TOP NEWS

Multiplex: ಅತಿಯಾದ ಜಾಹೀರಾತು ಹಾಕಿ ಸಿನಿಮಾ ತಡವಾಗಿ ಆರಂಭ: ಮಲ್ಟಿಪ್ಲೆಕ್ಸ್‌ಗೆ 75,000 ರೂ. ದಂಡ ವಿಧಿಸಿದ ಗ್ರಾಹಕ ಆಯೋಗ!

Consumer Court Penalizes Hyderabad multiplex Rs 75 000 for Screening Excessive Ads Before Show

ಹೈದರಾಬಾದ್:‌ ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೂ ಮುನ್ನ ಜಾಹೀರಾತುಗಳನ್ನು ಪ್ರಸಾರ ಮಾಡುವುದು ಸಾಮಾನ್ಯ. ಆದರೆ, ಅತಿಯಾದ ವಾಣಿಜ್ಯ ಜಾಹೀರಾತುಗಳನ್ನು ಪ್ರದರ್ಶಿಸಿ ನಿಗದಿತ ಸಮಯಕ್ಕಿಂತ ತಡವಾಗಿ ಸಿನಿಮಾ ಶುರು ಮಾಡಿದ್ದಕ್ಕಾಗಿ ಹೈದರಾಬಾದ್‌ ಗ್ರಾಹಕ ಆಯೋಗವು ಖ್ಯಾತ ಮಲ್ಟಿಪ್ಲೆಕ್ಸ್ ತ ಚಿತ್ರಮಂದಿರಕ್ಕೆ 75,000 ರೂಪಾಯಿ ಭಾರಿ ದಂಡ (Multiplex) ವಿಧಿಸಿ ಮಹತ್ವದ ಆದೇಶ ನೀಡಿದೆ.

2025ರಲ್ಲಿ ನಡೆದಿದ್ದ ಘಟನೆ

ಈ ಅಪರೂಪದ ಘಟನೆ ನಡೆದದ್ದು 2025 ರ ಜೂನ್ 20 ರಂದು. 33 ವರ್ಷದ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನೊಂದಿಗೆ ಧನುಷ್ ಮತ್ತು ನಾಗಾರ್ಜುನ ಅಭಿನಯದ ‘ಕುಬೇರ’ ಸಿನಿಮಾವನ್ನು ವೀಕ್ಷಿಸಲು ರಾತ್ರಿ 10:35 ರ ಶೋಗೆ ಎರಡು ಟಿಕೆಟ್‌ಗಳನ್ನು ಕಾಯ್ದಿರಿಸಿದ್ದರು. ಅದರಂತೆ ಅವರು ರಾತ್ರಿ 10:30 ರ ಸುಮಾರಿಗೆ ಆಸನದಲ್ಲಿ ಕುಳಿತಿದ್ದರು. ಆದರೆ, 10:35 ಕ್ಕೆ ಆರಂಭವಾಗಬೇಕಿದ್ದ ಸಿನಿಮಾ, ಸಾಲು ಸಾಲು ವಾಣಿಜ್ಯ ಜಾಹೀರಾತುಗಳು ಹಾಗೂ ಸಿನಿಮಾಗಳ ಟ್ರೇಲರ್‌ಗಳಿಂದಾಗಿ ರಾತ್ರಿ 10:52 ರವರೆಗೆ ಶುರುವಾಗಲೇ ಇಲ್ಲ. ಅಂದರೆ ಸುಮಾರು 22 ನಿಮಿಷಗಳ ಕಾಲ ಬರೀ ಜಾಹೀರಾತುಗಳನ್ನೇ ಪ್ರದರ್ಶಿಸಲಾಗಿತ್ತು.

ಇದರಿಂದ ತೀವ್ರ ಅಸಮಾಧಾನಗೊಂಡ ಪ್ರೇಕ್ಷಕರು, ಈ ವಿಳಂಬದಿಂದಾಗಿ ತಮ್ಮ ದಿನನಿತ್ಯದ ವೇಳಾಪಟ್ಟಿ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು ಎಂದು ದೂರಿದ್ದಾರೆ. ಸಿನಿಮಾ ತಡವಾಗಿ ಮುಗಿದ ಕಾರಣ ಅವರು ಅಂದುಕೊಂಡ ಸಮಯಕ್ಕಿಂತ ಒಂದು ಗಂಟೆ ತಡವಾಗಿ, ಅಂದರೆ ಮಧ್ಯರಾತ್ರಿ 3 ಗಂಟೆಗೆ ಮನೆ ತಲುಪಬೇಕಾಯಿತು. ಈ ಅನಗತ್ಯ ವಿಳಂಬವು ಸೇವಾ ನ್ಯೂನತೆಗೆ ಸ್ಪಷ್ಟ ಉದಾಹರಣೆಯಾಗಿದೆ ಎಂದು ಆರೋಪಿಸಿ ಅವರು ಹೈದರಾಬಾದ್ ಜಿಲ್ಲಾ ಗ್ರಾಹಕರ ವಿವಾದಗಳ ಪರಿಹಾರ ಆಯೋಗದ ಬಾಗಿಲು ತಟ್ಟಿದ್ದರು.

