ಮಹಾರಾಷ್ಟ್ರ: ನಾಸಿಕ್ನಲ್ಲಿರುವ ಪ್ರಖ್ಯಾತ ತ್ರಯಂಬಕೇಶ್ವರ (Shiva)ಜ್ಯೋತಿರ್ಲಿಂಗ ದೇಗುಲದ ಆವರಣದಲ್ಲಿ ಭಕ್ತರ ಮೈಮನ ಪುಳಕಿತಗೊಳಿಸುವ ಅಪರೂಪದ ವಿದ್ಯಮಾನವೊಂದು ಬೆಳಕಿಗೆ ಬಂದಿದೆ. ಇಲ್ಲಿನ ಇತಿಹಾಸ ಪ್ರಸಿದ್ಧ ‘ಅಮೃತಕುಂಡ’ದ ಆಳದಲ್ಲಿ ಅಡಗಿದ್ದ ಪುರಾತನ ಶಿವಲಿಂಗವು ಬಹು ವರ್ಷಗಳ ಬಳಿಕ ಕಣ್ಣಿಗೆ ಕಾಣಿಸಿದ್ದು, ಶಿವಭಕ್ತರಲ್ಲಿ ಸಡಗರ ಮೂಡಿಸಿದೆ.
ದೇವಾಲಯದ ಸೌಂದರ್ಯೀಕರಣ ಮತ್ತು ದುರಸ್ತಿ ಕಾರ್ಯದ ಜವಾಬ್ದಾರಿ ಹೊತ್ತಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು (ASI), ಸುಮಾರು 65 ಅಡಿ ಆಳದ ಈ ಕಲ್ಯಾಣಿಯ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡಿ ಸ್ವಚ್ಛಗೊಳಿಸುತ್ತಿತ್ತು. ಈ ಪ್ರಕ್ರಿಯೆಯಲ್ಲಿ ಕುಂಡದ ತಳಭಾಗದಲ್ಲಿದ್ದ ಪವಿತ್ರ ಶಿವಲಿಂಗವು ಅನಾವರಣಗೊಂಡಿದೆ.
ಪೇಶ್ವೆಯರ ಕಾಲದ ಐತಿಹಾಸಿಕ ಹಿನ್ನೆಲೆ ಹೊಂದಿರುವ ಈ ಅಮೃತಕುಂಡದ ನೀರನ್ನು ಅತ್ಯಂತ ಪವಿತ್ರ ಎಂದು ನಂಬಲಾಗುತ್ತದೆ. ದಿನನಿತ್ಯ ತ್ರಯಂಬಕೇಶ್ವರ ಜ್ಯೋತಿರ್ಲಿಂಗಕ್ಕೆ ನಡೆಯುವ ಮಹಾಭಿಷೇಕ ಹಾಗೂ ದೈನಂದಿನ ಪೂಜಾ ಕೈಂಕರ್ಯಗಳಿಗೆ ಇದೇ ಕಲ್ಯಾಣಿಯ ಜಲವನ್ನು ಬಳಸುವ ಸಂಪ್ರದಾಯವಿದೆ.
ಅಮೃತಕುಂಡದ ಸ್ವಚ್ಛತೆಯ ವೇಳೆ ಶಿವಲಿಂಗ ದರ್ಶನವಾಗಿರುವ ವಿಷಯ ತಿಳಿಯುತ್ತಿದ್ದಂತೆ, ಈ ಪವಾಡ ಸದೃಶ್ಯ ದೃಶ್ಯವನ್ನು ವೀಕ್ಷಿಸಲು ಭಕ್ತರು ತಂಡೋಪತಂಡವಾಗಿ ದೇಗುಲದತ್ತ ಧಾವಿಸುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಕಲ್ಯಾಣಿಯ ಹತ್ತಿರ ಹೋಗಲು ಯಾರಿಗೂ ಅನುಮತಿ ನೀಡಿಲ್ಲದ ಕಾರಣ, ಬಂದಿರುವ ಜನಸ್ತೋಮವು ದೂರದಿಂದಲೇ ಶಿವಲಿಂಗವನ್ನು ಕಣ್ಣುಂಬಿಕೊಂಡು ಪುನೀತರಾಗುತ್ತಿದ್ದಾರೆ. 12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ತ್ರಯಂಬಕೇಶ್ವರದಲ್ಲಿ ನಡೆದಿರುವ ಈ ಘಟನೆ ಸದ್ಯ ಎಲ್ಲೆಡೆ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇದನ್ನೂ ಓದಿ: ಗುರು-ಚಂದ್ರರ ಪರಿವರ್ತನ ಯೋಗ: ಈ 6 ರಾಶಿಯವರಿಗೆ ಅದೃಷ್ಟ ಕೈ ಹಿಡಿಯಲಿದೆ
