ಮುಂಬೈ: ಪ್ರಮುಖ ಇ-ಕಾಮರ್ಸ್ ಮತ್ತು ಸ್ಟ್ರೀಮಿಂಗ್ ದೈತ್ಯ ಅಮೆಜಾನ್ ಸಂಸ್ಥೆ (Amazon) ಈಗ ಆಸ್ಟ್ರೇಲಿಯಾದಲ್ಲಿ ದೊಡ್ಡ ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಗ್ರಾಹಕರಿಗೆ ಅನ್ಯಾಯವಾಗಿ ಜಾಹೀರಾತುಗಳನ್ನು ಪರಿಚಯಿಸಿ, ನಂತರ ಜಾಹೀರಾತು ರಹಿತವಾಗಿ ಸಿನಿಮಾ-ಸರಣಿಗಳನ್ನು ನೋಡಲು ಚಂದಾದಾರರಿಂದ ಹೆಚ್ಚುವರಿ ಹಣ ವಸೂಲಿ ಮಾಡಿರುವ ಆರೋಪ ಕಂಪನಿಯ ಮೇಲೆ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾದ ಗ್ರಾಹಕ ಹಿತರಕ್ಷಣಾ ಮತ್ತು ಸ್ಪರ್ಧಾತ್ಮಕ ಆಯೋಗ (ACCC) ಅಲ್ಲಿನ ಫೆಡರಲ್ ನ್ಯಾಯಾಲಯದಲ್ಲಿ ಅಮೆಜಾನ್ ಆಸ್ಟ್ರೇಲಿಯಾ ವಿರುದ್ಧ ಅಧಿಕೃತವಾಗಿ ಮೊಕದ್ದಮೆ ಹೂಡಿದೆ. ಅಮೆಜಾನ್ ತನ್ನ ಪ್ರೈಮ್ ಚಂದಾದಾರಿಕೆ ಒಪ್ಪಂದಗಳಲ್ಲಿ ಗ್ರಾಹಕರಿಗೆ ನಷ್ಟ ಪರಿಹಾರ ನೀಡದೆಯೇ ಸ್ಟ್ರೀಮಿಂಗ್ ಸೇವೆಯಲ್ಲಿ ಭಾರಿ ಬದಲಾವಣೆಗಳನ್ನು ಮಾಡಲು ಅನುಮತಿಸುವ ಅನ್ಯಾಯದ ನಿಯಮಗಳನ್ನು ಒಳಗೊಂಡಿತ್ತು ಎಂದು ನಿಯಂತ್ರಕ ಸಂಸ್ಥೆ ಆರೋಪಿಸಿದೆ. ಈ ನಿರ್ಧಾರದಿಂದಾಗಿ ನವೆಂಬರ್ 2023 ಮತ್ತು ಆಗಸ್ಟ್ 2025 ರ ನಡುವೆ ಸುಮಾರು 10 ಲಕ್ಷಕ್ಕೂ ಹೆಚ್ಚು ವಾರ್ಷಿಕ ಪ್ರೈಮ್ ಚಂದಾದಾರರು ತೊಂದರೆ ಅನುಭವಿಸಿದ್ದಾರೆ ಎಂದು ತಿಳಿದುಬಂದಿದೆ.
ಏನಿದು ವಿವಾದ?
ಈ ಇಡೀ ವಿವಾದವು 2024 ರಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಪ್ರಾರಂಭಿಸಿದ ನಿರ್ಧಾರದಿಂದ ಶುರುವಾಗಿದೆ. ವಾರ್ಷಿಕ ಪ್ರೈಮ್ ಸದಸ್ಯತ್ವಕ್ಕಾಗಿ ಮೊದಲೇ ಪೂರ್ಣ ಹಣವನ್ನು ಪಾವತಿಸಿದ್ದ ಗ್ರಾಹಕರಿಗೆ, ಅಮೆಜಾನ್ ಯಾವುದೇ ಮುನ್ಸೂಚನೆ ನೀಡದೆ ಹಠಾತ್ ಆಗಿ ಜಾಹೀರಾತುಗಳು ಬರುವ ಸ್ಟ್ರೀಮಿಂಗ್ ಆವೃತ್ತಿಯನ್ನು ನೀಡಲು ಪ್ರಾರಂಭಿಸಿತು. ಗ್ರಾಹಕರು ಮೊದಲಿನಂತೆ ಜಾಹೀರಾತುಗಳಿಲ್ಲದೆ ವಿಡಿಯೋ ವೀಕ್ಷಿಸುವುದನ್ನು ಮುಂದುವರಿಸಬೇಕಾದರೆ, ಅವರು ಪ್ರತಿ ತಿಂಗಳು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕೆಂದು ಅಮೆಜಾನ್ ಕಡ್ಡಾಯಗೊಳಿಸಿತ್ತು. ಅಮೆಜಾನ್ ತನ್ನ ಒಪ್ಪಂದದಲ್ಲಿ ಇಂತಹ ಅನ್ಯಾಯದ ನಿಯಮಗಳನ್ನು ಬಳಸಿಕೊಂಡು ಗ್ರಾಹಕರನ್ನು ವಂಚಿಸಿದೆ ಎಂದು ಆಸ್ಟ್ರೇಲಿಯಾ ಗ್ರಾಹಕ ಆಯೋಗದ ಅಧ್ಯಕ್ಷೆ ಗಿನಾ ಕ್ಯಾಸ್-ಗಾಟ್ಲೀಬ್ ತಿಳಿಸಿದ್ದಾರೆ.
