ಚೆನ್ನೈ: ತಮಿಳುನಾಡಿನ ಪ್ರಖ್ಯಾತ ನಟ ಹಾಗೂ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅಭಿನಯದ ಬಹುನಿರೀಕ್ಷಿತ ‘ಜನ ನಾಯಗನ್’ (Jana Nayagan) ಸಿನಿಮಾ ಬಿಡುಗಡೆಗೂ ಮುನ್ನವೇ ಇಂಟರ್ನೆಟ್ನಲ್ಲಿ ಲೀಕ್ ಆಗಿದ್ದು, ಬರೋಬ್ಬರಿ 1.2 ಕೋಟಿಗೂ ಅಧಿಕ ಜನ ಇದನ್ನು ಕಾನೂನುಬಾಹಿರವಾಗಿ ವೀಕ್ಷಿಸಿದ್ದಾರೆ ಎಂದು ಚೆನ್ನೈ ಪೊಲೀಸರು ಮದ್ರಾಸ್ ಹೈಕೋರ್ಟ್ಗೆ ತಿಳಿಸಿದ್ದಾರೆ. ಸೆನ್ಸಾರ್ ಮಂಡಳಿಯಿಂದ (CBFC) ಇನ್ನೂ ಪ್ರಮಾಣಪತ್ರ ಸಿಗುವ ಮುನ್ನವೇ ಏಪ್ರಿಲ್ 9 ರಂದು ಈ ಚಿತ್ರದ ದೃಶ್ಯಗಳು ಸೋರಿಕೆಯಾಗಿದ್ದವು. ಈ ಚಿತ್ರದ ದೃಶ್ಯ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ 21 ಆರೋಪಿಗಳ ಪೈಕಿ ಇಬ್ಬರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ವೇಳೆ ಪೊಲೀಸರು ನ್ಯಾಯಾಲಯಕ್ಕೆ ಈ ಆಘಾತಕಾರಿ ಮಾಹಿತಿ ನೀಡಿದ್ದಾರೆ.
ಜಾಮೀನು ನಿರಾಕರಿಸಿದ ಕೋರ್ಟ್
ಈ ಪ್ರಕರಣದ ಗಂಭೀರತೆ ಹಾಗೂ ಸಾಕ್ಷ್ಯನಾಶಪಡಿಸಲು ಯತ್ನಿಸಿರುವ ಆರೋಪಗಳನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ. ಕುಮಾರ್ಅಪ್ಪನ್ ಅವರು, ನಾಲ್ಕನೇ ಆರೋಪಿ ಎಸ್. ರಜಿನಿ ಮತ್ತು 11ನೇ ಆರೋಪಿ ಜಯಪ್ರಕಾಶ್ ಅವರ ಜಾಮೀನು ಅರ್ಜಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದ್ದಾರೆ. ತನಿಖೆ ಇನ್ನೂ ಪ್ರಗತಿಯಲ್ಲಿರುವುದರಿಂದ ಈ ಹಂತದಲ್ಲಿ ಜಾಮೀನು ನೀಡಲು ನ್ಯಾಯಾಲಯ ನಿರಾಕರಿಸಿದೆ.
ಪ್ರಾಸಿಕ್ಯೂಷನ್ ನೀಡಿರುವ ವಿವರಗಳ ಪ್ರಕಾರ, ಫ್ರೀಲಾನ್ಸ್ ಫಿಲ್ಮ್ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ಮುಖ್ಯ ಆರೋಪಿಯು ಎಡಿಟಿಂಗ್ ಸೂಟ್ನಿಂದ ಹಾರ್ಡ್ ಡ್ರೈವ್ ಬಳಸಿ ಸಿನಿಮಾದ ಪ್ರಮುಖ ದೃಶ್ಯಗಳನ್ನು ಕದ್ದಿದ್ದನು. ನಂತರ ತನ್ನಿಬ್ಬರು ಸಹೋದರರೊಂದಿಗೆ ಸೇರಿ ಬಿಡಿಬಿಡಿಯಾಗಿದ್ದ ದೃಶ್ಯಗಳನ್ನು ಜೋಡಿಸಿ ಪೂರ್ಣ ಪ್ರಮಾಣದ ಚಲನಚಿತ್ರವನ್ನಾಗಿ ಪರಿವರ್ತಿಸಿ ಗೂಗಲ್ ಡ್ರೈವ್ಗೆ ಅಪ್ಲೋಡ್ ಮಾಡಿದ್ದನು. ಅಲ್ಲಿಂದ ಈ ಪೈರೇಟೆಡ್ ಪ್ರತಿಯು ತಮಿಳು ರಾಕರ್ಸ್ ಸೇರಿದಂತೆ ವಿವಿಧ ಪೈರಸಿ ವೆಬ್ಸೈಟ್ಗಳಿಗೆ ತಲುಪಿ, ಸಿನಿಮಾ ಅಧಿಕೃತವಾಗಿ ತೆರೆಗೆ ಬರುವ ಮುನ್ನವೇ ಕೋಟ್ಯಂತರ ಜನರ ಕೈಸೇರುವಂತಾಯಿತು.
