ನ್ಯೂಯಾರ್ಕ್: ಮಲೆಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ಲಾಲ್ (Mohanlal) ಅವರು ನ್ಯೂಯಾರ್ಕ್ನ ನ್ಯೂಜೆರ್ಸಿ ಕ್ರೀಡಾಂಗಣದಲ್ಲಿ ನಡೆದ 2026ರ ಫಿಫಾ ವಿಶ್ವಕಪ್ ಫುಟ್ಬಾಲ್ ಫೈನಲ್ ಪಂದ್ಯಕ್ಕೆ ಸಾಕ್ಷಿಯಾಗಿದ್ದಾರೆ. ಪಂದ್ಯ ಆರಂಭಕ್ಕೂ ಮುನ್ನ ಕ್ರೀಡಾಂಗಣದ ಸುತ್ತಲೂ ಇದ್ದ ಹಬ್ಬದಂತಹ ವಾತಾವರಣವನ್ನು ವಿಡಿಯೋ ಮಾಡುವ ಮೂಲಕ ಅವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇತಿಹಾಸ ಪ್ರಸಿದ್ಧ ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ಮಹಾ ಸಮರವನ್ನು ವೀಕ್ಷಿಸಲು ವಿಶ್ವದಾದ್ಯಂತದ ಫುಟ್ಬಾಲ್ ಪ್ರೇಮಿಗಳು ಕ್ರೀಡಾಂಗಣದತ್ತ ಹರಿದು ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಹಂಚಿಕೊಂಡ ನಟ
ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ನಲ್ಲಿ ಕ್ರೀಡಾಂಗಣದ ಅದ್ಭುತ ಕ್ಷಣಗಳನ್ನು ಹಂಚಿಕೊಂಡಿರುವ ಮೋಹನ್ಲಾಲ್, “ಯಾರೂ ಗೆಲ್ಲುತ್ತಾರೆ ಎಂಬ ಭವಿಷ್ಯ ನುಡಿಯದೆ, ಪಂದ್ಯವನ್ನು ಆರಾಮವಾಗಿ ನೋಡಿ ಆನಂದಿಸಿ” ಎಂದು ಫುಟ್ಬಾಲ್ ಪ್ರೇಮಿಗಳಿಗೆ ಕರೆ ನೀಡಿದ್ದಾರೆ. ಇಡೀ ಕ್ರೀಡಾಂಗಣವು ಪ್ರೇಕ್ಷಕರ ಜೈಕಾರದಿಂದ ಸದ್ದು ಮಾಡುತ್ತಿದ್ದು, ಪಂದ್ಯದ ಕಿಕ್-ಆಫ್ಗಾಗಿ ತಾವು ಕುತೂಹಲದಿಂದ ಕಾಯುತ್ತಿರುವುದಾಗಿ ಅವರು ಬರೆದುಕೊಂಡಿದ್ದಾರೆ. ಇದೇ ವೇಳೆ ತಮ್ಮ ನೆಚ್ಚಿನ ತಂಡ ಯಾವುದು ಎಂದು ಕೇಳಿದಾಗ, ಮನಸ್ಸಿನಲ್ಲಿ ಒಂದು ತಂಡವಿದ್ದರೂ ಅದನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದರು. ಆದರೆ ತಮ್ಮ ತಾಯ್ನಾಡಾದ ಕೇರಳದ ಬಹುತೇಕ ಜನರು ಅರ್ಜೆಂಟೀನಾ ತಂಡವನ್ನು ಬೆಂಬಲಿಸುತ್ತಿದ್ದಾರೆ ಎಂದು ಹೇಳುವ ಮೂಲಕ ತಮ್ಮದೇ ಆದ ಶೈಲಿಯಲ್ಲಿ ಕರಾವಳಿ ಭಾಗದ ಫುಟ್ಬಾಲ್ ಕ್ರೇಜ್ ಅನ್ನು ನೆನಪಿಸಿಕೊಂಡಿದ್ದಾರೆ.
The stadium is buzzing. Can’t wait for kickoff. 🇦🇷 🇪🇸#FIFAWorldCup pic.twitter.com/4wT0fGo89m
— Mohanlal (@Mohanlal) July 19, 2026
ರೋಚಕವಾಗಿ ನಡೆದ ಈ ಫೈನಲ್ ಪಂದ್ಯದಲ್ಲಿ ಸ್ಪೇನ್ ತಂಡವು ಅರ್ಜೆಂಟೀನಾ ವಿರುದ್ಧ 1-0 ಗೋಲುಗಳ ಅಂತರದಿಂದ ಭರ್ಜರಿ ಜಯ ಸಾಧಿಸಿ ವಿಶ್ವ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಇನ್ನು ಪಂದ್ಯದ ಮಧ್ಯಂತರದ ವಿರಾಮದ ಅವಧಿಯಲ್ಲಿ ಜಾಗತಿಕ ಪಾಪ್ ತಾರೆಗಳಾದ ಶಕೀರಾ, ಮಡೋನಾ, ಜಸ್ಟಿನ್ ಬೈಬರ್ ಹಾಗೂ ಕೊರಿಯಾದ ಖ್ಯಾತ ಬಿಟಿಎಸ್ (BTS) ಬ್ಯಾಂಡ್ನ ಕಲಾವಿದರು ನೀಡಿದ ಪ್ರದರ್ಶನ ಇಡೀ ಕ್ರೀಡಾಂಗಣವನ್ನು ಜಗಮಗಿಸುವಂತೆ ಮಾಡಿತ್ತು.
ಸಾಲು ಸಾಲು ಸಿನಿಮಾದಲ್ಲಿ ನಟ ಬ್ಯುಸಿ
ಚಿತ್ರರಂಗದ ವಿಚಾರಕ್ಕೆ ಬರುವುದಾದರೆ, ಮೋಹನ್ಲಾಲ್ ಅವರು ಇತ್ತೀಚೆಗಷ್ಟೇ ಜೀತು ಜೋಸೆಫ್ ನಿರ್ದೇಶನದ ಸೂಪರ್ ಹಿಟ್ ಸಸ್ಪೆನ್ಸ್ ಥ್ರಿಲ್ಲರ್ ‘ದೃಶ್ಯಂ 3’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಅವರ ಮುಂದಿನ ಬಹುನಿರೀಕ್ಷಿತ ಮಲೆಯಾಳಂ ಸಿನಿಮಾ ‘ತುಡಕ್ಕಂ’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಈ ಚಿತ್ರದ ವಿಶೇಷತೆಯೆಂದರೆ, ಮೋಹನ್ಲಾಲ್ ಅವರ ಪುತ್ರಿ ವಿಸ್ಮಯಾ ಮೋಹನ್ಲಾಲ್ ಈ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಜೂಡ್ ಆಂಥೋನಿ ಜೋಸೆಫ್ ನಿರ್ದೇಶನದ ಈ ಚಿತ್ರವನ್ನು ಆಶೀರ್ವಾದ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಆಂಟೋನಿ ಪೆರುಂಬಾವೂರ್ ನಿರ್ಮಿಸುತ್ತಿದ್ದಾರೆ.
ಇದನ್ನೂ ಓದಿ: ಆರೋಗ್ಯದ ಬಗ್ಗೆ ಗಾಳಿಸುದ್ದಿ ಹಬ್ಬಿಸಿದವರಿಗೆ ಸಲ್ಮಾನ್ ಖಾನ್ ಟಾಂಗ್