ವಾರ್ನಿಂಗ್ ನೀಡಿದ ಕೋರ್ಟ್
ವರದಿಗಳ ಪ್ರಕಾರ, ಆಸ್ಟ್ರೇಲಿಯಾದಲ್ಲಿ ವಾರ್ಷಿಕ ಪ್ರೈಮ್ ಸದಸ್ಯತ್ವಕ್ಕಾಗಿ ಈಗಾಗಲೇ ಮುಂಗಡವಾಗಿ 79 ಆಸ್ಟ್ರೇಲಿಯನ್ ಡಾಲರ್ ಪಾವತಿಸಿದ್ದ ಗ್ರಾಹಕರು, ಜಾಹೀರಾತು ರಹಿತ ಸೇವೆಯನ್ನು ಮುಂದುವರಿಸಲು ಜುಲೈ 2024 ರ ನಂತರ ಪ್ರತಿ ತಿಂಗಳಿಗೆ ಹೆಚ್ಚುವರಿಯಾಗಿ 2.99 ಆಸ್ಟ್ರೇಲಿಯನ್ ಡಾಲರ್ ಪಾವತಿಸಬೇಕಾಯಿತು. ಜಾಹೀರಾತುಗಳನ್ನು ಪರಿಚಯಿಸಿದ ಸಮಯದಲ್ಲಿ 8.5 ಲಕ್ಷಕ್ಕೂ ಹೆಚ್ಚು ಆಸ್ಟ್ರೇಲಿಯನ್ ಚಂದಾದಾರರು ಈಗಾಗಲೇ ಒಂದು ವರ್ಷದ ಮುಂಗಡ ಹಣವನ್ನು ಪಾವತಿಸಿದ್ದರು. ಹೆಚ್ಚುವರಿ ಹಣ ನೀಡದ ಗ್ರಾಹಕರಿಗೆ ಅಮೆಜಾನ್ ತಾನಾಗಿಯೇ ಸೇವೆಯ ಗುಣಮಟ್ಟವನ್ನು ಕುಂಠಿತಗೊಳಿಸಿತ್ತು ಎಂದು ಆಯೋಗ ವಾದಿಸಿದೆ. ಈ ಬಗ್ಗೆ ಗ್ರಾಹಕರಿಂದ ಭಾರಿ ಪ್ರಮಾಣದ ದೂರುಗಳು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಆಯೋಗವು, ಈಗ ಅಮೆಜಾನ್ ಕಂಪನಿಗೆ ಭಾರಿ ಆರ್ಥಿಕ ದಂಡ ವಿಧಿಸಲು ಮತ್ತು ಗ್ರಾಹಕರಿಗೆ ಆದ ನಷ್ಟವನ್ನು ಭರಿಸಿಕೊಡಲು ನ್ಯಾಯಾಲಯವನ್ನು ಕೋರಿದೆ. ಈ ಕಾನೂನು ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಅಮೆಜಾನ್ ಆಸ್ಟ್ರೇಲಿಯಾ ವಕ್ತಾರರು, ತಮಗ ಬಂದಿರುವ ಕೋರ್ಟ್ ನೋಟಿಸ್ ಅನ್ನು ವಿವರವಾಗಿ ಪರಿಶೀಲಿಸುತ್ತಿರುವುದಾಗಿ ಹಾಗೂ ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಭರಪೂರ ಶಾಪಿಂಗ್ ಕೊಡುಗೆಗಳು ಮತ್ತು ವೇಗದ ವಿತರಣೆಯೊಂದಿಗೆ ಕಳೆದ ಒಂದು ದಶಕದಿಂದ ಜಾಹೀರಾತು ರಹಿತವಾಗಿ ಮನರಂಜನೆ ನೀಡುತ್ತಿದ್ದ ಅಮೆಜಾನ್ ಪ್ರೈಮ್ ವಿಡಿಯೋ, 2024 ರ ಆರಂಭದಿಂದ ಜಾಗತಿಕವಾಗಿ ಜಾಹೀರಾತುಗಳನ್ನು ಪ್ರದರ್ಶಿಸಲು ಆರಂಭಿಸಿರುವುದು ಗ್ರಾಹಕರ ಅಸಮಾಧಾನಕ್ಕೆ ಕಾರಣವಾಗಿದೆ.
