ಬೆಂಗಳೂರು: “ನಮ್ಮ ಸರ್ಕಾರದಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಿ, ಸ್ಪಂದಿಸಲು ಹಾಗೂ ಅನಿವಾಸಿ ಭಾರತೀಯರಿಗಾಗಿ ಎರಡು ಪ್ರತ್ಯೇಕ ಸಚಿವಾಲಯಗಳನ್ನು ಆರಂಭಿಸಲಾಗುವುದು” ಎಂದು ಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸರ್ಕಾರದ ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರು ಮತ್ತು ಮೇಲ್ಪಟ್ಟ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಅಪರ ಮುಖ್ಯ ಪ್ರಧಾನ ಸಂರಕ್ಷಣಾಧಿಕಾರಿಗಳು ಮತ್ತು ಮೇಲ್ಪಟ್ಟ ಅರಣ್ಯ ಅಧಿಕಾರಿಗಳ ಸಭೆ ನಡೆಸಿದರು. ನಂತರ ಮಾಧ್ಯಮಗೋಷ್ಠಿ ನಡೆಸಿ ಸಭೆಯ ನಿರ್ಣಯಗಳ ಬಗ್ಗೆ ಮಾಹಿತಿ ನೀಡಿದರು.
“ನಮ್ಮ ಸರ್ಕಾರದಲ್ಲಿ ಅನಿವಾಸಿ ಭಾರತೀಯರ (ಎನ್ಆರ್ ಐ) ಸಚಿವಾಲಯ ತೆರೆಯಲು ಸರ್ಕಾರ ಮುಂದಾಗಿದೆ. ನಮ್ಮ ರಾಜ್ಯದಲ್ಲಿ ಎನ್ಆರ್ ಐಗಳು ಬಂಡವಾಳ ಹೂಡಿಕೆಗೆ ಆಸಕ್ತಿ ಹೊಂದಿದ್ದರೆ ಅವರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಈ ಸಚಿವಾಲಯ ಸಹಾಯವಾಗುತ್ತದೆ. ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿರುವೆ. ಸಾರ್ವಜನಿಕರ ಕುಂದುಕೊರತೆಯ ಸಚಿವಾಲಯ ಆರಂಭಿಸಿ, ಜನರ ಅರ್ಜಿ, ವಿಚಾರಧಾರೆ, ಸಮಸ್ಯೆ ಆಲಿಸಲು ಪ್ರತ್ಯೇಕ ಸಚಿವರ ನೇಮಕ ಮಾಡಲಾಗುವುದು. ಪ್ರತಿ ನಿತ್ಯ ವಿವಿಧ ತಂಡಗಳು ಪ್ರತಿಭಟನೆ ನಡೆಸುತ್ತಿದ್ದು, ಅವರ ವಿಚಾರ ಆಲಿಸಿ, ಸ್ಪಂದಿಸಲು ಸರ್ಕಾರ ಮುಂದಾಗಿದೆ” ಎಂದು ವಿವರಿಸಿದರು.
