TOP NEWS

Dharmasthala Case: “ನನ್ನ ಹೋರಾಟ ಸೌಜನ್ಯ ಸಾವಿನ ನ್ಯಾಯಕ್ಕಾಗಿ, ಕ್ಷೇತ್ರದ ವಿರುದ್ಧವಲ್ಲ”: 200 ಕೋಟಿ ಡೀಲ್ ಆರೋಪಕ್ಕೆ ನಟ ಪ್ರಕಾಶ್ ರಾಜ್ ಗರಂ!

actor prakash raj gives clarification regarding his name in dharmasthala case controversy at Bengaluru press club

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala Case) ವಿರುದ್ಧದ ಪಿತೂರಿ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬಂದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಹುಭಾಷಾ ನಟ ಪ್ರಕಾಶ್ ರಾಜ್‌ ಬೆಂಗಳೂರಿನ ಪ್ರೆಸ್ ಕ್ಲಬ್‌ನಲ್ಲಿ ತುರ್ತು ಜಂಟಿ ಸುದ್ದಿಗೋಷ್ಠಿ ನಡೆಸಿ ತಮಗೂ ಈ ವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಾವು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಅವರನ್ನು ಅಪಾರವಾಗಿ ಗೌರವಿಸುವುದಾಗಿ ಹೇಳಿದ ಅವರು, ತಮ್ಮ ಹೋರಾಟ ಕೇವಲ ಸೌಜನ್ಯ ಸೇರಿದಂತೆ ಅಲ್ಲಿ ನಿಗೂಢವಾಗಿ ಮೃತಪಟ್ಟ ಇತರ ಹೆಣ್ಣುಮಕ್ಕಳ ಸಾವಿಗೆ ನ್ಯಾಯ ಸಿಗಬೇಕೆಂಬ ಮಾನವೀಯ ಉದ್ದೇಶಕ್ಕಾಗಿಯೇ ಹೊರತು, ಪವಿತ್ರ ಪುಣ್ಯಕ್ಷೇತ್ರದ ಮೇಲಿನ ದ್ವೇಷದಿಂದಲ್ಲ ಎಂದು ತಿಳಿಸಿದ್ದಾರೆ.

‘ಹೆಗ್ಗಡೆಯವರು ಅದ್ಭುತ ವ್ಯಕ್ತಿ, ನಾನೇಕೆ ಧರ್ಮದ ವಿರೋಧಿಯಾಗಲಿ?’

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪ್ರಕಾಶ್ ರಾಜ್, ತಾವು ತಮ್ಮ ಇಡೀ ಜೀವನದಲ್ಲಿ ಒಂದೇ ಒಂದು ಬಾರಿ ಧರ್ಮಸ್ಥಳಕ್ಕೆ ಭೇಟಿ ನೀಡಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿದ್ದಾಗಿ ನೆನಪಿಸಿಕೊಂಡರು. ಹೆಗ್ಗಡೆಯವರು ಅತ್ಯಂತ ಶ್ರೇಷ್ಠ ಹಾಗೂ ಅದ್ಭುತ ಗುಣದ ಮನುಷ್ಯ ಎಂದು ಬಣ್ಣಿಸಿದ ನಟ, ತಾವು ಎಂದಿಗೂ ಸನಾತನ ಧರ್ಮದ ಅಥವಾ ಧರ್ಮಸ್ಥಳದ ವಿರೋಧಿಯಲ್ಲ ಎಂದರು. ಆದರೆ ಈ ಸೂಕ್ಷ್ಮ ವಿಚಾರದಲ್ಲಿ ಕೆಲವು ಮಾಧ್ಯಮಗಳು 200 ಕೋಟಿ ರೂಪಾಯಿ ವ್ಯವಹಾರ, ಧರ್ಮ ಮತ್ತು ಪಿತೂರಿಯ ಕಟ್ಟುಕಥೆಗಳನ್ನು ಕಟ್ಟಿ ಸತ್ಯವನ್ನು ಮರೆಮಾಚುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ತಾವು ಯಾವುದೇ ಶಾಸಕ ಅಥವಾ ಸಂಸದನಾಗುವ ರಾಜಕೀಯ ಆಸೆಯಿಂದ ಈ ರೀತಿ ಮಾತನಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಧರ್ಮಸ್ಥಳದ ಸುತ್ತಮುತ್ತ ಸತ್ತಿರುವ ಬಡ ಹೆಣ್ಣುಮಕ್ಕಳ ಮೇಲೆ ನಿಮಗ್ಯಾಕೆ ಕನಿಕರ ಇಲ್ಲ? ಅದರ ಬಗ್ಗೆ ನೀವೇಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಮಾಧ್ಯಮಗಳನ್ನೇ ತರಾಟೆಗೆ ತೆಗೆದುಕೊಂಡರು. ಅಲ್ಲಿ ಮೃತಪಟ್ಟ ಹೆಣ್ಣುಮಕ್ಕಳು ನಮ್ಮ ದೇಶದವರಲ್ಲವೇ? ಸೌಜನ್ಯ ಹೇಗೆ ಮೃತಪಟ್ಟಳು ಮತ್ತು ಅಲ್ಲಿ ನಡೆದ ಇತರ ಸಾವುಗಳ ಹಿಂದಿನ ರಹಸ್ಯವೇನು ಎಂದು ತನಿಖೆಗೆ ಒತ್ತಾಯಿಸುವುದು ಅಪರಾಧವೇ ಎಂದು ಪ್ರಶ್ನಿಸಿದರು.

