ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರಸಿದ್ಧ ನಟ ಡಾಲಿ ಧನಂಜಯ (Daali Dhananjay) ಅಭಿನಯದ ನೂತನ ಚಿತ್ರ ‘ಮದರ್ ಪ್ರಾಮಿಸ್’ ಮುಂಬರುವ ಜುಲೈ 10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲು ಸಿದ್ಧತೆ ನಡೆಸಿದೆ. ತನ್ನ ಅನನ್ಯ ಕಂಟೆಂಟ್ ಹಾಗೂ ಪ್ರಚಾರದ ವೈವಿಧ್ಯತೆಯಿಂದ ಈಗಾಗಲೇ ಸಿನಿರಸಿಕರಲ್ಲಿ ಭಾರಿ ಕ್ರೇಜ್ ಸೃಷ್ಟಿಸಿರುವ ಚಿತ್ರತಂಡ, ಈಗ ಮಕ್ಕಳಿಗಾಗಿಯೇ ಸಿದ್ಧಪಡಿಸಲಾದ ಭಾವುಕ ಪ್ರಾರ್ಥನಾ ಗೀತೆಯೊಂದನ್ನು ಮಾರುಕಟ್ಟೆಗೆ ಬಿಟ್ಟು ಗಮನ ಸೆಳೆದಿದೆ.
ಓ ಬೆಳಕೆ ಬಾ ಮನಕೆ
ಇದುವರೆಗೆ ಕಮರ್ಷಿಯಲ್ ಹಾಗೂ ಪ್ರೇಮಗೀತೆಗಳನ್ನು ಬರೆಯುತ್ತಿದ್ದ ನಟ ಧನಂಜಯ, ಈ ಸಿನಿಮಾದ ಮೂಲಕ ಮೊದಲ ಬಾರಿಗೆ ಮಕ್ಕಳ ಪ್ರಾರ್ಥನಾ ಗೀತೆಯ ಸಾಹಿತ್ಯ ರಚನೆಕಾರರಾಗಿ ಕಾಣಿಸಿಕೊಂಡಿದ್ದಾರೆ. ಅವರ ಲೇಖನಿಯಿಂದ ಮೂಡಿಬಂದಿರುವ ‘ಓ ಬೆಳಕೆ ಬಾ ಮನಕೆ..’ ಎಂಬ ದೈವಿಕ ಗೀತೆಯನ್ನು ತುಮಕೂರಿನ ಐತಿಹಾಸಿಕ ಶ್ರೀ ಸಿದ್ದಗಂಗಾ ಮಠದ ಆವರಣದಲ್ಲಿ ಚಿತ್ರೀಕರಿಸಲಾಗಿದೆ. ಮಠದ ವಸತಿ ಶಾಲೆಯ ಮಕ್ಕಳು, ದಾಸೋಹದ ಅಡುಗೆ ಕೋಣೆ ಸೇರಿದಂತೆ ಅಲ್ಲಿನ ಪವಿತ್ರ ಪರಿಸರದಲ್ಲೇ ಇಡೀ ಚಿತ್ರತಂಡ ದಿನವಿಡೀ ಕಳೆದು ಈ ವಿಡಿಯೋವನ್ನು ರೂಪಿಸಿದೆ. ಸದಾ ಒಂದೇ ಮಾದರಿಯ ಮಾಸ್ ಹಾಗೂ ಲವ್ ಸಾಂಗ್ಸ್ ಕೇಳುತ್ತಿದ್ದ ಪ್ರೇಕ್ಷಕರಿಗೆ ಸಿದ್ದಗಂಗಾ ಮಠದ ಬ್ಯಾಕ್‌ಡ್ರಾಪ್‌ನಲ್ಲಿ ಬಂದಿರುವ ಈ ಪ್ರಾರ್ಥನಾ ಗೀತೆ ಮನಸ್ಸಿಗೆ ನೆಮ್ಮದಿ ನೀಡುತ್ತಿದ್ದು, ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ಭಾವನಾತ್ಮಕ ಕಥೆಯ ಜೊತೆಗೆ ಕಾಮಿಡಿ ಸಿನಿಮಾ
