ಬೆಂಗಳೂರು: ಬಾಲಿವುಡ್‌ನ ಸ್ಟಾರ್ ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಗರ್ಭಿಣಿಯಾಗಿದ್ದರೂ ತಮ್ಮ ವೃತ್ತಿಬದುಕಿನಲ್ಲಿ ಸಖತ್ ಬ್ಯುಸಿಯಾಗಿದ್ದು, ವಿಶ್ರಾಂತಿ ಪಡೆಯದೆ ಬ್ಯಾಕ್ ಟು ಬ್ಯಾಕ್ ಶೂಟಿಂಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗಷ್ಟೇ ನಟ ಶಾರುಖ್ ಖಾನ್ ಜೊತೆಗಿನ ‘ಕಿಂಗ್’ ಚಿತ್ರದ ಪ್ರಮುಖ ಶೂಟಿಂಗ್ ಶೆಡ್ಯೂಲ್ ಮುಗಿಸಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ್ದ ದೀಪಿಕಾ, ಇದೀಗ ಯಾವುದೇ ಬ್ರೇಕ್ ತೆಗೆದುಕೊಳ್ಳದೆ ನೇರವಾಗಿ ಬೆಂಗಳೂರಿನಲ್ಲಿ ಜಾಹೀರಾತು ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸಿಲಿಕಾನ್ ಸಿಟಿಯಲ್ಲಿ ನಡೆಯುತ್ತಿರುವ ಈ ಶೂಟಿಂಗ್ ಸೆಟ್‌ನ ತೆರೆಮರೆಯ ವಿಡಿಯೋವೊಂದು ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
ವಿಡಿಯೋ ವೈರಲ್
ವೈರಲ್ ಆಗಿರುವ ವಿಡಿಯೋದಲ್ಲಿ ದೀಪಿಕಾ ಪಡುಕೋಣೆ ಅವರು ನೀಲಿ ಬಣ್ಣದ ಪ್ಯಾಂಟ್‌ಸೂಟ್ ಧರಿಸಿ ಅತ್ಯಂತ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ ಮತ್ತು ಕ್ಯಾಮೆರಾಗಳ ಮುಂದೆ ಸುಂದರವಾಗಿ ನೃತ್ಯದ ಹೆಜ್ಜೆಗಳನ್ನು ಹಾಕುತ್ತಿದ್ದಾರೆ. ಪತಿ ರಣವೀರ್ ಸಿಂಗ್ ಅವರೊಂದಿಗೆ ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ, ಈ ಹಂತದಲ್ಲೂ ಕಠಿಣ ವೃತ್ತಿಪರ ಜವಾಬ್ದಾರಿಗಳನ್ನು ಅತ್ಯಂತ ಸರಳವಾಗಿ ನಿಭಾಯಿಸುತ್ತಿರುವುದಕ್ಕೆ ಅಭಿಮಾನಿಗಳಿಂದ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ. ಈ ತಿಂಗಳ ಆರಂಭದಲ್ಲಿ ದಕ್ಷಿಣ ಆಫ್ರಿಕಾದ ಕೇಪ್ ಟೌನ್‌ನಲ್ಲಿ ನಡೆದ ‘ಕಿಂಗ್’ ಚಿತ್ರದ ಶೂಟಿಂಗ್ ವಿಡಿಯೋಗಳು ಕೂಡ ಇಂಟರ್ನೆಟ್‌ನಲ್ಲಿ ಸಖತ್ ಟ್ರೆಂಡ್ ಸೃಷ್ಟಿಸಿದ್ದವು. ಅಲ್ಲಿ ಶಾರುಖ್ ಮತ್ತು ದೀಪಿಕಾ ಭಾಗಿಯಾಗಿದ್ದ ಭಾರಿ ಪ್ರಮಾಣದ ಮ್ಯೂಸಿಕಲ್ ಸೀಕ್ವೆನ್ಸ್ ಚಿತ್ರೀಕರಣ ಮಾಡಲಾಗಿತ್ತು. ಇದು ‘ಓಂ ಶಾಂತಿ ಓಂ’, ‘ಚೆನ್ನೈ ಎಕ್ಸ್‌ಪ್ರೆಸ್’ ಸೇರಿದಂತೆ ಶಾರುಖ್ ಖಾನ್ ಜೊತೆಗೆ ದೀಪಿಕಾ ನಟಿಸುತ್ತಿರುವ ಆರನೇ ಸಿನಿಮಾವಾಗಿದೆ. ವಿಶೇಷವೆಂದರೆ ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಪತಿ ರಣವೀರ್ ಸಿಂಗ್ ಮತ್ತು ಮಗಳು ದುವಾ ಕೂಡ ಸಾಥ್ ನೀಡಿದ್ದರು.