200 ಕೋಟಿ ರೂ. ಆರ್ಥಿಕ ಡೀಲ್ ಆರೋಪಕ್ಕೆ ಪ್ರಕಾಶ್‌ ರೈ ನೀಡಿದ ಉತ್ತರವೇನು?

ಪುಣ್ಯಕ್ಷೇತ್ರಕ್ಕೆ ಅಪಪ್ರಚಾರ ಮಾಡಲು ಪ್ರಕಾಶ್ ರಾಜ್ ಅವರು 200 ಕೋಟಿ ರೂಪಾಯಿಗಳ ಭಾರಿ ಆರ್ಥಿಕ ಡೀಲ್ ಕುದುರಿಸಿದ್ದಾರೆ ಎಂದು ಬಿಂಬಿಸಲಾಗುತ್ತಿರುವುದಕ್ಕೆ ಆಶ್ಚರ್ಯ ವ್ಯಕ್ತಪಡಿಸಿದ ಅವರು, ಅಷ್ಟೊಂದು ಬೃಹತ್ ಮೊತ್ತದ ಹಣವನ್ನು ತಾನೆಲ್ಲಿಂದ ತರಲಿ ಮತ್ತು ಪರಮ ಪವಿತ್ರ ಕ್ಷೇತ್ರಕ್ಕೆ ಮಸಿ ಬಳಿಯುವ ಅನಿವಾರ್ಯತೆ ತಮಗೇನಿದೆ ಎಂದು ಪ್ರಶ್ನಿಸಿದರು. ಇಡೀ ವಿಷಯವನ್ನು ಸಂಪೂರ್ಣವಾಗಿ ತಿರುಚಿ ತಮಗೆ ಧರ್ಮಸ್ಥಳದ ಮೇಲೆ ಪ್ರೀತಿ ಇಲ್ಲ, ತಾವು ನಾಸ್ತಿಕ ಅಥವಾ ಧರ್ಮ ವಿರೋಧಿ ಅಂತೆಲ್ಲಾ ಬಣ್ಣ ಬಳಿಯಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ತಮ್ಮ ಧರ್ಮಪತ್ನಿ ಪ್ರತಿದಿನ ಮನೆಯಲ್ಲಿ ದೇವರ ಆರಾಧನೆ ಮಾಡುತ್ತಾಳೆ ಮತ್ತು ತಾವು ಅವಳ ಧಾರ್ಮಿಕ ಭಾವನೆಗಳನ್ನು ಸದಾ ಗೌರವಿಸುವುದಾಗಿ ಹೇಳಿದರು. ಈ ಪ್ರಜಾಪ್ರಭುತ್ವ ದೇಶದಲ್ಲಿ ಪ್ರಧಾನಮಂತ್ರಿಯನ್ನೇ ಪ್ರಶ್ನಿಸುವ ಹಕ್ಕಿದೆ, ಹಾಗಿರುವಾಗ ಸತ್ಯಕ್ಕಾಗಿ ಧ್ವನಿ ಎತ್ತಿದಾಗ ಈ ರೀತಿ ವಿಷಯಾಂತರ ಮಾಡುವುದು ಸರಿಯಲ್ಲ ಎಂದರು.

