TOP NEWS

Yogi Adityanath: ಉತ್ತರ ಪ್ರದೇಶದಲ್ಲಿ ಮತ್ತೊಂದು ನಗರದ ಹೆಸರು ಬದಲಾವಣೆ: ಜಲಾಲಾಬಾದ್ ಇನ್ಮುಂದೆ ‘ಪರಶುರಾಮಪುರಿ’

Yogi Adityanath Government Big Move Jalalabad Officially Renamed Parashuramapuri

ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ನೇತೃತ್ವದ ಸರ್ಕಾರವು ಮತ್ತೊಂದು ಮಹತ್ವದ ಹೆಸರು ಬದಲಾವಣೆಯ ತೀರ್ಮಾನ ಕೈಗೊಂಡಿದೆ. ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ಷಹಜಹಾನ್‌ಪುರ ಜಿಲ್ಲೆಯ ಪ್ರಮುಖ ಪಟ್ಟಣವಾದ ಜಲಾಲಾಬಾದ್ ಹೆಸರನ್ನು ಅಧಿಕೃತವಾಗಿ ‘ಪರಶುರಾಮಪುರಿ’ ಎಂದು ಮರುನಾಮಕರಣ ಮಾಡಲು ಅನುಮೋದನೆ ನೀಡಲಾಗಿದೆ. ಈ ಐತಿಹಾಸಿಕ ತೀರ್ಮಾನದ ಮೂಲಕ ಈ ಪ್ರಾಚೀನ ಪಟ್ಟಣಕ್ಕೆ ಹೊಸ ಸಾಂಸ್ಕೃತಿಕ ಹಾಗೂ ಧಾರ್ಮಿಕ ಗುರುತು ಸಿಕ್ಕಂತಾಗಿದೆ.

ಸ್ಥಳದ ಹಿನ್ನಲೆ ಏನು?

ಪೌರಾಣಿಕ ಹಿನ್ನೆಲೆಯ ಪ್ರಕಾರ, ಈ ಜಲಾಲಾಬಾದ್ ಪ್ರದೇಶವು ಭಗವಾನ್ ಶ್ರೀ ಪರಶುರಾಮರ ಜನ್ಮಸ್ಥಳ ಎಂದು ನಂಬಲಾಗಿದೆ. ಹೀಗಾಗಿ ಈ ಭಾಗವು ಅಪಾರ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ. ಸ್ಥಳೀಯ ನಾಗರಿಕರ ಸಾಂಸ್ಕೃತಿಕ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಮನ್ನಣೆ ನೀಡಿರುವ ಯೋಗಿ ಸರ್ಕಾರ, ಈ ಮರುನಾಮಕರಣದ ಆದೇಶವನ್ನು ಹೊರಡಿಸಿದೆ.

ಜಲಾಲಾಬಾದ್ ಪಟ್ಟಣವನ್ನು ಪರಶುರಾಮರ ಹೆಸರಿನಿಂದಲೇ ಕರೆಯಬೇಕು ಎಂದು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದರು. ಸಾರ್ವಜನಿಕರ ಈ ದೀರ್ಘಕಾಲದ ಬೇಡಿಕೆ ಹಾಗೂ ಪ್ರಾದೇಶಿಕ ಸಾಂಸ್ಕೃತಿಕ ಅಸ್ಮಿತೆಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು ಈ ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿತ್ತು. ಪ್ರಾಚೀನ ಧರ್ಮಗ್ರಂಥಗಳಲ್ಲೂ ಈ ಪ್ರದೇಶದ ಉಲ್ಲೇಖಗಳಿದ್ದು, ಇಲ್ಲಿನ ಧಾರ್ಮಿಕ ಸಂಪ್ರದಾಯಗಳೊಂದಿಗೆ ಇದು ನಿಕಟ ನಂಟು ಹೊಂದಿದೆ ಎಂಬ ಬಲವಾದ ಪುರಾವೆಗಳ ಆಧಾರದ ಮೇಲೆಯೇ ಈ ಐತಿಹಾಸಿಕ ತೀರ್ಮಾನಕ್ಕೆ ಬರಲಾಗಿದೆ.

ಸಚಿವ ಸಂಪುಟದಿಂದ ಒಪ್ಪಿಗೆ

ಸದ್ಯ ಸಚಿವ ಸಂಪುಟದ ಅಧಿಕೃತ ಒಪ್ಪಿಗೆ ಸಿಕ್ಕಿರುವುದರಿಂದ, ಇನ್ನುಳಿದ ಆಡಳಿತಾತ್ಮಕ ಮತ್ತು ಗೆಜೆಟ್ ನೋಟಿಫಿಕೇಶನ್ ಪ್ರಕ್ರಿಯೆಗಳು ಶೀಘ್ರದಲ್ಲೇ ಪೂರ್ಣಗೊಳ್ಳಲಿವೆ. ಅದಾದ ತಕ್ಷಣ ಜಲಾಲಾಬಾದ್‌ ಪಟ್ಟಣವು ಅಧಿಕೃತವಾಗಿ ಪರಶುರಾಮಪುರಿ ಎಂದೇ ಮರುಚಾಲ್ತಿಗೆ ಬರಲಿದೆ. ಸರ್ಕಾರದ ಈ ನಿರ್ಧಾರವು ಈ ಪ್ರದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಹಿನ್ನೆಲೆಗೆ ಹೊಸ ಆಯಾಮ ನೀಡಲಿದ್ದು, ಸ್ಥಳೀಯ ಜನರಲ್ಲಿ ಭಾರಿ ಹರ್ಷ ಮೂಡಿಸಿದೆ.

ಇದನ್ನೂ ಓದಿ: ರಾಮಮಂದಿರ ದೇಣಿಗೆ ಅಕ್ರಮಕ್ಕೆ ಮೋದಿ-ಯೋಗಿ ಕಠಿಣ ಶಿಕ್ಷೆ ಕೊಡಿಸಲಿದ್ದಾರೆ: ಟ್ರಸ್ಟ್ ಮುಖ್ಯಸ್ಥ ಮಹಂತ್ ನೃತ್ಯ ಗೋಪಾಲ್ ದಾಸ್ ವಿಶ್ವಾಸ

Leave a Reply

Your email address will not be published. Required fields are marked *