TOP NEWS

GBA: ಬೆಂಗಳೂರು ಪಶ್ಚಿಮ ವಲಯದಲ್ಲೇ ಇವೆ 69 ಸಾವಿರಕ್ಕೂ ಹೆಚ್ಚು ಬೀದಿ ನಾಯಿಗಳು: ಕಳೆದೊಂದು ತಿಂಗಳಲ್ಲೇ 465 ಶ್ವಾನಗಳಿಗೆ ಲಸಿಕೆ!

Bengaluru Stray Dog Control GBA Steps Up Sterilization and Anti Rabies Drives Across the City

ಬೆಂಗಳೂರು ಮಹಾನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ಹತೋಟಿಗೆ ತರಲು (Stray Dogs) ಹಾಗೂ ರೇಬಿಸ್ ಮುಕ್ತ ನಗರವನ್ನಾಗಿಸಲು ಪಾಲಿಕೆಯ (GBA) ಪಶುಪಾಲನಾ ವಿಭಾಗವು ವಿಶೇಷ ಕಾರ್ಯಚರಣೆ ಕೈಗೆತ್ತಿಕೊಂಡಿದೆ. ಶ್ವಾನಗಳಿಗೆ ಲಸಿಕೆ ಹಾಕುವುದು ಹಾಗೂ ಸಂತಾನಹರಣ ಚಿಕಿತ್ಸೆ (ಎಬಿಸಿ) ನೀಡುವ ಪ್ರಕ್ರಿಯೆಗೆ ಈಗ ಮತ್ತಷ್ಟು ವೇಗ ಸಿಕ್ಕಿದೆ.

ಪಶ್ಚಿಮ ವಲಯದ ಅಂಕಿ-ಅಂಶ: ಇತ್ತೀಚಿನ ಸಮೀಕ್ಷೆಯೊಂದರ ಅನ್ವಯ, ಬೆಂಗಳೂರಿನ ಪಶ್ಚಿಮ ವಲಯದ ಭಾಗದಲ್ಲೇ ಅಂದಾಜು 69,341 ಬೀದಿ ಶ್ವಾನಗಳು ಇರುವುದು ಪತ್ತೆಯಾಗಿದೆ. ಇವುಗಳ ಪೈಕಿ ಕಳೆದ ಒಂದು ತಿಂಗಳ ಅವಧಿಯಲ್ಲಿ 465 ನಾಯಿಗಳನ್ನು ಹಿಡಿದು, ಅವುಗಳಿಗೆ ರೇಬಿಸ್ ನಿರೋಧಕ ಲಸಿಕೆ ಒದಗಿಸುವುದರ ಜೊತೆಗೆ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನೆರವೇರಿಸಲಾಗಿದೆ.

ರಾಜಾಜಿನಗರ ಭಾಗದಲ್ಲಿ ಅಧಿಕಾರಿಗಳ ರೌಂಡ್ಸ್: ಇನ್ನೊಂದೆಡೆ, ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಸವೇಶ್ವರನಗರ ವಾರ್ಡ್‌ನಲ್ಲಿ ಹಮ್ಮಿಕೊಳ್ಳಲಾಗಿರುವ ಶ್ವಾನ ಲಸಿಕಾ ಅಭಿಯಾನದ ಮೇಲ್ವಿಚಾರಣೆಗಾಗಿ ಪಾಲಿಕೆಯ ಪಶು ವೈದ್ಯಕೀಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇಂದು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ತಳಮಟ್ಟದಲ್ಲಿ ಈ ಯೋಜನೆಯನ್ನು ಯಾವುದೇ ಅಡೆತಡೆಯಿಲ್ಲದೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಅಧಿಕಾರಿಗಳು ಸನ್ನದ್ಧರಾಗಿದ್ದಾರೆ.

ಕೇವಲ ಪಶ್ಚಿಮ ವಲಯಕ್ಕೆ ಸೀಮಿತವಾಗದೆ, ರಾಜಧಾನಿಯ ಇತರ ಎಲ್ಲಾ ವಲಯಗಳ ವ್ಯಾಪ್ತಿಯಲ್ಲೂ ಸಾರ್ವಜನಿಕರ ಹಿತದೃಷ್ಟಿಯಿಂದ ಬೀದಿ ನಾಯಿಗಳ ಸಂತಾನಹರಣ ಮತ್ತು ಲಸಿಕಾ ಕಾರ್ಯಕ್ರಮಗಳನ್ನು ಯುದ್ಧೋಪಾದಿಯಲ್ಲಿ ನಡೆಸಲಾಗುತ್ತಿದೆ.

ಮೂಕಜೀವಿಗಳಿಗೆ ಆಸರೆಯಾಗಲು ಬೆಂಗಳೂರಿನಲ್ಲಿ ವಿಶೇಷ ಅಭಿಯಾನ: ಜುಲೈ 18 ರಂದು ದೇಸಿ ಶ್ವಾನಗಳ ದತ್ತು ಸ್ವೀಕಾರ ಕಾರ್ಯಕ್ರಮ!

ಸಿಲಿಕಾನ್ ಸಿಟಿಯ ವೈಟ್‌ಫೀಲ್ಡ್‌ನಲ್ಲಿ ಶ್ವಾನ ಪ್ರಿಯರಿಗಾಗಿ ಅಪರೂಪದ ಅವಕಾಶವೊಂದು ಒದಗಿಬಂದಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಅನಾಥ ಮತ್ತು ನೊಂದ ನಾಯಿಗಳಿಗೆ ಹೊಸ ಬದುಕು ನೀಡುವ ನಿಟ್ಟಿನಲ್ಲಿ ವಿಶೇಷ ದತ್ತು ಸ್ವೀಕಾರ ಅಭಿಯಾನವನ್ನು ಹಮ್ಮಿಕೊಂಡಿದೆ.

