TOP NEWS

Good News: ತುಮಕೂರು-ಎಲೆಕ್ಟ್ರಾನಿಕ್ ಸಿಟಿ ನಡುವೆ ನೈಸ್ ರಸ್ತೆ ಮೂಲಕ ಹೊಸ ಬಿಎಂಟಿಸಿ ಎಸಿ ಬಸ್ ಸಂಚಾರ ಆರಂಭ

BMTC Launches Tumakuru Electronic City AC Bus Route Check Timings Fares and Stops

ಬೆಂಗಳೂರು: ಪ್ರತಿದಿನ ತುಮಕೂರಿನಿಂದ ಬೆಂಗಳೂರಿನ ಐಟಿ ವಲಯಕ್ಕೆ ಪ್ರಯಾಣಿಸುವ ಉದ್ಯೋಗಿಗಳಿಗೆ ಸಾರಿಗೆ (BMTC) ಸಂಸ್ಥೆಯು ಭರ್ಜರಿ ಕೊಡುಗೆ (Good News) ನೀಡಿದೆ. ಟ್ರಾಫಿಕ್‌ನಲ್ಲಿ ಸಿಲುಕಿ ಗಂಟೆಗಟ್ಟಲೆ ಪರದಾಡುತ್ತಿದ್ದ ಹಾಗೂ ಹತ್ತಾರು ಬಸ್‌ಗಳನ್ನು ಬದಲಾಯಿಸುತ್ತಿದ್ದ ಉದ್ಯೋಗಿಗಳ ಅನುಕೂಲಕ್ಕಾಗಿ ಬಿಎಂಟಿಸಿ ಇಂದಿನಿಂದ (ಜುಲೈ 6, 2026) ತುಮಕೂರಿನಿಂದ ನೇರವಾಗಿ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ಗೆ ಐಷಾರಾಮಿ ‘ವಾಯು ವಜ್ರ’ ಹವಾನಿಯಂತ್ರಿತ ಬಸ್ ಸೇವೆಯನ್ನು ಆರಂಭಿಸಿದೆ.

ಈ ಬಸ್‌ ಮಾರ್ಗ ಹೇಗಿರಲಿದೆ?

ಈ ವಿಶೇಷ ಬಸ್ ನಗರದ ಒಳಗಿನ ವಿಪರೀತ ಟ್ರಾಫಿಕ್‌ಗೆ ಸಿಲುಕದೆ, ನೈಸ್ ರಸ್ತೆ (NICE Road) ಮೂಲಕ ಚಲಿಸುವುದು ಇದರ ಮುಖ್ಯ ವೈಶಿಷ್ಟ್ಯವಾಗಿದೆ. ತುಮಕೂರಿನಿಂದ ಹೊರಡುವ ಈ ಬಸ್ ಮಾದಾವರ, ಮೈಸೂರು ರಸ್ತೆ ಜಂಕ್ಷನ್, ಕನಕಪುರ ರಸ್ತೆ ಹಾಗೂ ಬನ್ನೇರುಘಟ್ಟ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿಯನ್ನು ತಲುಪಲಿದೆ. ಹೀಗಾಗಿ ಸುಮಾರು 85-90 ಕಿಲೋಮೀಟರ್‌ನಷ್ಟು ದೂರದ ಸುದೀರ್ಘ ಪ್ರಯಾಣವು ಕೇವಲ 1.5 ರಿಂದ 2 ಗಂಟೆಗಳ ಒಳಗೆ ಮುಕ್ತಾಯಗೊಳ್ಳಲಿದೆ.