ಒತ್ತಡಕ್ಕೆ ಮಣಿಯದೇ, ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಿ
“ರಾಜ್ಯದ ಅಧಿಕಾರಿಗಳನ್ನು ಕರೆಸಿ ಹೊಸ ಸರ್ಕಾರ ಯಾವ ದಿಕ್ಕಿನಲ್ಲಿ ಆಲೋಚನೆ ಮಾಡುತ್ತಿದೆ ಎಂದು ಸಂದೇಶ ನೀಡಿದ್ದೇವೆ. ಮೊದಲ ದಿನ ನಾವು ಅವರಿಂದ ಏನು ನಿರೀಕ್ಷೆ ಮಾಡಿದ್ದೇವೆ, ನಮ್ಮಿಂದ ಅವರ ನಿರೀಕ್ಷೆಗಳೇನು ಎಂದು ಚರ್ಚೆ ಮಾಡಲಾಗಿದೆ. ನಮ್ಮ ಸರ್ಕಾರ ಜಾತಿ, ಧರ್ಮ, ಪ್ರಭಾವಕ್ಕೆ ಮಣಿಯುವುದಿಲ್ಲ. ಯಾವ ಅಧಿಕಾರಿಗಳು ಇದಕ್ಕೆ ಮಣಿಯಬಾರದು. ಪಾರದರ್ಶಕ, ಮುಕ್ತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನೀಡಬೇಕು. ಇದಕ್ಕೆ ನಿಮ್ಮ ಸಹಕಾರ ಬೇಕು ಎಂದು ಕೇಳಿದ್ದೇವೆ. ಪಾರದರ್ಶಕತೆ ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಜನರ ಭಾವನಗೆ ತಕ್ಕಂತೆ, ಜನರ ಸಮಸ್ಯೆ ಬಗೆಹರಿಸಬೇಕು ಎಂದು ನಿರ್ದೇಶನ ನೀಡಲಾಗಿದೆ. 15 ದಿನಗಳಲ್ಲಿ ಎಲ್ಲಾ ಇಲಾಖೆಗಳಲ್ಲಿನ ಕಾರ್ಯಯೋಜನೆ ಸಿದ್ಧಪಡಿಸಬೇಕು ಎಂದು ಸೂಚಿಸಿದ್ದೇನೆ. ಎಲ್ಲರೂ ಹೊಣೆಗಾರಿಕೆಯಾಗಿರಬೇಕು. ದೇಶದಲ್ಲಿ ವಿದ್ಯಾವಂತರು, ಬುದ್ಧಿವಂತರು ಇಲ್ಲದಿದ್ದರೂ ಪ್ರಜ್ಞಾವಂತರು ಇರಬೇಕು. ನಮ್ಮಲ್ಲಿ ಸಾಮಾನ್ಯ ಪ್ರಜ್ಞೆ ಇರಬೇಕು. ಎಲ್ಲಾ ಸಮಸ್ಯೆಗಳಿಗೆ ಒಂದು ಪರಿಹಾರ ಇರುತ್ತದೆ, ಸಕಾರಾತ್ಮಕ ಮನೋಭಾವ ಇರಬೇಕು” ಎಂದು ತಿಳಿಸಿದರು.
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳಬಾರದು
“ಇತಿಹಾಸ ಓದಲು, ಇತಿಹಾಸ ಬರೆಯಲು ಇಷ್ಟವಿಲ್ಲ. ಇತಿಹಾಸ ಸೃಷ್ಟಿ ಮಾಡಿ ಸಾಕ್ಷಿಗುಡ್ಡೆ ಬಿಟ್ಟುಹೋಗಬೇಕು. ನೀವು ನಿಮ್ಮ ಆತ್ಮಸಾಕ್ಷಿಗೆ ತಕ್ಕಂತೆ ಕೆಲಸ ಮಾಡಿ ಎಂದು ಹೇಳಿರುವೆ. ಕಾನೂನು ಹೊರತಾಗಿ ಬೇರೆ ಯಾವ ಒತ್ತಡಕ್ಕೂ ಮಣಿಯಬಾರದು. ಮಂತ್ರಿಗಳು, ಶಾಸಕರು, ನನ್ನ ಕಚೇರಿಯವರ ಮಾತು ಕೇಳದೇ, ಕಾನೂನು ವ್ಯಾಪ್ತಿಯಲ್ಲಿ ಸಕಾರಾತ್ಮಕ ಮನೋಭಾವದಲ್ಲಿ ಕೆಲಸ ಮಾಡಿ. ಸಮಸ್ಯೆಗಳಿಗೆ ವ್ಯವಸ್ಥೆ ಚೌಕಟ್ಟಿನಲ್ಲೇ ಪರಿಹಾರ ಹುಡುಕಿ ಎಂದು ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕಡ್ಡಾಯವಾಗಿ ಆಯಾ ಜಿಲ್ಲೆಗಳಲ್ಲಿರುವ ತಾಲ್ಲೂಕುಗಳಿಗೂ ಹೋಗಿ ಪರಿಶೀಲನೆ ಮಾಡಬೇಕು. ಈಗ ಎಸ್ಐಆರ್ ನಡೆಯುತ್ತಿದ್ದು, ಯಾವುದೇ ವ್ಯಕ್ತಿ ಎಸ್ಐಆರ್ ನಲ್ಲಿ ಮತದಾನದ ಹಕ್ಕು ಕಳೆದುಕೊಳ್ಳುವಂತೆ ಆಗಬಾರದು. ಈ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳದಿದ್ದರೆ ಸವಲತ್ತುಗಳನ್ನು ಕಳೆದುಕೊಳ್ಳಲಿದ್ದಾರೆ. ಸಿಎಂ ಹಾಗೂ ಡಿಸಿಎಂ ಸೇರಿದಂತೆ ಎಲ್ಲಾ ಮತದಾರರು. ಎನ್ಯುಮರೇಷನ್ ಅರ್ಜಿ ತುಂಬಿ, ಸಹಿ ಹಾಕಿ, ದಾಖಲೆ ಸಮೇತ ಸಲ್ಲಿಕೆ ಮಾಡಬೇಕು. ಇಲ್ಲವಾದರೆ ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ ಎಂದು ಜಾಗೃತಿ ಮೂಡಿಸಬೇಕು. ಇದಕ್ಕೆ ಅಗತ್ಯವಿರುವ ಸಿದ್ಧತೆ ಮಾಡಿಕೊಳ್ಳಲು ನಿರ್ದೇಶನ ನೀಡಿರುವೆ” ಎಂದು ಮಾಹಿತಿ ನೀಡಿದರು.
“ಎಲ್ಲಾ ರಾಜಕೀಯ ಪಕ್ಷಗಳಿಗೂ ಜನರ ಮತದಾನದ ಹಕ್ಕು ಉಳಿಸಿಕೊಳ್ಳುವ ಅವಕಾಶ ನೀಡಲಾಗುವುದು. ಕೇರಳಂ ರಾಜ್ಯ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ 90 ಲಕ್ಷ, 60 ಲಕ್ಷ ಜನರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಇದು ನಮ್ಮಲ್ಲಿ ಆಗಬಾರದು. ನಮ್ಮ ಸ್ಥಳೀಯ ಸಂಸ್ಥೆಗಳಲ್ಲಿ ನಿವಾಸ ಧೃಢೀಕರಣ ಪತ್ರ ನೀಡಲು ಅವಕಾಶವಿದೆ. ಈ ಪ್ರಕ್ರಿಯೆಯಲ್ಲಿ ಅಗತ್ಯವಿರುವ ಎಲ್ಲಾ ದಾಖಲೆ ನೀಡಬೇಕು” ಎಂದರು.
“ಎಲ್ಲಾ ಜಿಲ್ಲಾ ಕಾರ್ಯದರ್ಶಿಗಳು ತಮ್ಮ ಇಲಾಖೆ ಸಂಬಂಧಿಸಿದಂತೆ ಬಾಕಿ ಇರುವ ಕೆಲಸಗಳ ಪಟ್ಟಿ ನೀಡಬೇಕು. 25 ದಿನಗಳಲ್ಲಿ ಆಯಾ ಜಿಲ್ಲೆಯಲ್ಲಿ ಯಾವ ಹೊಸ ಕೆಲಸ ಮಾಡಬಹುದು ಎಂದು ಗುರುತಿಸಬೇಕು. ಆರ್ಥಿಕ ಚೌಕಟ್ಟಿನಲ್ಲಿ ನಾವು ಏನು ಮಾಡಬಹುದು ಎಂದು ಪಟ್ಟಿ ಮಾಡಲು ಸೂಚಿಸಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವರುಗಳಿಗೆ ಆಯಾ ಜಿಲ್ಲೆಯ ಸಂಪೂರ್ಣ ಮಾಹಿತಿ ನೀಡಬೇಕು. ಎಸ್ಐಆರ್ ವಿಚಾರವಾಗಿ ಅಗತ್ಯ ಪ್ರದೇಶಗಳಲ್ಲಿ ಸಹಾಯ ಕೇಂದ್ರಗಳ ಸ್ಥಾಪಿಸಲು ನಿರ್ದೇಶಿಸಲಾಗಿದೆ” ಎಂದರು.
