TOP NEWS

Crime: ದೆಹಲಿ-ಬೆಂಗಳೂರು ಅಂತರರಾಜ್ಯ ಡ್ರಗ್ಸ್ ಜಾಲದ 8 ಪೆಡ್ಲರ್‌ಗಳ ಬಂಧನ, 34 ಕೋಟಿ ರೂ. ಮೌಲ್ಯದ ಮಾದಕ ವಸ್ತು ಜಪ್ತಿ

crime bengaluru police arrested 8 drug peddlers

ಬೆಂಗಳೂರು: ರಾಜಧಾನಿಯ ಹೆಬ್ಬಾಳ ಠಾಣೆಯ (Crime) ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ದೆಹಲಿಯಿಂದ ಬೆಂಗಳೂರಿಗೆ ಮಾದಕ ವಸ್ತುಗಳನ್ನು ಸಾಗಿಸಿ ಮಾರಾಟ ಮಾಡುತ್ತಿದ್ದ ಅಂತರರಾಜ್ಯ ಡ್ರಗ್ಸ್ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಜನ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಒಟ್ಟು 34 ಕೋಟಿ ರೂಪಾಯಿ ಮೌಲ್ಯದ ಎಂಡಿಎಂಎ (MDMA) ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಅತ್ಯಂತ ವ್ಯವಸ್ಥಿತವಾಗಿ ಮೂರು ಹಂತಗಳಲ್ಲಿ (ಲೇಯರ್ಸ್) ಕಾರ್ಯನಿರ್ವಹಿಸುತ್ತಿದ್ದ ಈ ಗ್ಯಾಂಗ್, ಡ್ರಗ್ಸ್ ಸಾಗಾಟಕ್ಕೆ ಕಲ್ಪನಾತೀತ ದಾರಿಗಳನ್ನು ಕಂಡುಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಗಿಫ್ಟ್ ಬಾಕ್ಸ್, ಸೀರೆಗಳ ನಡುವೆ ಡ್ರಗ್ಸ್ ಸೀಕ್ರೆಟ್: ಆರೋಪಿಗಳು ದೆಹಲಿಯಿಂದ ರೈಲಿನ ಮೂಲಕ ಬೆಂಗಳೂರಿಗೆ ಮಾದಕ ವಸ್ತುಗಳನ್ನು ತರುತ್ತಿದ್ದರು. ತಪಾಸಣೆ ವೇಳೆ ಸಿಕ್ಕಿಬೀಳದಿರಲು ಸೀರೆಗಳು, ಇಸ್ತ್ರಿ ಮಾಡುವ ಟೇಬಲ್‌ಗಳು ಮತ್ತು ಕುರ್ಚಿಗಳ ಒಳಭಾಗದಲ್ಲಿ ಇವುಗಳನ್ನು ಬಚ್ಚಿಟ್ಟು, ಆಕರ್ಷಕ ಗಿಫ್ಟ್ ಪ್ಯಾಕ್‌ಗಳಂತೆ ಸಾಗಿಸುತ್ತಿದ್ದರು. ರೈಲ್ವೆ ನಿಲ್ದಾಣದಿಂದ ತಂದಿದ್ದ ಈ ಮಾದಕ ವಸ್ತುವನ್ನು ಕಾರಿಗೆ ವರ್ಗಾಯಿಸುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಮೊದಲು ೪ ಕೆಜಿ ೩೦೦ ಗ್ರಾಂ ಎಂಡಿಎಂಎ ಜಪ್ತಿ ಮಾಡಿದರು.

