ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಜಿಬಿಎ ಕೈಗೊಂಡಿರುವ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಈಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಸರ್ಕಾರದ ಈ ಕ್ರಮದ ವಿರುದ್ಧ ಬೀದಿ ಬದಿ (GBA) ವ್ಯಾಪಾರಿಗಳ ಜಂಟಿ ಹೋರಾಟ ಸಮಿತಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ನೇರವಾಗಿ ರಾಜ್ಯ ಸರ್ಕಾರ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ ಅವರ ವಿರುದ್ಧ ತಿರುಗಿಬಿದ್ದಿದೆ. ನ್ಯಾಯಾಲಯವು ಪಾದಚಾರಿಗಳ ಹಕ್ಕಿನ ಬಗ್ಗೆ ಆದೇಶ ನೀಡಿರುವಂತೆಯೇ, ತಮ್ಮ ರಕ್ಷಣೆಗೂ ಕಾನೂನಿನಲ್ಲಿ ಅವಕಾಶವಿದೆ ಎಂದು ನೆನಪಿಸಿರುವ ವ್ಯಾಪಾರಿಗಳು, ನಮಗೆ ಯಾವುದೇ ಮುನ್ಸೂಚನೆ ನೀಡದೆ ಅಕ್ರಮವಾಗಿ ಒಕ್ಕಲೆಬ್ಬಿಸಲಾಗುತ್ತಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಇದೇ ವೇಳೆ ತಮ್ಮ ಮತ್ತು ಸಾರ್ವಜನಿಕರ ನಡುವೆ ಸರ್ಕಾರವೇ ಇಲ್ಲದ ಒಡಕು ಮೂಡಿಸುತ್ತಿದೆ ಎಂದು ಅವರು ದೂರಿದ್ದಾರೆ.
ಸರ್ಕಾರದಿಂದ ಪರಿಹಾರಕ್ಕೆ ಆಗ್ರಹ
ಈ ಅನಿರೀಕ್ಷಿತ ತೆರವು ಕಾರ್ಯಾಚರಣೆಯಿಂದ ತಮಗೆ ಉಂಟಾಗಿರುವ ಭಾರಿ ಆರ್ಥಿಕ ನಷ್ಟಕ್ಕೆ ಸರ್ಕಾರವೇ ಪರಿಹಾರ ನೀಡಬೇಕು ಎಂದು ಸಮಿತಿ ಒತ್ತಾಯಿಸಿದೆ. ಮುಖ್ಯ ರಸ್ತೆಗಳಲ್ಲಿ ವ್ಯಾಪಾರ ಮಾಡುವುದನ್ನು ನಿಷೇಧಿಸಿರುವ ಅಧಿಕಾರಿಗಳು, ಅದೇ ರಸ್ತೆಗಳ ಬದಿಯಲ್ಲಿ ವಾಹನಗಳನ್ನು ಉಚಿತವಾಗಿ ಪಾರ್ಕಿಂಗ್ ಮಾಡಲು ಹೇಗೆ ಅವಕಾಶ ನೀಡಿದ್ದಾರೆ ಎಂದು ವ್ಯಾಪಾರಿಗಳು ಪ್ರಶ್ನಿಸಿದ್ದಾರೆ. ಅಲ್ಲದೆ, ಮುಖ್ಯ ರಸ್ತೆಗಳನ್ನು ಬಿಟ್ಟು ಕಿರಿದಾದ ಒಳರಸ್ತೆಗಳಿಗೆ ಹೋಗಿ ವ್ಯಾಪಾರ ಮಾಡಿ ಎನ್ನುವ ಸರ್ಕಾರದ ಸಲಹೆ ಪ್ರಾಯೋಗಿಕವಾಗಿ ಸಾಧ್ಯವಿಲ್ಲ. ಆ ಕಿರಿದಾದ ಜಾಗಗಳಲ್ಲಿ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದರೆ ಬಡ ವ್ಯಾಪಾರಿಗಳು ಎಲ್ಲಿಗೆ ಹೋಗಬೇಕು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಸರ್ಕಾರಕ್ಕೆ ಬೀದಿ ಬದಿ ವ್ಯಾಪಾರಿಗಳ ಸಂರಕ್ಷಣಾ ಕಾಯ್ದೆಯ ಅರಿವಿಲ್ಲವೇ ಅಥವಾ ಗೊತ್ತಿದ್ದೂ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದೆಯೇ ಎಂದು ಸಮಿತಿ ಖಾರವಾಗಿ ಪ್ರಶ್ನಿಸಿದೆ.
ಜುಲೈ 8ರಂದು ಬಂದ್‌ಗೆ ನಿರ್ಧಾರ
ಅಧಿಕಾರಕ್ಕೆ ಬಂದ ನಂತರ ಒಮ್ಮೆಯೂ ತಮ್ಮ ಸಂಕಷ್ಟಗಳನ್ನು ಆಲಿಸದ ಸಚಿವರು, ಈಗ ಏಕಾಏಕಿ ಇಂತಹ ಕಠಿಣ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ ಎಂದು ವ್ಯಾಪಾರಿಗಳು ಆಕ್ರೋಶ ಹೊರಹಾಕಿದ್ದಾರೆ. ನಗರದಲ್ಲಿ ರಸ್ತೆ ದಾಟುವಾಗ ಸಂಭವಿಸುವ ಅಪಘಾತಗಳಿಂದ ಪಾದಚಾರಿಗಳು ಮೃತಪಡುತ್ತಿದ್ದಾರೆಯೇ ಹೊರತು, ಬೀದಿ ಬದಿ ವ್ಯಾಪಾರಿಗಳಿಂದ ಯಾರೂ ಪ್ರಾಣ ಕಳೆದುಕೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮೂರು ತಿಂಗಳ ಹಿಂದೆ ಶಾಸಕರ ಸಭೆಯಲ್ಲಿ ಮೌಖಿಕವಾಗಿ ಹೇಳಿದ್ದನ್ನೇ ನೋಟಿಸ್ ಎಂದು ಪರಿಗಣಿಸಬೇಕು ಎನ್ನುವ ಅಧಿಕಾರಿಗಳ ವಾದ ಕಾನೂನುಬಾಹಿರ ಎಂದು ಸಮಿತಿ ಕಿಡಿಕಾರಿದೆ. ಸರ್ಕಾರದ ಈ ಧೋರಣೆಯನ್ನು ಪ್ರತಿಭಟಿಸಿ ಜುಲೈ 8ರಂದು ಮುಂಜಾನೆ 6 ಗಂಟೆಯಿಂದ ನಗರದಾದ್ಯಂತ ಬೀದಿ ಬದಿ ವ್ಯಾಪಾರವನ್ನು ಸಂಪೂರ್ಣವಾಗಿ ಬಂದ್ ಮಾಡಲು ನಿರ್ಧರಿಸಲಾಗಿದ್ದು, ಅಂದು ಹಣ್ಣು, ತರಕಾರಿ ಹಾಗೂ ರಸ್ತೆ ಬದಿಯ ಹೋಟೆಲ್‌ಗಳು ಮುಚ್ಚುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: ಬಿಜೆಪಿಯ ದಾಳವಾಗಿ ಕುಮಾರಸ್ವಾಮಿ ಹರಕೆಯ ಕುರಿ: ಬಿ.ಕೆ. ಹರಿಪ್ರಸಾದ್ ತೀಕ್ಷ್ಣ ವಾಗ್ದಾಳಿ
