ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಹಾಗೂ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ನಾಯಕ ಸಿ. ಜೋಸೆಫ್ ವಿಜಯ್ (CM Vijay) ಅವರ ಚುನಾವಣಾ ಗೆಲುವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಹಿನ್ನೆಲೆಯಲ್ಲಿ ಮದ್ರಾಸ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇತ್ತೀಚಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರು ಜಯಗಳಿಸಿದ್ದ ಪೆರಂಬೂರ್ ಮತ್ತು ತಿರುಚಿ ಈಸ್ಟ್ ಕ್ಷೇತ್ರಗಳ ಫಲಿತಾಂಶವನ್ನು ರದ್ದುಗೊಳಿಸಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಸರಣಿ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಾಲಯ, ಮುಖ್ಯಮಂತ್ರಿ ವಿಜಯ್ ಹಾಗೂ ಭಾರತೀಯ ಚುನಾವಣಾ ಆಯೋಗಕ್ಕೆ (ECI) ನೋಟಿಸ್ ಜಾರಿ ಮಾಡಿದ್ದು, ಮೂರು ವಾರಗಳೊಳಗೆ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ನ್ಯಾಯಮೂರ್ತಿ ವಿ. ಲಕ್ಷ್ಮೀನಾರಾಯಣ್ ಅವರಿದ್ದ ಪೀಠವು ಈ ಆದೇಶ ಹೊರಡಿಸಿದ್ದು, ಜನಪ್ರತಿನಿಧಿ ಕಾಯ್ದೆಯ ನಿಯಮಗಳ ಪ್ರಕಾರ ಇಂತಹ ಚುನಾವಣಾ ತಕರಾರು ಅರ್ಜಿಗಳ ವಿಚಾರಣೆಯನ್ನು 6 ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕಿದೆ ಎಂದು ನೆನಪಿಸಿದ್ದಾರೆ. ವಿಜಯ್ ವಿರುದ್ಧ ಪೆರಂಬೂರ್ ಕ್ಷೇತ್ರದಲ್ಲಿ ಸೋಲು ಕಂಡಿದ್ದ ಡಿಎಂಕೆ (DMK) ಅಭ್ಯರ್ಥಿ ಆರ್.ಡಿ. ಶೇಖರ್, ಮತದಾರರಾದ ದಿನೇಶ್ ಹಾಗೂ ಲಕ್ಷ್ಮೀನರಸಿಂಹನ್ ಮತ್ತು ತಿರುಚಿ ಈಸ್ಟ್ ಕ್ಷೇತ್ರದ ಪರಾಜಿತ ಅಭ್ಯರ್ಥಿ ಎಸ್. ಇನಿಗೋ ಇರುದಯರಾಜ್ ಅವರು ಈ ಅರ್ಜಿಗಳನ್ನು ಸಲ್ಲಿಸಿದ್ದಾರೆ.
ಸಣ್ಣ ಮಕ್ಕಳನ್ನು ಬಳಸಿ ಭಾವನಾತ್ಮಕ ಬ್ಲ್ಯಾಕ್‌ಮೇಲ್ ಆರೋಪ
ಮುಖ್ಯಮಂತ್ರಿ ವಿಜಯ್ ವಿರುದ್ಧ ಅರ್ಜಿದಾರರು ಕೋರ್ಟ್‌ನಲ್ಲಿ ಅತ್ಯಂತ ಗಂಭೀರ ಸ್ವರೂಪದ ಆರೋಪಗಳನ್ನು ಮಾಡಿದ್ದಾರೆ. ಕಳೆದ ಏಪ್ರಿಲ್ 21 ರಂದು ಚೆನ್ನೈನ ವೈಎಂಸಿಎ (YMCA) ಮೈದಾನದಲ್ಲಿ ನಡೆದಿದ್ದ ಕೊನೆಯ ಹಂತದ ಪ್ರಚಾರದ ವೇಳೆ, ತಮ್ಮ ಪಕ್ಷಕ್ಕೆ ವೋಟ್ ಹಾಕುವಂತೆ ಪೋಷಕರ ಮೇಲೆ ಒತ್ತಡ ಹೇರಲು ವಿಜಯ್ ಅವರು ಚಿಕ್ಕ ಮಕ್ಕಳನ್ನು ದಾಳವಾಗಿ ಬಳಸಿಕೊಂಡಿದ್ದಾರೆ. ಮಕ್ಕಳ ಮೂಲಕ ಹೆತ್ತವರ ಮನವೊಲಿಸಲು ಭಾವನಾತ್ಮಕವಾಗಿ ಬ್ಲ್ಯಾಕ್‌ಮೇಲ್ ತಂತ್ರ ಹೂಡಿದ್ದಾರೆ ಎಂದು ದೂರಲಾಗಿದ್ದು, ಇದಕ್ಕೆ ಸಾಕ್ಷಿಯಾಗಿ ಆ ಭಾಷಣದ ಡಿವಿಡಿಯನ್ನು ಕೋರ್ಟ್‌ಗೆ ಸಲ್ಲಿಕೆ ಮಾಡಲಾಗಿದೆ. ಚುನಾವಣಾ ರ‍್ಯಾಲಿಗಳಲ್ಲಿ ಅಪ್ರಾಪ್ತರನ್ನು ಬಳಸಬಾರದು ಎಂಬ ಆಯೋಗದ 2024ರ ಕಟ್ಟುನಿಟ್ಟಿನ ನಿಯಮವನ್ನು ಸಿಎಂ ಉಲ್ಲಂಘಿಸಿರುವುದರಿಂದ ಅವರ ಗೆಲುವು ಅಸಿಂಧು ಎಂದು ಅರ್ಜಿದಾರರ ಪರ ಹಿರಿಯ ವಕೀಲ ಪಿ. ವಿಲ್ಸನ್ ವಾದಿಸಿದ್ದಾರೆ.