“ಸೆಕೆಂಡ್ ಇನ್ನಿಂಗ್ಸ್” ಮೂಲಕ ಹೊಸ ಬದುಕು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಪೂರ್ವ ನಗರ ಪಾಲಿಕೆ ವತಿಯಿಂದ ಜುಲೈ 18ರ ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ವೈಟ್‌ಫೀಲ್ಡ್‌ನ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ “ಸೆಕೆಂಡ್ ಇನ್ನಿಂಗ್ಸ್” ಎಂಬ ವಿಶಿಷ್ಟ ಕಾರ್ಯಕ್ರಮ ಆಯೋಜಿಸಲಾಗಿದೆ. ವಿವಿಧ ಅಪಘಾತಗಳಿಗೆ ತುತ್ತಾಗಿದ್ದ, ಮಾನವ ಕ್ರೌರ್ಯದಿಂದ ನೊಂದಿದ್ದ ಹಾಗೂ ತಾಯಿಯಿಲ್ಲದೆ ಅನಾಥವಾಗಿದ್ದ ನಾಯಿಮರಿಗಳನ್ನು ರಕ್ಷಿಸಿ, ಸೂಕ್ತ ಚಿಕಿತ್ಸೆ ಮತ್ತು ಪಾಲನೆಯ ಮೂಲಕ ಈಗ ಅವುಗಳನ್ನು ಸಂಪೂರ್ಣ ಆರೋಗ್ಯವಂತವಾಗಿ ಮಾಡಲಾಗಿದೆ. ಅಂತಹ ಹೆಮ್ಮೆಯ ಭಾರತೀಯ ದೇಸಿ ತಳಿಯ ಶ್ವಾನಗಳನ್ನು ಶ್ವಾನ ಪ್ರಿಯರು ಉಚಿತವಾಗಿ ದತ್ತು ಪಡೆಯಲು ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.

ಮಾಹಿತಿ ಪಡೆಯುವುದು ಹೇಗೆ? ದತ್ತು ಪಡೆಯಲು ಸಿದ್ಧವಿರುವ ಈ ಶ್ವಾನಗಳ ಫೋಟೋ ಹಾಗೂ ಸಂಪೂರ್ಣ ವಿವರಗಳನ್ನು ಸಾರ್ವಜನಿಕರು ಗೂಗಲ್ ಡ್ರೈವ್ ಲಿಂಕ್ (https://drive.google.com/drive/folders/1qljNy3UQAv4Zi32cQ7DN1proDf-ZUDha) ಮೂಲಕ ಮುಂಚಿತವಾಗಿಯೇ ವೀಕ್ಷಿಸಬಹುದಾಗಿದೆ. ಪ್ರಾಣಿ ಪ್ರಿಯರು ಮತ್ತು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ, ಈ ಮೂಕಜೀವಿಗಳಿಗೆ ಪ್ರೀತಿಯ ಆಸರೆ ನೀಡಬೇಕಾಗಿ ಜಿಬಿಎ ವಿನಂತಿಸಿದೆ.

ನಟ ಮಾಸ್ಟರ್ ಆನಂದ್ ಮನವಿ ಖ್ಯಾತ ಸ್ಯಾಂಡಲ್‌ವುಡ್ ನಟ ಮಾಸ್ಟರ್ ಆನಂದ್ ಅವರು ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದು, ಶ್ವಾನ ಪ್ರಿಯರಲ್ಲಿ ವಿಶೇಷ ಮನವಿ ಮಾಡಿದ್ದಾರೆ. “ನಮ್ಮ ಹೆಮ್ಮೆಯ ಸ್ಥಳೀಯ ದೇಸಿ ತಳಿಯ ನಾಯಿಗಳು ಶಾಶ್ವತ ಪ್ರೀತಿಯ ಆಸರೆಗಾಗಿ ಕಾಯುತ್ತಿವೆ. ಇವುಗಳನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವುಗಳ ಬದುಕಿಗೆ ಹೊಸ ಭರವಸೆ ನೀಡಿ” ಎಂದು ಅವರು ಕರೆ ನೀಡಿದ್ದಾರೆ. ಸಾರ್ವಜನಿಕರು ಈ ಉದಾತ್ತ ಕಾರ್ಯದಲ್ಲಿ ಭಾಗಿಯಾಗಿ ಮೂಕಜೀವಿಗಳಿಗೆ ಪ್ರೀತಿಯ ಗೂಡು ಕಲ್ಪಿಸಿಕೊಡಬೇಕಾಗಿ ಅವರು ಆಶಿಸಿದ್ದಾರೆ.

ಇದನ್ನೂ ಓದಿ: ಮೈಸೂರು ಕಂಬಳಕ್ಕೆ ಮತ್ತೊಂದು ಕಂಟಕ: ಅನುಮತಿಯಿಲ್ಲದೆ 25 ಮರಗಳ ಮಾರಣಹೋಮ; ಅರಣ್ಯ ಇಲಾಖೆ ಬಿಗಿ ಕ್ರಮ

Leave a Reply

Your email address will not be published. Required fields are marked *