TOP NEWS

Pratap Simha: ವಿಶ್ವವಿಖ್ಯಾತ ಮೈಸೂರು ದಸರಾದಲ್ಲಿ ಕಂಬಳ ಆಯೋಜನೆಗೆ ತೀವ್ರ ವಿರೋಧ: ಸಂಸದ ಯದುವೀರ್ ನಿಲುವಿಗೆ ಪ್ರತಾಪ್ ಸಿಂಹ ಬೆಂಬಲ!

Row over proposal to hold Kambala at Mysuru Dasara Prathap Simha backs MP Yaduveer opposition

ಮೈಸೂರು: ಕರಾವಳಿ ಭಾಗದ ಹೆಮ್ಮೆಯ ಸಾಂಸ್ಕೃತಿಕ ಹಾಗೂ ಜಾನಪದ ಕ್ರೀಡೆಯಾದ ಕಂಬಳ ಇದೀಗ ದೇಶಾದ್ಯಂತ ಜನಪ್ರಿಯತೆ ಗಳಿಸಿದೆ. ಆದರೆ, ಮುಂಬರುವ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಕಂಬಳ ಕ್ರೀಡೆಯನ್ನು ಆಯೋಜಿಸುವ ಸರ್ಕಾರದ ಪ್ರಸ್ತಾವನೆಗೆ ಮೈಸೂರು ರಾಜಕೀಯ ವಲಯದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಪರ-ವಿರೋಧದ ಚರ್ಚೆಗಳು ರಾಜಕೀಯ ತಿರುವು ಪಡೆದುಕೊಂಡಿವೆ. ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಅವರು ದಸರಾ ಮಹೋತ್ಸವಕ್ಕೆ ಕಂಬಳದ ಅಗತ್ಯವಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.

‘ದಸರಾ ಪರಂಪರೆಗೆ ಕಂಬಳ ತುರುಕುವುದು ಬೇಡ’: ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮಾಜಿ ಸಂಸದ ಪ್ರತಾಪ್ ಸಿಂಹ, “ನಮ್ಮ ಮೈಸೂರು ಸಂಸದರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಈಗಾಗಲೇ ದಸರಾದಲ್ಲಿ ಕಂಬಳ ಆಯೋಜನೆ ಬೇಡ ಎಂದು ಸ್ಪಷ್ಟ ನಿಲುವು ತಳೆದಿದ್ದಾರೆ. ಅವರ ಆ ಪ್ರಬುದ್ಧ ನಿರ್ಧಾರಕ್ಕೆ ನಮ್ಮ ಸಂಪೂರ್ಣ ಸಹಮತವಿದೆ. ರಾಜ್ಯದ ಸವದತ್ತಿ ಎಲ್ಲಮ್ಮನ ಜಾತ್ರೆಗೆ ತನ್ನದೇ ಆದ ಐತಿಹಾಸಿಕ ಮಹತ್ವವಿದೆ. ಅದೇ ರೀತಿ ಕರಾವಳಿಯ ಕಂಬಳ ಹಾಗೂ ಮೈಸೂರು ದಸರಾಗೂ ವೈವಿಧ್ಯಮಯ ಸಾಂಸ್ಕೃತಿಕ ಹಿನ್ನೆಲೆಯಿದೆ. ನಮಗೆ ಕಂಬಳದ ಮೇಲೆ ಅಪಾರ ಗೌರವವಿದೆ, ಆದರೆ ಮೈಸೂರು ದಸರಾ ಆಚರಣೆಯ ಶೈಲಿ ಮತ್ತು ಅದರ ಪರಂಪರೆಯೇ ಬೇರೆ. ಹಾಗಾಗಿ ನಮ್ಮ ಸಾಂಪ್ರದಾಯಿಕ ದಸರಾದೊಳಗೆ ಬೇರೆ ಪ್ರಾಂತ್ಯದ ಆಚರಣೆಗಳನ್ನು ಬಲವಂತವಾಗಿ ತುರುಕುವ ಪ್ರಯತ್ನ ಬೇಡ” ಎಂದು ಅಭಿಪ್ರಾಯಪಟ್ಟಿದ್ದಾರೆ.

