ತುಮಕೂರು: ರಾಜ್ಯದಲ್ಲಿ ಪ್ರಸ್ತುತ ಚಾಲ್ತಿಯಲ್ಲಿರುವ ಎಸ್ಐಆರ್ (SIR) ಪ್ರಕ್ರಿಯೆಯು ಸಂಪೂರ್ಣವಾಗಿ ಭಾರತೀಯ ಚುನಾವಣಾ ಆಯೋಗದ (ECI) ನಿಯಮಾವಳಿಗಳ ಪ್ರಕಾರವೇ ನಡೆಯುತ್ತಿದ್ದು, ಇದರಲ್ಲಿ ಸರ್ಕಾರದ ಯಾವುದೇ ರೀತಿಯ ಹಸ್ತಕ್ಷೇಪವಿಲ್ಲ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎಸ್ಐಆರ್ ಗೊಂದಲ, ಬಿಎಲ್ಒಗಳ ಕರ್ತವ್ಯ ಲೋಪ ಹಾಗೂ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ವಿವಾದದ ಕುರಿತು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದರು.
ವಿರೋಧ ಪಕ್ಷದ ಆರೋಪಕ್ಕೆ ತಿರುಗೇಟು
ಚುನಾವಣಾ ಆಯೋಗವು ಒಂದು ಸ್ವತಂತ್ರ ಸಂಸ್ಥೆಯಾಗಿದ್ದು, ಅದರ ಮಾರ್ಗಸೂಚಿಯಂತೆ ಸರ್ಕಾರ ಕೇವಲ ಸಿಬ್ಬಂದಿಯನ್ನು ನಿಯೋಜಿಸಿದೆಯೇ ಹೊರತು ಯಾವುದೇ ಅಧಿಕಾರಿಗೆ ನಿರ್ದೇಶನ ನೀಡಿಲ್ಲ ಎಂದು ಸಚಿವರು ವಿರೋಧ ಪಕ್ಷಗಳ ಆರೋಪವನ್ನು ತಳ್ಳಿಹಾಕಿದರು. ನಿಯಮ ಮೀರಿ ಎಲ್ಲಾದರೂ ಅಕ್ರಮ ನಡೆದಿದ್ದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲು ಆಯೋಗ ಮುಕ್ತವಾಗಿದೆ ಎಂದ ಅವರು, ತಪ್ಪು ಮಾಡುವ ಬಿಎಲ್ಒಗಳ ವಿರುದ್ಧವೂ ಕಠಿಣ ಕಾನೂನು ಕ್ರಮ ಕೈಗೊಳ್ಳಬಹುದು ಎಂದರು. ಅಲ್ಲದೆ, ಕೇವಲ ಒಂದು ತಿಂಗಳೊಳಗೆ ಎಸ್ಐಆರ್ ಮುಗಿಸಲು ಸಿಬ್ಬಂದಿ ಮೇಲೆ ಒತ್ತಡ ಹೇರಲಾಗುತ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಕಾಲಮಿತಿಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಿದ್ದು, ಇದರ ಅವಧಿ ವಿಸ್ತರಣೆಯ ನಿರ್ಧಾರವೂ ಚುನಾವಣಾ ಆಯೋಗಕ್ಕೆ ಬಿಟ್ಟಿದ್ದಾಗಿದೆ ಎಂದು ತಿಳಿಸಿದರು. ಇನ್ನು ಕೆಲವು ಧಾರ್ಮಿಕ ಸ್ಥಳಗಳು ಹಾಗೂ ಸಮುದಾಯ ಭವನಗಳಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿರುವ ಕುರಿತು ಬಂದಿರುವ ದೂರುಗಳನ್ನು ಆಯೋಗವೇ ಪರಿಶೀಲಿಸಲಿದೆ, ಇದರಲ್ಲಿ ಸರ್ಕಾರದ ಪಾತ್ರವೇನೂ ಇಲ್ಲ ಎಂದರು.
ಜಿಲ್ಲಾ, ತಾಲೂಕು ಪಂಚಾಯತ್ ಚುನಾವಣೆ ಶೀಘ್ರ: ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿ ನಿಲ್ಲಲ್ಲ!
ಇದೇ ವೇಳೆ ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಳಂಬದ ಕುರಿತು ಮಾತನಾಡಿದ ಗೃಹ ಸಚಿವರು, ಗ್ರಾಮ ಪಂಚಾಯತಿಯಿಂದ ಹಿಡಿದು ಜಿಲ್ಲಾ ಪಂಚಾಯತಿಗಳವರೆಗೆ ಎಲ್ಲಾ ಹಂತದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ನಡೆಸಲು ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ನಿನ್ನೆಯಷ್ಟೇ ಮುಖ್ಯಮಂತ್ರಿಗಳು ಸ್ಪಷ್ಟನೆ ನೀಡಿದ್ದು, ಶೀಘ್ರದಲ್ಲೇ ದಿನಾಂಕವನ್ನು ಅಂತಿಮಗೊಳಿಸಲಾಗುವುದು ಎಂದರು.
ಇನ್ನು ಜಿಲ್ಲೆಯಲ್ಲಿ ರೈತರ ತೀವ್ರ ಪ್ರತಿಭಟನೆಗೆ ಕಾರಣವಾಗಿರುವ 900 ಕೋಟಿ ರೂಪಾಯಿ ವೆಚ್ಚದ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ (ಕುಣಿಗಲ್-ಮಾಗಡಿ ಲಿಂಕ್ ಕೆನಾಲ್) ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ ಪ್ರಶ್ನೆಯೇ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಈ ಯೋಜನೆಗೆ ಈಗಾಗಲೇ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗಿದ್ದು, ಕಾಮಗಾರಿ ಸಾಕಷ್ಟು ಪ್ರಗತಿ ಕಂಡಿದೆ. ಇಂತಹ ಪರಿಸ್ಥಿತಿಯಲ್ಲಿ ಯೋಜನೆಯನ್ನು ಅರ್ಧಕ್ಕೆ ಕೈಬಿಡಲು ಸಾಧ್ಯವಿಲ್ಲ ಎಂದ ಅವರು, ಲಿಂಕ್ ಕೆನಾಲ್ ಮೂಲಕ ನೀರು ಹೋದ ತಕ್ಷಣ ಇಲ್ಲಿನ ತೆರೆದ ಕಾಲುವೆಯನ್ನು ಮುಚ್ಚುವುದಿಲ್ಲ. ಕುಣಿಗಲ್ ಕೂಡ ನಮ್ಮದೇ ತುಮಕೂರು ಜಿಲ್ಲೆಯ ಭಾಗವಾಗಿದ್ದು, ಜಿಲ್ಲೆಯ ಯಾವುದೇ ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಹಿತರಕ್ಷಣೆ ಕಾಯಲautoದೆ ಎಂದು ಭರವಸೆ ನೀಡಿದರು.