ರಾಜ್ಯದಲ್ಲಿ ಸಿಎಸ್ಆರ್ ನಿಧಿ ಬಳಕೆ ಬಗ್ಗೆ ಮಾಹಿತಿ ಸಂಗ್ರಹ
“ನಿನ್ನೆ ನಾವು ಕೈಗೊಂಡಿರುವ ಆರು ತೀರ್ಮಾನಗಳ ಬಗ್ಗೆ ವರದಿ ಕೇಳಿದ್ದು, ಈ ತೀರ್ಮಾನಗಳನ್ನು ಜಾರಿಗೊಳಿಸುವ ಬಗ್ಗೆ ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಸುಮಾರು 8 ಸಾವಿರ ಕೋಟಿಯಷ್ಟು ಸಿಎಸ್ಆರ್ ನಿಧಿ ಇದ್ದು, ಯಾವ ಸಂಸ್ಥೆ ಯಾವ ಉದ್ದೇಶಕ್ಕೆ ವಿನಿಯೋಗಿಸುತ್ತಿದೆ ಎಂಬ ಮಾಹಿತಿ ಇಲ್ಲ. ಹೀಗಾಗಿ ನಮ್ಮ ರಾಜ್ಯದಲ್ಲಿ ಸಿಎಸ್ ಆರ್ ನಿಧಿ ಬಳಕೆಯಾಗುತ್ತಿದೆ ಎಂದು ಸರ್ಕಾರಕ್ಕೆ ಮಾಹಿತಿ ನೀಡಬೇಕು. ನಾವು ಈಗಾಗಲೇ ಸಿಎಸ್ಆರ್ ನಿಧಿಯಲ್ಲಿ ಪ್ರತಿ ಮೂರು ಗ್ರಾಮ ಪಂಚಾಯ್ತಿಗೆ ಒಂದರಂತೆ ಕೆಪಿಎಸ್ ಶಾಲೆಗಳ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸರ್ಕಾರ ಕೂಡ ಪ್ರಾಥಮಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಕ್ಷೇತ್ರಕ್ಕೆ ನಿಮ್ಮ ಸಿಎಸ್ಆರ್ ನಿಧಿ ಬಳಸಿ ಎಂದು ಮನವಿ ಮಾಡಿ ಪತ್ರ ಬರೆಯಲಾಗುವುದು. ಮುಂದಿನ ಐದಾರು ದಿನಗಳಲ್ಲಿ ಈ ಬಗ್ಗೆ ಸಂಪೂರ್ಣ ವಿವರ ನೀಡಲಾಗುವುದು. ಪ್ರಾಥಮಿಕ ಶಿಕ್ಷಣದ ಬಳಿಕ ಆರೋಗ್ಯ ಕ್ಷೇತ್ರದಲ್ಲಿ ಈ ನಿಧಿ ಬಳಸಲಾಗುವುದು” ಎಂದು ವಿವರಿಸಿದರು.
