TOP NEWS

Crime: ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ವೆಲ್ಕಮ್ ಮಾಡಲು ಹೋದ ಗ್ಯಾಂಗ್ ಅರೆಸ್ಟ್

crime Wilson garden naga gets bail

ಬೆಂಗಳೂರು: ಜೈಲಿನಿಂದ ಬಿಡುಗಡೆಯಾಗುತ್ತಿದ್ದ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನಿಗೆ ಅದ್ಧೂರಿ ಸ್ವಾಗತ ಕೋರಿ ಸನ್ಮಾನಿಸಲು (Crime) ಹೊಂಚು ಹಾಕಿದ್ದ ಆತನ ಬೆಂಬಲಿಗರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸ್ವಾಗತಕ್ಕೆ ನಡೆದಿತ್ತು ಭರ್ಜರಿ ಸಿದ್ಧತೆ

ಸಿದ್ದಾಪುರ ಮೂಲದ ಮಹೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿದ್ದ ವಿಲ್ಸನ್ ಗಾರ್ಡನ್ ನಾಗನಿಗೆ ನಿನ್ನೆಯಷ್ಟೇ ಬೆಂಗಳೂರಿನ 48ನೇ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಿ ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಆತ ಜೈಲಿನಿಂದ ಹೊರಬರುವ ವೇಳೆ ಹಾರ-ತುರಾಯಿಗಳೊಂದಿಗೆ ಸ್ವಾಗತಿಸಲು ಆತನ ಹುಡುಗರ ಗುಂಪೊಂದು ಭರ್ಜರಿ ಸಿದ್ಧತೆ ಮಾಡಿಕೊಂಡಿತ್ತು. ಈ ಬಗ್ಗೆ ಸಿಸಿಬಿಯ ಸಂಘಟಿತ ಅಪರಾಧ ನಿಗ್ರಹ ದಳದ (OCW) ಅಧಿಕಾರಿಗಳಿಗೆ ಖಚಿತ ಮಾಹಿತಿ ಸಿಕ್ಕಿತ್ತು.

ಕೂಡಲೇ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಸನ್ಮಾನ ಮಾಡಲು ಕಾಯುತ್ತಿದ್ದ ಇಡೀ ರೌಡಿ ಗ್ಯಾಂಗ್ ಮೇಲೆ ದಾಳಿ ನಡೆಸಿ ಎಲ್ಲರನ್ನೂ ವಶಕ್ಕೆ ಪಡೆದಿದ್ದಾರೆ. ಸದ್ಯ ಸನ್ಮಾನಿಸಲು ಬಂದಿದ್ದ ಪುಂಡರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುತ್ತಿದ್ದು, ಬೇಲ್ ಮೇಲೆ ಹೊರಬರುತ್ತಿರುವ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗನ ಪ್ರತಿಯೊಂದು ಚಲನವಲನದ ಮೇಲೂ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದಾರೆ.

ರೌಡಿಶೀಟರ್ ಸಿದ್ದಾಪುರ ಮಹೇಶ್ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಖ್ಯಾತ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಆರು ಜನ ಆರೋಪಿಗಳ ಜಾಮೀನು ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತು ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಆರೋಪಿಗಳಿಗೆ ಬೇಲ್ ನಿರಾಕರಿಸಿ ಮಹತ್ವದ ಆದೇಶ ಹೊರಡಿಸಿದೆ.

ಪ್ರಕರಣದ ಪ್ರಮುಖ ಆರೋಪಿಗಳಾದ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ, ನವೀನ್, ಗೋಕುಲ್, ಸುರೇಶ್ ಬಾಬು ಹಾಗೂ ಡಿಯೋ ದಿನಿ ಎಂಬುವವರು ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಆದರೆ, ಈ ಕೊಲೆ ಪ್ರಕರಣದ ಗಂಭೀರತೆ ಮತ್ತು ಘಟನೆಗೆ ಸಂಬಂಧಿಸಿದಂತೆ ಎಂಟು ಪ್ರತ್ಯಕ್ಷ ಸಾಕ್ಷಿಗಳು (Eye Witnesses) ನೀಡಿರುವ ಹೇಳಿಕೆಗಳು ಸೇರಿದಂತೆ ಹಲವು ಪ್ರಮುಖ ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ ನ್ಯಾಯಪೀಠವು, ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿತು.