ಹೈ ಆಕ್ಷನ್ ಸಿನಿಮಾ ಕಿಂಗ್
ಸಿದ್ದಾರ್ಥ್ ಆನಂದ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಕಿಂಗ್’ ಸಿನಿಮಾ ಸದ್ಯ ಬಾಲಿವುಡ್‌ನ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ರೆಡ್ ಚಿಲ್ಲಿಸ್ ಎಂಟರ್‌ಟೈನ್‌ಮೆಂಟ್ ಮತ್ತು ಮಾರ್ಫ್ಲಿಕ್ಸ್ ಪಿಕ್ಚರ್ಸ್ ಜಂಟಿಯಾಗಿ ನಿರ್ಮಿಸುತ್ತಿರುವ ಈ ಹೈ-ಆ್ಯಕ್ಷನ್ ಚಿತ್ರದಲ್ಲಿ ಅಭಿಷೇಕ್ ಬಚ್ಚನ್, ಅರ್ಷದ್ ವಾರ್ಸಿ, ರಾಣಿ ಮುಖರ್ಜಿ, ಅನಿಲ್ ಕಪೂರ್ ಸೇರಿದಂತೆ ದೊಡ್ಡ ತಾರಾಗಣವೇ ಇದೆ. ಈ ಚಿತ್ರದ ಮೂಲಕ ಶಾರುಖ್ ಖಾನ್ ಪುತ್ರಿ ಸುಹಾನಾ ಖಾನ್ ಬೆಳ್ಳಿಪರದೆಗೆ ಪದಾರ್ಪಣೆ ಮಾಡುತ್ತಿದ್ದು, ಸಿನಿಮಾದಲ್ಲಿ ಶಾರುಖ್ ಕಂಟ್ರ್ಯಾಕ್ಟ್ ಕಿಲ್ಲರ್ ಪಾತ್ರದಲ್ಲೂ, ಸುಹಾನಾ ಅವರ ಶಿಷ್ಯೆಯಾಗಿಯೂ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರವು ೨೦೨೬ರ ಡಿಸೆಂಬರ್ ೨೪ರಂದು ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಲಿದೆ. ಈ ಚಿತ್ರದ ಜೊತೆಗೆ ದೀಪಿಕಾ ಪಡುಕೋಣೆ ಅವರು ಸ್ಟಾರ್ ನಿರ್ದೇಶಕ ಅಟ್ಲಿ ಸಾರಥ್ಯದಲ್ಲಿ ಮೂಡಿಬರಲಿರುವ ‘ರಾಕಾ’ ಎಂಬ ಪ್ಯಾನ್-ಇಂಡಿಯಾ ಸಿನಿಮಾದಲ್ಲೂ ನಟಿಸುತ್ತಿದ್ದು, ಇದರಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಜೊತೆಗೆ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ.
ರಾಕಾ ಸಿನಿಮಾದಲ್ಲಿ ಹೊರಬರಲಿದ್ದಾರಾ ದೀಪಿಕಾ? ಇಲ್ಲಿದೆ ಸತ್ಯ
ನಟಿ ದೀಪಿಕಾ ಪಡುಕೋಣೆ (Deepika Padukone) ಅವರು ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಸಿಹಿ ಸುದ್ದಿಯ ಬೆನ್ನಲ್ಲೇ, ಅವರು ಅಲ್ಲು ಅರ್ಜುನ್ ಜೊತೆ ನಟಿಸುತ್ತಿರುವ ‘ರಾಕಾ’ ಚಿತ್ರದಿಂದ ಹೊರಬರಲಿದ್ದಾರೆ ಅಥವಾ ಅವರ ಪಾತ್ರವನ್ನು ಬದಲಾಯಿಸಲಾಗುವುದು ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ಹರಿದಾಡಿದ್ದವು. ಆದರೆ, ಈ ಎಲ್ಲಾ ವದಂತಿಗಳನ್ನು ಚಿತ್ರತಂಡ ಇದೀಗ ಸ್ಪಷ್ಟವಾಗಿ ತಳ್ಳಿಹಾಕಿದೆ. ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಮತ್ತು ನಿಖರವಾಗಿಲ್ಲ ಎಂದು ಚಿತ್ರದ ನಿರ್ಮಾಪಕರು ತಿಳಿಸಿದ್ದಾರೆ.