ಇನ್ನು ‘ಡಾಲಿ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಧನಂಜಯ ಅವರ ಆಪ್ತ ಗೆಳೆಯ ಹರ್ಷ ಮುರುಂಡಿ ಶಿವಲಿಂಗಪ್ಪ ಈ ಚಿತ್ರದ ಮೂಲಕ ಚಂದನವನಕ್ಕೆ ನೂತನ ನಿರ್ಮಾಪಕರಾಗಿ ಎಂಟ್ರಿ ಕೊಡುತ್ತಿದ್ದಾರೆ. ತಾಯಿಯ ಆಣೆಯ ಹೆಸರಿನಲ್ಲೇ ಭರಪೂರ ಸೆಂಟಿಮೆಂಟ್ ಇಟ್ಟುಕೊಂಡಿರುವ ಈ ಚಿತ್ರಕ್ಕೆ ಪೂರ್ಣಚಂದ್ರ ಮೈಸೂರು ಆ್ಯಕ್ಷನ್ ಕಟ್ ಹೇಳಿದ್ದು, ‘ಡೇರ್ ಡೆವಿಲ್ ಮುಸ್ತಾಫ’ ಸಿನಿಮಾ ಖ್ಯಾತಿಯ ಶಶಾಂಕ್ ಕ್ರಿಯೇಟಿವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ. ಭಾವನಾತ್ಮಕ ಕಥೆಯ ಜೊತೆಗೆ ಕಾಮಿಡಿ ಹಾಗೂ ಥ್ರಿಲ್ಲರ್ ಎಲಿಮೆಂಟ್ಸ್ ಒಳಗೊಂಡಿರುವ ಈ ಸಿನಿಮಾದಲ್ಲಿ ಧನಂಜಯ ಅವರೊಂದಿಗೆ ನಾಗಭೂಷಣ್, ವಿನಯಾ ಪ್ರಸಾದ್, ಗೀತಾ ಮತ್ತು ಗುರುದತ್ ಪ್ರಮುಖ ತಾರಾಗಣದಲ್ಲಿದ್ದಾರೆ. ಈ ಸುಂದರ ಕಥೆಗೆ ನವನೀತ್ ಶ್ಯಾಮ್ ಅವರ ಮ್ಯೂಸಿಕ್ ಹಾಗೂ ರಾಹುಲ್ ರಾಯ್ ಅವರ ಛಾಯಾಗ್ರಹಣದ ಸ್ಪರ್ಶವಿದೆ.
ಬೆಳ್ಳಿಪರದೆಗೆ ಬರಲು ‘ಮದರ್ ಪ್ರಾಮಿಸ್’ ರೆಡಿ: ಜುಲೈ 10 ರಿಂದ ಡಾಲಿ ಧನಂಜಯ ಆಟ ಶುರು; ವಿಚಿತ್ರ ಪಾತ್ರಗಳೇ ಚಿತ್ರದ ಹೈಲೈಟ್!
ಬೆಂಗಳೂರು: ಸ್ಯಾಂಡಲ್‌ವುಡ್‌ನ ವರ್ಸಟೈಲ್ ನಟ ಡಾಲಿ ಧನಂಜಯ ಹಾಗೂ ಅವರ ಆಪ್ತ ಗೆಳೆಯರ ನಟನೆಯ ‘ಮದರ್ ಪ್ರಾಮಿಸ್’ ಸಿನಿಮಾದ ರಿಲೀಸ್ ಡೇಟ್ ಅಧಿಕೃತವಾಗಿ ಅನೌನ್ಸ್ ಆಗಿದೆ. ಈಗಾಗಲೇ ‘ವೇನಿ ವೀಡಿ ವೀಚಿ’, ‘ನೀನೇ ಬೇಕು ಅಮ್ಮ’ ಮತ್ತು ಇತ್ತೀಚೆಗಷ್ಟೇ ತೆರೆಕಂಡ ‘ರಗಸದಅ’ ಹಾಡುಗಳ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಸೌಂಡ್ ಮಾಡುತ್ತಿರುವ ಈ ಚಿತ್ರವು ಮುಂಬರುವ ಜುಲೈ 10ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಗ್ರಾಂಡ್ ರಿಲೀಸ್ ಆಗಲಿದೆ.