ಸಿನಿಮಾ ನೋಡಿರುವ 1.2 ಕೋಟಿ ಜನ
ಚಿತ್ರದ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ಸ್ ಈಗಾಗಲೇ ಮದ್ರಾಸ್ ಹೈಕೋರ್ಟ್ನಿಂದ ಮಧ್ಯಂತರ ತಡೆಯಾಜ್ಞೆ ತಂದು, ಇಂಟರ್ನೆಟ್ ಸೇವಾ ಪೂರೈಕೆದಾರರು ಈ ಚಿತ್ರದ ಪ್ರದರ್ಶನವನ್ನು ನಿರ್ಬಂಧಿಸುವಂತೆ ಕಾನೂನು ಕ್ರಮ ಕೈಗೊಂಡಿತ್ತು. ಆದಾಗ್ಯೂ, ಲಿಂಕ್ಗಳನ್ನು ಇಂಟರ್ನೆಟ್ನಿಂದ ತೆಗೆದುಹಾಕುವಷ್ಟರಲ್ಲೇ ಸುಮಾರು 1.2 ಕೋಟಿ ಜನ ಚಿತ್ರವನ್ನು ವೀಕ್ಷಿಸಿ ಮುಗಿಸಿದ್ದರು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇನ್ನು ಇಬ್ಬರು ಪ್ರಮುಖ ಆರೋಪಿಗಳು ತಲೆಮರೆಸಿಕೊಂಡಿದ್ದು, ಈ ಪೈರಸಿ ಜಾಲದ ಹಿಂದಿರುವ ಆರ್ಥಿಕ ವ್ಯವಹಾರಗಳ ಜಾಡು ಹಿಡಿಯಲು ಆರೋಪಿಗಳ ಕಸ್ಟಡಿ ತನಿಖೆ ಅಗತ್ಯ ಎಂದು ಪೊಲೀಸರು ವಾದಿಸಿದ್ದರು. ಸದ್ಯಕ್ಕೆ ಪ್ರಾಥಮಿಕ ಚಾರ್ಜ್ಶೀಟ್ ಮಾತ್ರ ಸಲ್ಲಿಕೆಯಾಗಿದ್ದು, ಅಂತಿಮ ಚಾರ್ಜ್ಶೀಟ್ಗಾಗಿ ತನಿಖೆ ಮುಂದುವರಿದಿದೆ. ಈ ನಡುವೆ, ಚಿತ್ರವು ಸೆನ್ಸಾರ್ ಮಂಡಳಿಯೊಂದಿಗಿನ ವಿವಾದದಲ್ಲೂ ಸಿಲುಕಿದ್ದು, ಜನವರಿ 9 ಕ್ಕೆ ನಿಗದಿಯಾಗಿದ್ದ ಬಿಡುಗಡೆ ದಿನಾಂಕ ಮುಂದೂಡಲ್ಪಟ್ಟಿದೆ. ಚಿತ್ರತಂಡ ಇನ್ನೂ ಹೊಸ ರಿಲೀಸ್ ದಿನಾಂಕವನ್ನು ಪ್ರಕಟಿಸಿಲ್ಲ.
ಇದನ್ನೂ ಓದಿ: ಸ್ಯಾಂಡಲ್ವುಡ್ನಲ್ಲಿ ಡಾಲಿ ಹವಾ: ‘ಮದರ್ ಪ್ರಾಮಿಸ್’ ಚಿತ್ರದ ವಿಶೇಷ ಪ್ರಾರ್ಥನಾ ಗೀತೆ ಬಿಡುಗಡೆ
