ಉತ್ತರ ಪ್ರದೇಶ: ಅಯೋಧ್ಯೆಯ ರಾಮಮಂದಿರದ (Ram Mandir) ದೇಣಿಗೆ ಹಣ ಲೂಟಿ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಸಿಕ್ಕಿಬಿದ್ದಿರುವ ಕಿಲಾಡಿ ಕಳ್ಳರು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾರೆ. ಭಕ್ತರು ಅರ್ಪಿಸಿದ ಕೋಟ್ಯಂತರ ರೂಪಾಯಿ ಕಾಣಿಕೆಯನ್ನು ದೇವಸ್ಥಾನದ ಆವರಣದಿಂದ ಯಾರಿಗೂ ಅನುಮಾನ ಬಾರದಂತೆ ಹೊರಗೆ ಸಾಗಿಸಲು ಆರೋಪಿಗಳು ಶೌಚಾಲಯಗಳನ್ನು (ವಾಶ್ರೂಮ್ಸ್) ತಾತ್ಕಾಲಿಕ ಅಡಗುದಾಣವನ್ನಾಗಿ ಬಳಸಿಕೊಳ್ಳುತ್ತಿದ್ದರು ಎಂಬ ಆಘಾತಕಾರಿ ಸತ್ಯ ಬೆಳಕಿಗೆ ಬಂದಿದೆ.
ಉಪಾಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಆರೋಪಿ
ಈ ಮಹಾ ಹಗರಣದ ತನಿಖೆಗಾಗಿ ಉತ್ತರ ಪ್ರದೇಶ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡ (SIT), ಈಗಾಗಲೇ ಎಂಟು ಜನರನ್ನು ಜೈಲಿಗಟ್ಟಿದೆ. ನ್ಯಾಯಾಲಯದ ಅನುಮತಿ ಪಡೆದು ಈ ಜಾಲದ ಪ್ರಮುಖ ಆರೋಪಿ ಅವಿನಾಶ್ ಶುಕ್ಲಾನನ್ನು ಎಸ್ಐಟಿ ಅಧಿಕಾರಿಗಳು ಸುದೀರ್ಘ ವಿಚಾರಣೆಗೆ ಒಳಪಡಿಸಿದಾಗ ಕಳ್ಳತನದ ಸಂಪೂರ್ಣ ‘ಬ್ಲೂಪ್ರಿಂಟ್’ ಬಯಲಾಗಿದೆ. ತಾನು ಕೋಟ್ಯಂತರ ರೂಪಾಯಿ ಲೂಟಿ ಮಾಡಿರುವುದನ್ನು ಒಪ್ಪಿಕೊಂಡಿರುವ ಅವಿನಾಶ್, ಇದಕ್ಕಾಗಿ ರೂಪಿಸುತ್ತಿದ್ದ ಉಪಾಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ದೇಣಿಗೆ ಹಣವನ್ನು ಎಣಿಸುವ ಕೋಣೆಯಲ್ಲೇ ಈ ಕೃತ್ಯಕ್ಕೆ ಸಂಚು ರೂಪಿಸಲಾಗುತ್ತಿತ್ತು. ಹಣ ಎಣಿಕೆ ಪ್ರಕ್ರಿಯೆ ನಡೆಯುತ್ತಿರುವಾಗಲೇ ಗ್ಯಾಂಗ್ನ ಒಬ್ಬ ಸದಸ್ಯ ಹುಂಡಿಯ ನೋಟುಗಳನ್ನು ಜೇಬಿಗೆ ತುರುಕಿಕೊಳ್ಳುತ್ತಿದ್ದ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ರೆಕಾರ್ಡ್ ಆಗದಂತೆ ಉಳಿದ ಸಹಚರರು ಆತನ ಸುತ್ತಲೂ ಮನುಷ್ಯರ ಕೋಟೆಯಂತೆ ನಿಂತು ಮರೆ ಮಾಡುತ್ತಿದ್ದರು. ಮಂದಿರದ ಒಳಗಿರುವ ಪ್ರತಿಯೊಂದು ಸಿಸಿಟಿವಿ ಕ್ಯಾಮೆರಾದ ನಿಖರ ಜಾಗ ಗೊತ್ತಿದ್ದ ಕಾರಣ, ಆರೋಪಿಗಳು ಕ್ಯಾಮೆರಾಗಳ ಕಣ್ಣು ತಪ್ಪಿಸಿ ಈ ಕೃತ್ಯ ಎಸಗುತ್ತಿದ್ದರು. ಬಳಿಕ ಆ ಹಣವನ್ನು ಶೌಚಾಲಯದಲ್ಲಿ ಬಚ್ಚಿಟ್ಟು, ಸೂಕ್ತ ಸಮಯ ಸಿಕ್ಕಾಗ ಮಂದಿರದಿಂದ ಹೊರಗೆ ಸಾಗಿಸುತ್ತಿದ್ದರು.
