TOP NEWS

Cyber Crime: ಐನಾಕ್ಸ್ ಕಂಪನಿಗೆ ‘ಬಾಸ್’ ಹೆಸರಲ್ಲಿ 10.4 ಕೋಟಿ ರೂ. ಸೈಬರ್ ವಂಚನೆ

cyber crime to INOX Group manager lost 10 crore

ಬೆಂಗಳೂರು: ಆಧುನಿಕ ತಂತ್ರಜ್ಞಾನವನ್ನು (Cyber Crime) ದುರುಪಯೋಗಪಡಿಸಿಕೊಳ್ಳುತ್ತಿರುವ ಸೈಬರ್ ಅಪರಾಧಿಗಳು ಈಗ ಕಾರ್ಪೊರೇಟ್ ವಲಯಕ್ಕೆ ದೊಡ್ಡ ಕನ್ನ ಹಾಕುತ್ತಿದ್ದಾರೆ. ಇದೀಗ ಪ್ರಖ್ಯಾತ ಚಲನಚಿತ್ರ ಮಂದಿರಗಳ ಸಂಸ್ಥೆ ‘ಐನಾಕ್ಸ್ ಗ್ರೂಪ್’ ಇಂತಹದ್ದೇ ಒಂದು ಭೀಕರ ವಂಚನೆಗೆ ಒಳಗಾಗಿದೆ. ಕಂಪನಿಯ ಕಾರ್ಯನಿರ್ವಾಹಕ ನಿರ್ದೇಶಕರ (ED) ಹೆಸರಿನಲ್ಲಿ ಬಂದ ನಕಲಿ ವಾಟ್ಸಾಪ್ ಸಂದೇಶವನ್ನು ನೈಜ ಎಂದು ನಂಬಿದ ಅಕೌಂಟ್ಸ್ ವಿಭಾಗದ ಡೆಪ್ಯುಟಿ ಜನರಲ್ ಮ್ಯಾನೇಜರ್ (DGM), ಬರೋಬ್ಬರಿ 10,40,71,924 ರೂಪಾಯಿಗಳನ್ನು (10.4 ಕೋಟಿ ರೂ.) ಹಂತ-ಹಂತವಾಗಿ ವಂಚಕರ ಖಾತೆಗಳಿಗೆ ವರ್ಗಾಯಿಸಿ ಕೈಸುಟ್ಟುಕೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮತ್ತು ಮುಂಬೈ ಪೊಲೀಸರು ಜಂಟಿ ತನಿಖೆ ನಡೆಸಿ ನಾಲ್ವರು ಆರೋಪಿಗಳನ್ನು ಬೇಲಿ ಉರುಳಿಸಿ ಬಂಧಿಸಿದ್ದಾರೆ.

ವಾಟ್ಸಾಪ್ ಡಿಪಿ ನೋಡಿ ಮೋಸ ಹೋದ ಡಿಜಿಎಂ

ಜೂನ್ 3 ರಂದು ಐನಾಕ್ಸ್ ಸಂಸ್ಥೆಯ ಹಣಕಾಸು ವಿಭಾಗದ ಉನ್ನತಾಧಿಕಾರಿ ಗಿರೀಶ್ ಅಮೀನ್ ಅವರಿಗೆ ಅಪರಿಚಿತ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶವೊಂದು ಬಂದಿತ್ತು. ಸಂದೇಶ ಕಳುಹಿಸಿದ ವ್ಯಕ್ತಿ ತಾನು ಕಂಪನಿಯ ಇಡಿ ಸಿದ್ಧಾರ್ಥ್ ಜೈನ್ ಎಂದು ಪರಿಚಯಿಸಿಕೊಂಡಿದ್ದಲ್ಲದೆ, ಅವರದ್ದೇ ಫೋಟೋವನ್ನು ಪ್ರೊಫೈಲ್ ಪಿಕ್ಚರ್ (DP) ಆಗಿ ಬಳಸಿದ್ದನು. “ಇದು ನನ್ನ ವೈಯಕ್ತಿಕ ನಂಬರ್, ಯಾರಿಗೂ ತಿಳಿಸದೆ ರಹಸ್ಯವಾಗಿ ಇಟ್ಟುಕೊಳ್ಳಿ” ಎಂದು ನಂಬಿಸಿದ್ದನು. ಇದನ್ನು ನಂಬಿದ ಗಿರೀಶ್, ತಮ್ಮ ಉನ್ನತಾಧಿಕಾರಿಯೇ ಮಾತನಾಡುತ್ತಿದ್ದಾರೆ ಎಂದು ಭಾವಿಸಿದ್ದರು.

