TOP NEWS

Sigandur Bridge: ಸಿಗಂದೂರು ಸೇತುವೆಗೆ ಒಂದು ವರ್ಷ: ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಜನ

One Year of Sigandur Bridge Locals Celebrate First Anniversary With Crackers and Sweets

ಶಿವಮೊಗ್ಗ: ಹಲವು ವರ್ಷಗಳ ಸುದೀರ್ಘ ಹೋರಾಟ ಹಾಗೂ ನಿರಂತರ ನಿರೀಕ್ಷೆಯ ನಂತರ ಬಹುನಿರೀಕ್ಷಿತ ಸಿಗಂದೂರು ಸೇತುವೆ ನಿರ್ಮಾಣವಾಗಿ ನಿನ್ನೆಗೆ ಒಂದು ವರ್ಷವಾಗಿದೆ.ಅನೇಕ ವರ್ಷಗಳ ಕಾಲ ಸಾಗರ ಪಟ್ಟಣದೊಂದಿಗೆ ಸಂಪರ್ಕ ಕಳೆದುಕೊಂಡು ದಶಕಗಳ ಕಾಲ ದ್ವೀಪದಲ್ಲೇ ಪ್ರತ್ಯೇಕವಾಗಿದ್ದ ಜನರ ಬದುಕಿನಲ್ಲಿ ಹೊಸ ಭರವಸೆ ಮೂಡಿಸಿರುವ ಐತಿಹಾಸಿಕ ‘ಸಿಗಂದೂರು ಸೇತುವೆ’ (Sigandur Bridge) ವರ್ಷದ ಸಡಗರವನ್ನ ಗ್ರಾಮಸ್ಥರು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.

ಪಟಾಕಿ ಸಿಡಿಸಿ-ಸಿಹಿ ಹಂಚಿ ಸಂಭ್ರಮಾಚರಣೆ

ಈ ವಿಶೇಷ ದಿನದ ನೆನಪಿಗಾಗಿ ಕರೂರು ಹೋಬಳಿಯ ತುಮರಿ ಸಮೀಪದ ಗ್ರಾಮಸ್ಥರು ಸೋಮವಾರ ರಾತ್ರಿ ಪಟಾಕಿ ಸಿಡಿಸಿ ಹಾಗೂ ಸಿಹಿ ಹಂಚುವ ಮೂಲಕ ಹಬ್ಬದಂತೆ ಸಂಭ್ರಮ ಆಚರಿಸಿದರು.

ಈ ಸಂದರ್ಭದಲ್ಲಿ ಕೇಂದ್ರ ಸಾಂಬಾರು ಮಂಡಳಿಯ ಸದಸ್ಯರಾದ ಪ್ರಸನ್ನ ಕೆರಕೈ ಅವರು ಮಾತನಾಡಿ, “ದ್ವೀಪದ ನಿವಾಸಿಗಳ ದಶಕಗಳ ಕನಸನ್ನು ಸಾಕಾರಗೊಳಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಮತ್ತು ಅಧಿಕಾರಿಗಳಿಗೆ ಸ್ಥಳೀಯ ನಾಗರಿಕರ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು” ಎಂದು ತಿಳಿಸಿದರು. ಅಲ್ಲದೇ, ಈ ದಶಕಗಳ ಕನಸು ನನಸಾಗಲು ಮಾಜಿ ಸಿಎಂ ಯಡಿಯೂರಪ್ಪ, ಸಂಸದ ಬಿವೈ ರಾಘವೇಂದ್ರ ಹಾಗೂ ಅನೇಕ ಹೋರಾಟಗಾರರ ಶ್ರಮ ಇದೆ ಎಂದು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ, ಈ ಸೇತುವೆ ನಿರ್ಮಾಣ ವಿಚಾರವಾಗಿ ತಾವೂ ಹಾಗೂ ಸ್ಥಳೀಯ ನಾಯಕ ಮೇಘರಾಜ್‌ ಅವರು ಪಟ್ಟಕಷ್ಟದ ಕಥೆಗಳನ್ನ ಸಹ ಅವರು ಹಂಚಿಕೊಂಡಿದ್ದಾರೆ.

