ಮುಂಬೈ: ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಪ್ರೀತಿ ಹಾಗೂ ಜನಪ್ರಿಯತೆ ಗಳಿಸಿದ ‘3 ಈಡಿಯಟ್ಸ್’ ಸಿನಿಮಾ ಬಿಡುಗಡೆಯಾಗಿ ಹದಿನೈದು ವರ್ಷಗಳೇ (Bollywood) ಕಳೆದಿದ್ದರೂ, ಅದರ ಎರಡನೇ ಭಾಗದ (ಸೀಕ್ವೆಲ್) ಮೇಲಿನ ನಿರೀಕ್ಷೆ ಮಾತ್ರ ಕಮ್ಮಿಯಾಗಿಲ್ಲ. ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಸ್ನೇಹ, ಸಂಕಟ ಹಾಗೂ ಭಾರತೀಯ ಶಿಕ್ಷಣ ವ್ಯವಸ್ಥೆಯ ಮೇಲಿನ ಹಾಸ್ಯಭರಿತ ಚಾಟಿ ಏಟಿನ ಕಥೆ ಹೊಂದಿದ್ದ ಈ ಚಿತ್ರ ಪ್ರತಿಯೊಬ್ಬ ಪ್ರೇಕ್ಷಕನ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದೆ. ಇದೀಗ ಚಿತ್ರದ ಅಭಿಮಾನಿಗಳಿಗೆ ಖುಷಿ ಕೊಡುವಂತಹ ಪ್ರಮುಖ ಅಪ್ಡೇಟ್ ಒಂದನ್ನು ನಿರ್ದೇಶಕ ರಾಜ್ಕುಮಾರ್ ಹಿರಾನಿ ಹಂಚಿಕೊಂಡಿದ್ದಾರೆ. ರಾಂಚೋ, ಫರ್ಹಾನ್ ಮತ್ತು ರಾಜು ಅವರ ಜೀವನ ಈಗ ಹೇಗಿರಬಹುದು ಎಂಬ ಕುರಿತು ಅವರು ಸೀಕ್ವೆಲ್ನ ಪ್ರಮುಖ ಎಳೆಯನ್ನು ಬಿಚ್ಚಿಟ್ಟಿದ್ದಾರೆ.
20 ವರ್ಷಗಳ ನಂತರದ ಕತೆ
ನಿರ್ದೇಶಕ ರಾಜ್ಕುಮಾರ್ ಹಿರಾನಿ ನೀಡಿರುವ ಮಾಹಿತಿ ಪ್ರಕಾರ, ಈ ಹೊಸ ಸೀಕ್ವೆಲ್ ಸಿನಿಮಾವು ಮತ್ತೆ ಹಳೆಯ ಕಾಲೇಜು ದಿನಗಳ ಕಥೆಯನ್ನು ಹೇಳುವುದಿಲ್ಲ. ಬದಲಿಗೆ ಕಾಲೇಜು ಮುಗಿದು 15 ರಿಂದ 20 ವರ್ಷಗಳ ನಂತರ ಆ ಮೂವರು ಸ್ನೇಹಿತರ ಬದುಕು ಏನಾಗಿದೆ ಎಂಬುದನ್ನು ಇದು ತೋರಿಸಲಿದೆ. ಚಿತ್ರದ ಮುಖ್ಯ ಪಾತ್ರಗಳಾದ ರಾಂಚೋ, ಫರ್ಹಾನ್ ಮತ್ತು ರಾಜು ಈಗ ಮದುವೆಯಾಗಿ ಮಕ್ಕಳನ್ನು ಹೊಂದಿರುವ ಸಂಸಾರಸ್ಥರಾಗಿದ್ದಾರೆ. ಪ್ರಸ್ತುತ ಅವರು ತಮ್ಮ ಮಧ್ಯವಯಸ್ಸಿನ ಬಿಕ್ಕಟ್ಟುಗಳನ್ನು (ಮಿಡ್-ಲೈಫ್ ಕ್ರೈಸಿಸ್), ಅದರಿಂದ ಎದುರಾಗುವ ಗೊಂದಲ ಹಾಗೂ ಒತ್ತಡಗಳನ್ನು ಹೇಗೆ ನಿಭಾಯಿಸುತ್ತಿದ್ದಾರೆ ಮತ್ತು ಅಲ್ಲಿಂದ ಅವರ ಜೀವನ ಮುಂದಕ್ಕೆ ಹೇಗೆ ಸಾಗುತ್ತದೆ ಎಂಬ ಕಥಾಹಂದರವನ್ನು ಈ ಸಿನಿಮಾ ಹೊಂದಿರಲಿದೆ. ಸದ್ಯ ಚಿತ್ರಕಥೆಯ ಕೆಲಸಗಳು ಭರದಿಂದ ಸಾಗುತ್ತಿದ್ದು, ಮೊದಲ ಭಾಗದಷ್ಟೇ ವಿಶಿಷ್ಟವಾದ ಹಾಸ್ಯ ಮತ್ತು ಸಂದೇಶವನ್ನು ಈ ಚಿತ್ರವೂ ಒಳಗೊಂಡಿರಲಿದೆ ಎಂದು ಹಿರಾನಿ ತಿಳಿಸಿದ್ದಾರೆ.
ಚಿತ್ರಕಥೆಗಾರ ಅಭಿಜಾತ್ ಜೋಶಿ ಅವರೊಂದಿಗೆ ಸೇರಿ ರಾಜ್ಕುಮಾರ್ ಹಿರಾನಿ ಅವರು ಈ ಚಿತ್ರದ ಸ್ಕ್ರಿಪ್ಟ್ ಸಿದ್ಧಪಡಿಸುತ್ತಿದ್ದಾರೆ. ಕಥೆ ಅದ್ಭುತವಾಗಿ ಮೂಡಿಬರುತ್ತಿದ್ದರೂ, ಚಿತ್ರಕಥೆಯಲ್ಲಿ ಇನ್ನೂ ಕೆಲವು ಪ್ರಮುಖ ಬದಲಾವಣೆಗಳು ಬಾಕಿ ಇರುವುದರಿಂದ ಸಿನಿಮಾ ಚಿತ್ರೀಕರಣಕ್ಕೆ ತರಾತುರಿ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇನ್ನು ಈ ಸೀಕ್ವೆಲ್ನಲ್ಲಿ ಮೊದಲ ಭಾಗದಲ್ಲಿದ್ದ ಅಮೀರ್ ಖಾನ್, ಆರ್. ಮಾಧವನ್ ಮತ್ತು ಶರ್ಮನ್ ಜೋಶಿ ಅವರೇ ಮತ್ತೆ ನಟಿಸಲಿದ್ದಾರೆ ಎಂದು ವರದಿಯಾಗಿದೆಯಾದರೂ, ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳಬೇಕಿದೆ. 2009 ರಲ್ಲಿ ಬಿಡುಗಡೆಯಾಗಿದ್ದ ‘3 ಈಡಿಯಟ್ಸ್’ ಸಿನಿಮಾ ವಿಶ್ವದಾದ್ಯಂತ ಸುಮಾರು 400 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿತ್ತು. ಈಗ ಅದರ ಎರಡನೇ ಭಾಗದ ಕಥೆ ಕೇಳಿ ಪ್ರೇಕ್ಷಕರು ತಮ್ಮ ನೆಚ್ಚಿನ ಪಾತ್ರಗಳನ್ನು ಮತ್ತೆ ತೆರೆಮೇಲೆ ನೋಡಲು ಕಾತರರಾಗಿದ್ದಾರೆ.
ಇದನ್ನೂ ಓದಿ: ‘ಪುಷ್ಪ 2’ ದುರಂತಕ್ಕೆ ಬಿಗ್ ಟ್ವಿಸ್ಟ್: ನಟ ಅಲ್ಲು ಅರ್ಜುನ್ಗೆ ಹೈದರಾಬಾದ್ ಕೋರ್ಟ್ ತುರ್ತು ಸಮನ್ಸ್