ಚುನಾವಣಾ ವೆಚ್ಚ ಮರೆಮಾಚುವಿಕೆ ಹಾಗೂ ಆಸ್ತಿ ವಿವರದಲ್ಲಿ ಲೋಪ
ಮಕ್ಕಳ ದುರ್ಬಳಕೆ ಮಾತ್ರವಲ್ಲದೆ, ಆರ್ಥಿಕ ಅಕ್ರಮಗಳ ಆರೋಪವೂ ಸಿಎಂ ಮೇಲೆ ಕೇಳಿಬಂದಿದೆ. ಟಿವಿಕೆ ಪಕ್ಷದ ಧ್ವಜಗೀತೆ ಹಾಗೂ ಪ್ರಚಾರದ ಹಾಡುಗಳನ್ನು ಸಿದ್ಧಪಡಿಸಿಕೊಟ್ಟಿದ್ದ ಖ್ಯಾತ ಸಂಗೀತ ನಿರ್ದೇಶಕ ಎಸ್. ಥಮನ್ ಅವರಿಗೆ ಭಾರಿ ಮೊತ್ತದ ಸಂಭಾವನೆ ನೀಡಲಾಗಿದ್ದರೂ, ಆ ವೆಚ್ಚವನ್ನು ವಿಜಯ್ ತಮ್ಮ ಅಧಿಕೃತ ಚುನಾವಣಾ ಖರ್ಚಿನ ಪಟ್ಟಿಯಲ್ಲಿ ತೋರಿಸಿಲ್ಲ. ಆ ಮೂಲಕ ಆಯೋಗ ನಿಗದಿಪಡಿಸಿರುವ 40 ಲಕ್ಷ ರೂಪಾಯಿಗಳ ವೆಚ್ಚದ ಮಿತಿಯನ್ನು ಮೀರಿ ಹಣ ಖರ್ಚು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಇದಲ್ಲದೆ, ನಾಮಪತ್ರದ ಆಸ್ತಿ ಅಫಿಡವಿಟ್‌ನಲ್ಲಿಯೂ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಕೋರ್ಟ್ ಗಮನಕ್ಕೆ ತರಲಾಗಿದೆ. ಅಫಿಡವಿಟ್‌ನ ಒಂದು ಭಾಗದಲ್ಲಿ ತಮಗೆ 3.44 ಕೋಟಿ ರೂ. ಆದಾಯ ತೆರಿಗೆ ಬಾಕಿ ಇದೆ ಎಂದು ಒಪ್ಪಿಕೊಂಡಿರುವ ವಿಜಯ್, ಸಾರ್ವಜನಿಕ ಸಾರಾಂಶದ ಭಾಗದಲ್ಲಿ ಯಾವುದೇ ತೆರಿಗೆ ಬಾಕಿ ಉಳಿಸಿಕೊಂಡಿಲ್ಲ (Nil) ಎಂದು ಉಲ್ಲೇಖಿಸಿ ಮತದಾರರನ್ನು ದಾರಿ ತಪ್ಪಿಸಿದ್ದಾರೆ ಎಂದು ದೂರಲಾಗಿದೆ. ಇದರ ಜೊತೆಗೆ, ಏಪ್ರಿಲ್ 19 ರಂದು ಸೆಂಟ್ ಆಂಟನಿ ಚರ್ಚ್ ಒಳಗೆ ರಾಜಕೀಯ ಪ್ರಚಾರ ನಡೆಸಿ ಧಾರ್ಮಿಕ ನಿಯಮಾವಳಿಗಳನ್ನು ಗಾಳಿಗೆ ತೂರಿದ್ದಾರೆ ಎಂಬ ದೂರು ಕೂಡ ಅರ್ಜಿಯಲ್ಲಿದೆ.
