TOP NEWS

Iran: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದ ನಿಯೋಗ ಭಾಗಿ: ‘ಸ್ನೇಹರಾಷ್ಟ್ರ’ದ ಸಹಾನುಭೂತಿ ಮರೆಯಲ್ಲ ಎಂದು ಕೃತಜ್ಞತೆ ಸಲ್ಲಿಸಿದ ಇರಾನ್!

Khameneis Funeral Indian Envoy and Political Leaders Pay Final Respects in Tehran Iran Hails Ties

ಟೆಹ್ರಾನ್: ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಗೆ ಬಲಿಯಾಗಿದ್ದ ಇರಾನ್‌ನ (Iran) ಮಾಜಿ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಸಂಸ್ಕಾರದಲ್ಲಿ ಭಾರತದ ಅಧಿಕೃತ ರಾಜತಾಂತ್ರಿಕ ನಿಯೋಗ ಪಾಲ್ಗೊಂಡು ಅಂತಿಮ ಗೌರವ ಸಲ್ಲಿಸಿದೆ. ಭಾರತದ ಈ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿರುವ ಇರಾನ್ ಸರ್ಕಾರ ಮತ್ತು ಅಲ್ಲಿನ ಜನತೆ, ಭಾರತೀಯರಿಗೆ ವಿಶೇಷ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿರುವ ಭಾರತದಲ್ಲಿನ ಇರಾನ್ ರಾಯಭಾರ ಕಚೇರಿಯು, ಇಡೀ ಇರಾನ್ ಜನತೆಯ ಪರವಾಗಿ ಭಾರತಕ್ಕೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದೆ.

ಇರಾನ್ ರಾಯಭಾರ ಕಚೇರಿಯು ತನ್ನ ಅಧಿಕೃತ ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಈ ಭೇಟಿಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಭಾರತೀಯ ನಿಯೋಗದ ಆಗಮನವು ಉಭಯ ದೇಶಗಳ ನಡುವಿನ ಪರಸ್ಪರ ಗೌರವದ ಸಂಕೇತವಾಗಿದೆ ಎಂದು ಬಣ್ಣಿಸಿದೆ. ತನ್ನ ಧನ್ಯವಾದ ಪತ್ರದಲ್ಲಿ ಭಾರತವನ್ನು ‘ಸ್ನೇಹರಾಷ್ಟ್ರ’ ಎಂದು ವಿಶೇಷವಾಗಿ ಉಲ್ಲೇಖಿಸಿರುವುದು ಜಾಗತಿಕ ರಾಜತಾಂತ್ರಿಕ ವಲಯದ ಗಮನ ಸೆಳೆದಿದೆ. ಇರಾನ್‌ನ ಅತ್ಯಂತ ಕಠಿಣ ಸಂದರ್ಭದಲ್ಲಿ ಭಾರತವು ತನ್ನ ಉನ್ನತ ಮಟ್ಟದ ನಿಯೋಗವನ್ನು ಕಳುಹಿಸಿಕೊಟ್ಟಿರುವುದು ಉಭಯ ರಾಷ್ಟ್ರಗಳ ನಡುವಿನ ಐತಿಹಾಸಿಕ ಮತ್ತು ಸಾಂಸ್ಕೃತಿಕ ಬಾಂಧವ್ಯದ ಆಳವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಶಂಸಿಸಲಾಗಿದೆ.

ಭಾರತೀಯರ ಪ್ರೀತಿಯನ್ನು ಎಂದಿಗೂ ಮರೆಯಲ್ಲ: “ಆಯತೊಲ್ಲಾ ಅಲಿ ಖಮೇನಿ ಅವರಿಗೆ ಗೌರವಯುತವಾಗಿ ವಿದಾಯ ಹೇಳಲು ಭಾರತೀಯ ನಿಯೋಗವು ಟೆಹ್ರಾನ್‌ಗೆ ಭೇಟಿ ನೀಡಿರುವುದಕ್ಕೆ ನಾವು ಹೃತ್ಪೂರ್ವಕ ನಮನಗಳನ್ನು ಸಲ್ಲಿಸುತ್ತೇವೆ. ಇರಾನ್‌ನ ಇಸ್ಲಾಮಿಕ್ ಗಣರಾಜ್ಯವು ಭಾರತೀಯರು ಈ ದುಃಖದ ಸಮಯದಲ್ಲಿ ತೋರಿರುವ ಸ್ನೇಹ, ಸಹಾನುಭೂತಿ ಮತ್ತು ಹೃತ್ಪೂರ್ವಕ ಗೌರವದ ಸೂಚಕವನ್ನು ಎಂದಿಗೂ ಮರೆಯುವುದಿಲ್ಲ” ಎಂದು ಇರಾನ್ ರಾಯಭಾರ ಕಚೇರಿ ಭಾವನಾತ್ಮಕವಾಗಿ ಉಲ್ಲೇಖಿಸಿದೆ. ಸಂಕಷ್ಟದ ಸಂದರ್ಭದಲ್ಲಿ ಇರಾನ್ ಜನರೊಂದಿಗೆ ಗಟ್ಟಿಯಾಗಿ ನಿಂತ ಎಲ್ಲಾ ಭಾರತೀಯ ಅಧಿಕಾರಿಗಳು, ಗಣ್ಯರು ಮತ್ತು ಭಾರತದ ಜನತೆಗೆ ಕೃತಜ್ಞತೆ ಅರ್ಪಿಸಲಾಗಿದೆ. ಇದಕ್ಕೂ ಮುನ್ನ ಖಮೇನಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಇರಾನ್ ಸರ್ಕಾರವು ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಧಿಕೃತ ಆಹ್ವಾನ ಕಳುಹಿಸಿತ್ತು.

