TOP NEWS

Crime: ಕೇತನ್ ಅಗರ್ವಾಲ್ ಹತ್ಯೆ ಕೇಸ್: ಆರೋಪಿ ಸಿಯಾ ಗೋಯಲ್‌ಗೆ ಸುಳ್ಳು ಪತ್ತೆ ಪರೀಕ್ಷೆ

Crime ketan Agarwal case coops seek lie detector test for Siya

ಪುಣೆ: ಮಹಾರಾಷ್ಟ್ರದಲ್ಲಿ ಭಾರಿ ಸಂಚಲನ ಮೂಡಿಸಿರುವ ಪುಣೆಯ ಪ್ರಮುಖ ರಿಯಲ್ ಎಸ್ಟೇಟ್ ಉದ್ಯಮಿ ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಕೊಲೆ ಪ್ರಕರಣದ ಮುಖ್ಯ ಆರೋಪಿಯಾಗಿರುವ, ಮೃತನ ಭಾವಿ ಪತ್ನಿ ಸಿಯಾ ಗೋಯಲ್‌ಗೆ (Crime) ಪಾಲಿಗ್ರಾಫ್ (ಸುಳ್ಳು ಪತ್ತೆ) ಪರೀಕ್ಷೆ ನಡೆಸಲು ಅನುಮತಿ ಕೋರಿ ಪುಣೆ ಪೊಲೀಸರು ಗುರುವಾರ (ಜುಲೈ 2) ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾವುದೇ ಪ್ರತ್ಯಕ್ಷದರ್ಶಿಗಳು ಅಥವಾ ಕೇತನ್‌ನನ್ನು ಕಂದಕಕ್ಕೆ ತಳ್ಳಿದ್ದು ಯಾರು ಎಂಬುದಕ್ಕೆ ನಿಖರವಾದ ಸಾಕ್ಷ್ಯಾಧಾರಗಳು ಸಿಗದೇ ಇರುವುದರಿಂದ, ತನಿಖೆಯನ್ನು ಮುನ್ನಡೆಸಲು ಈ ಪರೀಕ್ಷೆ ಅತ್ಯಗತ್ಯ ಎಂದು ಪೊಲೀಸರು ಕೋರ್ಟ್‌ಗೆ ತಿಳಿಸಿದ್ದಾರೆ.

ಪೊಲೀಸರ ಬಂಧನದಲ್ಲಿರುವ ಆರೋಪಿಗಳು

ಈಗಾಗಲೇ ಮುಖ್ಯ ಆರೋಪಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ, ಸಹ ಆರೋಪಿ ಚೇತನ್ ಚೌಧರಿ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಆದರೆ ಇಬ್ಬರ ಹೇಳಿಕೆಗಳಲ್ಲಿ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಮತ್ತು ಪ್ರಕರಣದ ಅಸಲಿ ರಹಸ್ಯವನ್ನು ಬೇಧಿಸಲು ಸುಳ್ಳು ಪತ್ತೆ ಪರೀಕ್ಷೆ ನೆರವಾಗಲಿದೆ ಎಂದು ಪೊಲೀಸರು ನ್ಯಾಯಾಲಯದ ಮುಂದೆ ವಾದಿಸಿದ್ದಾರೆ. ಪ್ರೀತಿಯ ಹಾದಿಗೆ ಅಡ್ಡಿಯಾಗಿದ್ದಕ್ಕೆ ಭಾವಿ ಪತಿಯನ್ನೇ ಸಿಯಾ ಗೋಯಲ್ ಕೊಲೆ ಮಾಡಿಸಿದ್ದಾಳೆ ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ಇನ್ನೊಂದೆಡೆ, ಕೊಲೆಗೆ ಮುನ್ನ ಆರೋಪಿಗಳು ನಡೆಸಿದ್ದ ಭೀಕರ ತಾಲೀಮು (ರಿಹರ್ಸಲ್) ಜಾಗಕ್ಕೆ ಪೊಲೀಸರು ಸಿಯಾ ಗೋಯಲ್ ಅವರನ್ನು ಕರೆದೊಯ್ದಿದ್ದಾರೆ. ಲೋಹಗಢ ಕೋಟೆಯ ಮೈ ಜುಂ ಎನ್ನುವ ಪ್ರಪಾತದಿಂದ ಕೇತನ್‌ನನ್ನು ಕೆಳಗೆ ತಳ್ಳುವುದು ಹೇಗೆ ಎಂಬುದರ ಬಗ್ಗೆ ಸಿಯಾ ಮತ್ತು ಚೇತನ್ ಪುಣೆಯ ಲುಲ್ಲಾನಗರದ ಕ್ಲಬ್ ಒಂದರ ಸಮೀಪವಿರುವ ಬಯಲು ಪ್ರದೇಶದಲ್ಲಿ ಮುಂಚಿತವಾಗಿಯೇ ತಾಲೀಮು ನಡೆಸಿದ್ದರು ಎಂದು ತನಿಖೆಯಿಂದ ಬಹಿರಂಗವಾಗಿತ್ತು. ಇಂದು ಬೆಳಿಗ್ಗೆ ಪೊಲೀಸರು ಆ ಸ್ಥಳಕ್ಕೆ ಸಿಯಾಳನ್ನು ಕರೆದೊಯ್ದಾಗ, ತಾವು ರಿಹರ್ಸಲ್ ಮಾಡಿದ್ದ ಜಾಗವನ್ನು ಆಕೆ ಗುರುತಿಸಿದ್ದಾಳೆ. ಇದರೊಂದಿಗೆ ಜೂನ್ 18 ರಂದು ಘಟನೆ ನಡೆದ ದಿನ ಸಿಯಾ ಧರಿಸಿದ್ದ ಬಟ್ಟೆಗಳನ್ನು ಪುಣೆಯ ಮಾರ್ಕೆಟ್ ಯಾರ್ಡ್ ಪ್ರದೇಶದಲ್ಲಿರುವ ಆಕೆಯ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ.