ರೌಡಿಗಳ ನಿಯಂತ್ರಣಕ್ಕೆ ತಾಲ್ಲೂಕು ಮಟ್ಟದಲ್ಲಿ ಪ್ರತ್ಯೇಕ ಪಡೆ ರಚಿಸಲು ಸೂಚನೆ
“ಪೊಲೀಸರು ಪ್ರತಿ ತಾಲ್ಲೂಕಿನಲ್ಲಿ ರೌಡಿಗಳ ನಿಗ್ರಹಕ್ಕೆ ಪ್ರತ್ಯೇಕ ಪಡೆ ರಚಿಸಬೇಕು. ಇವರು ಕ್ರಿಮಿನಲ್ ಚಟುವಟಿಕೆಯಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಬೇಕು. ಹಳೇ ರೌಡಿಗಳು ಹಾಗೂ ಹೊಸದಾಗಿ ಹುಟ್ಟುಕೊಳ್ಳುವ ರೌಡಿಗಳ ಮೇಲೆ ನಿಗಾ ಇಡಬೇಕು ಎಂದು ಸೂಚಿಸಿರುವೆ” ಎಂದರು.
“ಸಕಾಲ ವಿಚಾರದಲ್ಲಿ ಜನರಿಗೆ ಹೆಚ್ಚಿನ ಅನುಕೂಲವಾಗಬೇಕು. ಕರ್ನಾಟಕ ಭವನ ಕಾರ್ಯಾಚರಣೆಯಲ್ಲಿ ನನಗೆ ತೃಪ್ತಿಯಿಲ್ಲ. ಹೀಗಾಗಿ ನಾನು ದೆಹಲಿಗೆ ಹೋಗಿ, ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಸಭೆ ಮಾಡಿ ಕೆಲವು ವಿಭಾಗಗಳನ್ನು ರಚಿಸಲಾಗುವುದು. ದೆಹಲಿಯಲ್ಲಿರುವ ನಮ್ಮ ರಾಜ್ಯದ ಅಧಿಕಾರಿಗಳು, ರಾಜ್ಯದ ಯೋಜನೆಗಳ ಅನುಷ್ಠಾನಕ್ಕೆ ಗರಿಷ್ಠ ಪ್ರಯತ್ನ ಮಾಡಬೇಕು” ಎಂದು ಹೇಳಿದರು.
“ಹದಿನೈದು ದಿನಗಳ ಒಳಗಾಗಿ ಎಲ್ಲಾ ಇಲಾಖೆಗಳಲ್ಲಿನ ಖಾಲಿ ಹುದ್ದೆಗಳ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದ್ದೇನೆ. 56 ಸಾವಿರ ಹುದ್ದೆಗಳ ಭರ್ತಿಗೆ ಸಮಯ ನಿಗದಿ ಮಾಡಲಾಗುವುದು. ಜೊತೆಗೆ ದಿನಾಂಕವನ್ನು ತಿಳಿಸಲಾಗುವುದು. ಖಾಸಗಿ ಉದ್ಯೋಗ ವಿನಿಮಯ ಕೇಂದ್ರವನ್ನೂ ಸ್ಥಾಪಿಸಲಾಗುವುದು. ಎಲ್ಲಾ ಖಾಸಗಿ, ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಅನುಕೂಲವಾಗುವಂತೆ, ಯುವಕರಿಗೆ ಕೆಲಸ ಸಿಗುವಂತೆ ಸೌಲಭ್ಯ ಕಲ್ಪಿಸಲಾಗುವುದು” ಎಂದರು.