ಸಮಯದ ಮಾಹಿತಿ ಇಲ್ಲಿದೆ

ಈ ಹೊಸ ಸೇವೆಗೆ ‘EX-V-TMK-1A’ ಎಂದು ಮಾರ್ಗ ಸಂಖ್ಯೆ ನೀಡಲಾಗಿದ್ದು, ಸದ್ಯಕ್ಕೆ ಎರಡು ಎಸಿ ಬಸ್‌ಗಳು ಈ ರೂಟ್‌ನಲ್ಲಿ ಕಾರ್ಯಾಚರಣೆ ನಡೆಸಲಿವೆ. ಐಟಿ ಉದ್ಯೋಗಿಗಳ ಕಚೇರಿ ಸಮಯಕ್ಕೆ ಸರಿಯಾಗಿ ಬೆಳಗ್ಗೆ 7:45ಕ್ಕೆ ತುಮಕೂರಿನಿಂದ ಬಸ್ ಹೊರಡಲಿದ್ದು, ಮರಳಿ ಸಂಜೆ 5:45ಕ್ಕೆ ಎಲೆಕ್ಟ್ರಾನಿಕ್ ಸಿಟಿಯ ವಿಪ್ರೋ ಗೇಟ್‌ನಿಂದ ತುಮಕೂರಿನತ್ತ ಪ್ರಯಾಣ ಬೆಳೆಸಲಿದೆ. ಇನ್ನು ಜಿಎಸ್‌ಟಿ ಮತ್ತು ಟೋಲ್ ಶುಲ್ಕ ಎಲ್ಲವೂ ಒಳಗೊಂಡಂತೆ ಒಬ್ಬರಿಗೆ ಕೇವಲ ₹200 ಟಿಕೆಟ್ ದರ ನಿಗದಿ ಮಾಡಲಾಗಿದೆ. ಇದರಿಂದಾಗಿ ಪ್ರತಿ ನಿತ್ಯ ಟ್ಯಾಕ್ಸಿ ಅಥವಾ ಕ್ಯಾಬ್‌ಗಳಿಗೆ ಭಾರೀ ಹಣ ವ್ಯಯಿಸುತ್ತಿದ್ದ ಜನರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ಇದರ ಜೊತೆಗೆ ಬಿಎಂಟಿಸಿಯು ಜುಲೈ 1 ರಿಂದ ಜಾರಿಗೆ ಬರುವಂತೆ ಎಲೆಕ್ಟ್ರಾನಿಕ್ ಸಿಟಿಯಿಂದ ಟಿನ್ ಫ್ಯಾಕ್ಟರಿ ನಡುವೆ ಹೊಸ ಮೆಟ್ರೋ ಫೀಡರ್ ಬಸ್ ಸೇವೆಗೂ ಚಾಲನೆ ನೀಡಿದೆ. ‘MF-22ET’ ಮಾರ್ಗ ಸಂಖ್ಯೆಯ ಈ ವಿಭಾಗದಲ್ಲಿ ಒಟ್ಟು 6 ಸಾಮಾನ್ಯ (ನಾನ್-ಎಸಿ) ಬಸ್‌ಗಳು ಓಡಾಡಲಿವೆ. ಈ ಬಸ್‌ಗಳು ಹೊಸರೋಡ್, ಹರಳೂರು, ಸರ್ಜಾಪುರ ಜಂಕ್ಷನ್, ಕಾಡುಬೀಸನಹಳ್ಳಿ ಮತ್ತು ಮಾರತ್‌ಹಳ್ಳಿ ಬ್ರಿಡ್ಜ್ ಮೂಲಕ ಟಿನ್ ಫ್ಯಾಕ್ಟರಿ ತಲುಪಲಿವೆ. ಪ್ರತಿದಿನ ಮುಂಜಾನೆ 5:30 ರಿಂದ ರಾತ್ರಿ 9:10 ರವರೆಗೆ ಈ ಮಾರ್ಗದಲ್ಲಿ ಬಸ್‌ಗಳು ಲಭ್ಯವಿರಲಿದ್ದು, ಕೇವಲ 40 ರಿಂದ 60 ನಿಮಿಷಗಳಲ್ಲಿ ಈ ದೂರವನ್ನು ಕ್ರಮಿಸಬಹುದಾಗಿದೆ. ಇದು ಮಾರತ್‌ಹಳ್ಳಿ, ಹೊಸರೋಡ್ ಮತ್ತು ಬೊಮ್ಮಸಂದ್ರ ಭಾಗದ ಕಾರ್ಪೊರೇಟ್ ಉದ್ಯೋಗಿಗಳಿಗೆ ನಮ್ಮ ಮೆಟ್ರೋ ಸೇರಿದಂತೆ ಇತರೆ ಸಾರಿಗೆಗಳನ್ನು ಸಂಪರ್ಕಿಸಲು ವರದಾನವಾಗಲಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯನ್ನು ಆಧರಿಸಿ ಬಸ್‌ಗಳ ಸಂಖ್ಯೆಯನ್ನು ಹೆಚ್ಚಿಸಲು ಬಿಎಂಟಿಸಿ ನಿರ್ಧರಿಸಿದೆ.

ಇದನ್ನೂ ಓದಿ: ಫುಟ್‌ಪಾತ್ ತೆರವು ಕಾರ್ಯಾಚರಣೆಗೆ ವ್ಯಾಪಾರಿಗಳ ಆಕ್ರೋಶ: ಜುಲೈ 8 ರಂದು ಬೆಂಗಳೂರು ಬಂದ್‌ಗೆ ಕರೆ

Leave a Reply

Your email address will not be published. Required fields are marked *