ಬೆಂಗಳೂರು: ಬಿಳೇಕಹಳ್ಳಿಯಲ್ಲಿ ಪತ್ನಿ ಕರೆ ಸ್ವೀಕರಿಸಲಿಲ್ಲ ಎಂಬ ಸಣ್ಣ ಕಾರಣಕ್ಕೆ ಆರಂಭವಾದ ಗಲಾಟೆ ಭೀಕರ ಹತ್ಯೆಯಲ್ಲಿ ಅಂತ್ಯವಾದ ಆಘಾತಕಾರಿ ಘಟನೆ ಬೆಳಕಿಗೆ (Crime) ಬಂದಿದೆ. ಮೊಬೈಲ್ ಕರೆ ಸ್ವೀಕರಿಸದ ಕೋಪದಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನೇ ಕೊಲೆ ಮಾಡಿ, ಕೃತ್ಯವನ್ನು ಮುಚ್ಚಿಹಾಕಲು ಆಕೆಯ ಮೃತದೇಹವನ್ನು ವಿರೂಪಗೊಳಿಸಲು ಯತ್ನಿಸಿದ್ದ ಆರೋಪಿಯನ್ನು ಮೈಕೋ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಏನಿದು ಘಟನೆ?
ಬಿಹಾರ ಮೂಲದ ರಂಜಿತ್ ಕುಮಾರ್ ಗುಪ್ತಾ ಹಾಗೂ ಗುಂಜಾಮದೇಷಿಯಾ (38) ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ಬಿಳೇಕಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ರಂಜಿತ್ ಕೆಲಸಕ್ಕೆ ತೆರಳಿದರೆ, ಗುಂಜಾ ಗೃಹಿಣಿಯಾಗಿದ್ದರು. ಇತ್ತೀಚೆಗೆ ರಂಜಿತ್ ಕೆಲಸದ ಮಧ್ಯೆ ಕರೆ ಮಾಡಿದಾಗ ಗುಂಜಾ ಫೋನ್ ಸ್ವೀಕರಿಸುತ್ತಿರಲಿಲ್ಲ ಮತ್ತು ಸರಿಯಾಗಿ ಉತ್ತರ ನೀಡುತ್ತಿರಲಿಲ್ಲ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿ ನಡುವೆ ಆಗಾಗ ತೀವ್ರ ಜಗಳ ನಡೆಯುತ್ತಿತ್ತು.
ಗುರುವಾರ ಬೆಳಿಗ್ಗೆ ಮಕ್ಕಳು ಶಾಲೆಗೆ ಹೋದ ನಂತರ, ಫೋನ್ ಕರೆ ವಿಚಾರವಾಗಿ ಇಬ್ಬರ ನಡುವೆ ಮತ್ತೆ ಮಾತುಕತೆ ಬೆಳೆದು ಗಲಾಟೆ ವಿಕೋಪಕ್ಕೆ ತಿರುಗಿದೆ. ತೀವ್ರ ಆಕ್ರೋಶಗೊಂಡ ರಂಜಿತ್, ಸೀರೆಯಿಂದ ಪತ್ನಿಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ. ಕೊಲೆಯ ನಂತರ ಇದನ್ನು ಆಕಸ್ಮಿಕ ಸಾವು ಎಂದು ನಂಬಿಸಲು ಹಾಗೂ ಪೊಲೀಸರಿಗೆ ಗುರುತು ಸಿಗದಂತೆ ಮಾಡಲು ಅಡುಗೆ ಮನೆಯಲ್ಲಿದ್ದ ಬಿಸಿ ಎಣ್ಣೆಯನ್ನು ಆಕೆಯ ಮೃತದೇಹದ ಮೇಲೆ ಸುರಿದು ವಿರೂಪಗೊಳಿಸಲು ಯತ್ನಿಸಿದ್ದಾನೆ. ಬಳಿಕ ಏನೂ ತಿಳಿಯದವನಂತೆ ಮನೆಯಿಂದ ಹೊರಹೋಗಿ ಸ್ವಲ್ಪ ಸಮಯದ ನಂತರ ವಾಪಸ್ ಬಂದಿದ್ದನು.
ಆರೋಪಿ ಬಂಧಿಸಿದ ಪೊಲೀಸರು
ದಂಪತಿ ನಡುವಿನ ನಿರಂತರ ಜಗಳ ಹಾಗೂ ಮನೆಯಿಂದ ಬಂಡ ಅನುಮಾನಾಸ್ಪದ ಸನ್ನಿವೇಶ ಗಮನಿಸಿದ ಮನೆ ಮಾಲೀಕರು ತಕ್ಷಣವೇ ಮೈಕೋ ಲೇಔಟ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹದ ಸ್ಥಿತಿಯನ್ನು ಕಂಡು ಅನುಮಾನಗೊಂಡು ರಂಜಿತ್ ಕುಮಾರ್ ಗುಪ್ತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಸದ್ಯ ಮೈಕೋ ಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಪೊಲೀಸರಿಂದಲೇ ಯುವತಿ ಅತ್ಯಾಚಾರ
ಯಾದಗಿರಿಯಲ್ಲಿ ಖಾಕಿ ಪಡೆಗೇ ಕಪ್ಪುಚುಕ್ಕೆ ತರುವಂತಹ ಭೀಕರ ಹಾಗೂ ಪೈಶಾಚಿಕ ಘಟನೆಯೊಂದು ಬೆಳಕಿಗೆ ಬಂದಿದೆ. ಸಾರ್ವಜನಿಕರ ರಕ್ಷಣೆ ಮಾಡಬೇಕಾದ ರೈಲ್ವೆ ಪೊಲೀಸರು ಸೇರಿದಂತೆ ಹಲವರು ಸೇರಿ ಇಪ್ಪತ್ತೆರಡು ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ.