ಪ್ರಶ್ನೋತ್ತರ
ಮುಂದಿನ ಚುನಾವಣೆ ಗಮನದಲ್ಲಿಟ್ಟುಕೊಂಡು ಯುವಕರಿಗಾಗಿ ಯೋಜನೆಗಳನ್ನು ನೀಡುತ್ತಿರುವ ಬಗ್ಗೆ ಕೇಳಿದಾಗ, “ಯಾವುದೇ ಚುನಾವಣೆಯನ್ನು ನಾವು ಗಮನದಲ್ಲಿಟ್ಟುಕೊಂಡು ಈ ಕೆಲಸ ಮಾಡುತ್ತಿಲ್ಲ. ಯುವಕರ ಜೀವನದ ಗುಣಮಟ್ಟ ನೋಡುತ್ತಿದ್ದೇವೆ. ಬೆಲೆ ಏರಿಕೆ ಸಮಯದಲ್ಲಿ ಜನರ ಜೀವನ ಮಟ್ಟ ಸುಧಾರಿಸಲು ಗ್ಯಾರಂಟಿ ಯೋಜನೆಗಳನ್ನು ನೀಡಿದ್ದೇವೆ. ಪ್ರತಿಯೊಬ್ಬ ನಾಗರಿಕ ಕನಿಷ್ಠ ಸುರಕ್ಷಿತ ಜೀವನ ಹೊಂದಿರಬೇಕು ಎಂಬುದು ನಮ್ಮ ಆಶಯ. ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಜೀವನ. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲಿದ್ದಾರೆ. ಹುಡುಗರಾಗಲಿ ಅಥವಾ ಹುಡುಗಿಯಾಗಲಿ, ಅವರು ಯಾವುದೇ ವಯಸ್ಸಿನವರಾಗಲಿ, ಅವರೆಲ್ಲರೂ ಉಚಿತ ಬಸ್ ಪಾಸ್ ಪಡೆಯಲಿದ್ದಾರೆ” ಎಂದು ಹೇಳಿದರು.
ಸಚಿವರುಗಳಿಗೆ ಖಾತೆ ಹಂಚಿಕೆ ಬಗ್ಗೆ ಕೇಳಿದಾಗ, “ಹೊತ್ತು ಮುಳುಗುವುದರೊಳಗೆ ಆಗಲಿದೆ” ಎಂದರು. ಖಾತೆ ಹಂಚಿಕೆಯಲ್ಲಿ ಗೊಂದಲಗಳಿವೆ, ಇಂತಹುದೇ ಖಾತೆ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ ಎಂಬ ಚರ್ಚೆ ಬಗ್ಗೆ ಕೇಳಿದಾಗ, “ನಿಮ್ಮಲ್ಲಿ ಗೊಂದಲವಿರಬೇಕು. ನನ್ನ ಬಳಿ ಬಂದು ಯಾರು ಚರ್ಚೆ ಮಾಡಿಲ್ಲ” ಎಂದರು.
ನೀವು ಸೇರಿದಂತೆ ಬೆಂಗಳೂರು ನಗರಾಭಿವೃದ್ಧಿ ಖಾತೆಗೆ ಬೇಡಿಕೆ ಇದೆ ಎಂದು ಕೇಳಿದಾಗ, “ಗಾಳಿ ಮಾತಿಗೆ ಉತ್ತರ ನೀಡಲು ಆಗುವುದಿಲ್ಲ. ಊಹಾಪೋಹದ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಖಾತೆ ಹಂಚಿಕೆ ವಿಚಾರವಾಗಿ ಪಕ್ಷ ತೀರ್ಮಾನ ಮಾಡಲಿದೆ. ಪಕ್ಷ ನನ್ನನ್ನು ಮುಖ್ಯಮಂತ್ರಿ ಮಾಡಿದೆ. ನಾನು ಯಾವ ಕೆಲಸ ಮಾಡಬೇಕು ಎಂದು ಹೇಳಿದೆ. ನಾನು ಆ ಕೆಲಸ ಮಾಡುತ್ತೇನೆ. ಪಕ್ಷ ಯಾರಿಗೆ ಯಾವ ಕೆಲಸ ಹೇಳಿದೆಯೋ ಆ ಕೆಲಸ ಮಾಡುತ್ತಾರೆ” ಎಂದು ಹೇಳಿದರು.
