ಹುಬ್ಬಳ್ಳಿ: ಕರ್ನಾಟಕವನ್ನೇ ಬೆಚ್ಚಿಬೀಳಿಸಿರುವ ಸುಮಾರು 4500 ಕೋಟಿ ರೂಪಾಯಿಗಳ ದೋಖಾ ಹಗರಣದ ಮುಖ್ಯ ಸೂತ್ರಧಾರಿ, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ್ ನೀಲಣ್ಣನವರ್‌ಗೆ (Belagavi) ಸ್ಯಾಂಡಲ್‌ವುಡ್ ಹಾಗೂ ಬಾಲಿವುಡ್‌ನ ಗ್ಲಾಮರ್ ಲೋಕದ ಜೊತೆಗಿದ್ದ ನಂಟು ಈಗ ಬಯಲಾಗಿದೆ. ತಲಾ ಲೋಕದ ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಜನರವರೆಗೂ ಸುಮಾರು 35 ಸಾವಿರಕ್ಕೂ ಹೆಚ್ಚು ಜನರಿಗೆ ನಾಮ ಇಟ್ಟು ಜೈಲು ಪಾಲಾಗಿರುವ ಈ ವಂಚಕ, ಲೂಟಿ ಮಾಡಿದ ದುಡ್ಡಿನಲ್ಲಿ ಐಷಾರಾಮಿ ಜೀವನದ ಜೊತೆಗೆ ಸಿನಿಮಾ ರಂಗದಲ್ಲೂ ಕೈಯಿಟ್ಟಿದ್ದ ಎಂಬ ಇಂಟ್ರೆಸ್ಟಿಂಗ್ ಮಾಹಿತಿ ಹೊರಬಿದ್ದಿದೆ.
ಸನ್ನಿ ಲಿಯೋನಿಗೆ 1 ಕೋಟಿ ಕೊಟ್ಟಿದ್ದ ಆರೋಪಿ
ಹಣಕಾಸು ವ್ಯವಹಾರದ ಜೊತೆಗೆ ಚಿತ್ರರಂಗದಲ್ಲಿ ದೊಡ್ಡ ಹೆಸರಾಗಬೇಕು ಎಂಬ ಹುಚ್ಚು ಹಂಬಲ ಶಿವಾನಂದ್‌ಗೆ ಇತ್ತು. ಇದೇ ಕಾರಣಕ್ಕೆ ಬಾಲಿವುಡ್‌ನ ಹಾಟ್ ತಾರೆ ಸನ್ನಿ ಲಿಯೋನ್ ಅವರನ್ನು ಎಷ್ಟೇ ಖರ್ಚಾದರೂ ಸರಿ ಕನ್ನಡಕ್ಕೆ ಕರೆತರಲೇಬೇಕು ಎಂದು ಪಟ್ಟು ಹಿಡಿದಿದ್ದ ಈತ, 2023ರಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ‘ಚಾಂಪಿಯನ್’ ಎಂಬ ಚಲನಚಿತ್ರವನ್ನು ನಿರ್ಮಾಣ ಮಾಡಿದ್ದ. ಈ ಚಿತ್ರದ ವಿಶೇಷ ಸಾಂಗ್ ಒಂದರಲ್ಲಿ ಹೆಜ್ಜೆ ಹಾಕಲು ಸನ್ನಿ ಲಿಯೋನ್ ಅವರನ್ನು ಸಂಪರ್ಕಿಸಲಾಗಿತ್ತು.
