TOP NEWS

Ram Mandir: ಅಯೋಧ್ಯೆ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು

ram mandir mahant nritya gopal das admitted to hospital in Lucknow

ಉತ್ತರ ಪ್ರದೇಶ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ (Ram Mandir) ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ಲಕ್ನೋದ ಪ್ರಸಿದ್ಧ ಮೇದಾಂತ ಆಸ್ಪತ್ರೆಗೆ ಸೇರಿಸಲಾಗಿದೆ. ದೇಹದಲ್ಲಿ ತೀವ್ರವಾದ ಸೋಂಕು (ಇನ್‌ಫೆಕ್ಷನ್) ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ತರಲಾಗಿದ್ದು, ಸದ್ಯ ತಜ್ಞ ವೈದ್ಯರ ತಂಡ ಅವರಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದೆ.

ಎರಡನೇ ಬಾರಿ ಆಸ್ಪತ್ರೆಗೆ ದಾಖಲು

86 ವರ್ಷದ ಹಿರಿಯ ಸಂತರಾದ ನೃತ್ಯ ಗೋಪಾಲ್ ದಾಸ್ ಅವರು ಈ ವರ್ಷದಲ್ಲಿ ಆಸ್ಪತ್ರೆಗೆ ದಾಖಲಾಗುತ್ತಿರುವುದು ಇದು ಎರಡನೇ ಬಾರಿಯಾಗಿದೆ. ಇದಕ್ಕೂ ಮುನ್ನ ಕಳೆದ ಜನವರಿ ತಿಂಗಳಿನಲ್ಲೂ ಅವರು ಅನಾರೋಗ್ಯಕ್ಕೀಡಾಗಿದ್ದರು. ಆಗಲೂ ಇದೇ ಮೇದಾಂತ ಆಸ್ಪತ್ರೆಯಲ್ಲಿ ಸುದೀರ್ಘ ಚಿಕಿತ್ಸೆ ಪಡೆದು ಗುಣಮುಖರಾದ ನಂತರ ಅಯೋಧ್ಯೆಗೆ ವಾಪಸಾಗಿದ್ದರು. ಆ ಸಮಯದಲ್ಲಿ ಖುದ್ದಾಗಿ ಆಸ್ಪತ್ರೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳು, ಸಂತರ ಆರೋಗ್ಯ ವಿಚಾರಿಸಿ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದ್ದರು.

ಕಳೆದ ಕೆಲವು ವರ್ಷಗಳಿಂದ ವಯೋಸಹಜ ಹಾಗೂ ದೀರ್ಘಕಾಲದ ಕಾಯಿಲೆಗಳು ಇವರನ್ನು ಕಾಡುತ್ತಿವೆ. 2022ರ ಏಪ್ರಿಲ್‌ನಲ್ಲಿ ಮೂತ್ರನಾಳದ ಸೋಂಕು (UTI) ಮತ್ತು ಮೂತ್ರಪಿಂಡದ ವೈಫಲ್ಯದಿಂದ (ಕಿಡ್ನಿ ಸಮಸ್ಯೆ) ಬಳಲುತ್ತಿದ್ದಾಗಲೂ ಅವರು ಇದೇ ಆಸ್ಪತ್ರೆಯಲ್ಲಿ ದಾಖಲಾಗಿ ಗುಣಮುಖರಾಗಿದ್ದರು. ಅಲ್ಲದೆ, ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲೂ ಕೋವಿಡ್ ಸೋಂಕಿಗೆ ಒಳಗಾಗಿದ್ದ ಇವರು, ವೈದ್ಯರ ಕಠಿಣ ನಿಗಾದಲ್ಲಿದ್ದು ಚೇತರಿಸಿಕೊಂಡಿದ್ದರು. ಸದ್ಯ 86 ವರ್ಷ ವಯಸ್ಸಾಗಿರುವುದರಿಂದ ಅವರಿಗೆ ನಿರಂತರ ವೈದ್ಯಕೀಯ ತಪಾಸಣೆ ಮತ್ತು ಆರೈಕೆಯ ಅಗತ್ಯವಿದೆ.

ಯಾರಿದು ಗೋಪಾಲ್‌ ದಾಸ್?

1937ರ ಜೂನ್ 11ರಂದು ಮಥುರಾದಲ್ಲಿ ಜನಿಸಿದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು, ಅಯೋಧ್ಯೆಯ ಐತಿಹಾಸಿಕ ‘ಮಣಿ ರಾಮ್ ದಾಸ್ ಕಿ ಚಾವಣಿ’ ಪೀಠದ ಮುಖ್ಯಸ್ಥರಾಗಿದ್ದಾರೆ. 1993ರಲ್ಲಿ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ರೂಪಿಸಿದ್ದ ರಾಮ ಜನ್ಮಭೂಮಿ ನ್ಯಾಸ್‌ನ ನೇತೃತ್ವ ವಹಿಸಿದ್ದ ಇವರು, ದಶಕಗಳ ಕಾಲ ನಡೆದ ಅಯೋಧ್ಯೆ ರಾಮಮಂದಿರ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದವರು. 2001ರಲ್ಲಿ ಇವರ ಮೇಲೆ ಬಾಂಬ್ ದಾಳಿ ನಡೆದಾಗ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದರು. ಆನಂತರ 2003ರಲ್ಲಿ ಇವರನ್ನು ರಾಮ ಜನ್ಮಭೂಮಿ ನ್ಯಾಸ್‌ನ ಸರ್ವಾನುಮತದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಸದ್ಯ ಲಕ್ನೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಇವರ ಆರೋಗ್ಯ ಸ್ಥಿತಿ ಈಗ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ: ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ ಈ ಮೆಟ್ರೋ ವಿಡಿಯೋ; ಆಕೆ ಕೈಲಿದ್ದ ಪುಸ್ತಕದ ಹಿಂದಿನ ರಹಸ್ಯವೇನು?

Leave a Reply

Your email address will not be published. Required fields are marked *