ಬಿಜೆಪಿ ನಾಯಕರು ನಿಮ್ಮ ಹೊಸ ಯೋಜನೆಗಳಿಗೆ ಆರ್ಥಿಕ ಸಂಪನ್ಮೂಲ ಎಲ್ಲಿದೆ ಎಂದು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ ಎಂದು ಕೇಳಿದಾಗ, “ಖಂಡಿತಾವಾಗಿ, ಈ ಬಗ್ಗೆ ಮಾಹಿತಿ ನೀಡದೇ ನಾವು ಏನನ್ನೂ ಮಾಡುವುದಿಲ್ಲ. ಅವರಿಗೂ ಮಾಹಿತಿ ನೀಡುತ್ತೇವೆ, ಮಾಧ್ಯಮಗಳಿಗೂ ಮಾಹಿತಿ ನೀಡುತ್ತೇವೆ” ಎಂದು ಹೇಳಿದರು.
ಯುವಕ ಸಂಘ ಮಾಡುವುದರಿಂದ ಸರ್ಕಾರಕ್ಕೆ ಆರ್ಥಿಕ ಹೊರೆ ಬೀಳಲಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿಕೆ ನೀಡಿದ್ದಾರೆ ಎಂದು ಕೇಳಿದಾಗ, “ಯಾವುದೇ ಕೆಲಸ ಮಾಡಿದರೂ ಆರ್ಥಿಕ ಹೊರೆ ಇದ್ದೇ ಇರುತ್ತದೆ. ಈ ಮಾಧ್ಯಮಗೋಷ್ಠಿ ಮಾಡಿದರೂ ಇದಕ್ಕೆ ಬೇಕಾದ ಸೌಲಭ್ಯ ಕಲ್ಪಿಸಲು ಆರ್ಥಿಕ ಹೊರೆ ಬೀಳುವುದಿಲ್ಲವೇ?” ಎಂದು ಹೇಳಿದರು.
ಗ್ಯಾರಂಟಿ ಯೋಜನೆ ಪರಿಷ್ಕರಣೆ ಇಲ್ಲ, ಕೇವಲ ಫಲಾನುಭವಿಗಳ ಮಾಹಿತಿ ಸಂಗ್ರಹ
ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಯಾವಾಗ ಎಂದು ಕೇಳಿದಾಗ, “ನಾವು ಪರಿಷ್ಕರಣೆ ಮಾಡುತ್ತಿಲ್ಲ. ಫಲಾನುಭವಿಗಳ ಮೊಬೈಲ್ ಸಂಖ್ಯೆ ಹಾಗೂ ವಿವರಗಳಲ್ಲಿ ವ್ಯತ್ಯಾಸವಿದೆ. ಗೃಹಜ್ಯೋತಿ ಯೋಜನೆಯಲ್ಲಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಪಡೆದು, ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತಿದೆ. ಈ ಯೋಜನೆಯಲ್ಲಿ 1.64 ಕೋಟಿ ಫಲಾನುಭವಿಗಳಿದ್ದು, ಯಾರು ಅರ್ಹರಿದ್ದಾರೋ ಅವರು ಉಚಿತ ವಿದ್ಯುತ್ ಪಡೆದರೆ ನಮ್ಮ ಅಭ್ಯಂತರವಿಲ್ಲ. ಯಾರೆಲ್ಲಾ ಫಲಾನುಭವಿಗಳಿದ್ದಾರೆ ಎಂಬ ಮಾಹಿತಿ ನಮ್ಮ ಬಳಿ ಇರಬೇಕಲ್ಲವೇ? ಒಬ್ಬರ ಹೆಸರಲ್ಲೇ ಐದಾರು ಮೀಟರ್ ಗಳಿದ್ದು, ಇವರಲ್ಲಿ ನಮ್ಮ ರಾಜ್ಯದವರು ಇದ್ದಾರೋ, ಬೇರೆ ರಾಜ್ಯದವರು ಇದ್ದಾರೋ ಎಂಬ ಮಾಹಿತಿ ಸರ್ಕಾರಕ್ಕೆ ಇರಬೇಕಲ್ಲವೇ? ಆ ಮಾಹಿತಿ ಪಡೆಯುತ್ತಿದ್ದೇವೆ. ಮೃತರ ಹೆಸರಿನಲ್ಲಿ ಗೃಹಲಕ್ಷ್ಮಿ ಹಣ ಪಡೆಯಲಾಗಿದೆ. ಇದರಿಂದ 120 ಕೋಟಿ ವ್ಯತ್ಯಾಸವಾಗಿದೆ. ಇದಕ್ಕೆ ನಿಖರ ಮಾಹಿತಿ ಇರಬೇಕಲ್ಲವೇ?” ಎಂದು ತಿಳಿಸಿದರು.
