ಹೈದರಾಬಾದ್: ಟಾಲಿವುಡ್ (Tollywood) ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ ತಮ್ಮ ಹುಟ್ಟುಹಬ್ಬದ ಮಧ್ಯರಾತ್ರಿಯ ಸಂಭ್ರಮಾಚರಣೆಯ ವೇಳೆ ಅಭಿಮಾನಿಗಳ ಪರವಾಗಿ ನಿಂತು ತಮ್ಮದೇ ಭದ್ರತಾ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿರುವ ಅಪರೂಪದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ಮೇ 20 ರಂದು ತಮ್ಮ 43ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ನಟನನ್ನು ನೋಡಲು ಹೈದರಾಬಾದ್‌ನಲ್ಲಿರುವ ಅವರ ನಿವಾಸದ ಮುಂದೆ ನಡುರಾತ್ರಿಯೇ ನೂರಾರು ಅಭಿಮಾನಿಗಳು ಜಮಾಯಿಸಿದ್ದರು.
ಅಭಿಮಾನಿಗಳ ಜೊತೆ ಹುಟ್ಟುಹಬ್ಬ ಆಚರಣೆ
ಮಧ್ಯರಾತ್ರಿಯ ಸಂಭ್ರಮದಲ್ಲಿ ಕಪ್ಪು ಟಿ-ಶರ್ಟ್ ಮತ್ತು ನೀಲಿ ಜೀನ್ಸ್ ಧರಿಸಿ ಹೊರಬಂದ ಜೂನಿಯರ್ ಎನ್‌ಟಿಆರ್, ಸ್ಟೀಲ್ ಬ್ಯಾರಿಕೇಡ್‌ನ ಹಿಂದೆ ನಿಂತು ಅಭಿಮಾನಿಗಳತ್ತ ಕೈಬೀಸಿ ಶುಭಾಶಯ ಸ್ವೀಕರಿಸಿದರು. ಈ ವೇಳೆ ನೆರೆದಿದ್ದ ಅಭಿಮಾನಿಗಳ ದಂಡು ನೆಚ್ಚಿನ ನಟನನ್ನು ಹತ್ತಿರದಿಂದ ನೋಡಲು ಮುಂದೆ ನುಗ್ಗಿದಾಗ, ಅಲ್ಲಿದ್ದ ಬಾಡಿಗಾರ್ಡ್‌ಗಳು ಅವರನ್ನು ಜೋರಾಗಿ ತಳ್ಳಿ ತಡೆಯಲು ಯತ್ನಿಸಿದರು. ಭದ್ರತಾ ಸಿಬ್ಬಂದಿಯ ಈ ಅಸಭ್ಯ ವರ್ತನೆ ನಟ ಎನ್‌ಟಿಆರ್ ಅವರಿಗೆ ತೀವ್ರ ಅಸಮಾಧಾನ ತಂದಿದೆ. ತಕ್ಷಣವೇ ಮಧ್ಯಪ್ರವೇಶಿಸಿದ ಅವರು, ಅಭಿಮಾನಿಗಳಿಗೆ ತಳ್ಳಬೇಡಿ ಎಂದು ಸಿಬ್ಬಂದಿಗೆ ವಾರ್ನಿಂಗ್ ನೀಡಿದ್ದಲ್ಲದೆ, “ನಿಮ್ಮಿಂದಲೇ ಇಲ್ಲಿ ಇಷ್ಟೆಲ್ಲಾ ಗೊಂದಲ ಸೃಷ್ಟಿಯಾಗಿದ್ದು” ಎಂದು ಬಹಿರಂಗವಾಗಿಯೇ ಗರಂ ಆಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ನಟನ ಈ ಅಭಿಮಾನಿ ಪ್ರೇಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗುತ್ತಿದೆ.
Jr NTR celebrates his 43rd birthday with fans in #Hyderabad
— Surya Reddy (@jsuryareddy) May 20, 2026
The #Dragon actor #JrNTR was seen waving and smiling at them (#JrNTRfans) while being guarded by his bodyguards and protection from police, as fans arrived in large numbers to celebrate their idol's birthday, outside… pic.twitter.com/CXoeMKAF1s
ಇದೇ ಸುದಿನದ ಅಂಗವಾಗಿ ಕೆಜಿಎಫ್ ಖ್ಯಾತಿಯ ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್‌ಟಿಆರ್ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾದ ಅಧಿಕೃತ ಶೀರ್ಷಿಕೆ ಮತ್ತು ಮೊದಲ ಗ್ಲಿಂಪ್ಸ್ ಅನ್ನು ಮೇ 19 ರ ಮಧ್ಯರಾತ್ರಿಯೇ ಬಿಡುಗಡೆ ಮಾಡಲಾಗಿದೆ. ಈ ಚಿತ್ರಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿದ್ದು, ಮೊದಲ ನೋಟದಲ್ಲೇ ಎನ್‌ಟಿಆರ್ ಅತ್ಯಂತ ರಗಡ್ ಹಾಗೂ ಆ್ಯಕ್ಷನ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಫೀಮು ದಂಧೆಯ ಹಿನ್ನೆಲೆಯುಳ್ಳ ಕ್ರೂರ ಜಗತ್ತಿನಲ್ಲಿ ಸಾಮ್ರಾಜ್ಯ ಸ್ಥಾಪಿಸಲು ಹೊರಡುವ ಹಂತಕನ ಪಾತ್ರದಲ್ಲಿ ಅವರು ಅಬ್ಬರಿಸಲಿದ್ದಾರೆ ಎಂಬ ಸುಳಿವು ಸಿಕ್ಕಿದೆ. ಈ ಬಹುಭಾಷಾ ಚಿತ್ರದಲ್ಲಿ ಬಿಜು ಮೆನನ್, ಕನ್ನಡದ ನಟಿ ರುಕ್ಮಿಣಿ ವಸಂತ್, ಖುಷ್ಬೂ ಸುಂದರ್ ಹಾಗೂ ಗುರು ಸೋಮಸುಂದರಂ ಪ್ರಮುಖ ಪಾತ್ರಗಳಲ್ಲಿದ್ದು, ಸಿನಿಮಾವು 2027ರ ಜೂನ್ 11ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: ರಾಜಕೀಯ ವೈಷಮ್ಯಕ್ಕೆ ಬಲಿಯಾಯಿತೇ ಬಿಗ್ ಬಜೆಟ್ ಸಿನಿಮಾ?: ಉದಯನಿಧಿ ಬ್ಯಾನರ್‌ಗೆ ‘ನೋ’ ಎಂದ ತ್ರಿಷಾ!