ಈ ವಿಶೇಷ ಆಚರಣೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಮುಖಂಡ ಮೇಘರಾಜ್‌ ಸಹ ಮಾತನಾಡಿ, ಈ ಸುಂದರ ಸೇತುವೆಯ ನಿರ್ಮಾಣಕ್ಕಾಗಿ ಮತ್ತು ದ್ವೀಪವಾಸಿಗಳ ಹಕ್ಕಿಗಾಗಿ ಬೆವರು ಹರಿಸಿ ಹೋರಾಡಿದ ಪ್ರತಿಯೊಬ್ಬರ ಶ್ರಮವನ್ನು ನೆನೆದು ಕೃತಜ್ಞತೆ ಸಲ್ಲಿಸಿದರು.

ಈ ವಿಶೇಷ ಸಂಭ್ರಮಾಚರಣೆಯ ಕಾರ್ಯಕ್ರಮದಲ್ಲಿ ಪ್ರಮುಖರಾದ ಕೆ.ಜಿ. ಪ್ರಶಾಂತ್, ಮಂಜಯ್ಯ ಜೈನ್, ದೇವೇಂದ್ರಪ್ಪ, ಶ್ರೀಧರ ಚುಟ್ಟಿಕೆರೆ‌ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.

ಕರ್ನಾಟಕದ ಹೆಮ್ಮೆಯ ಸಿಗಂದೂರು ಕೇಬಲ್ ಸೇತುವೆಯ ವಿಶೇಷತೆಗಳು ಹಾಗೂ ತಾಂತ್ರಿಕ ವಿವರಗಳು:

ರಾಜ್ಯದ ಅತಿ ದೊಡ್ಡ ಒಳನಾಡು ಸೇತುವೆ ಎಂಬ ಅಪರೂಪದ ಕೀರ್ತಿಗೆ ಪಾತ್ರವಾಗಿರುವ ಸಿಗಂದೂರು ಕೇಬಲ್ ಬ್ರಿಡ್ಜ್ ಅನ್ನು ಒಟ್ಟು 470 ಕೋಟಿ ರೂಪಾಯಿಗಳ ಭಾರಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ. ಬರೋಬ್ಬರಿ 2.25 ಕಿಲೋಮೀಟರ್ ಉದ್ದವಿರುವ ಈ ಬೃಹತ್ ಸೇತುವೆಯು 16 ಮೀಟರ್ ಅಗಲವನ್ನು ಹೊಂದಿದ್ದು, ಸಾರ್ವಜನಿಕರ ಅನುಕೂಲಕ್ಕಾಗಿ ಇದರ ಎರಡು ಬದಿಗಳಲ್ಲೂ ಅತ್ಯಾಧುನಿಕ ಫುಟ್‌ಪಾತ್‌ಗಳನ್ನು (ಪಾದಚಾರಿ ಮಾರ್ಗ) ನಿರ್ಮಿಸಲಾಗಿದೆ.

ರಾಷ್ಟ್ರ ಮಟ್ಟದ ಸುದರ್ಶನ ಸೇತುವೆಗೆ ಹೋಲಿಕೆ: ದೇಶದ ಅತಿ ಉದ್ದದ ಕೇಬಲ್ ಬ್ರಿಡ್ಜ್ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಗುಜರಾತ್‌ನ ‘ಸುದರ್ಶನ ಸೇತು’ ಒಟ್ಟು 980 ಕೋಟಿ ರೂಪಾಯಿ ವೆಚ್ಚದಲ್ಲಿ 2024ರಲ್ಲಿ ಲೋಕಾರ್ಪಣೆಗೊಂಡಿತ್ತು. 2.32 ಕಿಲೋಮೀಟರ್ ಉದ್ದದ ಈ ಚತುಷ್ಪಥ (ಫೋರ್ ಲೇನ್) ಸೇತುವೆಗೆ ಹೋಲಿಸಿದರೆ, ಸಿಗಂದೂರು ಸೇತುವೆಯು ತನ್ನದೇ ಆದ ವಿಶಿಷ್ಟ ತಾಂತ್ರಿಕ ನೈಪುಣ್ಯತೆಯನ್ನು ಹೊಂದಿದೆ.