ಏನಿದು ಕೇತನ್ ಅಗರ್ವಾಲ್ ಕೊಲೆ ಪ್ರಕರಣ?

ಇತ್ತೀಚಿನ ತಿಂಗಳುಗಳಲ್ಲಿ ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸದ್ದು ಮಾಡುತ್ತಿರುವ ಹೈಪ್ರೊಫೈಲ್ ಕೇಸ್ ಇದಾಗಿದೆ. ಪುಣೆಯ 26 ವರ್ಷದ ಉದ್ಯಮಿ ಕೇತನ್ ಅಗರ್ವಾಲ್, ಜೂನ್ 18 ರಂದು ಐತಿಹಾಸಿಕ ಲೋಹಗಢ ಕೋಟೆಯ ಮೇಲಿಂದ ಬಿದ್ದು ನಿಗೂಢವಾಗಿ ಸಾವನ್ನಪ್ಪಿದ್ದರು. ಆರಂಭದಲ್ಲಿ ಈ ಘಟನೆಯನ್ನು ಆಕಸ್ಮಿಕ ಸಾವು ಎಂದು ಬಿಂಬಿಸಲು ಪ್ರಯತ್ನಿಸಲಾಗಿತ್ತು. ಕೇತನ್ ಕೋಟೆಯ ಮೇಲಿಂದ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾನೆ ಎಂದು ಸಿಯಾ ಗೋಯಲ್ ಅವರ ಕುಟುಂಬಕ್ಕೆ ತಿಳಿಸಿದ್ದಳು. ಆದರೆ ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ, ಇದು ಪೂರ್ವನಿಯೋಜಿತ ಕೊಲೆ ಎಂಬ ಆಘಾತಕಾರಿ ಸತ್ಯ ಬಯಲಿಗೆ ಬಂದಿತ್ತು. ಪ್ರಿಯಕರ ಚೇತನ್ ಚೌಧರಿ ಜೊತೆ ಸೇರಿ ಸಿಯಾ ಈ ಕೃತ್ಯ ಎಸಗಿದ್ದಾಳೆ ಎಂದು ಪೊಲೀಸರು ಜೂನ್ 23 ರಂದು ಇಬ್ಬರನ್ನೂ ಬಂಧಿಸಿದ್ದರು. ಸದ್ಯ ನ್ಯಾಯಾಲಯದ ಅನುಮತಿ ಸಿಕ್ಕರೆ ಸುಳ್ಳು ಪತ್ತೆ ಪರೀಕ್ಷೆಯ ಮೂಲಕ ಈ ಕೊಲೆಯ ಇಂಚಿಂಚು ಮಾಹಿತಿ ಹೊರಬರಲಿದೆ.

ಇದನ್ನೂ ಓದಿ: ಆಂಧ್ರದಲ್ಲಿ ಹೈಡ್ರಾಮಾ: ವೈಎಸ್‌ಆರ್‌ಸಿಪಿ ಎಂಎಲ್‌ಸಿ ದುವ್ವಾಡ ಶ್ರೀನಿವಾಸ್ ದಿಢೀರ್ ನಾಪತ್ತೆ!

Leave a Reply

Your email address will not be published. Required fields are marked *