TOP NEWS

DK Shivakumar: ಬಿಡದಿ ಟೌನ್‌ಶಿಪ್ ವಿವಾದ: ಕುಮಾರಸ್ವಾಮಿ ಸವಾಲು ಸ್ವೀಕರಿಸಿದ ಡಿಕೆ ಶಿವಕುಮಾರ್

dk shivakumar accepted debate challenge by hd kumara swamy

ಬೆಂಗಳೂರು: ಗ್ರೇಟರ್ ಬೆಂಗಳೂರು ವ್ಯಾಪ್ತಿಯ ಬಿಡದಿ ಟೌನ್‌ಶಿಪ್ ಭೂಸ್ವಾಧೀನ ಪ್ರಕ್ರಿಯೆಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನಡುವಿನ ರಾಜಕೀಯ ಜಟಾಪಟಿ ಈಗ ಮತ್ತಷ್ಟು ರೋಚಕ ತಿರುವು ಪಡೆದುಕೊಂಡಿದೆ. “ಕುಮಾರಸ್ವಾಮಿ ಅವರ ಬಹಿರಂಗ ಚರ್ಚೆಯ ಪಂಥಾಹ್ವಾನವನ್ನು ನಾನು ಮುಕ್ತವಾಗಿ ಸ್ವೀಕರಿಸಿದ್ದೇನೆ. ಅವರು ಹೇಳುವ ಸ್ಥಳಕ್ಕೇ ಬಂದು ಮುಖಾಮುಖಿ ಚರ್ಚೆ ನಡೆಸಲು ಸಿದ್ಧ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ನೇರ ಸವಾಲು ಎಸೆದಿದ್ದಾರೆ.

ಸ್ಥಳ, ಸಮಯ ನಿಗದಿಪಡಿಸಲು ಆಫರ್: ಬಿಡದಿ ಟೌನ್‌ಶಿಪ್ ವ್ಯಾಪ್ತಿಯ ರೈತರೊಂದಿಗೆ ಮಹತ್ವದ ಸಭೆ ನಡೆಸಿದ ಬಳಿಕ ಮಾತನಾಡಿದ ಡಿಸಿಎಂ, “ಹೆಚ್‌ಡಿಕೆಯವರು ಚರ್ಚೆಗೆ ದಿನಾಂಕ ಮತ್ತು ಸ್ಥಳವನ್ನು ನಿಗದಿಪಡಿಸಲಿ. ಅವರು ಕನಿಷ್ಠ ಮೂರು ದಿನಗಳ ಮುಂಚಿತವಾಗಿ ನನಗೆ ತಿಳಿಸಿದರೆ ನನ್ನ ಇತರೆ ಕಾರ್ಯಕ್ರಮಗಳನ್ನು ಸರಿಹೊಂದಿಸಿಕೊಂಡು ಬರುತ್ತೇನೆ. ಚರ್ಚೆಯ ವೇಳೆ ನಾನು ಯಾವುದೇ ಅಸಂಬದ್ಧ ಪದಗಳನ್ನು ಬಳಸದೆ ಅತ್ಯಂತ ನಮ್ರತೆಯಿಂದಲೇ ಅವರ ಜೊತೆ ಮಾತನಾಡುತ್ತೇನೆ. ಅವರು ತಮ್ಮ ಇಡೀ ದಂಡನ್ನೇ ಕರೆದುಕೊಂಡು ಬರಲಿ, ಬಂಡೆಯನ್ನು ಒಡೆಯಲು ಉಕ್ಕು ಬೇಕಲ್ಲವೇ?” ಎಂದು ಮಾರ್ಮಿಕವಾಗಿ ತಿರುಗೇಟು ನೀಡಿದರು. ಇದೇ ವೇಳೆ ಕುಮಾರಸ್ವಾಮಿ ಅವರ ಕೇಂದ್ರ ಇಲಾಖೆಯನ್ನು ಉಲ್ಲೇಖಿಸಿ ಲೇವಡಿ ಮಾಡಿದ ಅವರು, “ಅವರು ಕೇಂದ್ರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವರಾಗಿದ್ದಾರೆ, ಮೊದಲು ದೇಶದಲ್ಲಿ ಕಬ್ಬಿಣ ಮತ್ತು ಸಿಮೆಂಟ್ ದರವನ್ನು ಕಡಿಮೆ ಮಾಡಿಸಲಿ ಎಂದು ಸಭೆಗೆ ಬಂದಿದ್ದ ರೈತರೇ ನನಗೆ ಹೇಳಿದ್ದಾರೆ” ಎಂದರು. ಬಿಡದಿ ಟೌನ್‌ಶಿಪ್‌ಗೆ ನೈಸ್ ರಸ್ತೆ ಹಾಗೂ ಕನಕಪುರ ರಸ್ತೆಗಳ ಸಂಪರ್ಕ ಕಲ್ಪಿಸಲಾಗುವುದು ಎಂದು ಅವರು ಇದೇ ವೇಳೆ ತಿಳಿಸಿದರು.