ನಡುರಸ್ತೆಯಲ್ಲಿ ನಡೆದಿದ್ದ ಭೀಕರ ಕೊಲೆ: ಎರಡು ವರ್ಷಗಳ ಹಳೆಯ ಹಗೆತನದ ಹಿನ್ನೆಲೆಯಲ್ಲಿ ಆಗಸ್ಟ್ 8 ರಂದು ತಡರಾತ್ರಿ ರೌಡಿಶೀಟರ್ ಸಿದ್ದಾಪುರ ಮಹೇಶನನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಈ ಹತ್ಯೆ ನಡೆದ ಬೆನ್ನಲ್ಲೇ ತಲೆಮರೆಸಿಕೊಂಡಿದ್ದ ವಿಲ್ಸನ್ ಗಾರ್ಡನ್ ನಾಗ ಮತ್ತು ಡಬಲ್ ಮೀಟರ್ ಮೋಹನ ನಂತರ ನ್ಯಾಯಾಲಯಕ್ಕೆ ಶರಣಾಗಿದ್ದರು.

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಸಿದ್ದಾಪುರ ಮಹೇಶ್, ಘಟನೆ ನಡೆದ ದಿನದಂದೇ ರಾತ್ರಿ ಸುಮಾರು 9:20ಕ್ಕೆ ಬೇಲ್ ಪಡೆದು ಜೈಲಿನಿಂದ ಬಿಡುಗಡೆಯಾಗಿದ್ದ. ಬಳಿಕ ಆತ ಕೆಂಪು ಬಣ್ಣದ ಇಟಿಯೋಸ್ ಕಾರಿನಲ್ಲಿ ತನ್ನ ಮನೆ ಕಡೆಗೆ ಹೊರಟಿದ್ದಾಗ, ರಾತ್ರಿ 9:45ರ ಸುಮಾರಿಗೆ ಹೊಸೂರು ರಸ್ತೆಯ ಸಿಗ್ನಲ್ ಬಳಿ ಹೊಂಚು ಹಾಕಿ ಕುಳಿತಿದ್ದ ಆರೇಳು ಮಂದಿ ದುಷ್ಕರ್ಮಿಗಳ ಗ್ಯಾಂಗ್ ಏಕಾಏಕಿ ಕಾರಿಗೆ ಅಡ್ಡಬಂದಿತ್ತು. ಹಂತಕರು ಮಚ್ಚು ಬೀಸುತ್ತಿದ್ದಂತೆ ಪ್ರಾಣಭಯದಿಂದ ಕಾರಿನಿಂದ ಇಳಿದು ಮಹೇಶ್ ಹಿಂದಕ್ಕೆ ಓಡಲು ಯತ್ನಿಸಿದ್ದನಾದರೂ, ಬಿಡದ ಹಂತಕರು ಸುಮಾರು ನೂರು ಮೀಟರ್ ದೂರ ಅಟ್ಟಾಡಿಸಿಕೊಂಡು ಹೋಗಿ ನಡುರಸ್ತೆಯಲ್ಲೇ ಮನಬಂದಂತೆ ಕೊಚ್ಚಿ ಹತ್ಯೆ ಮಾಡಿದ್ದರು.

ಇದನ್ನೂ ಓದಿ: ಕೊಲ್ಲೂರು ಬಳಿ ಭೀಕರ ಅಪಘಾತ: ಕೇರಳದ ಇಬ್ಬರು ಪ್ರವಾಸಿಗರು ಸಾವು, ಎಂಟು ಜನರಿಗೆ ಗಂಭೀರ ಗಾಯ

Leave a Reply

Your email address will not be published. Required fields are marked *