ವಿಜಯಪುರ: ರಾಜ್ಯ ಬಿಜೆಪಿಯ ಒಳಗಿನ ಭಿನ್ನಮತ ಮತ್ತೊಮ್ಮೆ ಸ್ಪೋಟಗೊಂಡಿದ್ದು, ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಅವರು ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಮತ್ತೊಂದು ಸುತ್ತಿನ ವಾಗ್ದಾಳಿ ನಡೆಸಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ಬಹುಚರ್ಚಿತ ‘ನವೆಂಬರ್ ಕ್ರಾಂತಿ’ ವಿಚಾರವಾಗಿ ವಿಜಯಪುರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಜಯೇಂದ್ರ ಅವರ ನಾಯಕತ್ವದಲ್ಲಿ ಬಿಜೆಪಿ ಸಾಗಿದರೆ ಪಕ್ಷ ಮುಗಿದು ಹೋಗುತ್ತದೆ ಎಂದು ತೀವ್ರ ಆತಂಕ ವ್ಯಕ್ತಪಡಿಸಿದರು. ಪ್ರಸ್ತುತ ರಾಜ್ಯಾಧ್ಯಕ್ಷರ ಬದಲಾವಣೆಯಾಗದಿದ್ದರೆ ಮುಂಬರುವ ದಿನಗಳಲ್ಲಿ ಕರ್ನಾಟಕದಲ್ಲಿ ಬಿಜೆಪಿ ಅಸ್ತಿತ್ವ ಉಳಿಸಿಕೊಳ್ಳುವುದು ಕಷ್ಟ ಎಂದು ಅವರು ನೇರವಾಗಿಯೇ ನುಡಿದರು.
ವಿಜಯೇಂದ್ರ ವಿರುದ್ಧ ಗಂಭೀರ ಆರೋಪ
ಪರಿಷತ್ ಚುನಾವಣೆ ಹಾಗೂ ಕಾಂಗ್ರೆಸ್ ನಾಯಕರೊಂದಿಗೆ ವಿಜಯೇಂದ್ರ ಅವರ ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತನಾಡಿದ ಯತ್ನಾಳ್, ಇತ್ತೀಚಿನ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಮುಗಿದ ನಂತರ ಹಿಂದಿನ ದಿನಾಂಕ ಹಾಕಿ ಪಕ್ಷದ ವತಿಯಿಂದ ವಿಪ್ ಜಾರಿಗೊಳಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಹಳೆಯ ನಕಲಿ ಸಹಿ ಪ್ರಕರಣವನ್ನು ಮುನ್ನೆಲೆಗೆ ತರುವ ಹೆದರಿಕೆಯಿಂದಾಗಿ, ವಿಜಯೇಂದ್ರ ಅವರು ಕಾಂಗ್ರೆಸ್ ನಾಯಕರ ಮುಂದೆ ಕೈಕಟ್ಟಿ ನಿಂತು ವರ್ಗಾವಣೆಗಳಿಗೆ ಸಹಿ ಮಾಡಿಸಿಕೊಳ್ಳುತ್ತಿದ್ದಾರೆ. ಡಿಕೆಶಿ ಅವರ ಭಯದಿಂದಾಗಿಯೇ ಇಂತಹ ವಿಪ್ ಜಾರಿ ಮಾಡುವ ತಂತ್ರಗಳನ್ನು ಬಳಸಲಾಗಿದೆ ಎಂದು ಅವರು ಕಿಡಿಕಾರಿದರು.
