Israel: ಹಿಜ್ಬುಲ್ಲಾ ಉಗ್ರರ ಮೇಲೆ ಮತ್ತೆ ಇಸ್ರೇಲ್‌ ದಾಳಿ

Israeli forces strike Hezbollah positions

ಬೈರುತ್: ದಕ್ಷಿಣ ಲೆಬನಾನ್‌ನ ಆಯಕಟ್ಟಿನ ಪ್ರದೇಶವಾದ ಬಿಂಟ್ ಜಬೀಲ್ ನಗರವನ್ನು ಗುರಿಯಾಗಿಸಿಕೊಂಡು ಇಸ್ರೇಲ್ (Israel) ಸೇನೆ ತನ್ನ ಭೀಕರ ದಾಳಿಯನ್ನು ಮುಂದುವರಿಸಿದೆ. ಹಿಜ್ಬುಲ್ಲಾ ಉಗ್ರರ ವಿರುದ್ಧ ಸಮರ ಸಾರಿರುವ ಇಸ್ರೇಲ್ ಕಮಾಂಡೋಗಳು, ಸರಣಿ ದಾಳಿಗಳ ಮೂಲಕ ಸಂಘಟನೆಯ ಹತ್ತಾರು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಮತ್ತು ಅವರ ಪ್ರಮುಖ ನೆಲೆಗಳನ್ನು ನಾಶಪಡಿಸಿರುವುದಾಗಿ ಘೋಷಿಸಿವೆ. ಕಳೆದ ಒಂದು ವಾರದಿಂದ ಈ ಭಾಗದಲ್ಲಿ ತೀವ್ರ ರಕ್ತಪಾತ ಮುಂದುವರಿದಿದ್ದು, ಇಡೀ ಪ್ರದೇಶವು ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ.

ಇಸ್ರೇಲ್‌ ಹೇಳಿದ್ದೇನು?

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಈ ಬಗ್ಗೆ ಮಾತನಾಡಿ, ಇಸ್ರೇಲ್ ಪಡೆಗಳು ಈಗ ಬಿಂಟ್ ಜಬೀಲ್ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದು, ಹಿಜ್ಬುಲ್ಲಾವನ್ನು ಅಲ್ಲಿಂದ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಹಂತಕ್ಕೆ ತಲುಪಿವೆ ಎಂದು ತಿಳಿಸಿದ್ದಾರೆ. ಕೇವಲ ಒಂದು ನಿಮಿಷದ ಮಿಂಚಿನ ಕಾರ್ಯಾಚರಣೆಯಲ್ಲಿ ಉಗ್ರರ ಸುಮಾರು 70 ಮೂಲಸೌಕರ್ಯ ತಾಣಗಳನ್ನು ಧ್ವಂಸಗೊಳಿಸಿರುವ ಸೇನೆ, ಅಲ್ಲಿ ಅಡಗಿಸಿಡಲಾಗಿದ್ದ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ. ಈ ಯಶಸ್ವಿ ಕಾರ್ಯಾಚರಣೆಯು ಹಿಜ್ಬುಲ್ಲಾ ಪಡೆಯ ಬಲವನ್ನು ಕುಂದಿಸಿದೆ ಎಂದು ಇಸ್ರೇಲ್ ಸೇನೆ ಹೇಳಿದೆ.

ದಕ್ಷಿಣ ಲೆಬನಾನ್‌ನ ಗುಡ್ಡಗಾಡು ಪ್ರದೇಶಗಳು ಹಿಜ್ಬುಲ್ಲಾ ಸಂಘಟನೆಯ ಪ್ರಮುಖ ನೆಲೆಗಳಾಗಿದ್ದು, ಈಗ ಇಸ್ರೇಲ್ ಈ ಭಾಗಗಳನ್ನೇ ಮುಖ್ಯ ಗುರಿಯಾಗಿಸಿಕೊಂಡಿದೆ. ಲೆಬನಾನ್‌ನ ಅಧಿಕೃತ ಸುದ್ದಿ ಸಂಸ್ಥೆಗಳ ವರದಿಯಂತೆ, ಕರಾವಳಿ ನಗರವಾದ ಟೈರ್ ಮತ್ತು ನಬಾಟಿಯಾದಂತಹ ಪ್ರದೇಶಗಳಲ್ಲಿ ಇಸ್ರೇಲ್ ತನ್ನ ಸೇನಾ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ವಾಯುದಾಳಿಗಳ ಜೊತೆಗೆ ಇಸ್ರೇಲ್ ಭೂಸೇನೆ ಕೂಡ ದಕ್ಷಿಣದ ಗ್ರಾಮಗಳತ್ತ ವೇಗವಾಗಿ ಮುನ್ನುಗ್ಗುತ್ತಿದ್ದು, ಸಂಪರ್ಕ ಕಡಿತಗೊಳಿಸುವ ಉದ್ದೇಶದಿಂದ ದಕ್ಷಿಣ ಲೆಬನಾನ್‌ನ ಪ್ರಮುಖ ಸೇತುವೆಯೊಂದನ್ನು ಕೂಡ ಧ್ವಂಸಗೊಳಿಸಲಾಗಿದೆ.

ನಿಲ್ಲದ ದಾಳಿ

ಇತ್ತ ಅಲ್ ಜಜೀರಾ ವರದಿಯ ಪ್ರಕಾರ, ಇಸ್ರೇಲ್ ಯುದ್ಧವಿಮಾನಗಳು ಜಾವ್ತರ್ ಅಲ್-ಶರ್ಕಿಯಾ, ತೌಲಿನ್ ಮತ್ತು ಖಿರ್ಬೆಟ್ ಸೆಲ್ಮ್ ಸೇರಿದಂತೆ ದಕ್ಷಿಣ ಲೆಬನಾನ್‌ನ ಹಲವಾರು ಪಟ್ಟಣಗಳ ಮೇಲೆ ಸತತ ಬಾಂಬ್ ದಾಳಿ ನಡೆಸುತ್ತಿವೆ. ದಶಕಗಳ ಬಳಿಕ ಇಸ್ರೇಲ್ ಮತ್ತು ಲೆಬನಾನ್ ನಡುವೆ ರಾಜತಾಂತ್ರಿಕ ಮಾತುಕತೆಗಳು ನಡೆಯುತ್ತಿದ್ದರೂ, ಯುದ್ಧ ಭೂಮಿಯಲ್ಲಿ ಮಾತ್ರ ಸಂಘರ್ಷ ಕಿಂಚಿತ್ತೂ ಕಡಿಮೆಯಾಗಿಲ್ಲ. ಈ ಭೀಕರ ಕಾಳಗ ಮತ್ತು ಹೆಚ್ಚುತ್ತಿರುವ ಸಾವುನೋವುಗಳು ಇಡೀ ಮಧ್ಯಪ್ರಾಚ್ಯದಲ್ಲಿ ಭೀತಿ ಹಾಗೂ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.

ಇದನ್ನೂ ಓದಿ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ, ಸಂಸತ್ತು ಹೈಜಾಕ್‌ ಮಾಡೋಕೆ ಬಿಡಲ್ಲ

Leave a Reply

Your email address will not be published. Required fields are marked *