ಬಳಿಕ ಸಿಕ್ಕ ಮಾಹಿತಿಯ ಮೇರೆಗೆ ಸರ್ಜಾಪುರದಲ್ಲಿರುವ ಸ್ಥಳೀಯ ಪೆಡ್ಲರ್ ಮನ್ಸೂರ್ ನಿವಾಸದ ಮೇಲೆ ದಾಳಿ ನಡೆಸಿದಾಗ ಅಲ್ಲಿ ಬರೋಬ್ಬರಿ ೧೦ ಕೆಜಿ ಡ್ರಗ್ಸ್ ಪತ್ತೆಯಾಗಿದೆ. ಇದರ ಮುಂದುವರಿದ ಭಾಗವಾಗಿ ಹೆಣ್ಣೂರಿನಲ್ಲಿರುವ ಅಬ್ದುಲ್ ಸಮಾದ್ ಎಂಬಾತನ ಮನೆಯ ಮೇಲೂ ದಾಳಿ ನಡೆಸಿ ೩.೫ ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ. ಒಟ್ಟಾರೆಯಾಗಿ ಪೊಲೀಸರು ೧೭ ಕೆಜಿಗೂ ಅಧಿಕ ತೂಕದ ಎಂಡಿಎಂಎ ಕ್ರಿಸ್ಟಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ವಿದೇಶಿ ಡೀಲರ್‌ಗಳು ಹಾಗೂ ಸ್ಥಳೀಯ ನೆಟ್‌ವರ್ಕ್: ವಿದೇಶ ಹಾಗೂ ಉತ್ತರ ಭಾರತದ ವಿವಿಧೆಡೆಯಿಂದ ದೆಹಲಿಗೆ ಬರುತ್ತಿದ್ದ ಡ್ರಗ್ಸ್ ಅನ್ನು ಈ ಗ್ಯಾಂಗ್ ದೇಶದ ಇತರೆಡೆಗೆ ಸರಬರಾಜು ಮಾಡುತ್ತಿತ್ತು. ಈ ಜಾಲದ ಮೊದಲ ಲೇಯರ್‌ನಲ್ಲಿ ದೆಹಲಿಯ ಮುಖ್ಯ ಡೀಲರ್‌ಗಳಾಗಿ ಆಫ್ರಿಕಾ ಮೂಲದ ಸೆನೆಗಲ್‌ನ ಡನ್ಫಾ ಗೆರಾಲ್ಡ್, ತಾಂಜೇನಿಯಾದ ಮೆಗ್ರಾತ್ ಮತ್ತು ನೈಜೀರಿಯಾದ ಒಬಿಯಾನಿಜ್ ರೀಟಾ ಕೆಲಸ ಮಾಡುತ್ತಿದ್ದರು. ಎರಡನೇ ಲೇಯರ್‌ನಲ್ಲಿ ದೆಹಲಿಯಿಂದ ಬೆಂಗಳೂರಿಗೆ ಮಾದಕ ವಸ್ತು ತಲುಪಿಸುವ ಟ್ರಾನ್ಸ್‌ಪೋರ್ಟರ್‌ಗಳಾಗಿ ರೀನಾ ಯಾದವ್, ದೆಬಶಿಶ್ ಬ್ಯಾನರ್ಜಿ ಮತ್ತು ಧೀರಜ್ ಸಕ್ರಿಯರಾಗಿದ್ದರು. ಇನ್ನು ಮೂರನೇ ಲೇಯರ್‌ನಲ್ಲಿ ಮಂಗಳೂರು ಮೂಲದ, ಬೆಂಗಳೂರು ನಿವಾಸಿಗಳಾದ ಮಹಮ್ಮದ್ ಮನ್ಸೂರ್ ಹಾಗೂ ಅಬ್ದುಲ್ ಸಮಾದ್ ಇಲ್ಲಿನ ಸ್ಥಳೀಯ ಗ್ರಾಹಕರಿಗೆ ಡ್ರಗ್ಸ್ ಮಾರಾಟ ಮಾಡುವ ಪೆಡ್ಲರ್‌ಗಳಾಗಿದ್ದರು.

೪೦ ಪೊಲೀಸರ ಜಂಟಿ ಕಾರ್ಯಾಚರಣೆ: ಇತ್ತೀಚೆಗೆ ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಐದು ಡ್ರಗ್ಸ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂಬತ್ತು ಮಂದಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಈ ಬೃಹತ್ ಜಾಲದ ಕೊಂಡಿ ಸಿಕ್ಕಿತ್ತು. ತಕ್ಷಣವೇ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ದೆಹಲಿ ಹಾಗೂ ಎನ್‌ಸಿಆರ್ (NCR) ವ್ಯಾಪ್ತಿಯಲ್ಲಿ ಕಾರ್ಯಾಚರಣೆ ನಡೆಸಲು ಬೆಂಗಳೂರು ಉತ್ತರ ವಿಭಾಗದ ೪೦ ನುರಿತ ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡವು ಕಳೆದ ಒಂದು ತಿಂಗಳಿನಿಂದ ವ್ಯವಸ್ಥಿತವಾಗಿ ಕಾರ್ಯಾಚರಣೆ ನಡೆಸಿ, ಡ್ರಗ್ಸ್ ಪೂರೈಕೆದಾರರು ಹಾಗೂ ಪೆಡ್ಲರ್‌ಗಳನ್ನು ಹಂತ ಹಂತವಾಗಿ ಹೆಡೆಮುರಿ ಕಟ್ಟಿದೆ.

ಹುಣಸೂರಿನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ, ಮಾದಕ ವಸ್ತುಗಳ ವಶ

ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ (Crime) ಸುಮಾರು 12 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ಇಬ್ಬರು ಆರೋಪಿಗಳ ಬಂಧನ

ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಈ ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಅಕ್ರಮ ಜಾಲದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ವಂಚಕನ ಸಿನಿಮಾದಲ್ಲಿ ಕುಣಿದಿದ್ದ ಸನ್ನಿ ಲಿಯೋನ್: ಹುಬ್ಬಳ್ಳಿಯ ಶಿವಾನಂದ್ ನೀಲಣ್ಣನವರ್ ಅಸಲಿ ಮುಖ ಬಯಲು

Leave a Reply

Your email address will not be published. Required fields are marked *