TOP NEWS

Crime: ಯಾದಗಿರಿ ಸಹಕಾರಿ ಬ್ಯಾಂಕ್ ಹಗರಣಕ್ಕೆ ದುರಂತ ಅಂತ್ಯ: ಅಧ್ಯಕ್ಷ ಬಸನಗೌಡ ಆತ್ಮಹತ್ಯೆ!

crime yadgiri bank scam president takes life by writing death note

ಯಾದಗಿರಿ: ಜಿಲ್ಲೆಯ ಸಹಕಾರಿ ಕ್ಷೇತ್ರದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದ್ದ ಕೋಟ್ಯಂತರ ರೂಪಾಯಿ ಆರ್ಥಿಕ ಹಗರಣವು ಇದೀಗ ದುರಂತ ಅಂತ್ಯ (Crime) ಕಂಡಿದೆ. ಶಹಾಪುರ ನಗರದ ಮಾತೋಶ್ರೀ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಬಸನಗೌಡ ವೆಂಕಟರೆಡ್ಡಿ ಮಾಲಿ ಪಾಟೀಲ (64) ಅವರು ತಮ್ಮ ಮನೆಯಲ್ಲೇ ನೇಣಿಗೆ ಶರಣಾಗಿದ್ದಾರೆ. ಬ್ಯಾಂಕಿನಲ್ಲಿ ನಡೆದಿದೆ ಎನ್ನಲಾದ ಸಾಲದ ಅಕ್ರಮ ಹಾಗೂ ಗ್ರಾಹಕರ ಆಕ್ರೋಶವೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದ್ದು, ಜಿಲ್ಲಾದ್ಯಂತ ತೀವ್ರ ಸಂಚಲನ ಮೂಡಿಸಿದೆ.

ಏನಿದು ಪ್ರಕರಣ?

ಮಾತೋಶ್ರೀ ಹೇಮರಡ್ಡಿ ಮಲ್ಲಮ್ಮ ಸೌಹಾರ್ದ ಸಹಕಾರಿ ಬ್ಯಾಂಕಿನಲ್ಲಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಸಾಲ ನೀಡಲಾಗಿದೆ ಮತ್ತು ಸಾರ್ವಜನಿಕರ ಕೋಟ್ಯಂತರ ರೂಪಾಯಿ ಹಣ ದುರುಪಯೋಗವಾಗಿದೆ ಎಂಬ ಗಂಭೀರ ಆಪಾದನೆ ಕೇಳಿಬಂದಿತ್ತು. ಈ ಆರ್ಥಿಕ ವಂಚನೆಗೆ ಸಂಬಂಧಿಸಿದಂತೆ ಬ್ಯಾಂಕಿನ ಕೆಲ ನೌಕರರ ವಿರುದ್ಧ ಈಗಾಗಲೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಮೂಲಗಳ ಪ್ರಕಾರ, ಈ ಸಹಕಾರಿ ಬ್ಯಾಂಕಿನಲ್ಲಿ ಒಟ್ಟು 267 ಜನ ಗ್ರಾಹಕರು ತಮ್ಮ ಕಷ್ಟದ ಗಳಿಕೆಯ ಸುಮಾರು 10 ಕೋಟಿ ರೂಪಾಯಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿದ್ದರು ಎನ್ನಲಾಗಿದೆ.

ತಮ್ಮ ಠೇವಣಿ ಹಣ ಮುಳುಗುವ ಭೀತಿಯಲ್ಲಿದ್ದ ಗ್ರಾಹಕರು, ತಕ್ಷಣವೇ ತಮಗೆ ನ್ಯಾಯ ಸಿಗಬೇಕು ಮತ್ತು ಹಣ ವಾಪಸ್ ಕೊಡಬೇಕು ಎಂದು ಒತ್ತಾಯಿಸಿ ಕಳೆದ ಕೆಲವು ದಿನಗಳಿಂದ ಬ್ಯಾಂಕಿನ ಎದುರೇ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರು. ಒಂದು ಕಡೆ ಬ್ಯಾಂಕಿನ ಮೇಲಿದ್ದ ಕೋಟ್ಯಂತರ ರೂಪಾಯಿ ಅಕ್ರಮದ ಕಲೆ, ಮತ್ತೊಂದೆಡೆ ಹಣಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದ ಠೇವಣಿದಾರರ ನಿರಂತರ ಪ್ರತಿಭಟನೆಯಿಂದಾಗಿ ಬಸನಗೌಡ ಅವರು ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಇದೇ ಒತ್ತಡದಲ್ಲಿ ಜೀವ ಕಳೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ

ಇನ್ನು ಬಸನಗೌಡ ಅವರು ಸಾವಿಗೂ ಮುನ್ನ ಸುದೀರ್ಘವಾದ ಮರಣಪತ್ರ (ಡೆತ್ ನೋಟ್) ಬರೆದಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ತನಿಖಾಧಿಕಾರಿಗಳು ಈ ಬಗ್ಗೆ ಇನ್ನು ಯಾವುದೇ ಅಧಿಕೃತ ಸತ್ಯಾಸತ್ಯತೆಯನ್ನು ಬಿಟ್ಟುಕೊಟ್ಟಿಲ್ಲ. ಸದ್ಯ ಶಹಾಪುರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬ್ಯಾಂಕಿನ ಕೋಟ್ಯಂತರ ರೂಪಾಯಿ ಹಗರಣ ಹಾಗೂ ಈ ಆತ್ಮಹತ್ಯೆಯ ನಡುವಿನ ಲಿಂಕ್ ಪತ್ತೆಹಚ್ಚಲು ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಇದನ್ನೂ ಓದಿ: ಯೂಟ್ಯೂಬ್ ನೋಡಿ ಮನೆಯಲ್ಲೇ ಹೆರಿಗೆ; ತೀವ್ರ ರಕ್ತಸ್ರಾವದಿಂದ ಗರ್ಭಿಣಿ ಸಾವು

Leave a Reply

Your email address will not be published. Required fields are marked *