ಶೂಟಿಂಗ್ ಚೆನ್ನಾಗಿ ನಡೆಯುತ್ತಿದೆ
ಈ ಕುರಿತು ಮಾಹಿತಿ ನೀಡಿರುವ ಚಿತ್ರತಂಡ, ಎಲ್ಲವೂ ಅಂದುಕೊಂಡಂತೆ ನಡೆಯುತ್ತಿದೆ ಎಂದು ಖಚಿತಪಡಿಸಿದೆ. ‘ರಾಕಾ’ ಚಿತ್ರದಲ್ಲಿ ದೀಪಿಕಾ ಅವರದು ಅತ್ಯಂತ ಪ್ರಮುಖ ಪಾತ್ರವಾಗಿದ್ದು, ಚಿತ್ರೀಕರಣದ ಸೆಟ್‌ನಲ್ಲಿ ಅವರು ಅದ್ಭುತ ಶಕ್ತಿಯೊಂದಿಗೆ ಚಿತ್ರೀಕರಣದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ದೀಪಿಕಾ ಅವರು ತಮ್ಮ ಗರ್ಭಾವಸ್ಥೆಯಲ್ಲೂ ಚಿತ್ರದ ಶೂಟಿಂಗ್ ಮುಂದುವರಿಸಲು ನಿರ್ಧರಿಸಿದ್ದು, ಚಿತ್ರದಲ್ಲಿನ ತೀವ್ರತರವಾದ ಆಕ್ಷನ್ ದೃಶ್ಯಗಳನ್ನು ಕೂಡ ಅವರೇ ನಿರ್ವಹಿಸುತ್ತಿದ್ದಾರೆ. ಈ ಸಮಯದಲ್ಲಿ ಅವರ ಆರೋಗ್ಯ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಚಿತ್ರತಂಡ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದೆ.
Deepika Padukone was seen shooting for hilton in banglore 🧿 pic.twitter.com/VI5G0XfV62
— Deepika Files (@FilesDeepika) May 19, 2026
ಕಿಂಗ್ ಸಿನಿಮಾದಲ್ಲಿ ದೀಪಿಕಾ ನಟನೆ
‘ರಾಕಾ’ ಮತ್ತು ‘ಕಿಂಗ್’ ಸೇರಿದಂತೆ ದೀಪಿಕಾ ಅವರ ಕೈಯಲ್ಲಿರುವ ಬಹುತೇಕ ಯೋಜನೆಗಳ ಚಿತ್ರೀಕರಣವು ನಿಗದಿತ ವೇಳಾಪಟ್ಟಿಯಲ್ಲೇ ನಡೆಯುತ್ತಿದ್ದು, ಯಾವುದೇ ಬದಲಾವಣೆಗಳಿಲ್ಲದೆ ಶೂಟಿಂಗ್ ಮುಂದುವರಿಯಲಿದೆ ಎಂದು ಮೂಲಗಳು ತಿಳಿಸಿವೆ. ಅಟ್ಲೀ ನಿರ್ದೇಶನದಲ್ಲಿ, ಸನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಭ್ರಹ್ಮಾಂಡದ ಚಿತ್ರವು 2027ರಲ್ಲಿ ತೆರೆಗೆ ಬರಲಿದೆ. ಇತ್ತೀಚೆಗಷ್ಟೇ ಅಲ್ಲು ಅರ್ಜುನ್ ಅವರ 44ನೇ ಹುಟ್ಟುಹಬ್ಬದಂದು ಬಿಡುಗಡೆಯಾದ ಅವರ ಬೋಲ್ಡ್ ಲುಕ್ ಪೋಸ್ಟರ್ ಚಿತ್ರದ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ಇತ್ತೀಚೆಗಷ್ಟೇ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರು ತಮ್ಮ ಮೊದಲ ಮಗು ದುವಾಳ ಫೋಟೋದೊಂದಿಗೆ, ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ವಿಷಯವನ್ನು ಜಗತ್ತಿಗೆ ತಿಳಿಸಿದ್ದರು.
ಇದನ್ನೂ ಓದಿ: ಅಭಿಮಾನಿಗಳಿಗೆ ತಳ್ಳಿದ ಬಾಡಿಗಾರ್ಡ್‌ಗೆ ಗರಂ ಆದ ಜೂನಿಯರ್ ಎನ್‌ಟಿಆರ್: ವಿಡಿಯೋ ವೈರಲ್