“ಬುಧವಾರದಂದು ಬೆಂಗಳೂರಿನ ರಸ್ತೆಗಳಿಗೆ ಡಾಂಬರೀಕರಣ ಮಾಡಲು 2 ಸಾವಿರ ಕೋಟಿ ಅನುದಾನ ಮೀಸಲಿಡಲಾಗಿದೆ. ಬೆಂಗಳೂರು ನಗರಾಭಿವೃದ್ಧಿ ಸಚಿವರು ಇದರ ಜವಾಬ್ದಾರಿ ವಹಿಸಲಿದ್ದಾರೆ” ಎಂದರು.
ಮೇಕೆದಾಟು; ನಮ್ಮ ಕೆಲಸ ನಾವು ಮಾಡುತ್ತೇವೆ
ತಮಿಳುನಾಡಿನಲ್ಲಿ ಕಾಂಗ್ರೆಸ್ ಮೈತ್ರಿಯಿದೆ ಈಗ ಮೇಕೆದಾಟು ವಿಚಾರವಾಗಿ ಕರ್ನಾಟಕದ ನಿಲುವು ಏನು ಎಂದು ಕೇಳಿದಾಗ, “ಅವರು ಕಳೆದ ಮೂವತ್ತು, ನಲವತ್ತು ವರ್ಷಗಳಿಂದ ವಿರೋಧಿಸುತ್ತಿದ್ದಾರೆ. ಈಗಾಗಲೇ ಈ ವಿಷಯವಾಗಿ ನ್ಯಾಯಾಲಯ ತನ್ನ ತೀರ್ಮಾನ ಹೇಳಿದೆ. ಕೇಂದ್ರ ಸರ್ಕಾರಕ್ಕೆ ನಾವು ಈಗಾಗಲೇ ನಮ್ಮ ಡಿಪಿಆರ್ ಸಲ್ಲಿಕೆ ಮಾಡಿದ್ದೇವೆ. ಅವರು ಅದನ್ನು ಪರಿಶೀಲಿಸುತ್ತಾರೆ. ಈ ವಿಚಾರ ಕೇಂದ್ರ ಸರ್ಕಾರದ ಮುಂದಿದೆ. ತಮಿಳುನಾಡಿನವರು ಪಕ್ಷಬೇದ ಲೆಕ್ಕಿಸದೆ ರಾಜಕೀಯ ಮಾಡುತ್ತಾರೆ. ಈಗಾಗಲೇ ಅವರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ. ನ್ಯಾಯಾಲಯ ಈಗಾಗಲೇ ನಿರ್ಧಾರ ತೆಗೆದುಕೊಂಡಿದೆ ಎಂದು ನಾನು ಭಾವಿಸುತ್ತೇನೆ. ನಾವು ಅವರ ಅಭಿಪ್ರಾಯವನ್ನು ಗೌರವಿಸುತ್ತೇವೆ ಮತ್ತು ನಾವು ನಮ್ಮ ಕೆಲಸವನ್ನು ಮಾಡುತ್ತೇವೆ. ಜನರು ನಿರ್ಣಯಿಸಲಿ” ಎಂದರು.
ಇದನ್ನೂ ಓದಿ: ಡಿಕೆಶಿ ಸಂಪುಟದ ನೂತನ ಸಚಿವರಿಗೆ ಖಾತೆಗಳದ್ದೇ ಚಿಂತೆ; ಎರಡನೇ ಪಟ್ಟಿಗಾಗಿ ಹೈಕಮಾಂಡ್ ಕಸರತ್ತು
