ಮುಂಬೈ: ಭಾರತದ ಜನಪ್ರಿಯ ಲೈಫ್‌ಸ್ಟೈಲ್ ವ್ಲಾಗರ್ ಸೌರವ್ ಜೋಶಿ ಇತ್ತೀಚೆಗೆ ತಮ್ಮ ವೀಡಿಯೊ ಒಂದರಲ್ಲಿ ಮಾಡಿದ ಗಂಭೀರ ಆರೋಪವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ತಮ್ಮ ಐಷಾರಾಮಿ ಮರ್ಸಿಡಿಸ್ ಬೆಂಜ್ ಜಿಎಲ್‌ಸಿ (Mercedes-Benz GLC) ಎಸ್‌ಯುವಿ ಕಾರಿನ ಮೈಲೇಜ್ ಹಠಾತ್ತನೆ 16-17 ಕಿಲೋಮೀಟರ್‌ನಿಂದ ಕೇವಲ 5 ಕಿಲೋಮೀಟರ್‌ಗೆ ಕುಸಿದಿದೆ ಎಂದು ಅವರು ಹೇಳಿಕೊಂಡಿದ್ದರು. ಇದಕ್ಕೆ ಸರ್ಕಾರ ಕಡ್ಡಾಯಗೊಳಿಸಿರುವ ಶೇ. 20ರಷ್ಟು ಎಥನಾಲ್ ಮಿಶ್ರಿತ ಇ20 (E20) ಪೆಟ್ರೋಲ್ ಕಾರಣ ಎಂದು ಅವರು ನೇರವಾಗಿ ಬೆರಳು ತೋರಿಸಿದ್ದರು. ಕಾರಿನ ಇಂಜಿನ್ ಹಾಳಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದ ಅವರು, ಹಲ್ದ್ವಾನಿಯಿಂದ ದೆಹಲಿಯ ಸರ್ವಿಸ್ ಸೆಂಟರ್‌ಗೆ ಕಾರನ್ನು ಸಾಗಿಸುವ ತಲೆನೋವಿನ ಬಗ್ಗೆ ವೀಡಿಯೊದಲ್ಲಿ ಹತಾಶೆ ಹೊರಹಾಕಿದ್ದರು. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಎಚ್ಚೆತ್ತ ಮರ್ಸಿಡಿಸ್ ಬೆಂಜ್ ಇಂಡಿಯಾ ಕಂಪನಿಯು ಅಧಿಕೃತ ಸ್ಪಷ್ಟನೆ ನೀಡುವ ಮೂಲಕ ಸೌರವ್ ಜೋಶಿ ಅವರಿಗೆ ಕೌಂಟರ್ ಕೊಟ್ಟಿದೆ.
ಮರ್ಸಿಡಿಸ್ ಬೆಂಜ್ ಕಂಪನಿಯ ಅಧಿಕೃತ ಸ್ಪಷ್ಟನೆ: ಸಾರ್ವಜನಿಕರಲ್ಲಿ ಆತಂಕ ಮೂಡಿಸುತ್ತಿದ್ದ ಈ ವಿಷಯದ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ಮರ್ಸಿಡಿಸ್ ಬೆಂಜ್ ಇಂಡಿಯಾ, ಭಾರತದಲ್ಲಿ ಮಾರಾಟವಾಗುವ ತನ್ನ ಎಲ್ಲಾ ಆಧುನಿಕ ಬಿಎಸ್-6 (BS-VI) ಪೆಟ್ರೋಲ್ ವಾಹನಗಳು ಇ20 ಇಂಧನಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ. ಗ್ರಾಹಕರ ಸುರಕ್ಷತೆ ಮತ್ತು ವಾಹನಗಳ ದಕ್ಷತೆಗೆ ತಾವು ಮೊದಲ ಆದ್ಯತೆ ನೀಡುವುದಾಗಿ ತಿಳಿಸಿರುವ ಕಂಪನಿ, ಸಂಬಂಧಪಟ್ಟ ಸರ್ಕಾರಿ ಸಂಸ್ಥೆಗಳಿಂದಲೇ ಇ20 ಇಂಧನ ಬಳಕೆಗೆ ಪ್ರಮಾಣೀಕರಣ ಪಡೆದುಕೊಂಡಿರುವುದಾಗಿ ಹೇಳಿದೆ. ಯಾವುದೇ ತಾಂತ್ರಿಕ ಸಮಸ್ಯೆಗಳಿದ್ದಲ್ಲಿ ಗ್ರಾಹಕರಿಗೆ ಸಹಾಯ ಮಾಡಲು ಕಂಪನಿ ಸದಾ ಸಿದ್ಧವಿದ್ದು, ಪರಿಸರ ಸ್ನೇಹಿ ಚಲನಶೀಲತೆಗೆ ತಾವು ಬದ್ಧರಾಗಿರುವುದಾಗಿ ತಿಳಿಸಿದೆ.