ತಾಂತ್ರಿಕ ವಿನ್ಯಾಸ ಮತ್ತು ಪಿಲ್ಲರ್‌ಗಳ ವಿಶೇಷತೆ: ಈ ವಿಶಿಷ್ಟ ದ್ವಿಪಥ (ಟು ಲೇನ್) ಸೇತುವೆಯ ಒಟ್ಟಾರೆ ಸಿವಿಲ್ ಕಾಮಗಾರಿಗೆ 423.15 ಕೋಟಿ ರೂಪಾಯಿಗಳು ವೆಚ್ಚವಾಗಿದ್ದು, ಇದರ ಒಟ್ಟು ವ್ಯಾಪ್ತಿ 2.44 ಕಿಲೋಮೀಟರ್ ಆಗಿದೆ (ಇದರಲ್ಲಿ 740 ಮೀಟರ್ ಭಾಗವನ್ನು ಮಾತ್ರ ಕೇಬಲ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದೆ). ಪಾದಚಾರಿಗಳ ಸುರಕ್ಷತೆಗಾಗಿ ಮೂರು ಕಡೆಗಳಲ್ಲಿ 1.5 ಮೀಟರ್ ಅಗಲದ ಫುಟ್‌ಪಾತ್ ವ್ಯವಸ್ಥೆ ಮಾಡಲಾಗಿದೆ. ಈ ಯೋಜನೆಯಲ್ಲಿ ಎಂಜಿನಿಯರಿಂಗ್ ಚಮತ್ಕಾರವೊಂದು ನಡೆದಿದ್ದು, ಸಾಮಾನ್ಯವಾಗಿ ಪ್ರತಿ 30 ಮೀಟರ್‌ಗೆ ಒಂದರಂತೆ ಒಟ್ಟು 80 ಪಿಲ್ಲರ್ ಫೌಂಡೇಶನ್‌ಗಳನ್ನು ನಿರ್ಮಿಸಬೇಕಾದ ಜಾಗದಲ್ಲಿ, ಕೇವಲ 19 ಬಲಿಷ್ಠ ಪಿಲ್ಲರ್ ಫೌಂಡೇಶನ್‌ಗಳನ್ನು ಮಾತ್ರ ಬಳಸಿ ಇಡೀ ಕಾಮಗಾರಿಯನ್ನು ಅತ್ಯಂತ ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ. ಇದರಲ್ಲಿ ಪ್ರತಿ ಪಿಲ್ಲರ್ ಫೌಂಡೇಶನ್ ನಡುವೆ 177 ಮೀಟರ್ ಅಂತರವಿದ್ದು, ಇನ್ನುಳಿದ 140 ಮೀಟರ್‌ ವ್ಯಾಪ್ತಿಯನ್ನು ಕೇವಲ 4 ಮುಖ್ಯ ಫೌಂಡೇಶನ್‌ಗಳ ಆಧಾರದ ಮೇಲೆ ಕವರ್ ಮಾಡಿರುವುದು ಈ ಸೇತುವೆಯ ಹೆಜ್ಜೆಯಾಗಿದೆ.

ಇದನ್ನೂ ಓದಿ:  ರಾಜ್ಯ ಬಿಜೆಪಿಯಲ್ಲಿ ಮುಗಿಯದ ಅಸಮಾಧಾನ: “ನವೆಂಬರ್ ಕ್ರಾಂತಿ ಆಗದಿದ್ದರೆ ಕರ್ನಾಟಕದಲ್ಲಿ ಬಿಜೆಪಿ ಉಳಿಯಲ್ಲ” ಎಂದು ಯತ್ನಾಳ್ ಗಂಭೀರ ಎಚ್ಚರಿಕೆ!

ವರದಿ: ಪ್ರಶಾಂತ್‌ ಭಟ್

Leave a Reply

Your email address will not be published. Required fields are marked *