TOP NEWS

Kangana Ranaut: ವರದಕ್ಷಿಣೆ ಕಿರುಕುಳದ ದುರಂತಗಳ ಬೆನ್ನಲ್ಲೇ ಹೆಣ್ಣುಮಕ್ಕಳಿಗೆ ಕಂಗನಾ ಮಹತ್ವದ ಕಿವಿಮಾತು: ಮೊದಲು ಆರ್ಥಿಕ ಸ್ವಾವಲಂಬನೆ, ಆಮೇಲೆ ಮದುವೆ!

kangana ranut shares important message to women regarding safety

ಮುಂಬೈ: ದೇಶದಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಭೋಪಾಲ್ ಹಾಗೂ ನೋಯ್ಡಾದ ವರದಕ್ಷಿಣೆ ದೌರ್ಜನ್ಯ ಮತ್ತು ಮಹಿಳೆಯರ ಆತ್ಮಹತ್ಯೆ ಪ್ರಕರಣಗಳ ಬೆನ್ನಲ್ಲೇ, ಖ್ಯಾತ ನಟಿ ಹಾಗೂ ಸಂಸದೆ ಕಂಗನಾ ರನೌತ್ (Kangana Ranaut) ಅವರು ಹೆಣ್ಣುಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಅತ್ಯಂತ ಪ್ರಮುಖ ಸಂದೇಶವೊಂದನ್ನು ನೀಡಿದ್ದಾರೆ. ಮಹಿಳೆಯರು ಮದುವೆಗಿಂತ ಮುಂಚಿತವಾಗಿ ಆರ್ಥಿಕವಾಗಿ ತಮ್ಮ ಕಾಲಿನ ಮೇಲೆ ನಿಲ್ಲುವುದರ ಕಡೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿರುವ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಇತ್ತೀಚೆಗೆ ನಡೆದ ದಾರುಣ ಘಟನೆಗಳ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ಕಂಗನಾ ರನೌತ್, ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಹೊಸದಾಗಿ ಮದುವೆಯಾದ ಮಹಿಳೆಯರ ಸಾವು ಮತ್ತು ಅವರ ಮೇಲಿನ ದೌರ್ಜನ್ಯದ ಸುದ್ದಿಗಳು ನಿರಂತರವಾಗಿ ವರದಿಯಾಗುತ್ತಲೇ ಇವೆ. ಗಂಡನ ಮನೆಯಲ್ಲಿ ಇಂತಹ ನರಕಯಾತನೆ ಹಾಗೂ ಕಿರುಕುಳ ಎದುರಾದಾಗ, ಮಹಿಳೆಯರು ಸಹಾಯಕ್ಕಾಗಿ ಮೊದಲು ತಮ್ಮ ಹೆತ್ತ ಪೋಷಕರನ್ನು ಸಂಪರ್ಕಿಸುತ್ತಾರೆ. ಆದರೆ, ದುರದೃಷ್ಟವಶಾತ್ ಮದುವೆಯಾಗಿ ಹೋದ ಮೇಲೆ ಹೆತ್ತವರೇ ಮಗಳ ಅಳಲನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸುತ್ತಾರೆ. ಇದು ಹೆಣ್ಣುಮಕ್ಕಳನ್ನು ಮತ್ತಷ್ಟು ಅಸಹಾಯಕರನ್ನಾಗಿ ಮಾಡುತ್ತದೆ ಎಂದು ಕಂಗನಾ ಆತಂಕ ಹೊರಹಾಕಿದ್ದಾರೆ.

