TOP NEWS

Shocking: ಎಸಿ ರೈಲು ಪ್ರಯಾಣಿಕರ ಕೈಚಳಕ: ನಾಲ್ಕು ವರ್ಷಗಳಲ್ಲಿ ಬರೋಬ್ಬರಿ 1.27 ಕೋಟಿ ಬೆಡ್‌ರೋಲ್ ಸಾಮಗ್ರಿಗಳು ಕಳುವು

Shocking AC Train Passengers Steal 1 27 Crore Bedroll Items in 4 Years Contractors Lose ₹104 Crore

ನವದೆಹಲಿ: ರೈಲ್ವೆಯ ಹವಾನಿಯಂತ್ರಿತ (AC) ಬೋಗಿಗಳಲ್ಲಿ ಪ್ರಯಾಣಿಸುವ ಪ್ರತಿಯೊಬ್ಬರಿಗೂ ಎರಡು ಬೆಡ್‌ಶೀಟ್‌ಗಳು, ಒಂದು ದಿಂಬು, ದಿಂಬಿನ ಕವರ್ ಮತ್ತು ಮುಖ ಒರೆಸುವ ಸಣ್ಣ ಟವಲ್ ಒಳಗೊಂಡ ಬೆಡ್‌ರೋಲ್ ಕಿಟ್ ಅನ್ನು ನೀಡಲಾಗುತ್ತದೆ. ಆದರೆ, ಪ್ರತಿ ಸಾವಿರ ಪ್ರಯಾಣಿಕರಲ್ಲಿ ಒಬ್ಬರು ಈ ಸಾಮಗ್ರಿಗಳನ್ನು ತಮ್ಮ ಬ್ಯಾಗ್‌ಗೆ ಹಾಕಿಕೊಂಡು ಮನೆಗೆ ಕೊಂಡೊಯ್ಯುತ್ತಿದ್ದಾರೆ. ಕೋವಿಡ್ ಸಾಂಕ್ರಾಮಿಕದ ನಂತರ ಅಂದರೆ ಜನವರಿ 2022 ರಿಂದ ಮೇ 2026 ರವರೆಗಿನ ಅವಧಿಯಲ್ಲಿ ದೇಶಾದ್ಯಂತ ರೈಲುಗಳಲ್ಲಿ ಬರೋಬ್ಬರಿ 1.27 ಕೋಟಿ ಬೆಡ್‌ರೋಲ್ ವಸ್ತುಗಳು ಕಳುವಾಗಿವೆ ಎಂಬ ಶಾಕಿಂಗ್ (Shocking) ಮಾಹಿತಿ ಆರ್‌ಟಿಐ (RTI) ಅರ್ಜಿಯ ಮೂಲಕ ಬಹಿರಂಗವಾಗಿದೆ.

ಶೇಕಡಾ 56ರಷ್ಟು ಪ್ರಕರಣ ಹೆಚ್ಚಳ

ಮಾಧ್ಯಮ ಸಂಸ್ಥೆಯೊಂದು ಭಾರತೀಯ ರೈಲ್ವೆಯ 69 ವಿಭಾಗಗಳಿಗೆ ಸಲ್ಲಿಸಿದ್ದ ಮಾಹಿತಿ ಹಕ್ಕು ಕಾಯ್ದೆಯ ಅರ್ಜಿಗೆ ಲಭ್ಯವಾಗಿರುವ ಉತ್ತರಗಳ ಪ್ರಕಾರ, 2022 ರಿಂದ 2025 ರ ಅವಧಿಯಲ್ಲಿ ಇಂತಹ ಕಳ್ಳತನ ಪ್ರಕರಣಗಳು ಶೇಕಡಾ 56 ರಷ್ಟು ಹೆಚ್ಚಾಗಿವೆ. ಪ್ರತಿದಿನ ಲಕ್ಷಾಂತರ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಒದಗಿಸುವ ಸೌಲಭ್ಯಕ್ಕೆ ಹೋಲಿಸಿದರೆ ಈ ಕಳ್ಳತನ ಸಣ್ಣದಾಗಿ ಕಾಣಬಹುದು. ಆದರೆ, ಇದು ಸಾರ್ವಜನಿಕ ಆಸ್ತಿಯ ಬಳಕೆಯ ವಿಷಯದಲ್ಲಿ ನಾಗರಿಕರ ಜವಾಬ್ದಾರಿ ಮತ್ತು ವರ್ತನೆಯನ್ನು ಎತ್ತಿ ತೋರಿಸುತ್ತದೆ. ಕಳೆದ ನಾಲ್ಕು ವರ್ಷಗಳಲ್ಲಿ ನಡೆದಿರುವ ಈ ಕಳ್ಳತನದಿಂದಾಗಿ ಬೆಡ್‌ರೋಲ್ ಸರಬರಾಜು ಮಾಡುವ ಗುತ್ತಿಗೆದಾರರಿಗೆ ಸುಮಾರು 104.51 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ನಷ್ಟವಾಗಿದೆ ಎಂದು ಆರ್‌ಟಿಐ ಅಂಕಿ-ಅಂಶಗಳು ತಿಳಿಸಿವೆ.

