ಬೆಂಗಳೂರು: ದೇಶದ ಸಾರ್ವಜನಿಕ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಡಿಯಲ್ಲಿ ಬರುವ ರಾಷ್ಟ್ರೀಯ ಔಷಧ (Good News) ಬೆಲೆ ನಿಯಂತ್ರಣ ಪ್ರಾಧಿಕಾರವು (NPPA) ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಇತ್ತೀಚೆಗೆ ಹೊರಡಿಸಲಾದ ಹೊಸ ಅಧಿಕೃತ ನಿಯಮಾವಳಿಗಳ ಪ್ರಕಾರ, ಮಾರುಕಟ್ಟೆಯಲ್ಲಿ ಲಭ್ಯವಿರುವ ಒಟ್ಟು 39 ಅತ್ಯಗತ್ಯ ಹೊಸ ಔಷಧ ಸೂತ್ರೀಕರಣಗಳ (Formulations) ಗರಿಷ್ಠ ಚಿಲ್ಲರೆ ಬೆಲೆಯನ್ನು ಔಷಧ ಬೆಲೆ ನಿಯಂತ್ರಣ ಕಾಯ್ದೆಯಡಿ ಕಟ್ಟುನಿಟ್ಟಾಗಿ ನಿಗದಿಪಡಿಸಲಾಗಿದೆ. ಸಾರ್ವಜನಿಕರು ನಿರಂತರವಾಗಿ ಬಳಸುವ ಮಧುಮೇಹ, ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು, ಕಣ್ಣಿನ ಸೋಂಕು, ಉಸಿರಾಟದ ತೊಂದರೆ ಹಾಗೂ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಪ್ರಮುಖ ಮಾತ್ರೆ ಮತ್ತು ಇಂಜೆಕ್ಷನ್‌ಗಳು ಈ ಹೊಸ ದರ ಪಟ್ಟಿಯಲ್ಲಿ ಸೇರಿವೆ.
ಜನರಿಗೆ ಸಹಾಯವಂತೆ ಬೆಲೆ ಕಡಿಮೆ
ಈ ಪರಿಷ್ಕೃತ ಪಟ್ಟಿಯಲ್ಲಿ ಹೃದಯಾಘಾತ (Heart Attack) ಮತ್ತು ಪಾರ್ಶ್ವವಾಯು (Stroke) ಸಂಭವಿಸಿದ ತುರ್ತು ಸಂದರ್ಭದಲ್ಲಿ ರಕ್ತ ಹೆಪ್ಪುಗಟ್ಟುವಿಕೆಯನ್ನು ತರಗಿಸಲು ಬಳಸಲಾಗುವ ಅತ್ಯಂತ ಪ್ರಮುಖ ಜೀವ ರಕ್ಷಕ ಇಂಜೆಕ್ಷನ್ ಆದ ‘ಟೆನೆಕ್ಟೆಪ್ಲೇಸ್’ (Tenecteplase 50 mg) ಅತ್ಯಂತ ದುಬಾರಿ ಔಷಧಿಯಾಗಿದೆ. ಅತ್ಯಾಧುನಿಕ ಜೈವಿಕ ತಂತ್ರಜ್ಞಾನದ ಆಧಾರದಲ್ಲಿ ತಯಾರಾಗುವ ಈ ತುರ್ತು ಚಿಕಿತ್ಸಾ ಇಂಜೆಕ್ಷನ್‌ನ ಒಂದು ವಯಲ್ ಬೆಲೆಯನ್ನು 60,238.27 ರೂಪಾಯಿ ಎಂದು ಗರಿಷ್ಠ ಮಿತಿಗೆ ಒಳಪಡಿಸಲಾಗಿದೆ. ಮತ್ತೊಂದೆಡೆ, ದೀರ್ಘಕಾಲದ ಕಾಯಿಲೆಗಳಿಂದ ಬಳಲುವ ಬಡ ಹಾಗೂ ಮಧ್ಯಮ ವರ್ಗದ ರೋಗಿಗಳಿಗೆ ಅನುಕೂಲವಾಗುವಂತೆ ಅತ್ಯಂತ ಕಡಿಮೆ ಬೆಲೆಯ ಔಷಧಿಗಳನ್ನೂ ಸಹ ನಿಯಂತ್ರಣಕ್ಕೆ ತರಲಾಗಿದ್ದು, ಇದರಲ್ಲಿ ಮಾನಸಿಕ ಆರೋಗ್ಯಕ್ಕೆ ಬಳಸುವ ಕ್ಲೋಬಾಜಾಮ್ ಓರಲ್ ಸಸ್ಪೆನ್ಷನ್ ಪ್ರತಿ ಮಿಲಿ ಲೀಟರ್‌ಗೆ ಕೇವಲ 2.80 ರೂಪಾಯಿ ಹಾಗೂ ನಿತ್ಯ ಬಳಸುವ ಆಸ್ಪಿರಿನ್ ಮತ್ತು ಅಟೋರ್ವಸ್ಟಾಟಿನ್ ಸಂಯೋಜನೆಯ ಕ್ಯಾಪ್ಸುಲ್‌ಗೆ 3.67 ರೂಪಾಯಿ ದರ ನಿಗದಿ ಮಾಡಲಾಗಿದೆ.