ಕಾಮಿಡಿ, ಆಕ್ಷನ್ ಹಾಗೂ ಭರಪೂರ ಸೆಂಟಿಮೆಂಟ್ ಒಳಗೊಂಡಿರುವ ಈ ಚಿತ್ರದ ಮೂಲಕ ನಟ ಪೂರ್ಣಚಂದ್ರ ಮೈಸೂರು ಮೊದಲ ಬಾರಿಗೆ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಲಗ್ಗೆ ಇಡುತ್ತಿದ್ದಾರೆ. ಚಿತ್ರದ ಹೊಸ ಪೋಸ್ಟರ್ ಹಂಚಿಕೊಂಡಿರುವ ನಟ ಧನಂಜಯ, “ವಿತರಕರು ಲಾಕ್ ಆಗಿದ್ದಾರೆ, ದಿನಾಂಕವೂ ನಿಗದಿಯಾಗಿದೆ. ಜುಲೈ 10 ರಿಂದ ಹತ್ತಿರದ ಚಿತ್ರಮಂದಿರಗಳಲ್ಲಿ ಅಸಲಿ ಆಟ ಶುರು” ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ಕಿಕ್ ಏರಿಸಿದ್ದಾರೆ. ಈ ಚಿತ್ರಕ್ಕೆ ಸ್ವತಃ ಧನಂಜಯ ಅವರು ತಮ್ಮ ಸ್ನೇಹಿತ ಹರ್ಷ್ ಜೊತೆಗೂಡಿ ಬಂಡವಾಳ ಹೂಡಿದ್ದಾರೆ.
ಪ್ರೇಕ್ಷಕರನ್ನು ನಗಿಸಲು ಬರ್ತಿದ್ದಾರೆ ‘ದೊನ್ನೆ ಬಿರಿಯಾನಿ’ ಮತ್ತು ‘ಜಿಲೇಬಿ’! ಅತಿ ಕಡಿಮೆ ಅವಧಿಯಲ್ಲಿ ನಡೆಯುವ ಕ್ರೈಮ್ ಕಾಮಿಡಿ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ವಿಚಿತ್ರವಾದ ಪಾತ್ರಗಳನ್ನು ಸೃಷ್ಟಿಸಲಾಗಿದೆ. ರೌಡಿಸಂ ಬ್ಯಾಕ್‌ಡ್ರಾಪ್‌ನ ಮಜಾವಾದ ಕಥೆಯಲ್ಲಿ ‘ರೋಸಿ’, ‘ದೊನ್ನೆ ಬಿರಿಯಾನಿ’, ‘ರ್ಯಾಂಡಿ’, ‘ಕ್ಯಾಂಡಿ’, ‘ಮ್ಯಾಗಿ’, ‘7 ಅಪ್’, ‘ಜಿಲೇಬಿ’ ಹಾಗೂ ‘ಬ್ಯಾಂಡೆಡ್’ ಹೆಸರಿನ ಮಜಾ ಕ್ಯಾರೆಕ್ಟರ್‌ಗಳು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಲಿವೆ.
ಇದನ್ನೂ ಓದಿ: 29 ವರ್ಷಗಳ ನಂತರ ಅಮೆರಿಕಾ-ಅಮೆರಿಕಾ 2 ಅನೌನ್ಸ್ ಮಾಡಿದ ನಾಗತಿಹಳ್ಳಿ