ಚಿನ್ನಯ್ಯ ಮತ್ತು ಮಟ್ಟಣ್ಣನವರ್ ಲಿಂಕ್ ಒಪ್ಪಿಕೊಂಡ ನಟ

ತಾವು ಎಂದಿಗೂ ಧರ್ಮಸ್ಥಳಕ್ಕೆ ಪದೇ ಪದೇ ಹೋದವರಲ್ಲ ಹಾಗೂ ಗಿರೀಶ್ ಮಟ್ಟಣ್ಣನವರ್ ಅವರನ್ನು ಖುದ್ದಾಗಿ ಭೇಟಿಯಾಗಿಲ್ಲ ಎಂದು ಪ್ರಕಾಶ್ ರಾಜ್ ಸ್ಪಷ್ಟಪಡಿಸಿದರು. ಆದರೆ ಅಲ್ಲಿ ನಡೆದ ಸರಣಿ ಸಾವುಗಳ ಬಗ್ಗೆ ತಮಗೆ ಸಾಮಾಜಿಕ ಕಳಕಳಿ ಇದ್ದ ಹಿನ್ನೆಲೆಯಲ್ಲಿ ನಿಖರ ತನಿಖೆ ಮಾಡುವಂತೆ ಒತ್ತಾಯಿಸಿದ್ದು ನಿಜ ಎಂದರು. ಗಿರೀಶ್ ಮಟ್ಟಣ್ಣನವರ್ ತಮಗೆ ದೂರವಾಣಿ ಕರೆ ಮಾಡಿದ್ದು ನಿಜ ಮತ್ತು ಅವರು ಚಿನ್ನಯ್ಯ ಎಂಬುವರ ಜೊತೆ ಮಾತನಾಡುವಂತೆ ತಮಗೆ ಸೂಚಿಸಿದ್ದರು ಎಂದು ಒಪ್ಪಿಕೊಂಡರು. ಆ ಸಂದರ್ಭದಲ್ಲಿ ಚಿನ್ನಯ್ಯ ಅವರ ಧ್ವನಿ ಸಂದೇಶವನ್ನು (ವಾಯ್ಸ್ ಮೆಸೇಜ್) ಸಹ ತಮಗೆ ಫಾರ್ವರ್ಡ್ ಮಾಡಲಾಗಿತ್ತು ಎಂದು ಬಹಿರಂಗಪಡಿಸಿದ ಅವರು, ತಮಗೆ ಬಂದಿರುವ ಆ ಎಲ್ಲಾ ಸಂದೇಶಗಳ ಸಂಪೂರ್ಣ ವಿವರವನ್ನು ಈಗಾಗಲೇ ಈ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಅಧಿಕಾರಿಗಳ ಗಮನಕ್ಕೆ ತಂದಿರುವುದಾಗಿ ಸ್ಪಷ್ಟಪಡಿಸಿದರು. ಅಲ್ಲಿ ಅನ್ಯಾಯಕ್ಕೆ ಒಳಗಾಗಿ ಮೃತಪಟ್ಟಿರುವುದು ಕೂಡ ನಮ್ಮದೇ ಹಿಂದೂ ಹೆಣ್ಣುಮಕ್ಕಳಾಗಿರುವುದರಿಂದ, ಇಷ್ಟೊಂದು ಸಾವುಗಳು ಯಾಕಾದವು ಎಂದು ಮಾನವೀಯತೆಯ ದೃಷ್ಟಿಯಿಂದ ಪ್ರಶ್ನಿಸಿದ್ದೇನೆಯೇ ಹೊರತು ತಾವೆಂದೂ ದೇವರನ್ನಾಗಲಿ, ಧರ್ಮವನ್ನಾಗಲಿ ಪ್ರಶ್ನಿಸಿಲ್ಲ ಎಂದು ನಟ ಪ್ರಕಾಶ್ ರೈ ಪತ್ರಿಕಾಗೋಷ್ಠಿಯಲ್ಲಿ ಸುದೀರ್ಘ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಗ್ಯಾರಂಟಿ ಯೋಜನೆಗಳ ದುರುಪಯೋಗಕ್ಕೆ ಸಿಎಂ ಬ್ರೇಕ್: ಗೃಹಲಕ್ಷ್ಮಿ ಧನಸಹಾಯಕ್ಕೆ ಇನ್ಮುಂದೆ ಬಯೋಮೆಟ್ರಿಕ್, ಹೊಸ ಅರ್ಜಿ ಕಡ್ಡಾಯ!

Leave a Reply

Your email address will not be published. Required fields are marked *