ಅಯೋಧ್ಯೆ: ಅಯೋಧ್ಯೆ ರಾಮಮಂದಿರದ ದೇಣಿಗೆ ಕಳ್ಳತನದ ಆರೋಪ ಇಡೀ ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ ಬೆನ್ನಲ್ಲೇ, ಶ್ರೀರಾಮ ಜನ್ಮಭೂಮಿ (Ram Mandir) ತೀರ್ಥ ಕ್ಷೇತ್ರ ಟ್ರಸ್ಟ್‌ನ ಅಧ್ಯಕ್ಷರಾದ ಮಹಂತ್ ನೃತ್ಯ ಗೋಪಾಲ್ ದಾಸ್ ಅವರು ಈ ವಿವಾದದ ಕುರಿತು ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸಿದ್ದಾರೆ. ಸೋಮವಾರ ನಡೆಯಲಿರುವ ಟ್ರಸ್ಟ್‌ನ ಅತ್ಯಂತ ಪ್ರಮುಖ ಸಭೆಗಿಂತ ಮುಂಚಿತವಾಗಿ ಮಾತನಾಡಿರುವ ಹಿರಿಯ ಶ್ರೀಗಳು, ಈ ದೇಣಿಗೆ ದುರುಪಯೋಗದ ಘಟನೆಯಿಂದ ತಮಗೆ ತೀವ್ರ ಆಘಾತ ಮತ್ತು ನೋವಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಈ ಅಪರಾಧ ಎಸಗಿದ ತಪ್ಪಿತಸ್ಥರ ವಿರುದ್ಧ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸರ್ಕಾರದ ತನಿಖೆಯ ಮೇಲೆ ವಿಶ್ವಾಸವಿದೆ
ಲಕ್ಷಾಂತರ ಭಕ್ತರ ನಂಬಿಕೆಯ ಸಂಕೇತವಾಗಿರುವ ರಾಮಮಂದಿರದಲ್ಲಿ ಇಂತಹ ಘಟನೆ ನಡೆದಿರುವುದು ಸರಿಯಲ್ಲ ಎಂದಿರುವ ಶ್ರೀಗಳು, ಸರ್ಕಾರದ ತನಿಖೆಯ ಮೇಲೆ ತಮಗೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. ಶ್ರೀರಾಮ ಲಲ್ಲಾನ ಮಂದಿರದ ಕಾಣಿಕೆ ಕಳ್ಳತನ ಮಾಡಿರುವುದು ಅಕ್ಷಮ್ಯ ಅಪರಾಧ. ಈ ಪಾಪದ ಕೆಲಸದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಕಠಿಣ ಶಿಕ್ಷೆಯಾಗಬೇಕು. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ತಪ್ಪಿತಸ್ಥರನ್ನು ಕಾನೂನಿನ ಕಠಿಣ ಶಿಕ್ಷೆಗೆ ಒಳಪಡಿಸಲಿದ್ದಾರೆ ಎಂಬ ನಂಬಿಕೆ ನನಗಿದೆ. ಏಕೆಂದರೆ ಇದು ಕೋಟ್ಯಂತರ ಹಿಂದೂಗಳ ಆಳವಾದ ನಂಬಿಕೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ. ಇದೇ ವೇಳೆ, ಸ್ವಾರ್ಥ ಲಾಭಕ್ಕಾಗಿ ಯಾರೂ ಈ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದೂ ಅವರು ಮನವಿ ಮಾಡಿದ್ದಾರೆ.
ಇಂದು ಮಹತ್ವದ ಸಭೆ
ಇನ್ನೊಂದೆಡೆ, ಈ ಭಾರಿ ವಿವಾದದ ನಡುವೆಯೇ ಸೋಮವಾರ ಮಧ್ಯಾಹ್ನ ಟ್ರಸ್ಟ್‌ನ ತುರ್ತು ಸಭೆ ಆಯೋಜನೆಗೊಂಡಿದ್ದು, ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ. ಮೂಲಗಳ ಪ್ರಕಾರ, ದೇಣಿಗೆ ವಿವಾದ ಹೊರಬರುತ್ತಿದ್ದಂತೆ ತಮ್ಮ ಸ್ಥಾನಗಳಿಗೆ ರಾಜೀನಾಮೆ ಪತ್ರ ನೀಡಿರುವ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ಮತ್ತು ಟ್ರಸ್ಟಿ ಡಾ. ಅನಿಲ್ ಮಿಶ್ರಾ ಅವರ ಭವಿಷ್ಯ ಈ ಸಭೆಯಲ್ಲಿ ನಿರ್ಧಾರವಾಗಲಿದೆ. ಇದುವರೆಗೆ ಇವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ. ಸಾರ್ವಜನಿಕ ವಲಯದಲ್ಲಿ ಟ್ರಸ್ಟ್‌ನ ಪಾರದರ್ಶಕತೆಯ ಬಗ್ಗೆ ಪ್ರಶ್ನೆಗಳು ಎದ್ದಿರುವ ಈ ಹೊತ್ತಿನಲ್ಲಿ, ಇಂದಿನ ಸಭೆಯ ನಿರ್ಧಾರಗಳು ಅತ್ಯಂತ ಮಹತ್ವದಾಗಿರಲಿವೆ. ಮಂದಿರದ ಆಡಳಿತವನ್ನು ಮತ್ತಷ್ಟು ಬಲಪಡಿಸಲು ಮತ್ತು ದೈನಂದಿನ ಕೆಲಸಗಳನ್ನು ಸುಗಮವಾಗಿ ನಡೆಸಲು ಹೊಸದಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನು (CEO) ನೇಮಿಸುವ ಕುರಿತೂ ಸಭೆಯಲ್ಲಿ ಗಂಭೀರ ಚರ್ಚೆ ನಡೆಯಲಿದೆ.
ಸುಪ್ರೀಂ ಕೋರ್ಟ್ ನೀಡಿದ ಐತಿಹಾಸಿಕ ತೀರ್ಪಿನ ಅನ್ವಯ 2020ರ ಫೆಬ್ರವರಿಯಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅನ್ನು ರಚಿಸಲಾಗಿತ್ತು. ಆರಂಭದಲ್ಲಿ 15 ಸದಸ್ಯರಿದ್ದ ಈ ಸಮಿತಿಯಲ್ಲಿ, ಒಬ್ಬ ಸದಸ್ಯರ ನಿಧನದ ನಂತರ ಪ್ರಸ್ತುತ 14 ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಸಭೆ ಸೇರುವ ಈ ಟ್ರಸ್ಟ್, ಈ ಹಿಂದೆ ಮಾರ್ಚ್ 21 ರಂದು ರಾಮನವಮಿ ಆಚರಣೆಯ ಪೂರ್ವಸಿದ್ಧತೆಗಳಿಗಾಗಿ ಸಭೆ ನಡೆಸಿತ್ತು. ಆದರೆ ಈಗ ಎದುರಾಗಿರುವ ದೇಣಿಗೆ ವಿವಾದದಿಂದಾಗಿ ಇಂದಿನ ಸಭೆಯು ತೀವ್ರ ಕುತೂಹಲ ಮೂಡಿಸಿದೆ.
