

Leave a Reply

Your email address will not be published. Required fields are marked *