ವಿಚಾರಣೆ ನಡೆಸಿದ ಆಯೋಗವು ಸೆಪ್ಟೆಂಬರ್ 11, 2026 ರಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ತೀರ್ಪನ್ನು ಪ್ರಕಟಿಸಿದೆ. ಚಿತ್ರಮಂದಿರದ ಈ ನಡವಳಿಕೆಯನ್ನು ‘ಅನುಚಿತ ವ್ಯಾಪಾರ ಪ್ರಕ್ರಿಯೆ’ ಎಂದು ಕರೆದಿರುವ ಆಯೋಗವು, ಸಾರ್ವಜನಿಕ ಜಾಗೃತಿ ಚಿತ್ರಗಳ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಸರ್ಕಾರಿ ಮಾರ್ಗಸೂಚಿಗಳು ಕೇವಲ ಎರಡು ನಿಮಿಷಗಳ ಕಾಲಾವಕಾಶವನ್ನು ಮಾತ್ರ ನೀಡುತ್ತವೆ ಎಂಬುದನ್ನು ಉಲ್ಲೇಖಿಸಿದೆ. ಚಿತ್ರಮಂದಿರಗಳು ಕೇವಲ ತಮ್ಮ ಲಾಭಾಂಶಕ್ಕಾಗಿ ವಾಣಿಜ್ಯ ಜಾಹೀರಾತುಗಳನ್ನು ಹೆಚ್ಚಿನ ಸಮಯ ಪ್ರದರ್ಶಿಸಿ ಪ್ರೇಕ್ಷಕರ ಬೆಲೆಬಾಳುವ ಸಮಯವನ್ನು ವ್ಯರ್ಥ ಮಾಡಿರುವುದನ್ನು ಆಯೋಗ ಗಂಭೀರವಾಗಿ ಪರಿಗಣಿಸಿದೆ.

ವ್ಯವಹಾರದ ಭಾಗ ಎಂದಿದ್ದ ಚಿತ್ರಮಂದಿರ

ವಿಚಾರಣೆಯ ಸಂದರ್ಭದಲ್ಲಿ ಚಿತ್ರಮಂದಿರದ ಆಡಳಿತ ಮಂಡಳಿಯು, “ಜಾಹೀರಾತುಗಳು, ಸಾರ್ವಜನಿಕ ಜಾಗೃತಿ ವಿಡಿಯೋಗಳು ಮತ್ತು ಸಿನಿಮಾಗಳ ಟ್ರೇಲರ್‌ಗಳನ್ನು ಪ್ರದರ್ಶಿಸುವುದು ನಮ್ಮ ವ್ಯವಹಾರದ ಒಂದು ಭಾಗ. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಜನರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿತ್ತು” ಎಂದು ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿತು. ಆದರೆ, ಗ್ರಾಹಕರ ಅನುಕೂಲವನ್ನು ಬಲಿಗೊಟ್ಟು ಲಾಭ ಮಾಡಿಕೊಳ್ಳುವ ಈ ವಾದವನ್ನು ಆಯೋಗವು ಸಂಪೂರ್ಣವಾಗಿ ತಿರಸ್ಕರಿಸಿತು.

ಆಯೋಗ ವಿಧಿಸಿರುವ ಒಟ್ಟು 75,000 ರೂಪಾಯಿಗಳ ದಂಡದ ಮೊತ್ತವನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಸಿನಿಮಾ ವೀಕ್ಷಿಸಲು ಬಂದ ವ್ಯಕ್ತಿಗೆ ಆದ ಮಾನಸಿಕ ಕಿರಿಕಿರಿ ಮತ್ತು ತೊಂದರೆಗಾಗಿ ಪರಿಹಾರವಾಗಿ 20,000 ರೂಪಾಯಿ ಹಾಗೂ ಅವರ ಕಾನೂನು ಹೋರಾಟದ ವೆಚ್ಚವಾಗಿ 5,000 ರೂಪಾಯಿಗಳನ್ನು ನೀಡುವಂತೆ ಸೂಚಿಸಲಾಗಿದೆ. ಇನ್ನುಳಿದ 50,000 ರೂಪಾಯಿಗಳನ್ನು ‘ಜಿಲ್ಲಾ ಗ್ರಾಹಕರ ಕಲ್ಯಾಣ ನಿಧಿ’ಗೆ ದಂಡದ ರೂಪದಲ್ಲಿ ಜಮಾ ಮಾಡಲು ಆದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಚಿತ್ರಮಂದಿರಗಳು ಮತ್ತೆ ಮಾಡದಂತೆ ತಡೆಯಲು ಈ ಶಿಕ್ಷೆ ನೀಡಲಾಗಿದೆ ಎಂದು ಆಯೋಗ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ತೀವ್ರ ರಕ್ತಪಾತ: ಸೆನ್ಸೆಕ್ಸ್ 1,247, ನಿಫ್ಟಿ 384 ಅಂಕ ಕುಸಿತ!

Leave a Reply

Your email address will not be published. Required fields are marked *