ಪ್ರಯಾಣಿಕರು ಕದ್ದಿರುವ ವಸ್ತುಗಳ ಪೈಕಿ ಮುಖ ಒರೆಸುವ ಸಣ್ಣ ಟವಲ್ ಮೊದಲ ಸ್ಥಾನದಲ್ಲಿದೆ. ಬ್ಯಾಗ್‌ನಲ್ಲಿ ಸುಲಭವಾಗಿ ಬಚ್ಚಿಡಬಹುದಾದ ಕಾರಣ ಇವುಗಳನ್ನೇ ಅತಿ ಹೆಚ್ಚು ಕದಿಯಲಾಗಿದ್ದು, ನಾಲ್ಕು ವರ್ಷಗಳಲ್ಲಿ 46.54 ಲಕ್ಷ ಟವಲ್‌ಗಳು ಮಾಯವಾಗಿವೆ. ಇದರ ನಂತರ 41.13 ಲಕ್ಷ ಬೆಡ್‌ಶೀಟ್‌ಗಳು, 23.59 ಲಕ್ಷ ದಿಂಬಿನ ಕವರ್‌ಗಳು ಹಾಗೂ 12.95 ಲಕ್ಷ ಬ್ಲಾಂಕೆಟ್‌ಗಳು (ಕಂಬಳಿ) ಕಳುವಾಗಿವೆ. ಆದರೆ ಬ್ಯಾಗ್‌ನಲ್ಲಿ ಇಟ್ಟರೆ ತೂಕ ಹೆಚ್ಚುತ್ತದೆ ಮತ್ತು ಜಾಗ ಜಾಸ್ತಿ ಬೇಕಾಗುತ್ತದೆ ಎಂಬ ಕಾರಣಕ್ಕೆ ದಿಂಬುಗಳನ್ನು ಅತಿ ಕಡಿಮೆ ಕದಿಯಲಾಗಿದ್ದು, ಕೇವಲ 2.76 ಲಕ್ಷ ದಿಂಬುಗಳು ಮಾತ್ರ ಕಳುವಾಗಿವೆ. ಇನ್ನು ದೇಶಾದ್ಯಂತ ಬಿಕಾನೇರ್ ವಿಭಾಗದಲ್ಲಿ ಅತಿ ಹೆಚ್ಚು ಅಂದರೆ 25.76 ಲಕ್ಷ ಹಾಗೂ ರಾಂಚಿ ವಿಭಾಗದಲ್ಲಿ 9.31 ಲಕ್ಷ ಸಾಮಗ್ರಿಗಳು ಕಳುವಾಗುವ ಮೂಲಕ ಇವೆರಡೂ ಅತಿ ಹೆಚ್ಚು ಬಾಧಿತ ವಲಯಗಳಾಗಿವೆ. ದೆಹಲಿ, ಮುಂಬೈ, ಜೋಧ್‌ಪುರ ಮತ್ತು ಅಹಮದಾಬಾದ್ ವಿಭಾಗಗಳು ಇದರ ಮುಂದಿನ ಸ್ಥಾನಗಳಲ್ಲಿವೆ.

ರೈಲ್ವೆ ಅಧಿಕಾರಿಗಳು ಹೇಳೋದೇನು?

ಈ ನಿರಂತರ ಕಳ್ಳತನದ ಸವಾಲುಗಳ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಅಧಿಕಾರಿಯೊಬ್ಬರು, ಬೋಗಿಗಳಲ್ಲಿ ನೀಡಲಾಗುವ ಬೆಡ್‌ರೋಲ್ ಸಾಮಗ್ರಿಗಳ ಜವಾಬ್ದಾರಿ ಸಂಪೂರ್ಣವಾಗಿ ಆಯಾ ಗುತ್ತಿಗೆ ಸಂಸ್ಥೆಗಳ ಮೇಲಿರುತ್ತದೆ ಎಂದು ತಿಳಿಸಿದ್ದಾರೆ. ಸಾಮಗ್ರಿಗಳು ಕಳುವಾದಾಗ ಅಥವಾ ಕೊರತೆ ಉಂಟಾದಾಗ ಅದರ ನಷ್ಟದ ಮೊತ್ತವನ್ನು ಗುತ್ತಿಗೆ ಏಜೆನ್ಸಿಗಳಿಂದಲೇ ವಸೂಲಿ ಮಾಡಲಾಗುತ್ತದೆ. ಈ ಕಳ್ಳತನದಿಂದಾಗಿ ಉಂಟಾಗುವ ಕೊರತೆಯನ್ನು ನೀಗಿಸಲು ಹೆಚ್ಚುವರಿ ಬೆಡ್‌ಶೀಟ್ ಮತ್ತು ಟವಲ್‌ಗಳನ್ನು ಖರೀದಿಸಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. ಸದ್ಯ ಈ ವಿಚಾರವನ್ನು ಇಲಾಖೆ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಇಂತಹ ಕೃತ್ಯಗಳನ್ನು ತಡೆಯಲು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಕಟ್ಟುನಿಟ್ಟಿನ ಪ್ರಯತ್ನಗಳನ್ನು ನಡೆಸಲಾಗುತ್ತಿದೆ.

ಇದನ್ನೂ ಓದಿ: ಸಾಮಾನ್ಯ ಜನರಿಗೆ ಭಾರಿ ನಿರಾಳ: ಮಧುಮೇಹ, ಹೃದಯರೋಗ ಸೇರಿದಂತೆ 39 ಅಗತ್ಯ ಔಷಧಿಗಳ ಗರಿಷ್ಠ ಬೆಲೆ ನಿಗದಿಪಡಿಸಿ ಕೇಂದ್ರ ಸರ್ಕಾರ ಆದೇಶ!

Leave a Reply

Your email address will not be published. Required fields are marked *