ಇದಾದ ಬೆನ್ನಲ್ಲೇ ತಾನು ಅತ್ಯಂತ ಪ್ರಮುಖ ಸಭೆಯಲ್ಲಿದ್ದು, ಯಾರೂ ತನಗೆ ಕರೆ ಮಾಡಬಾರದು ಎಂದು ವಂಚಕ ಸಂದೇಶ ಕಳುಹಿಸಿದ್ದನು. ಬಳಿಕ ಕೆಲವು ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿ, ಕಂಪನಿಯ ಖಾತೆಯಿಂದ ತುರ್ತಾಗಿ ಹಣ ಜಮೆ ಮಾಡುವಂತೆ ಸೂಚಿಸಿದ್ದನು. ಮೇಲಧಿಕಾರಿಯ ಆದೇಶವೆಂದು ಭಾವಿಸಿದ ಗಿರೀಶ್ ಅಮೀನ್, ಮೊದಲಿಗೆ 46.5 ಲಕ್ಷ ರೂಪಾಯಿಗಳನ್ನು ಆನ್‌ಲೈನ್ ಮೂಲಕ ಕಳುಹಿಸಿದ್ದರು. ಜೂನ್ 3 ರಿಂದ ಜೂನ್ 15 ರವರೆಗೆ ಮುಂದುವರಿದ ಈ ಸೈಬರ್ ಜಾಲದಲ್ಲಿ, ವಂಚಕನ ಮಾತು ಕೇಳಿ ಅಧಿಕಾರಿ ಒಟ್ಟು 63 ಬಾರಿ ವಿವಿಧ ಬ್ಯಾಂಕ್ ಖಾತೆಗಳಿಗೆ ಕಂಪನಿಯ 10.4 ಕೋಟಿಗೂ ಅಧಿಕ ಹಣವನ್ನು ವರ್ಗಾಯಿಸಿದ್ದರು.

ಕೋಟಿ ಕೋಟಿ ಹಗರಣ ಬಯಲಿಗೆ ಬಂದಿದ್ದು ಹೇಗೆ?

ಮಂಗಳವಾರದಂದು ಆಫೀಸ್ ಬಿಲ್‌ಗಳು ಹಾಗೂ ಇನ್‌ವಾಯ್ಸ್ ಪ್ರಕ್ರಿಯೆಗಳ ಪರಿಶೀಲನೆಗಾಗಿ ಗಿರೀಶ್ ಅಮೀನ್ ಅವರು ಕಂಪನಿಯ ಅಧಿಕೃತ ಸಂವಹನ ಮಾಧ್ಯಮದ ಮೂಲಕ ನೇರವಾಗಿ ಸಿದ್ಧಾರ್ಥ್ ಜೈನ್ ಅವರನ್ನು ಸಂಪರ್ಕಿಸಿ ಬಿಲ್ ಕೇಳಿದಾಗ ಇಡೀ ಹಗರಣ ಬೆಳಕಿಗೆ ಬಂದಿದೆ. ತಾನು ಇಂತಹ ಯಾವುದೇ ಆರ್ಥಿಕ ವ್ಯವಹಾರದ ಆದೇಶ ನೀಡಿಲ್ಲ ಎಂದು ಜೈನ್ ಸ್ಪಷ್ಟಪಡಿಸಿದಾಗ, ತಾವು ಸೈಬರ್ ಕಳ್ಳರ ಜಾಲಕ್ಕೆ ಸಿಲುಕಿರುವುದು ಮನವರಿಕೆಯಾಗಿದೆ. ತಕ್ಷಣವೇ ಕಂಪನಿ ಪರವಾಗಿ ಮುಂಬೈ ಪೊಲೀಸರಿಗೆ ದೂರು ನೀಡಲಾಗಿದ್ದು, ತನಿಖೆ ಚುರುಕುಗೊಂಡಿದೆ.