ಮೂದೇ ದಿನಗಳಲ್ಲಿ ಹಣ ಬಿಡುಗಡೆ ಭರವಸೆ: ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರ ಒಪ್ಪಿಗೆಯ ಬಗ್ಗೆ ಮಾಹಿತಿ ನೀಡಿದ ಡಿ.ಕೆ. ಶಿವಕುಮಾರ್, ಗ್ರೇಟರ್ ಬೆಂಗಳೂರು ಟೌನ್‌ಶಿಪ್ ವ್ಯಾಪ್ತಿಯ ಶೇಕಡಾ ೮೦ ರಷ್ಟು ರೈತರು ಸರ್ಕಾರ ಘೋಷಿಸಿರುವ ಪರಿಹಾರದ ಮೊತ್ತಕ್ಕೆ ಸಂಪೂರ್ಣ ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಆದಷ್ಟು ಬೇಗ ತಮಗೆ ಪರಿಹಾರದ ಹಣವನ್ನು ವಿತರಿಸುವಂತೆ ವಿನಂತಿಸಿದ್ದಾರೆ. ಅವರ ಬೇಡಿಕೆಯಂತೆ ಇನ್ನು ಮೂರೇ ದಿನಗಳಲ್ಲಿ ಅಧಿಕೃತ ನೋಟಿಫಿಕೇಷನ್ ಹೊರಡಿಸಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.

ಕುಮಾರಸ್ವಾಮಿ ಅವಧಿಯಲ್ಲೇ ಆರಂಭವಾಗಿದ್ದ ಯೋಜನೆ: ಪ್ರಸ್ತುತ ವಿವಾದಕ್ಕೆ ಕಾರಣವಾಗಿರುವ ಈ ಯೋಜನೆಯ ಇತಿಹಾಸವನ್ನು ನೆನಪಿಸಿದ ಡಿಸಿಎಂ, ಈ ಟೌನ್‌ಶಿಪ್ ಯೋಜನೆಯನ್ನು ಈಗಿನ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದಲ್ಲ. ಸ್ವತಃ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಇದಕ್ಕೆ ಮೊದಲ ಬಾರಿಗೆ ನೋಟಿಫಿಕೇಷನ್ ಹೊರಡಿಸಲಾಗಿತ್ತು. ಆದರೆ, ಅಂದು ಆದ ಕೆಲವು ತಾಂತ್ರಿಕ ವ್ಯತ್ಯಾಸಗಳಿಂದಾಗಿ ಇದನ್ನು ರೆಡ್ ಝೋನ್ ಎಂದು ಘೋಷಿಸಲಾಗಿತ್ತು. ಈಗ ನಮ್ಮ ಸರ್ಕಾರ ಇದನ್ನು ಬೆಂಗಳೂರು ವ್ಯಾಪ್ತಿಗೆ ಸೇರಿಸಿ ಅಭಿವೃದ್ಧಿಪಡಿಸಲು ಮುಂದಾಗಿರುವುದಕ್ಕೆ ಬಿಡದಿ ಭಾಗದ ರೈತರು ಅತ್ಯಂತ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಸರ್ಕಾರ ರೈತರಿಗೆ ವಂಚನೆ ಮಾಡುತ್ತಿದೆ: ಎಚ್‌ಡಿ ಕುಮಾರಸ್ವಾಮಿ

ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಸರ್ಕಾರ ಹಲವೆಡೆ ಭೂಸ್ವಾಧೀನ ಮಾಡಿಕೊಳ್ಳುತ್ತಿದ್ದು, ಕೃಷಿ ಭೂಮಿಯನ್ನು  ವಶಪಡಿಸಿಕೊಂಡು, ರೈತರಿಗೆ ವಂಚನೆ ಮಾಡುತ್ತಿದೆ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ (HD Kumaraswamy) ಆರೋಪ ಮಾಡಿದ್ದಾರೆ.

ಕೃಷಿಭೂಮಿ ಸ್ವಾಧೀನ ಕೈಬಿಡಬೇಕು

ಭೈರಮಂಗಲ ಗ್ರಾಮದಲ್ಲಿ ನಿನ್ನೆ ಸಚಿವರು ಈ ವಿಚಾರವಾಗಿ ಮಾತನಾಡಿದ್ದು, ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರ ತಾಲ್ಲೂಕಿನ ಬಿಡಿದಿಯ ಬೈರಮಂಗಲದಲ್ಲೂ ರೈತರ ಕೃಷಿಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವುದನ್ನು  ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಆಗ್ರಹ ಮಾಡಿದ್ದಾರೆ. ರೈತರ ಕೃಷಿ ಭೂಮಿಯನ್ನು ಯಾವುದೇ ಕಾರಣಕ್ಕೂ ಸ್ವಾಧೀನಪಡಿಸಿಕೊಳ್ಳಬಾರದು. ಈ ಬಗ್ಗೆ ಮುಖ್ಯಮಂತ್ರಿಯವರು ಕೂಡಲೇ ರೈತರೊಂದಿಗೆ ಸಭೆ ನಡೆಸಬೇಕು ಎಂದು ಆಗ್ರಹ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನ ಸ್ಥಳೀಯ ಚುನಾವಣೆಗಳಿಗೆ ಸುಪ್ರೀಂ ಕೋರ್ಟ್ ಗಡುವು: ಆಗಸ್ಟ್ 31ರ ಒಳಗೆ ಪ್ರಕ್ರಿಯೆ ಮುಗಿಸಲು ರಾಜ್ಯ ಸರ್ಕಾರಕ್ಕೆ ಆದೇಶ

Leave a Reply

Your email address will not be published. Required fields are marked *