ವೃತ್ತಿಜೀವನವೇ ಎಲ್ಲಕ್ಕಿಂತ ಮುಖ್ಯ: ದೇಶದ ಇಂದಿನ ಹೆಣ್ಣುಮಕ್ಕಳಿಗೆ ನೇರವಾಗಿ ಧೈರ್ಯ ತುಂಬಿರುವ ಅವರು, “ಮಹಿಳೆಯರೇ, ನನ್ನ ಮಾತನ್ನು ಸೂಕ್ಷ್ಮವಾಗಿ ಗಮನಿಸಿ. ನಿಮ್ಮ ವೃತ್ತಿಜೀವನ (ಕೆರಿಯರ್) ಎನ್ನುವುದು ಈ ಜಗತ್ತಿನಲ್ಲಿ ಎಲ್ಲದಕ್ಕಿಂತಲೂ ಅತ್ಯಂತ ಮುಖ್ಯವಾದುದು. ನೀವು ಆರ್ಥಿಕವಾಗಿ ಸದೃಢರಾಗಿ, ಸ್ವತಂತ್ರರಾದ ನಂತರವಷ್ಟೇ ಮದುವೆಯ ನಿರ್ಧಾರ ತಗೊಳ್ಳಿ. ಸಂಕಷ್ಟದ ಸಮಯದಲ್ಲಿ ನಿಮ್ಮನ್ನು ರಕ್ಷಿಸಲು ಯಾರೂ ಬರುವುದಿಲ್ಲ. ನೀವು ಯಾರನ್ನು ಮದುವೆಯಾಗುತ್ತೀರಿ ಎನ್ನುವುದಕ್ಕಿಂತ, ಸಮಾಜದಲ್ಲಿ ನಿಮ್ಮ ಅಸ್ತಿತ್ವ ಏನಿದೆ ಎಂಬುದು ಮುಖ್ಯವಾಗುತ್ತದೆ. ಆದ್ದರಿಂದ ನಿಮ್ಮ ಸ್ವಾವಲಂಬಿ ಬದುಕನ್ನು ನೀವೇ ರೂಪಿಸಿಕೊಳ್ಳಿ” ಎಂದು ಕಠಿಣ ಪದಗಳಲ್ಲಿ ಹೇಳಿದ್ದಾರೆ.

ಕಂಗನಾ ಪೋಸ್ಟ್‌ನ ಹಿನ್ನೆಲೆ: ಇತ್ತೀಚೆಗೆ ನೋಯ್ಡಾದಲ್ಲಿ ೩೩ ವರ್ಷದ ತ್ವಿಶಾ ಶರ್ಮಾ ಎಂಬ ಮಹಿಳೆ ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಪ್ರಕರಣದಲ್ಲಿ ಆಕೆಯ ಪತಿ ಸಮರ್ಥ್ ಸಿಂಗ್, ತನ್ನ ಪತ್ನಿ ಮಾದಕ ವ್ಯಸನಿಯಾಗಿದ್ದಳು ಹಾಗೂ ಆಕೆಗೆ ಮಾನಸಿಕ ಚಿಕಿತ್ಸೆ ನೀಡಲಾಗುತ್ತಿತ್ತು ಎಂಬ ವೈದ್ಯಕೀಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಕಾನೂನಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದನು. ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ಭೋಪಾಲ್‌ನ ೨೫ ವರ್ಷದ ದೀಪಿಕಾ ನಾಗರ್ ಎಂಬ ನವವಿವಾಹಿತೆ ವರದಕ್ಷಿಣೆ ದೌರ್ಜನ್ಯಕ್ಕೆ ಬೇಸತ್ತು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು.

ಬ್ಯಾಕ್ ಟು ಬ್ಯಾಕ್ ನಡೆದ ಈ ಎರಡೂ ಘಟನೆಗಳು ಸಮಾಜದಲ್ಲಿ ಇಂದಿಗೂ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಕ್ರೂರ ಮುಖವನ್ನು ತೋರ್ಪಡಿಸಿವೆ. ಮದುವೆಯಾದ ಮೇಲೂ ಹೆತ್ತವರು ತಮ್ಮ ಹೆಣ್ಣುಮಕ್ಕಳ ಪರಿಸ್ಥಿತಿಯ ಬಗ್ಗೆ ನಿರಂತರ ನಿಗಾ ವಹಿಸುವುದು ಮತ್ತು ಅವರಿಗೆ ಆಸರೆಯಾಗಿ ನಿಲ್ಲುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದು ಕಂಗನಾ ರನೌತ್ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ: ದಕ್ಷಿಣ ಆಫ್ರಿಕಾದಿಂದ ಬಂದ ಬೆನ್ನಲ್ಲೇ ಬೆಂಗಳೂರಿನಲ್ಲಿ ಶೂಟಿಂಗ್ ಆರಂಭಿಸಿದ ದೀಪಿಕಾ ಪಡುಕೋಣೆ: ವಿಡಿಯೋ ವೈರಲ್

Leave a Reply

Your email address will not be published. Required fields are marked *