ನವದೆಹಲಿ: ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದಿದ್ದ ಅಮಾಯಕ ಪ್ರವಾಸಿಗರ ಭೀಕರ ಹತ್ಯಾಕಾಂಡದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮಹತ್ವದ ಹೆಜ್ಜೆ ಇಟ್ಟಿದೆ. ಈ ರಕ್ತಪಾತದ ಜಾಲ ಹೆಣೆದಿದ್ದ ಪಾಕಿಸ್ತಾನ ಮೂಲದ ನಿಷೇಧಿತ ಲಷ್ಕರ್-ಎ-ತೊಯ್ಬಾ (LeT) ಉಗ್ರ ಸಂಘಟನೆಯ ಸೂತ್ರಧಾರಿ ಹಫೀಜ್ ಸಯೀದ್ನನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಪೂರಕ ದೋಷಾರೋಪ ಪಟ್ಟಿ (Supplementary Chargesheet) ಸಲ್ಲಿಸಿದೆ.
ಜಮ್ಮುವಿನ ವಿಶೇಷ ಎನ್ಐಎ ಕೋರ್ಟ್ಗೆ ಸಲ್ಲಿಕೆಯಾಗಿರುವ ಈ ಚಾರ್ಜ್ಶೀಟ್ನಲ್ಲಿ, ಲಷ್ಕರ್-ಎ-ತೊಯ್ಬಾ ಹಾಗೂ ಅದರ ಮುಖವಾಡದಂತೆ ಕಾರ್ಯಾಚರಣೆ ನಡೆಸುತ್ತಿರುವ ‘ದಿ ರೆಸಿಸ್ಟೆನ್ಸ್ ಫ್ರಂಟ್’ (TRF) ಸಂಘಟನೆಯ ಕೃತ್ಯಗಳ ಹಿಂದೆ ಹಫೀಜ್ ಸಯೀದ್ ಪ್ರಮುಖ ಆಜ್ಞಾಧಾರಕನಾಗಿದ್ದ ಎಂದು ತನಿಖಾ ಸಂಸ್ಥೆ ಅಧಿಕೃತವಾಗಿ ಉಲ್ಲೇಖಿಸಿದೆ.
ಯುಎಪಿಎ ಅಡಿ ಗಂಭೀರ ಕೇಸ್ ದಾಖಲು: ಭಾರತದ ವಿರುದ್ಧ ಯುದ್ಧ ಸಾರಿದ ಹಾಗೂ ಗಡಿಯಾಚೆ ಕುಳಿತು ದೇಶದಲ್ಲಿ ವಿಧ್ವಂಸಕ ಕೃತ್ಯಗಳಿಗೆ ಸಂಚು ರೂಪಿಸಿದ ಹಿನ್ನೆಲೆಯಲ್ಲಿ ಹಫೀಜ್ ಸಯೀದ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ರ ಕಠಿಣ ಸೆಕ್ಷನ್ಗಳು ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (UAPA) ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಈ ಹಿಂದೆ ಸಲ್ಲಿಕೆಯಾಗಿದ್ದ 1,597 ಪುಟಗಳ ಮುಖ್ಯ ಚಾರ್ಜ್ಶೀಟ್ನ ಮುಂದುವರಿದ ಭಾಗವಾಗಿ ಈ ಪೂರಕ ಪಟ್ಟಿಯನ್ನು ಸಲ್ಲಿಸಲಾಗಿದ್ದು, ಇದರಲ್ಲಿ ವೈಜ್ಞಾನಿಕ ಸಾಕ್ಷ್ಯಾಧಾರಗಳು ಮತ್ತು ಡಿಜಿಟಲ್ ಪುರಾವೆಗಳೊಂದಿಗೆ ಹಫೀಜ್ ಪಾತ್ರವನ್ನು ಎನ್ಐಎ ಎಳೆಎಳೆಯಾಗಿ ಬಿಚ್ಚಿಟ್ಟಿದೆ.
26 ಮಂದಿ ಬಲಿಯಾಗಿದ್ದ ಕರಾಳ ದಿನ: ಕಳೆದ ವರ್ಷದ (2025) ಏಪ್ರಿಲ್ 22 ರಂದು ಪಹಲ್ಗಾಮ್ನಲ್ಲಿ ಪಾಕ್ ಪ್ರಾಯೋಜಿತ ಉಗ್ರರು ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಈ ಭೀಕರ ಹಟ್ಟಾಕಾಂಡದಲ್ಲಿ 25 ಪ್ರವಾಸಿಗರು ಮತ್ತು ಓರ್ವ ಸ್ಥಳೀಯ ನಿವಾಸಿ ಸೇರಿ ಒಟ್ಟು 26 ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದಕ್ಕೂ ಮುನ್ನ ಡಿಸೆಂಬರ್ 2025 ರಲ್ಲಿ ಸಲ್ಲಿಕೆಯಾಗಿದ್ದ ಮೊದಲ ಚಾರ್ಜ್ಶೀಟ್ನಲ್ಲಿ ಪಾಕ್ ಹ್ಯಾಂಡ್ಲರ್ ಸಾಜಿದ್ ಜತ್ ಹಾಗೂ ಜುಲೈ 2025 ರ ‘ಆಪರೇಷನ್ ಮಹಾದೇವ್’ ವೇಳೆ ಹತರಾಗಿದ್ದ ಮೂವರು ಭಯೋತ್ಪಾದಕರ ಹೆಸರನ್ನು ಉಲ್ಲೇಖಿಸಲಾಗಿತ್ತು.
ಸೇನೆಯಿಂದ ನಡೆದಿತ್ತು ಸರ್ಜಿಕಲ್ ಕಾರ್ಯಾಚರಣೆ: ಪ್ರಕರಣದ ವ್ಯಾಪ್ತಿ ದೊಡ್ಡದಾಗಿದ್ದರಿಂದ ಕೇಂದ್ರ ಗೃಹ ಸಚಿವಾಲಯವು ಇದರ ತನಿಖೆಯನ್ನು ಜಮ್ಮು-ಕಾಶ್ಮೀರ ಪೊಲೀಸರಿಂದ ಎನ್ಐಎಗೆ ವರ್ಗಾಯಿಸಿತ್ತು. ಈ ಭೀಕರ ಹತ್ಯಾಕಾಂಡಕ್ಕೆ ಭಾರತೀಯ ಸೇನೆಯು ಕಳೆದ ವರ್ಷದ ಮೇ 7 ರಂದೇ ತಕ್ಕ ಪ್ರತ್ಯುತ್ತರ ನೀಡಿತ್ತು. ಪಾಕ್ ಆಕ್ರಮಿತ ಕಾಶ್ಮೀರ (PoK) ಹಾಗೂ ಗಡಿಯೊಳಗೆ ನುಗ್ಗಿದ್ದ ಭಾರತೀಯ ಯೋಧರು ಭಾರಿ ಮಿಲಿಟರಿ ಕಾರ್ಯಾಚರಣೆ ನಡೆಸಿ ಉಗ್ರರ ಅಡಗುದಾಣಗಳನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದ್ದರು. ಸದ್ಯ ಪಾಕಿಸ್ತಾನದ ಈ ಭಯೋತ್ಪಾದಕ ಜಾಲವನ್ನು ಬೇರುಸಹಿತ ಕಿತ್ತೆಸೆಯಲು ಎನ್ಐಎ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿದೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಮತ್ತೊಂದು ನಗರದ ಹೆಸರು ಬದಲಾವಣೆ: ಜಲಾಲಾಬಾದ್ ಇನ್ಮುಂದೆ ‘ಪರಶುರಾಮಪುರಿ’