ಖಮೇನಿಗೆ ಅಂತಿಮ ನಮನ ಸಲ್ಲಿಸಿದ ಭಾರತದ ಗಣ್ಯರು: ಕಳೆದ ಫೆಬ್ರವರಿ 28ರಂದು ನಡೆದಿದ್ದ ಅಮೆರಿಕ-ಇಸ್ರೇಲ್ ಜಂಟಿ ದಾಳಿಯಲ್ಲಿ ಖಮೇನಿ ಹತರಾಗಿದ್ದರು. ಇತ್ತೀಚೆಗೆ ನಡೆದ ಅವರ ಅಂತಿಮ ವಿಧಿವಿಧಾನಗಳಲ್ಲಿ ಭಾಗವಹಿಸಲು ಭಾರತ ಸರ್ಕಾರದ ಪರವಾಗಿ ಬಿಹಾರದ ರಾಜ್ಯಪಾಲರಾದ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಸೈಯದ್ ಅತಾ ಹಸ್ನೈನ್ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಪಬಿತ್ರಾ ಮಾರ್ಗರಿಟಾ ನೇತೃತ್ವದ ಉನ್ನತ ನಿಯೋಗ ಟೆಹ್ರಾನ್‌ಗೆ ಭೇಟಿ ನೀಡಿ ಶ್ರದ್ಧಾಂಜಲಿ ಅರ್ಪಿಸಿತ್ತು.

ಇವರನ್ನು ಹೊರತುಪಡಿಸಿ, ರಾಜಕೀಯ ಮುಖಂಡರಾದ ಕಾಂಗ್ರೆಸ್‌ನ ಹಿರಿಯ ನಾಯಕ ಸಲ್ಮಾನ್ ಖುರ್ಷಿದ್ ಮತ್ತು ಜಮ್ಮು-ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರು ಕೂಡ ಪ್ರತ್ಯೇಕವಾಗಿ ಟೆಹ್ರಾನ್‌ಗೆ ತೆರಳಿ ಖಮೇನಿ ಅವರ ಅಂತಿಮ ದರ್ಶನ ಪಡೆದರು. ಇವರೊಂದಿಗೆ ಭಾರತದ ಪ್ರಮುಖ ಸಿಖ್, ಹಿಂದೂ, ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಧರ್ಮಗಳ ಧಾರ್ಮಿಕ ಮುಖಂಡರು ಸಹ ಅಂತ್ಯಕ್ರಿಯೆಯಲ್ಲಿ ಉಪಸ್ಥಿತರಿದ್ದರು. ಇರಾನ್‌ನ ಬೆಂಬಲಿಗರಾಗಿ ಗುರುತಿಸಿಕೊಂಡಿರುವ ಪ್ರಮುಖ ಧಾರ್ಮಿಕ ನಾಯಕ ಪಂಡಿತ್ ವಿಜಯ್ ಶಂಕರ್ ಶರ್ಮಾ ಅವರು ಕೂಡ ಈ ಸಂದರ್ಭದಲ್ಲಿ ಖಮೇನಿ ಅವರಿಗೆ ಅಂತಿಮ ಗೌರವ ಸಲ್ಲಿಸಿದರು.

ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಯನ್ನೇ ಜಾಗತಿಕ ರಾಜತಾಂತ್ರಿಕ ಅಸ್ತ್ರವಾಗಿಸಿಕೊಂಡ ಇರಾನ್: ವಿಶ್ವದ 70ಕ್ಕೂ ಹೆಚ್ಚು ದೇಶಗಳ ಭಾಗಿ, ಪ್ರತೀಕಾರದ ಎಚ್ಚರಿಕೆ!

Leave a Reply

Your email address will not be published. Required fields are marked *