ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿಗೆ ಅಧಿಕಾರ ಚುಕ್ಕಾಣಿ ಹಿಡಿದಿರುವ ಡೊನಾಲ್ಡ್ ಟ್ರಂಪ್ (Donald Trump) ಅವರ ವೈಯಕ್ತಿಕ ಸಂಪತ್ತಿನಲ್ಲಿ ಭಾರಿ ಪ್ರಗತಿ ಕಂಡುಬಂದಿದೆ. ಯುಎಸ್ ಆಫೀಸ್ ಆಫ್ ಗವರ್ನಮೆಂಟ್ ಎಥಿಕ್ಸ್ ಬಿಡುಗಡೆ ಮಾಡಿರುವ 927 ಪುಟಗಳ ಬೃಹತ್ ಆರ್ಥಿಕ ವರದಿಯ ಪ್ರಕಾರ, 2025ರ ಸಾಲಿನಲ್ಲಿ ಟ್ರಂಪ್ ಅವರ ಒಟ್ಟು ಆದಾಯ ಕನಿಷ್ಠ 2 ಬಿಲಿಯನ್ ಡಾಲರ್ (ಅಂದಾಜು 16,500 ಕೋಟಿ ರೂಪಾಯಿಗೂ ಹೆಚ್ಚು) ದಾಟಿದೆ. ಟ್ರಂಪ್ ಅವರು ಕೇವಲ 2.4 ಬಿಲಿಯನ್ ಡಾಲರ್ ಮೌಲ್ಯದ ಆಸ್ತಿಯನ್ನು ಅಧಿಕೃತವಾಗಿ ಘೋಷಿಸಿಕೊಂಡಿದ್ದಾರಾದರೂ, ಫೆಡರಲ್ ನಿಯಮಗಳ ಸಡಿಲಿಕೆಯಿಂದಾಗಿ ಅವರ ನೈಜ ಆಸ್ತಿಯ ಮೌಲ್ಯ ಇದಕ್ಕಿಂತ ಎಷ್ಟೋ ಪಟ್ಟು ಹೆಚ್ಚಿರಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ.
ಕ್ರಿಪ್ಟೋ ಉದ್ಯಮದಿಂದಲೇ ಹರಿದುಬಂತು ಕೋಟಿ ಕೋಟಿ ಹಣ!
ಅಧ್ಯಕ್ಷ ಟ್ರಂಪ್ ಅವರ ಈ ಭಾರಿ ಆದಾಯದ ಸಿಂಹಪಾಲು ಡಿಜಿಟಲ್ ಕರೆನ್ಸಿ ಅಥವಾ ಕ್ರಿಪ್ಟೋಕರೆನ್ಸಿ ವ್ಯವಹಾರದಿಂದಲೇ ಬಂದಿದೆ. ಇದೊಂದರಿಂದಲೇ ಅವರು ಸುಮಾರು 1.4 ಬಿಲಿಯನ್ ಡಾಲರ್ ಗಳಿಸಿದ್ದಾರೆ ಎನ್ನಲಾಗಿದೆ.
- ವರ್ಲ್ಡ್ ಲಿಬರ್ಟಿ ಫೈನಾನ್ಷಿಯಲ್: 2024ರ ಸೆಪ್ಟೆಂಬರ್‌ನಲ್ಲಿ ಆರಂಭವಾದ ಈ ಕ್ರಿಪ್ಟೋ ಸ್ಟಾರ್ಟ್‌ಅಪ್‌ಗೆ ಟ್ರಂಪ್ ಕುಟುಂಬ ಬೆಂಬಲ ನೀಡಿದ್ದರಿಂದ ಅವರಿಗೆ 550 ಮಿಲಿಯನ್ ಡಾಲರ್ ಆದಾಯ ಬಂದಿದೆ.
- ಇದರೊಂದಿಗೆ ಸೆಲೆಬ್ರೇಷನ್ ಕಾಯಿನ್ಸ್ ಲೈಸೆನ್ಸ್ ಒಪ್ಪಂದದಿಂದ 635 ಮಿಲಿಯನ್ ಡಾಲರ್, ಈಕ್ವಿಟಿ ಮಾರಾಟದಿಂದ 65 ಮಿಲಿಯನ್ ಡಾಲರ್ ಹಾಗೂ ಸ್ಟೇಬಲ್‌ಕಾಯಿನ್ ವಹಿವಾಟಿನಿಂದ 196 ಮಿಲಿಯನ್ ಡಾಲರ್ ನಿವ್ವಳ ಲಾಭವನ್ನು ಅವರು ಪಡೆದಿದ್ದಾರೆ.