I am scared to fill ethanol-blended petrol in my car. My Mercedes used to give 16–17 km/l mileage, but now it’s dropped to 5. My car will be ruined soon.
— Mohit Chauhan (@mohitlaws) July 12, 2026
—India’s biggest vlogger, Saurav Joshi pic.twitter.com/IQgSgogFHm
ಮೈಲೇಜ್ ಕುಸಿತಕ್ಕೆ ಅಸಲಿ ಕಾರಣವೇನಿರಬಹುದು?: ವ್ಲಾಗರ್ ಸೌರವ್ ಜೋಶಿ ಕಾರಿನ ಡ್ಯಾಶ್‌ಬೋರ್ಡ್ ರೀಡಿಂಗ್ ನೋಡಿ ಇ20 ಇಂಧನದ ಮೇಲೆ ಗೂಬೆ ಕೂರಿಸಿರುವುದು ವೈಜ್ಞಾನಿಕವಾಗಿ ತಪ್ಪು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆಧುನಿಕ ಕಾರುಗಳ ಮೈಲೇಜ್ ಕೇವಲ ಇಂಧನದ ಮೇಲಷ್ಟೇ ಅಲ್ಲದೆ ಚಾಲನಾ ಶೈಲಿ, ಸಂಚಾರ ದಟ್ಟಣೆ ಮತ್ತು ಸೆನ್ಸಾರ್‌ಗಳ ಮೇಲೆ ಆಧಾರಿತವಾಗಿರುತ್ತದೆ. ಇ20 ಪೆಟ್ರೋಲ್ ಬಳಸುವುದರಿಂದ ಮೈಲೇಜ್‌ನಲ್ಲಿ ಕೇವಲ ಶೇ. 1.5 ರಿಂದ ಶೇ. 3 ರಷ್ಟು ಮಾತ್ರ ವ್ಯತ್ಯಾಸವಾಗಬಹುದು. ಆದರೆ ಶೇ. 70 ರಷ್ಟು ಮೈಲೇಜ್ ಕುಸಿತ ಕಾಣಲು ಇಂಧನದ ಕೆಮಿಕಲ್ ಸಂಯೋಜನೆ ಕಾರಣವಾಗಿರಲು ಸಾಧ್ಯವೇ ಇಲ್ಲ.
Customer Advisory pic.twitter.com/RxuTYl6Phz
— Mercedes-Benz India (@MercedesBenzInd) July 12, 2026
ವ್ಲಾಗ್ ಶೂಟಿಂಗ್ ಮಾಡುವಾಗ ಎಸಿ ಆನ್ ಮಾಡಿ ಕಾರನ್ನು ದೀರ್ಘಕಾಲ ಒಂದೇ ಕಡೆ ನಿಲ್ಲಿಸುವುದು (Idling), ಹಲ್ದ್ವಾನಿಯಂತಹ ಗುಡ್ಡಗಾಡು ಪ್ರದೇಶಗಳ ಟ್ರಾಫಿಕ್‌ನಲ್ಲಿ ಶಾರ್ಟ್ ಡ್ರೈವ್ ಮಾಡುವುದು ಅಥವಾ ಕಾರಿನ ಎಲೆಕ್ಟ್ರಾನಿಕ್ ಸೆನ್ಸಾರ್‌ಗಳಲ್ಲಿನ ತಾಂತ್ರಿಕ ದೋಷಗಳಿಂದಾಗಿ ಡ್ಯಾಶ್‌ಬೋರ್ಡ್‌ನಲ್ಲಿ ತಪ್ಪು ರೀಡಿಂಗ್ ತೋರಿಸುವ ಸಾಧ್ಯತೆ ಇರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಪೆಟ್ರೋಲ್ ಬಂಕ್‌ಗಳ ಟ್ಯಾಂಕ್‌ಗೆ ನೀರು ಸೇರಿ ಇಂಧನ ಕಲಬೆರಕೆಯಾಗಿದ್ದರೂ ಇಂತಹ ಸಮಸ್ಯೆ ಬರಬಹುದು. ಹೀಗಾಗಿ ಲಕ್ಷಾಂತರ ಫಾಲೋವರ್ಸ್ ಹೊಂದಿರುವ ಪ್ರಭಾವಿ ಕ್ರಿಯೇಟರ್‌ಗಳು ಇಂತಹ ತಾಂತ್ರಿಕ ಸಮಸ್ಯೆಗಳು ಬಂದಾಗ ಕ್ಯಾಮೆರಾ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಪ್ಯಾನಿಕ್ ಕ್ರಿಯೇಟ್ ಮಾಡುವ ಬದಲು, ಮೊದಲು ಅಧಿಕೃತ ಸರ್ವಿಸ್ ಸೆಂಟರ್‌ಗೆ ಹೋಗಿ ಪರಿಶೀಲನೆ ನಡೆಸಬೇಕು ಎಂಬ ಪಾಠ ಈ ಘಟನೆಯಿಂದ ಸ್ಪಷ್ಟವಾಗಿದೆ.