ಇದೇ ವೇಳೆ ಪಕ್ಷದ ಇತ್ತೀಚಿನ ಕಾರ್ಯಕ್ರಮಗಳ ಜನಬೆಂಬಲ ಹಾಗೂ ನಾಯಕರ ಕಾರ್ಯವೈಖರಿಯನ್ನು ಯತ್ನಾಳ್ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಮೊನ್ನೆ ರಟ್ಟಿಹಳ್ಳಿಗೆ ವಿಜಯೇಂದ್ರ ಭೇಟಿ ನೀಡಿದಾಗ ಅಲ್ಲಿ ಬರೀ 45 ಜನರಷ್ಟೇ ಇದ್ದರು, ಅವರೆಲ್ಲರೂ ಮುಂದಿನ ಚುನಾವಣೆಗೆ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಆದರೆ ತಾವು ಭೇಟಿ ನೀಡಿದಾಗ ಸಾವಿರಾರು ಜನ ಸೇರುತ್ತಾರೆ. ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಕ್ಷೇತ್ರದಲ್ಲಿ ಹಿಂದೂ ಯುವಕನ ಹತ್ಯೆಯಾಗಿದ್ದರೂ ಅವರು ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಲು ಹೋಗಿಲ್ಲ. ಇಂತಹ ನಾಯಕರನ್ನು ಇಟ್ಟುಕೊಂಡು ನವೆಂಬರ್ ನಂತರ ಪಟ್ಟ ಕಟ್ಟುತ್ತೇವೆ ಎಂದರೆ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ಹೈಕಮಾಂಡ್ ನಿರ್ಧಾರಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ನಮ್ಮ ವಿರುದ್ಧ ಸಂಚು ರೂಪಿಸಿದ್ದರು
ಪಕ್ಷದ ರಾಜ್ಯ ಉಸ್ತುವಾರಿಗಳ ಬದಲಾವಣೆ ಕುರಿತು ತಮಗೆ ಯಾವುದೇ ಮಾಹಿತಿ ಇಲ್ಲ ಎಂದ ಯತ್ನಾಳ್, ಹಿಂದಿನ ಉಸ್ತುವಾರಿ ಅರುಣ್ ಸಿಂಗ್ ಅವರು ತಮಗೆ ಅಪಾಯಿಂಟ್‌ಮೆಂಟ್ ಕೊಡದೆ ಬರೀ ವಿಜಯೇಂದ್ರ ಅವರನ್ನು ಹೊಗಳುವ ಕೆಲಸದಲ್ಲೇ ಬ್ಯುಸಿಯಾಗಿದ್ದರು ಎಂದು ದೂರಿದರು. ಇಂತಹ ಉಸ್ತುವಾರಿಗಳಿಂದ ಪಕ್ಷಕ್ಕೆ ಯಾವುದೇ ಲಾಭವಿಲ್ಲ. ನಿಷ್ಠಾವಂತ ಕಾರ್ಯಕರ್ತರ ಭಾವನೆಗಳನ್ನು ಅರಿತುಕೊಳ್ಳದಿದ್ದರೆ ಪಕ್ಷಕ್ಕೆ ಉಳಿಗಾಲವಿಲ್ಲ. ತಾವು ಬಿಜೆಪಿಗೆ ಮತ ಹಾಕುವುದಾಗಿ ಮೊದಲೇ ಪತ್ರ ಬರೆಯದಿದ್ದರೆ, ತಾವು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂದು ಬಿಂಬಿಸಲು ಇವರು ಸಂಚು ರೂಪಿಸಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು. ಯಾರು ಕಾಂಗ್ರೆಸ್‌ಗೆ ಮತ ಹಾಕಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಸಿ.ಟಿ. ರವಿ ಅವರ ನೇತೃತ್ವದ ತಂಡದ ಅಗತ್ಯವಿಲ್ಲ, ನಾಳೆ ಶಾಸಕರ ನಿಧಿ ಹಂಚಿಕೆಯಾಗುವಾಗ ಬಿಜೆಪಿ ಶಾಸಕರಿಗೆ ಎಷ್ಟು ಕೋಟಿ ಅನುದಾನ ಸಿಗುತ್ತದೆ ಎಂಬುದರ ಆಧಾರದ ಮೇಲೆಯೇ ಎಲ್ಲವೂ ಜಗಜ್ಜಾಹೀರಾಗಲಿದೆ ಎಂದು ಯತ್ನಾಳ್ ಭವಿಷ್ಯ ನುಡಿದರು.
