ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ (BJP) ಸದ್ಯಕ್ಕೆ ಸದ್ದಿಲ್ಲದೆಯೇ ನಾಯಕತ್ವ ಬದಲಾವಣೆಯ ಕುರಿತಾದ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಹಾಲಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರ ಮೂರು ವರ್ಷಗಳ ಅಧಿಕಾರಾವಧಿಯು 2026ರ ನವೆಂಬರ್‌ಗೆ ಕೊನೆಗೊಳ್ಳಲಿದ್ದು, ಇನ್ನು ಕೆಲವೇ ತಿಂಗಳುಗಳು ಬಾಕಿ ಇರುವಾಗಲೇ ಮಾಜಿ ಸಚಿವ ಬಿ. ಶ್ರೀರಾಮುಲು ಈ ಪ್ರಮುಖ ಹುದ್ದೆಯ ಮೇಲೆ ಕಣ್ಣಿಟ್ಟಿದ್ದಾರೆ. ಪಕ್ಷದ ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವವನ್ನು ಬಳಸಿ ಸಾರಥ್ಯ ವಹಿಸಿಕೊಳ್ಳಲು ಅವರು ಈಗಿನಿಂದಲೇ ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ.
ಶ್ರೀರಾಮುಲು ಬೇಡಿಕೆಗಳ ಸರಮಾಲೆ
ಬಿಜೆಪಿ ಸಂವಿಧಾನದ ಪ್ರಕಾರ ರಾಜ್ಯಾಧ್ಯಕ್ಷರ ಅಧಿಕಾರಾವಧಿ ಮೂರು ವರ್ಷ ಇರಲಿದ್ದು, ವಿಜಯೇಂದ್ರ ಅವರ ಅವಧಿ ಪೂರ್ಣಗೊಳ್ಳುತ್ತಿದ್ದಂತೆ ಆ ಜವಾಬ್ದಾರಿಯನ್ನು ತಮಗೆ ವಹಿಸಬೇಕು ಎಂದು ಶ್ರೀರಾಮುಲು ದೆಹಲಿ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಅವರ ಮೂಲಕವೂ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಬೀರಲು ಅವರು ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಹೈಕಮಾಂಡ್ ಮುಂದೆ ಶ್ರೀರಾಮುಲು ಲೆಕ್ಕಾಚಾರ:
ತಾವು ಪರಿಶಿಷ್ಟ ಪಂಗಡ (ಎಸ್‌ಟಿ) ಸಮುದಾಯದ ಪ್ರಭಾವಿ ನಾಯಕನಾಗಿದ್ದು, ತಮಗೆ ಅಧ್ಯಕ್ಷ ಸ್ಥಾನ ನೀಡಿದರೆ ಇಡೀ ಸಮುದಾಯವನ್ನು ಪಕ್ಷದ ಕಡೆಗೆ ಸೆಳೆಯಬಹುದು ಎಂಬ ವಾದವನ್ನು ಶ್ರೀರಾಮುಲು ಮುಂದಿಟ್ಟಿದ್ದಾರೆ. ಸದ್ಯ ರಾಜ್ಯದಲ್ಲಿ ನಡೆದ ವಾಲ್ಮೀಕಿ ನಿಗಮದ ಹಗರಣ ಹಾಗೂ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಸ್‌ಟಿ ಸಮುದಾಯಕ್ಕೆ ಮೀಸಲಾತಿ ಜಾರಿಯಲ್ಲಿ ಆಗಿರುವ ಹಿನ್ನಡೆಯಿಂದಾಗಿ ಉಂಟಾಗಿರುವ ಅಸಮಾಧಾನವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಇದು ಸೂಕ್ತ ಸಮಯ. ಈ ಹೊತ್ತಿನಲ್ಲಿ ತಮಗೆ ಪಕ್ಷದ ಜವಾಬ್ದಾರಿ ನೀಡಿದರೆ ಬಿಜೆಪಿಗೆ ಭವಿಷ್ಯದಲ್ಲಿ ದೊಡ್ಡ ಲಾಭವಾಗಲಿದೆ ಎಂಬುದು ಶ್ರೀರಾಮುಲು ಅವರ ತಂತ್ರವಾಗಿದೆ.
ಇದೇ ಮೇ 24 ರಂದು ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ನಿತಿನ್ ನಬಿನ್ ಅವರು ರಾಜ್ಯಕ್ಕೆ ಆಗಮಿಸುತ್ತಿದ್ದು, ಈ ವೇಳೆ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಲಿರುವ ಶ್ರೀರಾಮುಲು, ಅಧ್ಯಕ್ಷ ಸ್ಥಾನದ ಕುರಿತು ತಮ್ಮ ನಿಲುವನ್ನು ಬಲವಾಗಿ ಮಂಡಿಸಲು ತೀರ್ಮಾನಿಸಿದ್ದಾರೆ.
ಅಧ್ಯಕ್ಷರ ಬದಲಾವಣೆ ಚರ್ಚೆಯೇ ಇಲ್ಲ ಎಂದ ರಾಜು ಗೌಡ:
ಈ ಆಂತರಿಕ ಬೆಳವಣಿಗೆಗಳ ಮಧ್ಯೆ ಮಾಜಿ ಶಾಸಕ ಹಾಗೂ ಎಸ್‌ಟಿ ಸಮುದಾಯದ ಬಿಜೆಪಿ ಮುಖಂಡ ರಾಜು ಗೌಡ ಅವರು ಭಿನ್ನ ಹೇಳಿಕೆ ನೀಡಿದ್ದಾರೆ. ಪಕ್ಷದಲ್ಲಿ ಪ್ರಸ್ತುತ ರಾಜ್ಯಾಧ್ಯಕ್ಷರ ಬದಲಾವಣೆ ಕುರಿತು ಯಾವುದೇ ರೀತಿಯ ಅಧಿಕೃತ ಚರ್ಚೆಗಳು ನಡೆಯುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಸದ್ಯಕ್ಕೆ ಅಂತಹ ಯಾವುದೇ ವಿಷಯ ಮುನ್ನೆಲೆಯಲ್ಲಿ ಇಲ್ಲದ ಕಾರಣ ತಮ್ಮ ಸಮುದಾಯಕ್ಕೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ತಾವು ಹೈಕಮಾಂಡ್ ಮುಂದೆ ಹೊಸ ಬೇಡಿಕೆ ಇಟ್ಟಿಲ್ಲ ಎಂದಿದ್ದಾರೆ. ಆದರೆ, ಸಮಾಜದ ಹಿತದೃಷ್ಟಿಯ ವಿಚಾರ ಬಂದಾಗ ನಾವೆಲ್ಲರೂ ಒಟ್ಟಾಗಿದ್ದೇವೆ ಎಂದು ಹೇಳುವ ಮೂಲಕ ಕುತೂಹಲ ಕಾಯ್ದುಕೊಂಡಿದ್ದಾರೆ. ವಿಜಯೇಂದ್ರ ಅವರ ಅಧಿಕಾರಾವಧಿ ಮುಗಿಯುವ ಮುನ್ನವೇ ಬಿಜೆಪಿಯೊಳಗೆ ಆರಂಭವಾಗಿರುವ ಈ ಪಟ್ಟದ ಜಟಾಪಟಿ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.