ಮಾಧ್ಯಮ ಸಂಸ್ಥೆಗಳ ಕೇಸ್ ಹಾಗೂ ರೆಸಾರ್ಟ್‌ಗಳ ಗಳಿಕೆ
ಕ್ರಿಪ್ಟೋ ಮಾತ್ರವಲ್ಲದೆ ಪ್ರಮುಖ ಮಾಧ್ಯಮ ಸಂಸ್ಥೆಗಳ ವಿರುದ್ಧ ಟ್ರಂಪ್ ಹೂಡಿದ್ದ ಐದು ಪ್ರತ್ಯೇಕ ಮೊಕದ್ದಮೆಗಳ ರಾಜಿ ಸಂಧಾನದಿಂದಾಗಿ (Settlements) ಅವರಿಗೆ 86.5 ಮಿಲಿಯನ್ ಡಾಲರ್ ಪರಿಹಾರ ಧನ ಸಿಕ್ಕಿದೆ. ಮೆಟಾ, ಎಕ್ಸ್ (ಟ್ವಿಟರ್), ಎಬಿಸಿ, ಸಿಬಿಎಸ್ ಮತ್ತು ಯೂಟ್ಯೂಬ್ ಸಂಸ್ಥೆಗಳು ಟ್ರಂಪ್‌ಗೆ ಈ ಮೊತ್ತವನ್ನು ಪಾವತಿಸಿವೆ. ಇದಲ್ಲದೆ ಅವರ ಒಡೆತನದ ಐಷಾರಾಮಿ ಗಾಲ್ಫ್ ಕ್ಲಬ್ ಮತ್ತು ರೆಸಾರ್ಟ್‌ಗಳು ಕೈತುಂಬಾ ಗಳಿಕೆ ತಂದುಕೊಟ್ಟಿದ್ದು, ಫ್ಲೋರಿಡಾದ ಮಾರ್-ಎ-ಲಾಗೋ ರೆಸಾರ್ಟ್ ಒಂದರಿಂದಲೇ 77 ಮಿಲಿಯನ್ ಡಾಲರ್ ಆದಾಯ ಬಂದಿದೆ.
ಬಿಲಿಯನ್ ಡಾಲರ್ ಕಮಾಯಿಯ ಹಿಂದಿನ ಗುಟ್ಟೇನು?
ಅಮೆರಿಕದ ವಲಸೆ ಮತ್ತು ಕಸ್ಟಮ್ಸ್ ಜಾರಿ ವಿಭಾಗದ (ICE) ದೊಡ್ಡ ಗುತ್ತಿಗೆದಾರ ಸಂಸ್ಥೆಯಾಗಿರುವ ‘ಜಿಇಒ ಗ್ರೂಪ್’ ಹೆಸರಿನ ಖಾಸಗಿ ಜೈಲು ಕಂಪನಿಯ ಷೇರುಗಳನ್ನು ಟ್ರಂಪ್ ಅವರ ಹೂಡಿಕೆ ಖಾತೆಗಳು ಖರೀದಿಸಿ, ಮಾರಾಟ ಮಾಡಿರುವುದು ಈ ವರದಿಯಿಂದ ಬಹಿರಂಗವಾಗಿದೆ.
ಸಾಮಾನ್ಯವಾಗಿ ಅಮೆರಿಕದ ಅಧ್ಯಕ್ಷರು ಅಧಿಕಾರ ವಹಿಸಿಕೊಳ್ಳುವ ಮುನ್ನ ಹಿತಾಸಕ್ತಿ ಸಂಘರ್ಷ ತಪ್ಪಿಸಲು ತಮ್ಮ ಆಸ್ತಿಗಳನ್ನು ‘ಬ್ಲೈಂಡ್ ಟ್ರಸ್ಟ್’ಗೆ ಒಪ್ಪಿಸುತ್ತಾರೆ. ಆದರೆ ಟ್ರಂಪ್ ಈ ಸಾಂಪ್ರದಾಯಿಕ ಹಾದಿ ಹಿಡಿದಿಲ್ಲ. ಬದಲಿಗೆ, ತಮ್ಮ ಆಸ್ತಿಗಳನ್ನು ಥರ್ಡ್ ಪಾರ್ಟಿ ಹಣಕಾಸು ಸಂಸ್ಥೆಗಳು ಸ್ವಯಂಚಾಲಿತ ತಂತ್ರಜ್ಞಾನದ ಮೂಲಕ ನಿರ್ವಹಿಸುತ್ತಿವೆ ಎಂದು ಟ್ರಂಪ್ ಆರ್ಗನೈಸೇಶನ್ ಸಮರ್ಥಿಸಿಕೊಂಡಿದೆ. ವೈಟ್‌ಹೌಸ್ ವಕ್ತಾರೆ ಅಣ್ಣಾ ಕೆಲ್ಲಿ ಕೂಡ ಈ ಹಿತಾಸಕ್ತಿ ಸಂಘರ್ಷದ ಆರೋಪಗಳನ್ನು ತಳ್ಳಿಹಾಕಿದ್ದಾರೆ. ಇನ್ನು ಕೇವಲ ೧೭ ಪುಟಗಳ ಆಸ್ತಿ ವಿವರ ಘೋಷಿಸಿರುವ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರಿಗೆ ಹೋಲಿಸಿದರೆ ಅಧ್ಯಕ್ಷ ಟ್ರಂಪ್ ಅವರ ಆಸ್ತಿ ಸಾಮ್ರಾಜ್ಯ ಬೆಟ್ಟದಷ್ಟು ದೊಡ್ಡದಾಗಿರುವುದು ಸ್ಪಷ್ಟವಾಗಿದೆ.