ಅಂದು ಸಾರ್ವಜನಿಕರನ್ನು ವಂಚಿಸಿದ ಕೋಟ್ಯಂತರ ರೂಪಾಯಿ ಹಣ ಕೈಯಲ್ಲಿದ್ದರಿಂದ ಶಿವಾನಂದ್ ಹಿಂದೆಮುಂದೆ ನೋಡದೆ, ಕೇವಲ ಒಂದೇ ಒಂದು ಹಾಡಿನ ನೃತ್ಯಕ್ಕಾಗಿ ನಟಿ ಸನ್ನಿ ಲಿಯೋನ್‌ಗೆ ಬರೋಬ್ಬರಿ 1 ಕೋಟಿ ರೂಪಾಯಿ ಸಂಭಾವನೆಯನ್ನು ಸುರಿದಿದ್ದ. ನಿರ್ಮಾಪಕ ನೀಡಿದ ಭಾರಿ ಆಫರ್‌ಗೆ ಮನಸೋತ ಸನ್ನಿ ಲಿಯೋನ್, ಈ ಚಿತ್ರದ ‘ಡಿಗ್ರಿಬಿಲ್ಲಿ ನಾನು..’ ಎಂಬ ಗೀತೆಗೆ ಭರ್ಜರಿಯಾಗಿ ಸೊಂಟ ಬಳುಕಿಸಿದ್ದರು. ಆದರೆ, ಇಷ್ಟೊಂದು ಹಣ ಖರ್ಚು ಮಾಡಿ ಸನ್ನಿ ಲಿಯೋನ್ ಅವರನ್ನು ಕರೆಸಿದರೂ ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಚಿತ್ರರಂಗದಲ್ಲಿ ‘ಚಾಂಪಿಯನ್’ ಆಗಲು ಹೊರಟಿದ್ದ ವಂಚಕ ಶಿವಾನಂದ್ ನೀಲಣ್ಣನವರ್ ಇವತ್ತು ಮಾಡಿದ ಪಾಪದ ಕೆಲಸಗಳಿಗಾಗಿ ಪೊಲೀಸರ ಅತಿಥಿಯಾಗಿ ಕಂಬಿ ಎಣಿಸುತ್ತಿದ್ದಾನೆ.
ಸಿಬಿಐ ಕಸ್ಟಡಿಗೆ ಆರೋಪಿ
ಇಡೀ ಕರ್ನಾಟಕವನ್ನೇ ನಡುಗಿಸಿರುವ ಬೆಳಗಾವಿಯ ಸುಮಾರು 4,500 ಕೋಟಿ ರೂಪಾಯಿ ವಂಚನೆ ಹಗರಣದ ತನಿಖೆಯನ್ನು ಸಿಐಡಿ (CID) ಅಧಿಕಾರಿಗಳು ಕೈಗೆತ್ತಿಕೊಂಡಿದ್ದು, ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಈ ಮಹಾ ವಂಚನೆ ಜಾಲದ ಕಿಂಗ್‌ಪಿನ್ ಶಿವಾನಂದ ನೀಲಣ್ಣನವರ್‌ನನ್ನು ಹೆಚ್ಚಿನ ಗ್ರೌಂಡ್ ರಿಯಾಲಿಟಿ ವಿಚಾರಣೆಗೆ ಒಳಪಡಿಸಲು ಬೆಳಗಾವಿಯ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು 10 ದಿನಗಳ ಕಾಲ ಸಿಐಡಿ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.
ಸಾವಿರಾರು ಜನರಿಗೆ ಕೋಟ್ಯಂತರ ರೂಪಾಯಿ ನಾಮ ಹಾಕಿ ತಲೆಮರೆಸಿಕೊಂಡಿದ್ದ ಈ ಆರೋಪಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಸಾರ್ವಜನಿಕರಿಂದ ಲೂಟಿ ಮಾಡಲಾದ ಇಷ್ಟೊಂದು ದೊಡ್ಡ ಮೊತ್ತದ ಹಣ ಸದ್ಯ ಎಲ್ಲಿದೆ? ಮತ್ತು ಈ ಹಗರಣದ ಹಿಂದೆ ರಾಜ್ಯದ ಯಾವೆಲ್ಲಾ ಪ್ರಭಾವಿಗಳ ಹಸ್ತವಿದೆ ಎಂಬ ರಹಸ್ಯಗಳನ್ನು ಹೊರಹಾಕಲು ತನಿಖೆ ತೀವ್ರಗೊಳಿಸಿದ್ದಾರೆ.