ದಸರಾ ಇತಿಹಾಸದಲ್ಲೇ ಮೊದಲ ಪ್ರಯತ್ನಕ್ಕೆ ವಿಘ್ನ: ಮೈಸೂರು ದಸರಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರಾವಳಿಯ ಕಂಬಳವನ್ನು ರಾಜಧಾನಿಗೆ ಪರಿಚಯಿಸಲು ಭರದಿಂದ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ರಾಜ್ಯದ ವಿವಿಧೆಡೆಯಿಂದ ಸುಮಾರು 120 ಜೋಡಿ ಕೋಣಗಳನ್ನು ಕರೆತಂದು, ಅಂದಾಜು 5 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ದಿನಗಳ ಕಾಲ ಅದ್ಧೂರಿ ಕಂಬಳ ಆಯೋಜಿಸಲು ಸರ್ಕಾರ ತೀರ್ಮಾನಿಸಿತ್ತು. ಆದರೆ, ಸ್ಥಳೀಯವಾಗಿ ವ್ಯಕ್ತವಾಗುತ್ತಿರುವ ಸಾಂಸ್ಕೃತಿಕ ಮತ್ತು ರಾಜಕೀಯ ಪ್ರತಿರೋಧದಿಂದಾಗಿ, ಈಗ ಮೈಸೂರಿನಲ್ಲಿ ಕಂಬಳ ನಡೆಯುತ್ತಾ ಇಲ್ಲವೇ ರದ್ದಾಗುತ್ತಾ? ಎಂಬ ಗೊಂದಲ ಮೂಡಿದೆ.

ರಾಜಮನೆತನದ ತಕರಾರು ಏನು?: ದಸರಾದಲ್ಲಿ ಕಂಬಳದ ಎಂಟ್ರಿಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಒಡೆಯರ್ ಅವರೇ ಮೊದಲು ಆಕ್ಷೇಪ ವ್ಯಕ್ತಪಡಿಸಿದ್ದರು. “ಕಂಬಳ ಕ್ರೀಡೆಗೆ ತನ್ನದೇ ಆದ ಭವ್ಯ ಇತಿಹಾಸ ಮತ್ತು ಗೌರವವಿದೆ ಎಂಬುದು ನಿಜ. ಆದರೆ ಮೈಸೂರು ದಸರಾ ಎನ್ನುವುದು ಸಂಪೂರ್ಣವಾಗಿ ಧಾರ್ಮಿಕ ಮತ್ತು ಸಾಂಪ್ರದಾಯಿಕ ಚೌಕಟ್ಟನ್ನು ಹೊಂದಿರುವ ಆಚರಣೆಯಾಗಿದೆ. ಕಂಬಳವು ಕರಾವಳಿಯ ವಿಶಿಷ್ಟ ಸಂಸ್ಕೃತಿಯ ಭಾಗವಾಗಿದ್ದು, ಆಯಾ ಪ್ರಾದೇಶಿಕ ಸೊಗಡಿನ ಆಚರಣೆಗಳು ಆಯಾ ಭಾಗದಲ್ಲೇ ನಡೆದರೆ ಅದಕ್ಕೊಂದು ತೂಕವಿರುತ್ತದೆ. ಇಲ್ಲಿ ಅದರ ಅವಶ್ಯಕತೆಯಿಲ್ಲ” ಎಂದು ಯದುವೀರ್ ಒಡೆಯರ್ ಸ್ಪಷ್ಟಪಡಿಸಿದ್ದರು. ರಾಜಮನೆತನದ ಈ ಹೇಳಿಕೆ ಬೆನ್ನಲ್ಲೇ ಬಿಜೆಪಿ ನಾಯಕರೂ ಧ್ವನಿಗೂಡಿಸಿರುವುದು ಸರ್ಕಾರದ ಮುಂದಿನ ನಡೆಗೆ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಅಧಿಕಾರಿಗಳು ಎಸಿ ರೂಂನಲ್ಲೇ ಕೂತಿದ್ದಾರೆ, ಸರ್ಕಾರದ ಕಣ್ಣು ತೆರೆಸಲು ಜೆಡಿಎಸ್‌ನಿಂದ 4 ಬರ ಅಧ್ಯಯನ ತಂಡಗಳ ರಚನೆ

Leave a Reply

Your email address will not be published. Required fields are marked *