ಇತ್ತ ಮುಂಬೈ ಪೊಲೀಸರು ತನಿಖೆ ನಡೆಸುತ್ತಿರುವಾಗಲೇ, ದೆಹಲಿ ಪೊಲೀಸರಿಗೆ ಈ ವಂಚನೆಯ ಹಣ ವರ್ಗಾವಣೆಯಾಗಿದ್ದ ಬ್ಯಾಂಕ್ ಖಾತೆಯೊಂದರ ಬಗ್ಗೆ ಮಹತ್ವದ ಸುಳಿವು ಲಭ್ಯವಾಗಿದೆ. ದೆಹಲಿಯ ಜಸೋಲಾ ಭಾಗದ ಐಡಿಎಫ್‌ಸಿ ಫಸ್ಟ್ ಬ್ಯಾಂಕ್ (IDFC FIRST Bank) ಶಾಖೆಗೆ ಇಬ್ಬರು ಯುವಕರು ಬಂದು ಒಮ್ಮೆಗೆ 8 ಲಕ್ಷ ರೂಪಾಯಿ ನಗದು ಹಿಂಪಡೆಯಲು ಯತ್ನಿಸಿದಾಗ ಬ್ಯಾಂಕ್ ಅಧಿಕಾರಿಗಳಿಗೆ ತೀವ್ರ ಅನುಮಾನ ಮೂಡಿದೆ. ಇತ್ತೀಚೆಗೆ ದೆಹಲಿ ಪೊಲೀಸರು ಜಾರಿಗೆ ತಂದಿರುವ ‘ಆಪರೇಷನ್ ಸೈಹಾಕ್’ (Operation CyHawk) ನಿಯಮಾವಳಿಗಳ ಅನ್ವಯ ಬ್ಯಾಂಕ್ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಅಲರ್ಟ್ ಸಂದೇಶ ರವಾನಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ವಿಕಾಸ್ ಮತ್ತು ವಂಶ್ ಎಂಬ ಇಬ್ಬರು ಆರೋಪಿಗಳನ್ನು ಬ್ಯಾಂಕಿನ ಒಳಗೇ ವಶಕ್ಕೆ ಪಡೆದಿದ್ದಾರೆ.

ಕಮಿಷನ್ ಆಸೆಗೆ ಬ್ಯಾಂಕ್ ಖಾತೆ ಕೊಟ್ಟಿದ್ದ ದಲ್ಲಾಳಿಗಳು

ಬಂಧಿತ ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಕೇವಲ 30,000 ಮತ್ತು 20,000 ರೂಪಾಯಿ ಕಮಿಷನ್ ಆಸೆಗೆ ಬಿದ್ದು ಈ ವಂಚನೆಯ ಕಪ್ಪು ಹಣವನ್ನು ಡ್ರಾ ಮಾಡಿಕೊಡಲು ತಮ್ಮ ವೈಯಕ್ತಿಕ ಬ್ಯಾಂಕ್ ಖಾತೆಗಳನ್ನು ಸೈಬರ್ ಕಳ್ಳರಿಗೆ ಒದಗಿಸಿರುವುದಾಗಿ ಒಪ್ಪಿಕೊಂಡಿದ್ದಾರೆ. ಇವರು ನೀಡಿದ ಮಹತ್ವದ ಸುಳಿವಿನ ಆಧಾರದ ಮೇಲೆ ಮುಂದುವರಿದ ಕಾರ್ಯಾಚರಣೆ ನಡೆಸಿದ ಪೊಲೀಸರು, ಫಯಾಜ್ ಆಲಂ ಮತ್ತು ಅಮಿತ್ ಎಂಬ ಇಬ್ಬರು ಮಧ್ಯವರ್ತಿ ಏಜೆಂಟರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಹಣದ ಶೇಕಡಾ 2 ರಷ್ಟು ಕಮಿಷನ್ ಕೊಡುವುದಾಗಿ ಮುಖ್ಯ ಸೂತ್ರಧಾರ ತಮಗೆ ಆಮಿಷ ಒಡ್ಡಿದ್ದ ಎಂದು ಈ ಇಬ್ಬರು ಬಾಯ್ಬಿಟ್ಟಿದ್ದಾರೆ. ಸದ್ಯ ನಾಲ್ವರನ್ನು ಜೈಲಿಗಟ್ಟಿರುವ ಪೊಲೀಸರು, ಈ ಇಡೀ ಅಂತರರಾಷ್ಟ್ರೀಯ ಮಟ್ಟದ ಸೈಬರ್ ಕ್ರೈಮ್ ಗ್ಯಾಂಗ್‌ನ ಮುಖ್ಯ ಕಿಂಗ್‌ಪಿನ್ ಪತ್ತೆಗಾಗಿ ಜಾಲ ಬೀಸಿದ್ದಾರೆ.

ಇದನ್ನೂ ಓದಿ: ಚಿಕ್ಕೋಡಿಯಲ್ಲಿ ಶಾಲಾ ಕೊಠಡಿಯಲ್ಲೇ ವಿದ್ಯಾರ್ಥಿನಿಯರಿಗೆ ಶಿಕ್ಷಕನಿಂದ ಲೈಂಗಿಕ ಕಿರುಕುಳ: ಪೋಷಕರಿಂದ ಕಾಮುಕನಿಗೆ ಸಾರ್ವಜನಿಕವಾಗಿ ಧರ್ಮದೇಟು!

Leave a Reply

Your email address will not be published. Required fields are marked *