ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘಿಸಿ ಅಡ್ಡಮತದಾನ ಮಾಡಿದ ಸ್ವಪಕ್ಷದ ಶಾಸಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಪಕ್ಷದ ಅಧಿಕೃತ ಅಭ್ಯರ್ಥಿಗಳಿಗೆ ಬೆನ್ನಿಗೆ ಚೂರಿ ಹಾಕಿದವರನ್ನು ‘ಮೀರ್ ಸಾಧಕರು’ ಎಂದು ಕರೆಯುವ ಮೂಲಕ ಪರೋಕ್ಷವಾಗಿ ಕಠಿಣ ಶಿಸ್ತು ಕ್ರಮ ಜರುಗಿಸುವ ಗ್ಯಾರಂಟಿ ಎಚ್ಚರಿಕೆಯನ್ನು ನೀಡಿದ್ದಾರೆ. ಹೆತ್ತ ತಾಯಿಗೆ ದ್ರೋಹ ಬಗೆದಂತೆ ನಡೆದುಕೊಂಡಿರುವ ಇಂತಹ ನಾಯಕರಿಗೆ ಯಾವುದೇ ಕಾರಣಕ್ಕೂ ಕ್ಷಮೆಯಿಲ್ಲ, ಇವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಅವರು ಗುಡುಗಿದ್ದಾರೆ. ಈಗಾಗಲೇ ಯಾರು ಯಾರು ಅಡ್ಡಮತದಾನ ನಡೆಸಿದ್ದಾರೆ ಎಂಬ ಬಗ್ಗೆ ನಮ್ಮದೇ ಆದ ಮೂಲಗಳಿಂದ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದೇವೆ. ಈ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಪಕ್ಷದ ರಾಷ್ಟ್ರೀಯ ಉಸ್ತುವಾರಿ ನಿತಿನ್ ನಬೀನ್ ಅವರ ಜೊತೆ ಈಗಾಗಲೇ ದೂರವಾಣಿ ಮೂಲಕ ಸುದೀರ್ಘವಾಗಿ ಮಾತನಾಡಿದ್ದು, ವರಿಷ್ಠರಿಗೆ ಪ್ರಾಥಮಿಕ ಮಾಹಿತಿ ತಲುಪಿಸಲಾಗಿದೆ. ಅವರು ಸಮಯ ನೀಡಿದ ತಕ್ಷಣವೇ ದೆಹಲಿಗೆ ತೆರಳಿ, ದ್ರೋಹ ಬಗೆದ ಶಾಸಕರ ಪೂರ್ಣ ವಿವರಗಳನ್ನು ಹೈಕಮಾಂಡ್ ಕೈಗಿಡಲಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಅಡ್ಡ ಮತದಾನವನ್ನ ಕನಸಿನಲ್ಲೂ ಊಹಿಸಿರಲಿಲ್ಲ
ದುರದೃಷ್ಟವಶಾತ್ ನಡೆದಿರುವ ಈ ಅಡ್ಡಮತದಾನದ ಬೆಳವಣಿಗೆಯನ್ನು ಕನಸು ಮನಸ್ಸಿನಲ್ಲೂ ಊಹಿಸಿರಲಿಲ್ಲ ಎಂದು ವಿಜಯೇಂದ್ರ ಬೇಸರ ಹಂಚಿಕೊಂಡಿದ್ದಾರೆ. ಈ ಘಟನೆಯಿಂದ ಬಿಜೆಪಿ ಮಾತ್ರವಲ್ಲದೆ ಜೆಡಿಎಸ್ ನಾಯಕ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೂ ತೀವ್ರ ನೋವಾಗಿದೆ. ಬಿಜೆಪಿಯಂತೆ ಜೆಡಿಎಸ್‌ನಲ್ಲೂ ಅಡ್ಡಮತದಾನ ನಡೆದಿದ್ದು, ಈ ಘಟನೆ ಉಭಯ ಪಕ್ಷಗಳ ಮೈತ್ರಿಕೂಟಕ್ಕೆ ಮುಜುಗುರ ಉಂಟು ಮಾಡಿದೆ. ನಮ್ಮ ಶಾಸಕರು ನಮಗೆ ಮಾಡಿರುವ ಮೋಸ ಕೇವಲ ಪಕ್ಷಕ್ಕಲ್ಲ, ಹೆತ್ತ ತಾಯಿಗೆ ಮಾಡಿದ ಮೋಸ. ಕುಮಾರಸ್ವಾಮಿ ಅವರ ಮನವಿಯ ಮೇರೆಗೆ ಮೂರನೇ ಅಭ್ಯರ್ಥಿ ಕಣಕ್ಕಿಳಿಸಲು ನಾವು ಬೆಂಬಲ ನೀಡಿದ್ದೆವು. ಆದರೆ ಫಲಿತಾಂಶ ಈ ರೀತಿ ಉಲ್ಟಾ ಆಗುತ್ತದೆ ಎಂದು ಅಂದುಕೊಂಡಿರಲಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಿಗಿಂತ ಮೊದಲು ನಾನೊಬ್ಬ ಸಾಮಾನ್ಯ ಕಾರ್ಯಕರ್ತನಾಗಿದ್ದು, ಈ ದ್ರೋಹದಿಂದ ಕಾರ್ಯಕರ್ತರ ಮನಸ್ಸಿಗೆ ತೀವ್ರ ಆಘಾತವಾಗಿದೆ ಎಂದರು.
ಇದೇ ವೇಳೆ, ಪಕ್ಷದ ಒಳಗಡೆಯೇ ನಿಮ್ಮ ವಿರುದ್ಧ ಪಿತೂರಿ ನಡೆದಿದೆಯೇ ಎಂಬ ಮಾಧ್ಯಮಗಳ ನೇರ ಪ್ರಶ್ನೆಗೆ ವಿಜಯೇಂದ್ರ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು. ನನ್ನ ಹಣೆಯಲ್ಲಿ ಬರೆದಿದ್ದನ್ನು ಯಾರೂ ತಪ್ಪಿಸಲು ಆಗುವುದಿಲ್ಲ, ಅವರ ಹಣೆಯಲ್ಲಿ ಬರೆದಿದ್ದನ್ನು ಅವರೂ ತಪ್ಪಿಸಲು ಸಾಧ್ಯವಿಲ್ಲ. ರಾಜಕೀಯದ ಆಟ ಇಷ್ಟಕ್ಕೇ ಮುಗಿಯುವುದಿಲ್ಲ. ನಾನು ಬಿ.ಎಸ್. ಯಡಿಯೂರಪ್ಪನವರ ಮಗ, ಯಾವುದಕ್ಕೂ ಹೆದರಿ ಎಲ್ಲಿಯೂ ಓಡಿಹೋಗುವುದಿಲ್ಲ ಎಂದು ಬಂಡಾಯಗಾರರಿಗೆ ಸವಾಲು ಹಾಕಿದರು. ಇನ್ನು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಚಾಣಾಕ್ಷ ನಡೆ ಮುಂದೆ ಮೈತ್ರಿಕೂಟ ಸೋತಿತೇ ಎಂಬ ಪ್ರಶ್ನೆಗೆ ಉತ್ತರಿಸಿ, ಎಂತಹ ಚಾಣಾಕ್ಷರನ್ನೇ ರಾಜ್ಯದ ಜನ ಕಾಲ ಬಂದಾಗ ಮನೆಗೆ ಕಳುಹಿಸಿದ್ದಾರೆ. ಸಮಯ ಬಂದಾಗ ಇಂತಹ ಎಲ್ಲಾ ಚಾಣಾಕ್ಷರನ್ನು ಜನರೇ ನೋಡಿಕೊಳ್ಳುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