ಸಾಕ್ಷಿ ನಾಶಕ್ಕೆ ಯತ್ನಿಸಿದ ಮಹಾರಾಷ್ಟ್ರ ಯುವಕ ಜೈಲಿಗೆ: ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯಲ್ಲಿ ಮತ್ತೊಂದು ಪ್ರಮುಖ ಬೆಳವಣಿಗೆಯಾಗಿದ್ದು, ಹಗರಣದ ಪ್ರಮುಖ ಸಾಕ್ಷ್ಯಗಳನ್ನು ಅಳಿಸಿಹಾಕಲು ಸಂಚು ರೂಪಿಸಿದ್ದ ಮಹಾರಾಷ್ಟ್ರ ಮೂಲದ ಓಂಕಾರ ಎಂಬ ಯುವಕನನ್ನು ಮಾಳಮಾರುತಿ ಠಾಣೆಯ ಪೊಲೀಸರು ಬೆಳ್ಳಂಬೆಳಗ್ಗೆ ದಾಳಿ ನಡೆಸಿ ಬಂಧಿಸಿದ್ದಾರೆ. ತನಿಖೆಗೆ ಅಡ್ಡಿಪಡಿಸುವ ಉದ್ದೇಶದಿಂದ ಈತ ಮಹತ್ವದ ದಾಖಲೆಗಳನ್ನು ಡಿಲೀಟ್ ಮಾಡಲು ಯತ್ನಿಸುತ್ತಿದ್ದ ಎನ್ನಲಾಗಿದೆ. ಸದ್ಯ ಈತನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಸಾಕ್ಷಿ ನಾಶದ ಆಜ್ಞೆ ಕೊಟ್ಟ ಮಾಸ್ಟರ್ ಮೈಂಡ್ ಯಾರು ಎಂಬ ನಿಟ್ಟಿನಲ್ಲಿ ಪೊಲೀಸರು ಕೊಂಡಿ ಹುಡುಕುತ್ತಿದ್ದಾರೆ.
ಚಾಲಕನಾಗಿದ್ದವನ ೪೦೦ ಕೋಟಿ ರೂ. ಬ್ಯಾಲೆನ್ಸ್ ಶೀಟ್: ಹಿಂದೆ ಕೇವಲ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್, ಕೇವಲ ಪಿಯುಸಿವರೆಗೆ ಮಾತ್ರ ಓದಿದ್ದರೂ ಷೇರು ಮಾರುಕಟ್ಟೆ ಹಾಗೂ ರಿಯಲ್ ಎಸ್ಟೇಟ್ ಆಮಿಷ ಒಡ್ಡಿ ಸುಮಾರು ೪೦೦ ಕೋಟಿ ರೂ. ಮೊತ್ತದ ಬ್ಯಾಲೆನ್ಸ್ ಶೀಟ್ ಸೃಷ್ಟಿಸುವ ಮಟ್ಟಿಗೆ ವಂಚನೆ ಜಾಲವನ್ನು ವಿಸ್ತರಿಸಿದ್ದ. ವೆಬ್‌ಸೈಟ್ ಮೂಲಕವೇ ಅಕ್ರಮ ವ್ಯವಹಾರ ನಡೆಸುತ್ತಿದ್ದ ಈತ ಸದ್ಯ ಸಿಐಡಿ ತನಿಖೆಗೆ ಸರಿಯಾಗಿ ಸಹಕರಿಸುತ್ತಿಲ್ಲ ಎನ್ನಲಾಗಿದೆ. ಇದರ ನಡುವೆ, ತನಗಿರುವ ಹದಿನೈದು ಸಾವಿರ ಬಂದೂಕುಗಳ ಬಗ್ಗೆ ಈತ ನೀಡಿರುವ ಹೇಳಿಕೆ ಪೊಲೀಸರಲ್ಲಿ ದೊಡ್ಡ ಅನುಮಾನ ಮೂಡಿಸಿದೆ. ಜೈಲು ಪಾಲಾಗಿರುವ ಈ ವಂಚಕನಿಂದ ಯಾರೆಲ್ಲಾ ಐಷಾರಾಮಿ ಗಿಫ್ಟ್‌ಗಳನ್ನು ಪಡೆದಿದ್ದಾರೆ ಎಂಬುದನ್ನು ಪತ್ತೆಹಚ್ಚಿ, ಅವರಿಗೂ ನೋಟಿಸ್ ನೀಡಿ ವಿಚಾರಣೆಗೆ ಕರೆಯಲಾಗುವುದು ಎಂದು ಪೊಲೀಸ್ ಕಮಿಷನರ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ವೆಲ್ಕಮ್ ಮಾಡಲು ಹೋದ ಗ್ಯಾಂಗ್ ಅರೆಸ್ಟ್
