TOP NEWS

Badrinath: ಬದರಿನಾಥ ಧಾಮದ ಕಾಣಿಕೆ ಎಣಿಕೆಯಲ್ಲಿ ಭಾರಿ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ, ಹಿರಿಯ ಅಧಿಕಾರಿ ಸಸ್ಪೆಂಡ್!

Badrinath Temple Donation Scam CM Dhami Orders High Level Probe Senior Official Suspended

ಉತ್ತರಾಖಂಡ: ಇಲ್ಲಿನ ಪ್ರಸಿದ್ಧ ಬದರಿನಾಥ (Badrinath) ದೇವಸ್ಥಾನಕ್ಕೆ ಭಕ್ತರು ನೀಡುವ ದೇಣಿಗೆ ಮತ್ತು ಕಾಣಿಕೆಗಳ ಎಣಿಕೆಯಲ್ಲಿ ಭಾರಿ ಅಕ್ರಮ ನಡೆದಿರುವ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಉತ್ತರಾಖಂಡ ಸರ್ಕಾರವು ಪ್ರಕರಣದ ತನಿಖೆಗಾಗಿ ಮೂವರು ಸದಸ್ಯರ ಉನ್ನತ ಮಟ್ಟದ ಸಮಿತಿಯನ್ನು ರಚಿಸಿದೆ. ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿ ಧೀರಜ್ ಸಿಂಗ್ ಗರ್ಬಿಯಾಲ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದು, ಗರ್ವಾಲ್ ಕಮಿಷನರ್ ಆನಂದ್ ಸ್ವರೂಪ್ ನೇತೃತ್ವದ ಈ ಸಮಿತಿಯು ಮುಂದಿನ 15 ದಿನಗಳ ಒಳಗೆ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ದೇವಸ್ಥಾನದ ಭದ್ರತಾ ವ್ಯವಸ್ಥೆ ಮತ್ತು ಕಾಣಿಕೆ ನಿರ್ವಹಣೆಯನ್ನು ಹೆಚ್ಚು ಪಾರದರ್ಶಕ ಹಾಗೂ ದಕ್ಷಗೊಳಿಸಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆಯೂ ಈ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ. ಇದೇ ವೇಳೆ ಅಕ್ರಮದ ಆರೋಪದ ಬೆನ್ನಲ್ಲೇ ಬದರಿನಾಥ-ಕೇದರಿನಾಥ ದೇವಸ್ಥಾನ ಸಮಿತಿಯ (BKTC) ಖಾಸಗಿ ಕಾರ್ಯದರ್ಶಿಯಾಗಿದ್ದ ಪ್ರಮೋದ್ ನೌಟಿಯಾಲ್ ಎಂಬ ಅಧಿಕಾರಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಆತನ ವಿರುದ್ಧ ಈಗಾಗಲೇ ಎಫ್‌ಐಆರ್ (FIR) ಕೂಡ ದಾಖಲಾಗಿದ್ದು, ತನಿಖೆಗೆ ಅಡ್ಡಿಯಾಗದಂತೆ ಆತನನ್ನು ಜೋಶಿಮಠದ ಕಚೇರಿಗೆ ವರ್ಗಾಯಿಸಲಾಗಿದೆ.

ವಿವಾದ ಮುನ್ನೆಲೆಗೆ ಬಂದಿದ್ದು ಹೇಗೆ?: ಬದರಿನಾಥ ಧಾಮದಲ್ಲಿ ಭಕ್ತರು ಹುಂಡಿಗೆ ಹಾಕಿದ ಕಾಣಿಕೆಗಳನ್ನು ಎಣಿಕೆ ಮಾಡುವ ಸಮಯದಲ್ಲಿ ಸಿಬ್ಬಂದಿಯೇ ಅಕ್ರಮ ಎಸಗುತ್ತಿದ್ದಾರೆ ಎಂಬ ಆರೋಪದ ವಿಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದವು. ಇದನ್ನು ಗಮನಿಸಿದ ‘ಭೈರವ್ ಸೇನಾ’ ಎಂಬ ಸಂಘಟನೆಯು ದೇವಸ್ಥಾನ ಮಂಡಳಿಗೆ ಅಧಿಕೃತ ದೂರು ನೀಡಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತ್ತು. ದೂರು ದಾಖಲಾಗುತ್ತಿದ್ದಂತೆ ದೇವಸ್ಥಾನ ಮಂಡಳಿಯು ಸಿಸಿಟಿವಿ (CCTV) ದೃಶ್ಯಾವಳಿಗಳು ಹಾಗೂ ಸಂಬಂಧಪಟ್ಟ ಸಿಬ್ಬಂದಿಯ ಹೇಳಿಕೆಗಳನ್ನು ಆಧರಿಸಿ ಪ್ರಾಥಮಿಕ ತನಿಖೆ ನಡೆಸಿತ್ತು.

ಈ ಪ್ರಾಥಮಿಕ ತನಿಖೆಯಲ್ಲೇ ಅಧಿಕಾರಿ ಪ್ರಮೋದ್ ನೌಟಿಯಾಲ್ ಮೇಲಿನ ಆರೋಪಗಳು ನಿಜವೆಂದು ಮೇಲ್ನೋಟಕ್ಕೆ ಸಾಬೀತಾದ ಕಾರಣ ಆತನನ್ನು ಅಮಾನತು ಮಾಡಲಾಗಿದೆ. ಇದೇ ವೇಳೆ ದೇವಸ್ಥಾನದ ಸಿಸಿಟಿವಿ ಕ್ಯಾಮೆರಾಗಳನ್ನು ಬದಲಾಯಿಸಿರುವ ಬಗ್ಗೆಯೂ ಸಾರ್ವಜನಿಕ ವಲಯದಲ್ಲಿ ಅನುಮಾನಗಳು ವ್ಯಕ್ತವಾಗಿದ್ದವು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ದೇವಸ್ಥಾನ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (CEO), ಕ್ಯಾಮೆರಾ ಬದಲಾವಣೆ ಮಾಡುವುದು ನಿಯಮಿತ ಪ್ರಕ್ರಿಯೆಯಾಗಿದ್ದು, ಹಳೆಯ ಡಿವಿಆರ್ (DVR) ನಲ್ಲಿರುವ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಸುರಕ್ಷಿತವಾಗಿ ಇಡಲಾಗಿದೆ ಮತ್ತು ಅದನ್ನು ತನಿಖೆಗೆ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಖಮೇನಿ ಅಂತ್ಯಕ್ರಿಯೆಯಲ್ಲಿ ಭಾರತದ ನಿಯೋಗ ಭಾಗಿ: ‘ಸ್ನೇಹರಾಷ್ಟ್ರ’ದ ಸಹಾನುಭೂತಿ ಮರೆಯಲ್ಲ ಎಂದು ಕೃತಜ್ಞತೆ ಸಲ್ಲಿಸಿದ ಇರಾನ್!

Leave a Reply

Your email address will not be published. Required fields are marked *