ದೇಶದಲ್ಲಿ ಮಧುಮೇಹ ಹಾಗೂ ಬಿಪಿ ರೋಗಿಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿರುವುದನ್ನು ಮನಗಂಡು, ಈ ಕಾಯಿಲೆಗಳ ದೈನಂದಿನ ನಿರ್ವಹಣೆಗೆ ಬಳಸುವ ಔಷಧಿಗಳ ಬೆಲೆಯನ್ನು ಗಣನೀಯವಾಗಿ ನಿಯಂತ್ರಣದಲ್ಲಿಡಲಾಗಿದೆ. ಮಧುಮೇಹದ ಪ್ರಮುಖ ಔಷಧಗಳಾದ ಗ್ಲಿಮೆಪಿರೈಡ್, ಮೆಟ್‌ಫಾರ್ಮಿನ್, ಸಿಟಾಗ್ಲಿಪ್ಟಿನ್ ಮತ್ತು ಡಪಾಗ್ಲಿಫ್ಲೋಜಿನಂತಹ ವಿವಿಧ ಸಂಯೋಜನೆಗಳ ಬೆಲೆಯನ್ನು ಮಾತ್ರೆಗಳ ಶಕ್ತಿಗೆ ಅನುಗುಣವಾಗಿ ಪ್ರತಿ ಮಾತ್ರೆಗೆ ಕೇವಲ 8.85 ರೂಪಾಯಿಯಿಂದ ಹಿಡಿದು 19.30 ರೂಪಾಯಿವರೆಗೆ ಮಾತ್ರ ನಿಗದಿಪಡಿಸಲಾಗಿದೆ. ಹಾಗೆಯೇ ಹೃದಯ ಕಾಯಿಲೆ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬಳಸುವ ಟೆಲ್ಮಿಸಾರ್ಟನ್ ಹಾಗೂ ಆಮ್ಲೋಡಿಪಿನ್ ಮಾತ್ರೆಗಳ ಬೆಲೆಯನ್ನು 10 ರಿಂದ 21 ರೂಪಾಯಿ ಆಸುಪಾಸಿನಲ್ಲಿ ಇರಿಸಲಾಗಿದ್ದು, ಸನ್ ಫಾರ್ಮಾ, ಸಿಪ್ಲಾ, ಮ್ಯಾನ್‌ಕೈಂಡ್, ಟೊರೆಂಟ್ ಹಾಗೂ ಅಲ್ಕೆಮ್‌ನಂತಹ ದೇಶದ ಮುಂಚೂಣಿ ಫಾರ್ಮಾ ಕಂಪನಿಗಳ ಉತ್ಪನ್ನಗಳು ಇನ್ನು ಮುಂದೆ ಇದೇ ನಿಗದಿತ ದರದಲ್ಲಿ ಜನರಿಗೆ ಸಿಗಲಿವೆ.
ಕೇಂದ್ರ ಸರ್ಕಾರದಿಂದ ಖಡಕ್ ಆದೇಶ
ಕೇಂದ್ರ ಸರ್ಕಾರದ ಈ ಕಟ್ಟುನಿಟ್ಟಿನ ಆದೇಶದ ಪ್ರಕಾರ ಯಾವುದೇ ಔಷಧ ಉತ್ಪಾದಕ ಅಥವಾ ಮಾರಾಟಗಾರ ಕಂಪನಿಗಳು ನಿಗದಿತ ಚಿಲ್ಲರೆ ದರಕ್ಕಿಂತ ಒಂದು ಪೈಸೆ ಕೂಡ ಹೆಚ್ಚಿನ ಹಣವನ್ನು ರೋಗಿಗಳಿಂದ ವಸೂಲಿ ಮಾಡುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಘಿಸಿ ಹೆಚ್ಚಿನ ಬೆಲೆಗೆ ಔಷಧಿ ಮಾರಾಟ ಮಾಡಿದ್ದು ಕಂಡುಬಂದರೆ, ಆ ಹೆಚ್ಚುವರಿ ಮೊತ್ತವನ್ನು ಭಾರಿ ಬಡ್ಡಿಯೊಂದಿಗೆ ಸರ್ಕಾರಕ್ಕೆ ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಅಲ್ಲದೆ ಅಗತ್ಯ ವಸ್ತುಗಳ ಕಾಯ್ದೆಯಡಿ ಕಂಪನಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಅವಕಾಶವಿದೆ. ಮೆಡಿಕಲ್ ಶಾಪ್ ಮಾಲೀಕರು ಸಹ ಪರಿಷ್ಕೃತ ದರ ಪಟ್ಟಿಯನ್ನು ಗ್ರಾಹಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುವುದು ಕಡ್ಡಾಯವಾಗಿದೆ. ಜೀವಮಾನವಿಡೀ ಮಾತ್ರೆಗಳನ್ನು ನೆಚ್ಚಿಕೊಳ್ಳಬೇಕಾದ ಸಾಮಾನ್ಯ ರೋಗಿಗಳಿಗೆ ಔಷಧದ ವೆಚ್ಚ ಭಾರವಾಗದಂತೆ ತಡೆಯಲು ಮತ್ತು ದೇಶಾದ್ಯಂತ ಏಕರೂಪದ ದರ ಕಾಯ್ದುಕೊಳ್ಳಲು ಸರ್ಕಾರದ ಈ ಕ್ರಮ ಅತ್ಯಂತ ಸಹಕಾರಿಯಾಗಲಿದೆ.