ಯಾದಗಿರಿ ಮೂಲದ ಸಂತ್ರಸ್ತ ಯುವತಿ ತನ್ನ ಸ್ವಗ್ರಾಮಕ್ಕೆ ಪ್ರಯಾಣಿಸಲು ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾಗ ಈ ಘಟನೆಗೆ ಮುನ್ನುಡಿ ಬರೆದಿದೆ. ನಿಲ್ದಾಣದ ವಿಶ್ರಾಂತಿ ಗೃಹದಲ್ಲಿದ್ದ ಮಲ್ಲಿಕಾರ್ಜುನ ಎಂಬ ವ್ಯಕ್ತಿ ಯುವತಿಗೆ ಮದುವೆಯಾಗುವುದಾಗಿ ನಂಬಿಸಿ, ಆಕೆಯನ್ನು ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದಿದ್ದಾನೆ. ಅಲ್ಲಿ ಆಕೆಯ ಮೇಲೆ ಮೊದಲ ಬಾರಿಗೆ ಅತ್ಯಾಚಾರ ಎಸಗಿದ್ದಾನೆ. ತದನಂತರ ಆಕೆಗೆ ಜೀವಬೆದರಿಕೆ ಹಾಕಿ, ಈ ಕೃತ್ಯದಲ್ಲಿ ರೈಲ್ವೆ ಸಿಬ್ಬಂದಿ ಹಾಗೂ ಇತರರನ್ನು ಭಾಗಿಯಾಗುವಂತೆ ಮಾಡಿದ್ದಾನೆ. ಆರೋಪಿಗಳು ಯುವತಿಯನ್ನು ವಿವಿಧ ಲಾಡ್ಜ್ಗಳಿಗೆ ಬಲವಂತವಾಗಿ ಕರೆದೊಯ್ದು ನಿರಂತರವಾಗಿ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ.
ಕಾಮುಕರ ಬೆದರಿಕೆಯಿಂದ ತೀವ್ರವಾಗಿ ಅಂಜಿದ್ದ ಯುವತಿ, ಕೊನೆಗೂ ಧೈರ್ಯ ತಳೆದು ಯಾದಗಿರಿ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ. ಸಂತ್ರಸ್ತೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಒಟ್ಟು ಆರು ಜನರ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ದೂರು ದಾಖಲಾಗುತ್ತಿದ್ದಂತೆ ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಪ್ರಕರಣದ ಪ್ರಮುಖ ಆರೋಪಿಗಳಾದ ಮಲ್ಲಿಕಾರ್ಜುನ ಹಾಗೂ ಮಹೇಶ್ ಎಂಬಿಬ್ಬರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆಯಲ್ಲಿ ಭಾಗಿಯಾಗಿದ್ದಾರೆನ್ನಲಾದ ಇತರ ಆರೋಪಿಗಳು ಹಾಗೂ ರೈಲ್ವೆ ಸಿಬ್ಬಂದಿ ತಲೆಮರೆಸಿಕೊಂಡಿದ್ದು, ಅವರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಯಬೇಕಾದ ಮತ್ತು ಪ್ರಯಾಣಿಕರಿಗೆ ರಕ್ಷಣೆ ನೀಡಬೇಕಾದ ರೈಲ್ವೆ ಸಿಬ್ಬಂದಿಯೇ ಈ ರೀತಿಯ ನೀಚ ಕೃತ್ಯದಲ್ಲಿ ಭಾಗಿಯಾಗಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಈ ಕ್ರೂರ ಕೃತ್ಯ ಎಸಗಿದ ಎಲ್ಲಾ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳು ಒತ್ತಾಯಿಸುತ್ತಿವೆ.
ಇದನ್ನೂ ಓದಿ: ‘ನಕಲಿ ನಕ್ಸಲ್’ ಹವಾ ಮುಕ್ತಾಯ: ಭಯದ ವಾತಾವರಣ ಸೃಷ್ಟಿಸುತ್ತಿದ್ದ ಕನಕಲಬಂಡೆ ವೆಂಕಟೇಶ್ ಕೊನೆಗೂ ಕಂಬಿ ಹಿಂದೆ
