ನವದೆಹಲಿ: ಕಳೆದ ನಾಲ್ಕು ವರ್ಷಗಳಿಂದ ಭಾರತದ ಅತಿದೊಡ್ಡ ವ್ಯಾಪಾರ ಪಾಲುದಾರ ರಾಷ್ಟ್ರವಾಗಿದ್ದ ಅಮೆರಿಕವನ್ನು ಹಿಂದಿಕ್ಕಿ ಚೀನಾ (China) ಮತ್ತೆ ಮೊದಲ ಸ್ಥಾನಕ್ಕೇರಿದೆ. ಸರ್ಕಾರದ ಇತ್ತೀಚಿನ ಅಂಕಿಅಂಶಗಳ ಪ್ರಕಾರ, 2025-26ನೇ ಹಣಕಾಸು ವರ್ಷದಲ್ಲಿ ಭಾರತ ಮತ್ತು ಚೀನಾ ನಡುವಿನ ಒಟ್ಟು ದ್ವಿಪಕ್ಷೀಯ ವ್ಯಾಪಾರವು ಬರೋಬ್ಬರಿ 151.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಈ ಮೂಲಕ 2021-22ರಿಂದ ಸತತವಾಗಿ ಅಗ್ರಸ್ಥಾನದಲ್ಲಿದ್ದ ಅಮೆರಿಕವನ್ನು ಚೀನಾ ಎರಡನೇ ಸ್ಥಾನಕ್ಕೆ ತಳ್ಳಿದ್ದು, ಜಾಗತಿಕ ವ್ಯಾಪಾರ ಸಮೀಕರಣದಲ್ಲಿ ಮಹತ್ವದ ಬದಲಾವಣೆಯಾಗಿದೆ.
ಹೇಗಿದೆ ರಫ್ತು-ಆಮದು ಅಂಕಿಅಂಶ?
ಕಳೆದ ಹಣಕಾಸು ವರ್ಷದಲ್ಲಿ ಚೀನಾಕ್ಕೆ ಭಾರತದಿಂದ ಆಗುವ ರಫ್ತು ಪ್ರಮಾಣವು ಶೇ. 36.66 ರಷ್ಟು ಏರಿಕೆಯಾಗಿದ್ದು, 19.47 ಬಿಲಿಯನ್ ಡಾಲರ್‌ಗೆ ತಲುಪಿದೆ. ಇದೇ ವೇಳೆ ಚೀನಾದಿಂದ ಭಾರತಕ್ಕೆ ಆಗುವ ಆಮದು ಕೂಡ ಶೇ. 16 ರಷ್ಟು ಹೆಚ್ಚಾಗಿದ್ದು, 131.63 ಬಿಲಿಯನ್ ಡಾಲರ್‌ಗೆ ಏರಿಕೆಯಾಗಿದೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಭಾರತವು ಚೀನಾಕ್ಕೆ ರಫ್ತು ಮಾಡುವುದಕ್ಕಿಂತಲೂ ಅಲ್ಲಿಂದ ಆಮದು ಮಾಡಿಕೊಳ್ಳುವ ಸರಕುಗಳ ಪ್ರಮಾಣವೇ ಗಣನೀಯವಾಗಿ ಹೆಚ್ಚಾಗಿದೆ. ಇದರಿಂದಾಗಿ ಚೀನಾದೊಂದಿಗಿನ ಭಾರತದ ವ್ಯಾಪಾರ ಕೊರತೆಯು ಸಾರ್ವಕಾಲಿಕ ಗರಿಷ್ಠ ಮಟ್ಟವಾದ 112.6 ಬಿಲಿಯನ್ ಡಾಲರ್‌ಗೆ ತಲುಪಿದೆ. ಕಳೆದ ವರ್ಷ ಈ ಕೊರತೆಯು 99.2 ಬಿಲಿಯನ್ ಡಾಲರ್ ಇತ್ತು ಎಂಬುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇನ್ನೊಂದೆಡೆ, ಅಮೆರಿಕದೊಂದಿಗಿನ ಭಾರತದ ವ್ಯಾಪಾರದಲ್ಲಿ ಅಲ್ಪ ಹಿನ್ನಡೆಯಾಗಿದೆ. ಅಮೆರಿಕಕ್ಕೆ ಭಾರತದ ರಫ್ತು ಕೇವಲ ಶೇ. 0.92 ರಷ್ಟು ಅಲ್ಪ ಏರಿಕೆ ಕಂಡಿದ್ದರೆ, ಅಲ್ಲಿಂದ ಆಗುವ ಆಮದು ಶೇ. 15.95 ರಷ್ಟು ಹೆಚ್ಚಾಗಿದೆ. ಇದರಿಂದಾಗಿ ಅಮೆರಿಕದ ಜೊತೆಗಿನ ಭಾರತದ ವ್ಯಾಪಾರ ಲಾಭವು 40.89 ಬಿಲಿಯನ್ ಡಾಲರ್‌ನಿಂದ 34.4 ಬಿಲಿಯನ್ ಡಾಲರ್‌ಗೆ ಕುಸಿದಿದೆ. ವಾಣಿಜ್ಯ ಸಚಿವಾಲಯದ ಮಾಹಿತಿ ಪ್ರಕಾರ, ಚೀನಾ ಈ ಹಿಂದೆ 2013-14 ರಿಂದ 2017-18ರವರೆಗೆ ಮತ್ತು 2020-21ರಲ್ಲಿ ಭಾರತದ ಪ್ರಮುಖ ವ್ಯಾಪಾರ ಪಾಲುದಾರನಾಗಿತ್ತು. ಈಗ ಮತ್ತೆ ಆ ಸ್ಥಾನವನ್ನು ಚೀನಾ ಮರಳಿ ಪಡೆದಿದೆ.
ವ್ಯಾಪಾರದ ಒಟ್ಟಾರೆ ಚಿತ್ರಣವನ್ನು ಗಮನಿಸಿದರೆ, ಕಳೆದ ಹಣಕಾಸು ವರ್ಷದಲ್ಲಿ ನೆದರ್ಲೆಂಡ್ಸ್, ಬ್ರಿಟನ್, ಸಿಂಗಾಪುರ ಮತ್ತು ಬಾಂಗ್ಲಾದೇಶದಂತಹ ಹಲವು ಪ್ರಮುಖ ರಾಷ್ಟ್ರಗಳಿಗೆ ಭಾರತದ ರಫ್ತು ಪ್ರಮಾಣ ಕುಸಿದಿದೆ. ಆದರೆ ಯುಎಇ, ಜರ್ಮನಿ, ಇಟಲಿ ಮತ್ತು ಸ್ಪೇನ್‌ನಂತಹ ದೇಶಗಳಿಗೆ ರಫ್ತು ಮಾಡುವಲ್ಲಿ ಭಾರತ ಯಶಸ್ವಿಯಾಗಿದೆ. ಆಮದು ವಿಚಾರದಲ್ಲಿ ರಷ್ಯಾ ಮತ್ತು ಇರಾಕ್‌ನಂತಹ ದೇಶಗಳಿಂದ ಇಳಿಕೆಯಾಗಿದ್ದರೆ, ಸ್ವಿಟ್ಜರ್ಲೆಂಡ್ ಮತ್ತು ಜಪಾನ್‌ನಿಂದ ಆಮದು ಹೆಚ್ಚಾಗಿದೆ. ಒಟ್ಟಾರೆಯಾಗಿ, ಚೀನಾದಿಂದ ಬರುತ್ತಿರುವ ಸರಕುಗಳ ಮೇಲಿನ ಅವಲಂಬನೆ ಮತ್ತೆ ಹೆಚ್ಚಾಗುತ್ತಿರುವುದು ಈ ಹೊಸ ಅಂಕಿಅಂಶಗಳಿಂದ ಸ್ಪಷ್ಟವಾಗಿ ಗೋಚರಿಸುತ್ತಿದೆ.