ಟ್ರಸ್ಟ್ನ ಪ್ರಭಾವಿ ಅಧಿಕಾರಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದ ದೇವಸ್ಥಾನದ ಭದ್ರತಾ ಸಿಬ್ಬಂದಿ ಇವರನ್ನು ಹೆಚ್ಚಾಗಿ ತಪಾಸಣೆ ಮಾಡುತ್ತಿರಲಿಲ್ಲ ಎಂದು ಅವಿನಾಶ್ ಶುಕ್ಲಾ ತಿಳಿಸಿದ್ದಾನೆ. ಈ ಹಣ ಎಣಿಕೆಯ ಉಸ್ತುವಾರಿಯಲ್ಲಿ ರಾಮಮಂದಿರ ಟ್ರಸ್ಟ್ನ ಮಾಜಿ ಟ್ರಸ್ಟಿ ಮಿಶ್ರಾ ಅವರ ಪಾತ್ರ ದೊಡ್ಡದಾಗಿತ್ತು ಎನ್ನಲಾಗಿದೆ. ಇದೇ ಹಗರಣದ ಹಿನ್ನೆಲೆಯಲ್ಲಿ ಕಳೆದ ವಾರವಷ್ಟೇ ಮಿಶ್ರಾ ಮತ್ತು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ತಮ್ಮ ಹುದ್ದೆಗಳನ್ನು ತೊರೆದಿದ್ದು, ಎಸ್ಐಟಿ ಅಧಿಕಾರಿಗಳು ಇಬ್ಬರನ್ನೂ ವಿಚಾರಣೆ ನಡೆಸಿದ್ದಾರೆ. ಆದರೆ, ಇವರ ಪಾತ್ರದ ಕುರಿತು ತನಿಖಾ ಸಂಸ್ಥೆ ಇನ್ನು ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ.
ಸೈಟು ಖರೀದಿ ಮಾಡಿದ್ದ ಆರೋಪಿಗಳು
ಹಣದ ಭದ್ರತಾ ಕೋಣೆಯ ಕೀಲಿ ಕೈಗಳು ಯಾರ ಬಳಿ ಇರುತ್ತಿದ್ದವು ಎಂಬುದು ಈಗ ತನಿಖೆಯ ಮುಖ್ಯ ಭಾಗವಾಗಿದೆ. ಬಂಧಿತ ಆರೋಪಿ ರಮಾಶಂಕರ್ ಅಲಿಯಾಸ್ ಟಿನ್ನು ಯಾದವ್ ಬಳಿ ಒಂದು ಕೀ ಇರುತ್ತಿದ್ದರೆ, ಮತ್ತೊಂದು ಕೀ ಬ್ಯಾಂಕ್ ಸಿಬ್ಬಂದಿ ಬಳಿ ಇರುತ್ತಿತ್ತು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ಹಣ ಎಣಿಕೆಯ ಜವಾಬ್ದಾರಿಯನ್ನು ಖಾಸಗಿ ಏಜೆನ್ಸಿಗೆ ನೀಡಿತ್ತು. ಬ್ಯಾಂಕ್ ಹಾಗೂ ಟ್ರಸ್ಟ್ನ ಸಿಬ್ಬಂದಿ ಸೇರಿದಂತೆ ಒಟ್ಟು 14 ಜನರ ತಂಡ ದೇಣಿಗೆ ಎಣಿಸುತ್ತಿತ್ತು. ಇದರಲ್ಲಿ ಬ್ಯಾಂಕ್ ಸಿಬ್ಬಂದಿಯ ಕೈವಾಡವೂ ಇದೆಯೇ ಎಂಬ ಆಯಾಮದಲ್ಲೂ ತನಿಖೆ ನಡೆಯುತ್ತಿದೆ. ಇನ್ನು ಭಕ್ತರ ಹಣವನ್ನು ಕದ್ದ ಆರೋಪಿಗಳು, ಆ ಕಳ್ಳತನದ ದುಡ್ಡಿನಲ್ಲಿ ನಗರ ಪ್ರದೇಶಗಳಲ್ಲಿ ಬೆಲೆಬಾಳುವ ಸೈಟು ಹಾಗೂ ಐಷಾರಾಮಿ ಮನೆಗಳನ್ನು ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಸದ್ಯ ಎಸ್ಐಟಿ ಅಧಿಕಾರಿಗಳು ಆರೋಪಿಗಳ ಆಸ್ತಿ-ಪಾಸ್ತಿ ಹಾಗೂ ಬ್ಯಾಂಕ್ ಖಾತೆಗಳನ್ನು ಜಾಲಾಡುತ್ತಿದ್ದಾರೆ.
ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ ಟ್ರಸ್ಟ್ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಆಸ್ಪತ್ರೆಗೆ ದಾಖಲು
